ಜನರ ಅಗತ್ಯ ಆಲಿಸಿ, ಪರಿಶಿಷ್ಟರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿ
ರಾಜ್ಯಪಾಲರ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು
ನವದೆಹಲಿ: ಜನರ ಅಗತ್ಯಗಳನ್ನು ಆಲಿಸುವಂತೆ ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ದೀನದಲಿತ ವರ್ಗಗಳ ಏಳಿಗೆಗಾಗಿ ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು 2019 ನವೆಂಬರ್ 23ರ ಶನಿವಾರ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳಿಗೆ ಸಲಹೆ ಮಾಡಿದರು.
ನಗರದಲ್ಲಿ ನಡೆದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳ ೫೦ನೇ ಸಮ್ಮೇಳನದಲ್ಲಿ ಪ್ರಧಾನಿ ಈ ಸಲಹೆ ಮಾಡಿದರು.
ಆರೋಗ್ಯ ಕಾಳಜಿ, ಶಿಕ್ಷಣ, ಪ್ರವಾಸೋದ್ಯಮ ರಂಗಗಳ ಬಗೆಗೂ ವಿಶೇಷ ಪ್ರಸ್ತಾಪ ಮಾಡಿದ ಮೋದಿ, ಈ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಬಡವರು ಹಾಗೂ ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ಹೊಸ ಅವಕಾಶಗಳು ಕಾಯುತ್ತಿವೆ ಎಂದು ಹೇಳಿದರು.
ಸಾಂವಿಧಾನಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಶ್ರಮಿಸುತ್ತಿರುವುದರಿಂದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು ಜನ ಸಾಮಾನ್ಯರ ಅಗತ್ಯಗಳನ್ನು ಆಲಿಸಬೇಕು ಎಂದು ಮೋದಿ ಹೇಳಿದರು.
ಪರಿಶಿಷ್ಟ ಸಮುದಾಯಗಳು, ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು ಮತ್ತು ಯುವಕರು ಸೇರಿದಂತೆ ಸಮಾಜದ ದೀನ ದಲಿತ ವರ್ಗಗಳನ್ನು ಮೇಲೆತ್ತುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪ್ರಧಾನಿಯವರು ರಾಜ್ಯಪಾಲರನ್ನು ಆಗ್ರಹಿಸಿದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಹಾಲಿ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಬಳಸಿಕೊಳ್ಳಬೇಕು ಎಂದು ಅವರು ನುಡಿದರು.
ರಾಜ್ಯಪಾಲರ ಸಂಸ್ಥೆಗಳಿಗೆ ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಸಾಕಾರಗೊಳಿಸುವಲ್ಲಿ ವಹಿಸಬೇಕಾದ ವಿಶೇಷ ಪಾತ್ರವಿದೆ ಎಂದು ಪ್ರಧಾನಿ ಹೇಳಿದರು.
ಭಾರತವು ೨೦೨೨ರಲ್ಲಿ ೭೫ನೇ ಸ್ವಾತಂತ್ರ್ಯೋತ್ಸವವನ್ನು ಮತ್ತು ೨೦೪೭ರಲ್ಲಿ ಸ್ವಾತಂತ್ರ್ಯ ಶತಮಾನೋತ್ಸವವನ್ನು ಆಚರಿಸಲಿರುವುದರಿಂದ ಆಡಳಿತ ಯಂತ್ರವನ್ನು ದೇಶದ ಜನರ ಸಮೀಪಕ್ಕೆ ತರುವುದು ಮತ್ತು ಅವರಿಗೆ ಸಮರ್ಪಕ ಮಾರ್ಗವನ್ನು ತೋರುವುದು ಇನ್ನೂ ಹೆಚ್ಚು ಮಹತ್ವದ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು.
’ನಾವು ಭಾರತೀಯ ಸಂವಿಧಾನವನ್ನು ರೂಪಿಸಿದ ೭೦ನೇ ವರ್ಷವನ್ನು ನಾವು ಆಚರಿಸುತ್ತಿರುವುದರಿಂದ, ರಾಜ್ಯಪಾಲರು ಮತ್ತು ರಾಜ್ಯ ಆಡಳಿತಗಳು ಭಾರತೀಯ ಸಂವಿಧಾನದ ಸೇವಾ ಅಂಶಗಳತ್ತ ಮಹತ್ವ ನೀಡಿ ಕೆಲಸ ಮಾಡಬೇಕು, ಅದರಲ್ಲೂ ನಿರ್ದಿಷ್ಟವಾಗಿ ನಾಗರಿಕರ ಕರ್ತವ್ಯಗಳು ಮತ್ತು ಹೊಣೆಗಾರಿಕೆಯತ್ತ ಬೆಳಕು ಚೆಲ್ಲಬೇಕು. ಇದು ನಿಜವಾದ ಆರ್ಥದಲ್ಲಿ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯನ್ನು ತರಲು ನೆರವಾಗುತ್ತದೆ’ ಎಂದು ಪ್ರಧಾನಿಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿತು.
