ಶಬರಿಮಲೈ ಮಹಿಳಾ ಪ್ರವೇಶ:೨೦೧೮ರ ಸುಪ್ರೀಂ ತೀರ್ಪು ಅಂತಿಮವಲ್ಲ
ಬಿಂದು ಅಮ್ಮಿನಿ ಅರ್ಜಿ ವಿಚಾರಣೆ ಪ್ರಸ್ತಾಪದ ವೇಳೆ ಸಿಜೆಐ ಬೋಬ್ಡೆ
ನವದೆಹಲಿ: ಕೇರಳದ ಶಬರಿಮಲೈಯ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟಿನ ೨೦೧೮ರ ಸೆಪ್ಟೆಂಬರ್ ತಿಂಗಳ ತೀರ್ಪು ವಿಷಯಕ್ಕೆ ಸಂಬಂಧಿಸಿದಂತೆ ’ಅಂತಿಮ ಅಲ್ಲ’ ಎಂಬುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.ಎ. ಬೋಬ್ಡೆ ಅವರು 2019 ಡಿಸೆಂಬರ್
05ರ ಗುರುವಾರ ಹೇಳಿದರು.
ದೇವಾಲಯ ಪ್ರವೇಶಕ್ಕೆ ರಕ್ಷಣೆ ಕೋರಿ ಸುಪ್ರೀಂಕೋರ್ಟಿಗೆ ಕೇರಳದ ಮಹಿಳೆ ಬಿಂದು ಅಮ್ಮಿನಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆಯಲ್ಲಿ ಸಿಜೆಐ ಅವರು ಈ ಅಭಿಪ್ರಾಯ ವ್ಯಕ್ತ ಪಡಿಸಿದರು.
ದೇವಾಲಯ ಪ್ರವೇಶಕ್ಕೆ ಋತುಮತಿ ವಯೋಮಾನದ ಮಹಿಳೆಯರು ಸೇರಿದಂತೆ ಎಲ್ಲ ಮಹಿಳೆಯರಿಗೆ ಅವಕಾಶ ನೀಡಿದ ಸುಪ್ರೀಂಕೋರ್ಟಿನ ೨೦೧೮ ಸೆಪ್ಟೆಂಬರ್ ತಿಂಗಳ ತೀರ್ಪು ಜಾರಿ ಮತ್ತು ಅದರ ಅನ್ವಯ ದೇವಾಲಯ ಪ್ರವೇಶ ಬಯಸುವ ಮಹಿಳೆಯರಿಗೆ ಭದ್ರತೆ ಒದಗಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬಿಂದು ಅಮ್ಮಿನಿ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಅಮ್ಮಿನಿ ಪರವಾಗಿ ಹಾಜರಾದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ಅರ್ಜಿಯನ್ನು ಪ್ರಸ್ತಾಪಿಸಿ ಪ್ರಸ್ತುತ ಋತುವಿನಲ್ಲಿ ದೇವಾಲಯವನ್ನು ಶೀಘ್ರವೇ ಮುಚ್ಚುವ ಕಾರಣ ವಿಷಯವನ್ನು ಶೀಘ್ರ ವಿಚಾರಣೆಗೆ ಪಟ್ಟಿ ಮಾಡಬೇಕು ಕೋರಿದರು.
ಪೊಲೀಸ್ ಕಮೀಷನರ್ ಅವರನ್ನು ಭೇಟಿ ಮಾಡಿ ವಾಪಸಾಗುವಾಗ ಬಿಂದು ಅಮ್ಮಿನಿ ಅವರ ಮೇಲೆ ಕೆಲವು ರಾಸಾಯನಿಕಗಳನ್ನು ಬಳಸಿ ದಾಳಿ ಮಾಡಲಾಗಿತ್ತು ಎಂದು ಜೈಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
೨೦೧೮ರ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿಲ್ಲ ಎಂಬುದಾಗಿ ಕೂಡಾ ಜೈಸಿಂಗ್ ಅವರು ಬೊಟ್ಟು ಮಾಡಿದರು.
‘೨೦೧೮ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿರುವುದರಿಂದ ವಿಷಯಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ೨೦೧೮ರ ತೀರ್ಪು ಅಂತಿಮವಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹೇಳಿದರು.
