Saturday, February 15, 2020

ಉದ್ಧವ್ ಠಾಕ್ರೆ ವಿರುದ್ಧ ಶರದ್ ಪವಾರ್ ಗರಂ

ಎನ್ಐಎಗೆ ಎಲ್ಗರ್ ಪರಿಷದ್ ಪ್ರಕರಣ ಹಸ್ತಾಂತರ
ಉದ್ಧವ್ ಠಾಕ್ರೆ ವಿರುದ್ಧ ಶರದ್ ಪವಾರ್  ಗರಂ
ಮುಂಬೈ: ಮಹಾರಾಷ್ಟ್ರ ವಿಕಾಸ ಅಘಾಡಿಯಲ್ಲಿ ಮೊತ್ತ ಮೊದಲ ಬಾರಿಗೆ ಭಿನ್ನಮತ ಸ್ಫೋಟಗೊಂಡಿದ್ದು, ಎಲ್ಗರ್ ಪರಿಷದ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸಲು ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೈಗೊಂಡ ನಿರ್ಣಯದ ವಿರುದ್ದ ಅಘಾಡಿಯ ಅಂಗಪಕ್ಷವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು 2020 ಫೆಬ್ರುವರಿ 14ರ ಶುಕ್ರವಾರ ಅಸಂತೋಷ ವ್ಯಕ್ತ ಪಡಿಸಿದರು.

ಎಲ್ಗರ್ ಪರಿಷದ್ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ನಿರ್ದೇಶಿಸಿದ ಕೇಂದ್ರ ಸರ್ಕಾರದ ನಿರ್ಧಾರ ಅನ್ಯಾಯದ್ದಾಗಿದ್ದರೆ, ಅದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು ಅದಕ್ಕಿಂತಲೂ ಘೋರ ಅನ್ಯಾಯ ಎಂದು ಪವಾರ್ ಟೀಕಿಸಿದರು.

ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಅಂಗ ಪಕ್ಷಗಳಾಗಿರುವ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಸರ್ಕಾರವು ೨೦೧೯ರ ನವೆಂಬರ್ ತಿಂಗಳಲ್ಲಿ  ರಚನೆಯಾದಂದಿನಿಂದ ಪವಾರ್ ಅವರ ಟೀಕೆಗೆ ಗುರಿಯಾದ ಮುಖ್ಯಮಂತ್ರಿಯ ಮೊದಲ ನಿರ್ಣಯ ಇದಾಗಿದೆ.

ಕೇಂದ್ರ ಸರ್ಕಾರವು ಜನವರಿ ೨೫ರಂದು ಕೈಗೊಂಡ ನಿರ್ಧಾಕ್ಕೆ ಅನುಗುಣವಾಗಿ ಎಂವಿಎ ಸರ್ಕಾರವು ೨೦೧೮ರ ಎಲ್ಗರ್ ಪರಿಷದ್ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಒಪ್ಪಿದೆ. ಕೇಂದ್ರ ಸರ್ಕಾರವು ಒಕ್ಕೂಟ ತನಿಖಾ ಸಂಸ್ಥೆಗೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದೆ.

೨೦೧೭ರ ಡಿಸೆಂಬರ್ ೩೧ರಂದು ನಡೆದ ಎಲ್ಗರ್ ಪರಿಷದ್ ಸಮಾವೇಶದಲ್ಲಿ ಭಾಷಣಗಳನ್ನು ಮಾಡಿದ ಎಡ ಮತ್ತು ದಲಿತ ಚಳವಳಿಗಳ ಜೊತೆಗೆ ಸಂಪರ್ಕ ಹೊಂದಿರುವ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರವು ಎನ್ಐಎಗೆ ಸೂಚಿಸಿದೆ.

ಕಾನೂನು ಸುವ್ಯವಸ್ಥೆ ಪಾಲನೆಯು ರಾಜ್ಯದ ವಿಷಯ. ರಾಜ್ಯದ ಹಕ್ಕುಗಳ ಮೇಲೆ ಅತಿಕ್ರಮಣ ನಡೆಸುವುದು ಅನ್ಯಾಯ ಮತ್ತು ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡುವ ಕ್ರಮವು ಇನ್ನಷ್ಟು ಘೋರವಾದ ಅನ್ಯಾಯಎಂದು ಪವಾರ್ ಅವರು ಕೊಲ್ಹಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಎನ್ಸಿಪಿ ಸದಸ್ಯರಾಗಿರುವ ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್ ಅವರುಮುಖ್ಯಮಂತ್ರಿ  ಉದ್ಧವ್ ಠಾಕ್ರೆ ಅವರು ಪ್ರಕರಣ ಹಸ್ತಾಂತರಕ್ಕೆ ಅನುಮೋದನೆ ನೀಡಲು ತಮ್ಮ ವಿವೇಚನಾ ಅಧಿಕಾರವನ್ನು ಬಳಸಿಕೊಂಡಿದ್ದಾರೆಎಂದು  ಇದಕ್ಕೆ ಮುನ್ನ  ಹೇಳಿದ್ದರು.

