ಮಹಾರಾಷ್ಟ್ರದಲ್ಲಿ
ರಾಷ್ಟಪತಿ ಆಳ್ವಿಕೆ ಜಾರಿ,
ಸರ್ಕಾರ ರಚನೆ ಬಿಕ್ಕಟ್ಟಿಗೆ ತೆರೆ
ಸರ್ಕಾರ ರಚನೆ ಬಿಕ್ಕಟ್ಟಿಗೆ ತೆರೆ
ನವದೆಹಲಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯೊಂದಿಗೆ ವಿಧಾನಸಭೆಗೆ ನಡೆದ ಚುನಾವಣೆಯ ಬಳಿಕ ಉದ್ಭವಿಸಿದ ಸರ್ಕಾರ ರಚನೆಯ ೧೯ ದಿನಗಳ ’ಮಹಾಬಿಕ್ಕಟ್ಟಿಗೆ’ 2019 ನವೆಂಬರ್
12ರ ಮಂಗಳವಾರ ತೆರೆಬಿದ್ದಿತು.
ಪ್ರಧಾನಿ
ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಂಪುಟ ಸಭೆಯು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವರದಿಯನ್ನು ಆಧರಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಮಾಡಿದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದರು. ಇದರೊಂದಿಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು.
‘ಮಹಾರಾಷ್ಟ್ರದಲ್ಲಿ
ಸಂವಿಧಾನದ ವಿಧಿಗಳಿಗೆ ಅನುಗುಣವಾಗಿ ಸ್ಥಿರ ರಾಜ್ಯ ಸರ್ಕಾರದ ರಚನೆ ಸಾಧ್ಯವಿಲ್ಲ’ ಎಂಬುದಾಗಿ
ರಾಜ್ಯಪಾಲ ಕೋಶಿಯಾರಿ ಅವರು ಇದಕ್ಕೆ ಮುನ್ನ ಕೇಂದ್ರಕ್ಕೆ ವರದಿ ಕಳುಹಿಸಿದ್ದರು.
ಬಿಜೆಪಿಯು
ಸರ್ಕಾರ ರಚನೆಗೆ ಹೆಚ್ಚಿನ ಕಾಲಾವಕಾಶ ಕೋರಿತ್ತು. ಆದರೆ ಅದಕ್ಕೆ ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರು ಕೇವಲ ೪೮ ಗಂಟೆಗಳ ಕಾಲಾವಕಾಶ
ನೀಡಿದ್ದರು. ಇದನ್ನು ೨೪ ಗಂಟೆಗಳ ಒಳಗಾಗಿ
ನಿರಾಕರಿಸಿದ ಬಿಜೆಪಿ ಸರ್ಕಾರ ರಚನೆ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು. ಆ ಬಳಿಕ ಶಿವಸೇನೆಯು
ಮೂರು ದಿನಗಳ ಕಾಲಾವಕಾಶ ಕೋರಿತು. ಅದನ್ನು ಕೂಡಾ ನಿರಾಕರಿಸಲಾಯಿತು. ಈದಿನ ಬೆಳಗ್ಗೆ
೧೧.೩೦ರ ವೇಳೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ತನಗೆ ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕು ಎಂದು ಕೋರಿತು. ಆದರೆ ಅದನ್ನು ಕೂಡಾ ನಿರಾಕರಿಸಲಾಯಿತು ಎಂದು ಉನ್ನತ ಮೂಲಗಳು ಹೇಳಿವೆ.
ಕಳೆದ
ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಸೆಣಸಿದ್ದ ಶಿವಸೇನೆಯು , ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬ ತನ್ನ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿದ ಬಳಿಕ ಮೈತ್ರಿಕೂಟದಿಂದ ಹೊರನಡೆದಿತ್ತು.
೨೮೮
ಸದಸ್ಯ ಬಲದ ವಿಧಾನಸಭೆಯಲ್ಲಿ ೧೦೫ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಕಳೆದ ವಾರ ಸರ್ಕಾರ ರಚನೆಯ ಹಕ್ಕು ಮಂಡಿಸಲು ಮೊದಲ ಅವಕಾಶವನ್ನು ನೀಡಿದ್ದರು. ಬಿಜೆಪಿಗೆ ಸರ್ಕಾರ ರಚನೆಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು.