ಆದಾಗ್ಯೂ, ಮುಂದಿನವಾರ ಬಿಂದು ಅಮ್ಮಿನಿ ಅವರ ಅರ್ಜಿಯನ್ನು ಕೇರಳದ ಇನ್ನೊಬ್ಬ ಮಹಿಳೆ ಫಾತಿಮಾ ಎಎಸ್ ಸಲ್ಲಿಸಿದ ಅರ್ಜಿಯ ಜೊತೆಗೆ ವಿಚಾರಣೆಗೆ ಎತ್ತಿಕೊಳ್ಳಲು ಸಿಜೆಐ ಸಮ್ಮತಿಸಿದರು.
ಫಾತಿಮಾ ಅವರ ಅರ್ಜಿಯನ್ನು ಮುಂದಿನ ವಾರ ಪಟ್ಟಿ ಮಾಡಲು ಬುಧವಾರ ಹಿರಿಯ ವಕೀಲ ಕೋಲಿನ್ ಗೊನ್ಸಾಲ್ವೆಸ್ ಅವರು ಪ್ರಸ್ತಾಪಿಸಿದ ಬಳಿಕ ನ್ಯಾಯಾಲಯವು ಒಪ್ಪಿತ್ತು.
೨೦೧೮ರ ಸೆಪ್ಟೆಂಬರಿನಲ್ಲಿ ಸುಪ್ರೀಂಕೋರ್ಟ್ ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ೧೦-೫೦ ವಯೋಮಾನದ ಮಹಿಳೆಯರಿಗೆ ಇದ್ದ ನಿಷೇಧವನ್ನು ರದ್ದು ಪಡಿಸಿತ್ತು.
ಬಳಿಕ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲು ಕೇರಳದ ಎಡರಂಗ ಸರ್ಕಾರ ಕೈಗೊಂಡ ಯತ್ನಗಳಿಗೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾದುದಲ್ಲದೆ ಹಿಂಸಾಚಾರಗಳೂ ನಡೆದಿದ್ದವು.
೨೦೧೮ರ ತನ್ನ ತೀರ್ಪಿನ ವಿರುದ್ಧ ಸಲ್ಲಿಸಲಾದ ಪುನರ್ ಪರಿಶೀಲನಾ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವಹಿಸಲು ಸುಪ್ರೀಂಕೋರ್ಟ್ ತೀರ್ಮಾನಿಸಿದ ಬಳಿಕ, ಕೇರಳ ಸರ್ಕಾರವು ದೇವಾಲಯ ಪ್ರವೇಶಿಸಬಯಸುವ ಮಹಿಳೆಯರಿಗೆ ರಕ್ಷಣೆ ಒದಗಿಸುವ ಬಗ್ಗೆ ನ್ಯಾಯಾಲಯದ ಸ್ಪಷ್ಟವಾದ ಅಂತಿಮ ತೀರ್ಪು ಬರುವವರೆಗೆ ಕಾಯಲು ನಿರ್ಧರಿಸಿತ್ತು.
ದೇವಾಲಯದ ಸಂಪ್ರದಾಯವಾದಿಗಳು ಮತ್ತು ಅರ್ಚಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಿಸಬಯಸುವ ಮಹಿಳೆಯರಿಗೆ ಸರ್ಕಾರ ರಕ್ಷಣೆ ಒದಗಿಸಬೇಕು ಎಂಬುದಾಗಿ ಮಹಿಳಾ ಕಾರ್ಯಕರ್ತರು ಮಾಡಿದ್ದ ಆಗ್ರಹಕ್ಕೆ ಕೇರಳ ಸರ್ಕಾರ ಈವರ್ಷ ಮಣಿದಿರಲಿಲ್ಲ.
೨೦೧೮ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಪುನರ್ ಪರಿಶೀಲನಾ ಅರ್ಜಿಗಳು ಸುಪ್ರೀಂಕೋರ್ಟಿನ ಮುಂದಿದ್ದು, ನ್ಯಾಯಾಲಯವು ಮುಸ್ಲಿಮ್ ಮತ್ತು ಪಾರ್ಸಿ ಮಹಿಳೆಯರಿಗೆ ಸಂಬಂಧಿಸಿದ ಇದೇ ಮಾದರಿಯ ವಿಷಯಗಳಿಗೆ ಉತ್ತರ ಕಂಡು ಕೊಂಡ ಬಳಿಕ ನ್ಯಾಯಾಲಯವು ಶಬರಿ ಮಲೈಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
No comments:
Post a Comment