Tuesday, December 10, 2019

ಮಹಿಳೆಯರು, ಮಕ್ಕಳ ವಿರುದ್ಧದ ಲೈಂಗಿಕ ಅಪರಾಧ: ಉತ್ತರ ಪ್ರದೇಶದಲ್ಲಿ ೨೧೮ ಫಾಸ್ಟ್ ಟ್ರ್ಯಾಕ್ ಕೋರ್ಟ್

ಮಹಿಳೆಯರು, ಮಕ್ಕಳ ವಿರುದ್ಧದ ಲೈಂಗಿಕ ಅಪರಾಧ:
ಉತ್ತರ ಪ್ರದೇಶದಲ್ಲಿ ೨೧೮ ಫಾಸ್ಟ್ ಟ್ರ್ಯಾಕ್ ಕೋರ್ಟ್
ಲಕ್ನೋ: ಉನ್ನಾವೋ ಅತ್ಯಾಚಾರ ಸಂತ್ರಸ್ಥ ಮಹಿಳೆಯ ಸಾವಿನ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಜನಾಕ್ರೋಶದ ಮಧ್ಯೆ,  ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧ ಪ್ರಕರಣಗಳ ಕ್ಷಿಪ್ರ ಇತ್ಯರ್ಥಕ್ಕಾಗಿ ೨೧೮ ತ್ವರಿತ ನ್ಯಾಯಾಲಯಗಳನ್ನು  (ಫಾಸ್ಟ್ ಟ್ರ್ಯಾಕ್  ಕೋರ್ಟ್) ಸ್ಥಾಪಿಸುವುದಾಗಿ ಉತ್ತರ ಪ್ರದೇಶ ಸರ್ಕಾರವು 2019 ಡಿಸೆಂಬರ್ 09ರ ಸೋಮವಾರ ಪ್ರಕಟಿಸಿತು.

ಉನ್ನಾವೋ ಸಂತ್ರಸ್ಥೆಯ ಅಂತ್ಯಕ್ರಿಯೆ ನಡೆದ ಒಂದು ದಿನದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ರಾಜ್ಯದಲ್ಲಿ ಪ್ರಸ್ತುತ ಮಕ್ಕಳ ವಿರುದ್ಧದ ೪೨,೩೮೯ ಲೈಂಗಿಕ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಬಿದ್ದಿದ್ದರೆ, ಮಹಿಳೆಯರ ವಿರುದ್ಧದ ೨೫,೭೪೯ ಅತ್ಯಾಚಾರ ಹಾಗೂ ಲೈಂಗಿಕ ಅಪರಾಧ ಪ್ರಕರಣಗಳು ನೆನೆಗುದಿಯಲ್ಲಿವೆ ಎಂದು ಉತ್ತರ ಪ್ರದೇಶ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಹೇಳಿದರು.

ಭಾರೀ ಸಂಖ್ಯೆಯ ಪ್ರಕರಣಗಳು ನೆನೆಗುದಿಯಲ್ಲಿ ಬಿದ್ದ ಹಿನ್ನೆಲೆಯಲ್ಲಿ ಅವುಗಳ ಕ್ಷಿಪ್ರ ವಿಲೇವಾರಿಗಾಗಿ ೨೧೮ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು, ಇವುಗಳಲ್ಲಿ ೧೪೪ ನ್ಯಾಯಾಲಯಗಳು ಮಹಿಳೆಯರ ವಿರುದ್ಧದ ಅತ್ಯಾಚಾರ/ ಲೈಂಗಿಕ ಅಪರಾಧ ಪ್ರಕರಣಗಳ ವಿಚಾರಣೆ ನಡೆಸಲಿವೆ ಎಂದು ಅವರು ನುಡಿದರು.

ಲೈಂಗಿಕ ಅಪರಾಧಗಳ ವಿರುದ್ದ ಮಕ್ಕಳ ಸಂರಕ್ಷಣೆ (ಪೋಸ್ಕೊ) ಕಾಯ್ದೆಯ ಅಡಿಯಲ್ಲಿ ಮಕ್ಕಳ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ವಿಚಾರಣೆಗಾಗಿ ಇಂತಹ ೭೪ ಹೊಸ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ವಿವರಿಸಿದರು.

ಎಲ್ಲ ೨೧೮ ನ್ಯಾಯಾಲಯಗಳಲ್ಲೂ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರ ಶ್ರೇಣಿಯ ನ್ಯಾಯಾಧೀಶರ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುವುದು. ಹೊಸ ತ್ವರಿತ ನ್ಯಾಯಾಲಯಗಳ ಸ್ಥಾಪನೆಗಾಗಿ ಪ್ರತಿ ನ್ಯಾಯಾಲಯಕ್ಕೆ ೭೫ ಲಕ್ಷ ರೂಪಾಯಿಗಳ ಅನುದಾನ ಒದಗಿಸಲಾಗುವುದು. ಕೇಂದ್ರವು ಶೇಕಡಾ ೬೦ರಷ್ಟು ವೆಚ್ಚವನ್ನೂ ರಾಜ್ಯ ಸರ್ಕಾರವು ಶೇಕಡಾ ೪೦ರಷ್ಟು ವೆಚ್ಚವನ್ನೂ ಭರಿಸಲಿದೆ ಎಂದು ಅವರು ಹೇಳಿದರು.

No comments:

Advertisement