ಸಂಖ್ಯಾಬಲದ
ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಕೊಡುಗೆಯನ್ನು ಬಿಜೆಪಿ ನಿರಾಕರಿಸಿದಾಗ, ರಾಜಭವನವು ೫೬ ಸ್ಥಾನಗಳೊಂದಿಗೆ ಎರಡನೇ
ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಸರ್ಕಾರ ರಚನೆಯ ಆಹ್ವಾನ ನೀಡಿದ್ದರು. ಅದಾಗಲೇ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿಯ ಮಾತುಕತೆ ಆರಂಭಿಸಿದ್ದ ಶಿವಸೇನೆ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಇಚ್ಛೆ ವ್ಯಕ್ತ ಪಡಿಸಿದರೂ, ತನಗೆ ನೀಡಲಾಗಿದ್ದ ೨೪ ಗಂಟೆಗಳ ಗಡುವಿನ
ಒಳಗಾಗಿ ಎರಡು ಸಂಭಾವ್ಯ ಮಿತ್ರ ಪಕ್ಷಗಳ ಬೆಂಬಲ ಸಾಬೀತು ಪಡಿಸುವ ಸಾಕ್ಷ್ಯ ಒದಗಿಸಲು ವಿಫಲವಾಯಿತು. ಬೆಂಬಲ ಪತ್ರಗಳೊಂದಿಗೆ ಬರಲು ಶಿವಸೇನೆ ಕಾಲಾವಕಾಶ ಕೋರಿತು. ಆದರೆ ರಾಜ್ಯಪಾಲರು ಅದನ್ನು ದೃಢವಾಗಿ ನಿರಾಕರಿಸಿದರು.
ಬೆನ್ನಲ್ಲೇ
ರಾಜ್ಯಪಾಲ ಕೋಶಿಯಾರಿ ಅವರು ಸರ್ಕಾರ ರಚನೆಯ ಸಾಧ್ಯತೆ ಪರಿಶೀಲಿಸುವಂತೆ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್ಸಿಪಿ) ಸೋಮವಾರ ಕ್ಷಿಪ್ರ ಆಹ್ವಾನ ನೀಡಿದರು. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೂ ಸರ್ಕಾರ
ರಚನೆಯ ಹಕ್ಕು ಮಂಡಿಸಲು ೨೪ ಗಂಟೆಗಳ ಕಾಲಾವಕಾಶ
ನೀಡಲಾಯಿತು. ರಾಜ್ಯಪಾಲರ ಸೂಚನೆಯ ಪ್ರಕಾರ ಮಂಗಳವಾರ ರಾತ್ರಿ ೮.೩೦ರ ಗಡುವಿನ
ಒಳಗಾಗಿ ಎನ್ಸಿಪಿಯು ರಾಜ್ಯಪಾಲರಿಗೆ ತನ್ನ ಉತ್ತರವನ್ನು ನೀಡಬೇಕಾಗಿತ್ತು.
ರಾಜ್ಯಪಾಲರ
ಕರೆಯ ಬಳಿಕ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ ತೀವ್ರ ಮಾತುಕತೆಗಳನ್ನು ನಡೆಸಿದರೂ, ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಅವರು ರಾಜಭವನಕ್ಕೆ ಮಂಗಳವಾರ ಕಳುಹಿಸಿದ ಸಂದೇಶವೊಂದು ರಾಜ್ಯಪಾಲರು ಕೇಂದ್ರಕ್ಕೆ ಪ್ರತಿಕೂಲ ವರದಿ ನೀಡಲು ಕಾರಣವಾಯಿತು. ಈ ಸಂದೇಶದಲ್ಲಿ ಎನ್ಸಿಪಿಗೆ ಸರ್ಕಾರ ರಚನೆಯ ನಿಟ್ಟಿನಲ್ಲಿ ಮಾತುಕತೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕು ಎಂದು ಅಜಿತ್ ಪವಾರ್ ಕೋರಿದ್ದರು.
ರಾಜ್ಯದಲ್ಲಿ
ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು ’ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಕೈಗೊಂಡ ನಿರ್ಧಾರವು ಅಕ್ರಮ ಮತ್ತು ಸಂವಿಧಾನ ಬಾಹಿರ’ ಎಂದು ಹೇಳಿದರು.
