Friday, December 27, 2019

ಕಂಕಣ ಸೂರ್ಯಗ್ರಹಣ: ಬಾನಂಗಳದಲ್ಲಿ ನೆರಳು ಬೆಳಕಿನಾಟದ ವಿಸ್ಮಯ

ಕಂಕಣ ಸೂರ್ಯಗ್ರಹಣ:  ಬಾನಂಗಳದಲ್ಲಿ ನೆರಳು ಬೆಳಕಿನಾಟದ  ವಿಸ್ಮಯ
ನವದೆಹಲಿ: ಅಪರೂಪದ ಕಂಕಣ ಸೂರ್ಯಗ್ರಹಣ  ಡಿಸೆಂಬರ್ 26ರ ಗುರುವಾರ ಬೆಳಗ್ಗೆ ೮ಗಂಟೆಗೆ ಆರಂಭವಾಗಿ, ೧೧.೧೫ಕ್ಕೆ ಮುಕ್ತಾಯವಾಯಿತು. ಈ ಬಾರಿ ಅತಿ ಹೆಚ್ಚು ಸ್ಪಷ್ಟವಾಗಿ ಗ್ರಹಣ ಕರ್ನಾಟಕದ ಮಂಗಳೂರು, ಮೈಸೂರು ಹಾಗೂ ಮಡಿಕೇರಿ ಭಾಗದಲ್ಲಿ ಗೋಚರಿಸಿದ್ದು ವಿಶೇಷವಾಗಿತ್ತು.

ಸೌದಿ ಅರೇಬಿಯಾದ ರಿಯಾದ್ ನಲ್ಲಿ ಮೊದಲಿಗೆ ಭಾಗಶಃ ಸೂರ್ಯಗ್ರಹಣ ಗೋಚರಿಸಿತ್ತು. ಭಾರತದಲ್ಲಿ ಅತ್ಯಪರೂಪದ ಕಂಕಣ ಸೂರ್ಯಗ್ರಹಣ ಮೊದಲು ಕೇರಳದ ಚೆರ್ವತ್ತೂರಿನಲ್ಲಿ ಗೋಚರವಾಯಿತು. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಜನರು ಬಾನಂಗಳದಲ್ಲಿ ನಡೆದ ಕಂಕಣ ಸೂರ್ಯಗ್ರಹಣದ ಕೌತುಕವನ್ನು ಸೌರ ಕನ್ನಡಕಗಳನ್ನು ಧರಿಸಿ ಕಣ್ತುಂಬಿಕೊಂಡರು.

ವರ್ಷದ ಕಂಕಣ ಸೂರ್ಯಗ್ರಹಣ ಬೆಳಗ್ಗೆ ೯.೦೪ ನಿಮಿಷಕ್ಕೆ ಗೋಚರವಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ೧೦.೪೭ರ ಸುಮಾರಿಗೆ ಗೋಚರವಾಗತೊಡಗಿತ್ತು. ಪೂರ್ಣ ಪ್ರಮಾಣದಲ್ಲಿ ಶಾಂತಸಾಗರದ ಗುವಾಂನಲ್ಲಿ ೧೨.೩೦ಕ್ಕೆ ಕೊನೆಯದಾಗಿ ಸೂರ್ಯಗ್ರಹಣ ಗೋಚರವಾಗಿ ಮುಕ್ತಾಯವಾಗಿತ್ತು.

ಕಂಕಣ ಸೂರ್ಯಗ್ರಹಣ ಪೂರ್ಣ, ಭಾಗಶಃ ಹಾಗೂ ಉಂಗುರಾಕೃತಿ ಸೇರಿದಂತೆ ಮೂರು ವಿಧದಲ್ಲಿ ಕಣ್ಸೆಳೆಯಿತು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಹೋಮ, ಹವನ ನಡೆಯಿತು. ಬಹುತೇಕ ದೇವಾಲಯಗಳನ್ನು ಸೂರ್ಯಗ್ರಹಣ ಸಮಯದಲ್ಲಿ ಮುಚ್ಚಲಾಗಿದ್ದು, ಸೂರ್ಯಗ್ರಹಣ ಮೋಕ್ಷದ ಬಳಿಕ ಶುದ್ದಿಕಾರ್ಯ ನಡೆಸಿ ಪೂಜೆ, ಪುನಸ್ಕಾರ ಆರಂಭಿಸಿದ್ದವು.

ದಕ್ಷಿಣ ಕನ್ನಡ ಬಹುತೇಕ ಮಸೀದಿಗಳಲ್ಲಿ ನಮಾಜ್ ಮಾಡಲಾಯಿತು. ಮಂಗಳೂರು ಬಂದರಿನ ಜುಮ್ಮಾ ಮಸೀದಿಯಲ್ಲಿ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವದಲ್ಲಿ ನಮಾಜ್ ನಡೆಯಿತು.

No comments:

Advertisement