ಕೇಂದ್ರವು ಪ್ರಕರಣವನ್ನು ಎನ್ಐಎಗೆ ಹಸ್ತಾಂತರ ಮಾಡುವ ಮುನ್ನ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು ಎಂಬುದು ಈಗಲೂ ನನ್ನ ಅಭಿಪ್ರಾಯಎಂದು ಅವರು ನುಡಿದರು.

ನಾವು ಇದನ್ನು ಪುಣೆ ಸೆಷನ್ಸ್ ನ್ಯಾಯಾಲಯದಲ್ಲಿ ಸ್ಪಷ್ಟ ಪಡಿಸಿದೇವೆ.. ಏನಿದ್ದರೂ, ನಮ್ಮ ನಿರ್ಧಾರವನ್ನು ಮುಖ್ಯಮಂತ್ರಿಯವರು ತಮ್ಮ ವಿವೇಚನಾ ಅಧಿಕಾರ ಬಳಸಿ ತಳ್ಳಿಹಾಕಿದ್ದಾರೆಎಂದು ದೇಶಮುಖ್ ಹೇಳಿದರು.

ಎಂವಿಎ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕು ಎಂದು ಒತ್ತಾಯಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರವು ಕಾರ್ಯಕರ್ತರನ್ನು ಬಂಧಿಸಲು ಅಧಿಕಾರದ ದುರುಪಯೋಗ ಮಾಡಿದೆ ಎಂದು ಹೇಳಿದ್ದ ಎನ್ಸಿಪಿ ಮುಖ್ಯಸ್ಥ ಪವಾರ್, ಕಾರ್ಯಕರ್ತರ ಬಂಧನವನ್ನು ಒಂದು ಷಡ್ಯಂತ್ರ ಎಂದು ಬಣ್ಣಿಸಿದ್ದರು.

ಶರದ್ ಪವಾರ್ ಪತ್ತದ ಬಳಿಕ, ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಗೃಹ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಪ್ರಕರಣದ ಪುನರ್ ವಿಮರ್ಶೆ ಮಾಡಿದ್ದರು. ಸಂಪೂರ್ಣ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಬಗ್ಗೆ ಗೃಹ ಇಲಾಖೆ ಪರಿಶೀಲನೆಯನ್ನೂ ನಡೆಸಿತ್ತು.

ಆದಾಗ್ಯೂ, ಅದಕ್ಕೂ ಮುನ್ನವೇ ಕೇಂದ್ರವು ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಎನ್ಐಎಗೆ ನಿರ್ದೇಶನ ನೀಡಿತ್ತು. ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ತನಿಖೆಯನ್ನು ಕೈಗೆತ್ತಿಕೊಳ್ಳುವ ಅಧಿಕಾರ ಎನ್ಐಎಗೆ ಇದೆ.

ಪುಣೆಯ ಭಿಮಾ-ಕೋರೆಗಾಂವ್ ಸಮರ ಸ್ಮಾರಕದ ಸಮೀಪ ೨೦೧೮ರ ಜನವರಿ ೧ರಂದು ಹಿಂಸಾಚಾರ ಸಂಭವಿಸಿ ಒಬ್ಬ ಮೃತನಾಗಿ ಇತರ ಹಲವರು ಗಾಯಗೊಂಡಿದ್ದರು. ೧೮೧೮ರಲ್ಲಿ ಪುಣೆಯ ಪೇಶ್ವಾ ಆಡಳಿತಗಾರರ ಸೇನೆಯ ವಿರುದ್ಧ ಬಹುತೇಕ ದಲಿತ ಮಹರ್ ಯೋಧರಿದ್ದ ಬ್ರಿಟಿಷ್ ಸೇನೆಯು ಸಾಧಿಸಿದ ವಿಜಯವನ್ನು ಸ್ಮರಿಸಲು ದಲಿತರು ಭಾರೀ ಸಂಖ್ಯೆಯಲ್ಲಿ ಈದಿನ ಭಿಮಾ ಕೋರೆಗಾಂವ್ ಸಮರ ಸ್ಮಾರಕಕ್ಕೆ ಭೇಟಿ ನೀಡಿದ್ದರು.

ಎಲ್ಗರ್ ಪರಿಷದ್ನಲ್ಲಿ  ಹಿಂಸೆಗೆ ಪ್ರಚೋದನೆ ನೀಡಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದಕ್ಕಾಗಿ ಪುಣೆ ಪೊಲೀಸರು ಕಾರ್ಯಕರ್ತರು ಮತ್ತು ಬುದ್ಧಿ ಜೀವಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು ಮತ್ತು ದೇಶಾದ್ಯಂತ ದಾಳಿಗಳನ್ನು ನಡೆಸಿ ಕಾರ್ಯಕರ್ತರು ಮತ್ತು ಬುದ್ದಿ ಜೀವಿಗಳನ್ನು ಬಂಧಿಸಿದ್ದರು. ಎಲ್ಗರ್ ಪರಿಷದ್ ಸಮಾವೇಶದ ಸಂಘಟಕರಿಗೆ ಮಾವೋವಾದಿ ನಕ್ಸಲೀಯರ ಸಂಪರ್ಕಗಳು ಕೂಡಾ ಇದ್ದವು ಎಂದು ಪೊಲೀಸರು ಪ್ರತಿಪಾದಿಸಿದ್ದರು.

No comments:

Advertisement