ಸುಪ್ರೀಂಕೋರ್ಟಿಗೆ ಶಿವಸೇನೆ:
ಈ ಮಧ್ಯೆ, ತಮಗೆ ಸರ್ಕಾರ ರಚನೆಗೆ ನೀಡಲಾಗಿದ್ದ ಗಡುವು ವಿಸ್ತರಿಸಲು ನಿರಾಕರಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವಿರುದ್ಧ ಶಿವಸೇನೆಯು 2019 ನವೆಂಬರ್ 12ರ ಮಂಗಳವಾರ ಸುಪ್ರೀಕೋರ್ಟ್ ಮೆಟ್ಟಿಲನ್ನು ಏರಿತು.
ರಾಜ್ಯಪಾಲರ
ನಿರ್ಣಯದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಸುಪ್ರೀಂಕೋರ್ಟಿಗೆ ಮನವಿ ಮಾಡಿತು. ಶಿವಸೇನೆಯ ಅರ್ಜಿಯನ್ನು ಕಾಂಗ್ರೆಸ್ ನಾಯಕ ಹಿರಿಯ ವಕೀಲ ಕಪಿಲ್ ಸಿಬಲ್ ಸಲ್ಲಿಸಿದರು.
ಮಹಾರಾಷ್ಟ್ರದಲ್ಲಿ
ಸರ್ಕಾರ ರಚನೆಯ ಯತ್ನಗಳು ತಾರಕಕ್ಕೆ ಏರುತ್ತಿದ್ದಂತೆಯೇ ಶಿವಸೇನೆ ಬೆಂಬಲದೊಂದಿಗೆ ತನ್ನ ಮಿತ್ರ ಪಕ್ಷವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷವು ಒಲವು ವ್ಯಕ್ತ ಪಡಿಸಿತ್ತು.
ರಾಜ್ಯಪಾಲರು
ನಿಗದಿ ಪಡಿಸಿದ್ದ ಗಡುವಿನ ಒಳಗಾಗಿ ಬೆಂಬಲ ಪತ್ರಗಳನ್ನು ಪಡೆಯಲು ವಿಫಲವಾಗಿ ಶಿವಸೇನೆಯು ಮುಜುಗರದ ಪರಿಸ್ಥಿತಿ ಎದುರಿಸಿದ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷವು ಸರ್ಕಾರ ರಚನೆಯ ನಿಟ್ಟಿನ ತನ್ನ ಒಲವನ್ನು ಸೂಚಿಸಿತ್ತು. ಶಿವಸೇನೆಯು ಬೆಂಬಲ ಪತ್ರಗಳನ್ನು ಪಡೆಯಲು ಮೂರು ದಿನಗಳ ಕಾಲಾವಕಾಶ ನೀಡುವಂತೆ ಮಾಡಿದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.
ತನ್ನ
ಸೈದ್ಧಾಂತಿಕ ಪ್ರತಿಸ್ಪರ್ಧಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಅವಸರದ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ಸಿಗೆ ಇಚ್ಛೆ ಇದ್ದಂತೆ ಕಾಣಲಿಲ್ಲ. ಹೀಗಾಗಿ ಅದು ಸೇನೆಗೆ ಬೆಂಬಲನೀಡುವ ವಿಚಾರವಾಗಿ ತನ್ನ ಚುನಾವಣಾ ಪೂರ್ವ ಮಿತ್ರ ಪಕ್ಷವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಜೊತೆಗೆ ಇನ್ನಷ್ಟು ಮಾತುಕತೆ ನಡೆಸಲು ಅಂತಿಮ ಕ್ಷಣದಲ್ಲಿ ನಿರ್ಧರಿಸಿತ್ತು.
ಮೈತ್ರಿಯ
ವಿಧಿ ವಿಧಾನಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬುದಾಗಿ ಉದ್ಧವ್ ಠಾಕ್ರೆ ಜೊತೆಗೆ ಮಾತುಕತೆ ನಡೆಸಿದ್ದ ಶರದ್ ಪವಾರ್ ಅವರು ಸೋನಿಯಾ ಗಾಂಧಿ ಅವರ ಜೊತೆಗೆ ಮಾತನಾಡಿದಾಗ ಹೇಳಿದ್ದರಿಂದ ಪಕ್ಷವು ಸೇನೆಗೆ ಬೆಂಬಲಪತ್ರ ನೀಡಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿದ್ದವು.