೨೦೨೫ರ ವೇಳೆಗೆ ಭಾರತವನ್ನು ಕ್ಷಯಮುಕ್ತ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ನಿರ್ದಿಷ್ಟ ಗುರಿಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಪಾಲರ ಕಚೇರಿಗಳನ್ನು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಬೊಟ್ಟು ಮಾಡಿದರು.
ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಉಪಕುಲಪತಿಗಾಗಿ ರಾಜ್ಯಪಾಲರು ನಮ್ಮ ಯುವಕರಲ್ಲಿ ರಾಷ್ಟ್ರ ನಿರ್ಮಾಣದ ಮೌಲ್ಯಗಳನ್ನು ಪ್ರಚೋದಿಸಲು ನೆರವಾಗಬಹುದು ಮತ್ತು ಮಹಾನ್ ಸಾಧನೆಗಳನ್ನು ಮಾಡುವತ್ತ ಸ್ಫೂರ್ತಿ ತುಂಬಲು ನೆರವಾಗಬಹುದು ಎಂದು ಮೋದಿ ಸಲಹೆ ಮಾಡಿದರು.
ತಮ್ಮ ಆಡಳಿತಾತ್ಮಕ ರಚನೆಯ ಕಾರಣದಿಂದ ಕೇಂದ್ರಾಡಳಿತ ಪ್ರದೇಶಗಳು ಅಭಿವೃದ್ಧಿಯ ನಿಟ್ಟಿನಲ್ಲಿ ಮಾದರಿ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಿದೆ ಎಂಬುದು ತಮ್ಮ ಅಭಿಪ್ರಾಯ ಎಂದೂ ಪ್ರಧಾನಿ ಹೇಳಿದರು.
ಇತ್ತೀಚಿನ ಸಮ್ಮೇಳನವು ಬುಡಕಟ್ಟು ವಿಷಯಗಳು, ಕೃಷಿಯಲ್ಲಿ ಸುಧಾರಣೆ, ಜಲ ಜೀವನ ಮಿಷನ್, ಹೊಸ ಶಿಕ್ಷಣ ನೀತಿ ಮತ್ತು ಸರಳ ಬದುಕಿಗಾಗಿ ರಾಜ್ಯಪಾಲರು ಎಂಬ ನಿರ್ದಿಷ್ಟ ವಿಷಯಗಳು ಮತ್ತು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಗುಂಪುಗಳಾಗಿ ವಿಸ್ತೃತ ಮತ್ತು ಶೋಧನಾತ್ಮಕ ಚರ್ಚೆಗಳನ್ನು ನಡೆಸಿದ್ದು ತಮಗೆ ಅತ್ಯಂತ ಸಂತಸವನ್ನು ತಂದಿದೆ ಎಂದು ಪ್ರಧಾನಿ ಹೇಳಿದರು.
ರಾಜ್ಯಪಾಲರ ೫೦ನೇ ಸಮ್ಮೇಳನದಲ್ಲಿ ಮೊತ್ತ ಮೊದಲ ಬಾರಿಗೆ ರಾಜ್ಯಪಾಲರಾಗಿರುವ ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಿರುವ ೧೭ ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ ಹೊಸದಾಗಿ ರಚಿಸಲಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರುಗಳೂ ಸೇರಿದ್ದಾರೆ.
ರಾಜ್ಯಪಾಲರ ೫೦ನೇ ಸಮ್ಮೇಳನದಲ್ಲಿ ಮೊತ್ತ ಮೊದಲ ಬಾರಿಗೆ ರಾಜ್ಯಪಾಲರಾಗಿರುವ ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಿರುವ ೧೭ ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ ಹೊಸದಾಗಿ ರಚಿಸಲಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರುಗಳೂ ಸೇರಿದ್ದಾರೆ.
ಪ್ರಧಾನಿ ಮೋದಿ ಅವರ ಹೊರತಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಶಾ ಮತ್ತು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
No comments:
Post a Comment