ಸರ್ಕಾರ
ರಚನೆಯ ವಿಚಾರದಲ್ಲಿ ತಾನು ಮಿತ್ರಪಕ್ಷವಾದ ಎನ್ಸಿಪಿಯನ್ನು ಅವಲಂಬಿದ್ದು ಪವಾರ್ ಅವರು ಹಸಿರು ನಿಶಾನೆ ತೋರಿದ ಬಳಿಕ ಮಾತ್ರವೇ ಬೆಂಬಲಪತ್ರವನ್ನು ನೀಡಲು ಸಾಧ್ಯ ಎಂದೂ ಕಾಂಗ್ರೆಸ್ ಹೇಳಿತ್ತು.
ಶರದ್
ಪವಾರ್ ನೇತೃತ್ವದ ಪಕ್ಷಕ್ಕೆ ’ಸರ್ಕಾರ ರಚನೆಯ ಆಸಕ್ತಿ ಮತ್ತು ಸಾಮರ್ಥ್ಯ ಬಗ್ಗೆ ತಿಳಿಸಲು ಮಂಗಳವಾರ ರಾತ್ರಿ ೮.೩೦ರವರೆಗೆ ಕಾಲಾವಕಾಶ
ನೀಡಲಾಗಿತ್ತು. ಇದಕ್ಕೆ ಮುನ್ನ ತನ್ನ ಚುನಾವಣಾ ಪೂರ್ವ ಮಿತ್ರ ಪಕ್ಷವಾದ ಬಿಜೆಪಿಯು ಸರ್ಕಾರ ರಚನೆಗೆ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಶಿವಸೇನೆಗೆ ಸರ್ಕಾರ ರಚನೆಗೆ ತನಗಿರುವ ಬೆಂಬಲವನ್ನು ಸಾಬೀತುಪಡಿಸುವಂತೆ ಸೂಚಿಸಿ, ೨೪ ಗಂಟೆಗಳ ಗಡುವು
ನೀಡಿದ್ದರು.
ಶಿವಸೇನೆಯು
ಸೋಮವಾರ ಎನ್ಸಿಪಿ ಮತ್ತು ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೊರತು ಪಡಿಸಿದ ತನ್ನ ಸರ್ಕಾರವನ್ನು ಬೆಂಬಲಿಸಲು ತಾತ್ವಿಕವಾಗಿ ಒಪ್ಪಿವೆ ಎಂದು ಪ್ರತಿಪಾದಿಸಿತ್ತು. ಆದರೆ ರಾಜ್ಯಪಾಲರು ವಿಧಿಸಿದ ಗಡುವಿನ ಒಳಗಾಗಿ ರಾಜಕೀಯ ಪ್ರತಿಸ್ಪರ್ಧಿಗಳಿಂದ ಬೆಂಬಲ ಪತ್ರ ಪಡೆಯುವಲ್ಲಿ ವಿಫಲವಾಗಿತ್ತು. ಬೆಂಬಲ ಪತ್ರ ಒದಗಿಸಲು ಮೂರು ದಿನಗಳ ಕಾಲಾವಕಾಶ ನೀಡುವಂತೆ ಶಿವಸೇನೆ ಮಾಡಿದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.
ಸರ್ಕಾರ
ರಚನೆಯ ಬಿಕ್ಕಟ್ಟು ಸೋಮವಾರ ೧೮ನೇ ದಿನಕ್ಕೆ ಕಾಲಿಟ್ಟಾಗ ರಾಷ್ಟ್ರಪತಿ ಆಳ್ವಿಕೆಯ ಸಾಧ್ಯತೆಗಳು ದಟ್ಟವಾಗತೊಡಗಿದ್ದವು. ತನ್ನ ಸೈದ್ಧಾಂತಿಕ ಪ್ರತಿಸ್ಪರ್ಧಿಯೊಂದಿಗೆ ಮೈತ್ರಿಮಾಡಿಕೊಳ್ಳುವಲ್ಲಿ ಅವಸರದ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ಬಯಸಿಲ್ಲ ಎಂಬುದು ಸ್ಪಷ್ಟವಾಗತೊಡಗಿತ್ತು. ಹೀಗಾಗಿ ಅದು ಮಿತ್ರಪಕ್ಷವಾದ ಎನ್ಸಿಪಿ ಜೊತೆಗೆ ಇನ್ನಷ್ಟು ಮಾತುಕತೆ ನಡೆಸುವ ನಿರ್ಧಾರ ಕೈಗೊಂಡಿತ್ತು.
No comments:
Post a Comment