Sunday, February 16, 2020

ಪೌರತ್ವ ತಿದ್ದುಪಡಿ ಕಾಯ್ದೆ: ಶಾ ಸಂಧಾನದ ಮೇಜಿಗೆ ಶಾಹೀನ್ ಬಾಗ್ ಪ್ರತಿಭಟನಕಾರರು

ಪೌರತ್ವ ತಿದ್ದುಪಡಿ ಕಾಯ್ದೆಶಾ  ಸಂಧಾನದ ಮೇಜಿಗೆ ಶಾಹೀನ್  ಬಾಗ್ ಪ್ರತಿಭಟನಕಾರರು
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಲು ಮತ್ತು ಚರ್ಚಿಸಲು ಸಿದ್ಧರಿದ್ದೇವೆ ಎಂದು ಶಾಹೀನ್ ಬಾಗ್ ಪ್ರತಿಭಟನಾಕಾರರು 2020 ಫೆಬ್ರುವರಿ 15ರ ಶನಿವಾರ ಹೇಳಿದರು.
2020 ಫೆಬ್ರುವರಿ 16ರ ಭಾನುವಾರ ಶಾ ಅವರ ಜೊತೆಗೆ ಚರ್ಚೆಗೆ ಸಿದ್ಧರಿದ್ದೇವೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ, ಆದರೆ ಅಂತಹ ಯಾವುದೇ ಸಭೆ ಭಾನುವಾರಕ್ಕೆ ನಿಗದಿಯಾಗಿಲ್ಲ ಎಂದು ಗೃಹ ಸಚಿವಾಲಯ ಮೂಲಗಳು ಹೇಳಿದವು.
ಆಗ್ನೇಯ ದೆಹಲಿಯಲ್ಲಿನ ಶಾಹೀನ್ ಬಾಗ್ ಬಹುತೇಕ ಮಹಿಳೆಯರನ್ನೇ ಒಳಗೊಂಡ ಪ್ರತಿಭಟನಾಕಾರರು ಡಿಸೆಂಬರ್ ಮಧ್ಯಭಾಗದಿಂದ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಬಯಸುವ ಯಾರಾದರೂ ತಮ್ಮ ಕಚೇರಿಯಿಂದ ಅದಕ್ಕಾಗಿ ಸಮಯವನ್ನು ಪಡೆಯಬಹುದು ಎಂದು ಅಮಿತ್ ಶಾ ಅವರು ಹೇಳಿದ ಒಂದು ದಿನದ ನಂತರ ಬೆಳವಣಿಗೆ ನಡೆಯಿತು.
"ಮಾತುಕತೆಗಾಗಿ (ನಾವು) ಮೂರು ದಿನಗಳಲ್ಲಿ ಸಮಯವನ್ನು ನೀಡುತ್ತೇವೆ" ಎಂದು ಅಮಿತ್ ಶಾ ಅವರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ತಿಳಿಸಿದ್ದರು.

"ಅಮಿತ್ ಷಾ ಅವರ ಮಾತುಕತೆಯ ಪ್ರಸ್ತಾಪವನ್ನು ನಾವು ಒಪ್ಪುತ್ತೇವೆ. ನಾಳೆ (ಭಾನುವಾರ) ಮಧ್ಯಾಹ್ನ ಗಂಟೆಗೆ ಭೇಟಿಯಾಗಲು ನಾವು ಸಿದ್ಧರಿದ್ದೇವೆ. ನಾವು ಯಾವುದೇ ಭೇಟಿಯ ಸಮಯ ಕೋರಿಲ್ಲ. ಈಗ ನಮ್ಮನ್ನು ಎಲ್ಲಿ ಭೇಟಿ ಮಾಡಬಹುದು ಎಂದು ಅಮಿತ್ ಶಾ ಅವರೇ ನಿರ್ಧರಿಸಬೇಕುಎಂದು ಪ್ರತಿಭಟನಾಕಾರರು ಶನಿವಾರ ಹೇಳಿದರು.

ಆದರೆ ಶಾಹೀನ್ ಬಾಗ್ ಪ್ರತಿಭಟನಕಾರರ ಜೊತೆಗೆ ಮಾತುಕತೆಗೆ ಸಂಬಂಧಿಸಿದ ಯಾವುದೇ ಸಭೆ ಭಾನುವಾರಕ್ಕೆ ನಿಗದಿಯಾಗಿಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರತಿಭಟನಾಕಾರರು ಬೇಡಿಕೆಗಳ ಪಟ್ಟಿಯೊಂದಿಗೆ ಅಮಿತ್ ಅವರ ನಿವಾಸಕ್ಕೆ ಭಾನುವಾರ ಮೆರವಣಿಗೆಯಲ್ಲಿ ತೆರಳಲು ಪ್ರತಿಭಟನಕಾರರು ಉದ್ದೇಶಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

"ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ತಮ್ಮನ್ನು ಭೇಟಿ ಮಾಡುವಂತೆ ಅಮಿತ್ ಶಾ ಜಿ ಅವರು ಇಡೀ ದೇಶವನ್ನು ಆಹ್ವಾನಿಸಿದ್ದಾರೆ. ಆದ್ದರಿಂದ, ನಾವು ಅವರನ್ನು ಭೇಟಿಯಾಗಲಿದ್ದೇವೆ. ನಮಗೆ ಯಾವುದೇ ನಿಯೋಗವಿಲ್ಲ, ಸಿಎಎ ಬಗ್ಗೆ ಮಾತನಾಡಬಯಸುವು ಯಾರೇ ಆದರೂ ನಮ್ಮೊಂದಿಗೆ ಬರಬಹುದುಎಂದು ಪ್ರತಿಭಟನಕಾರರು ಹೇಳಿರುವುದಾಗಿ ವರದಿ ತಿಳಿಸಿತು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅಮಿತ್ ಶಾ ಅವರು ಗುರುವಾರ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು ಮತ್ತು ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುವ ಯಾವುದೇ ಅಂಶ ಹೊಸ ಕಾನೂನಿನಲ್ಲಿ ಇಲ್ಲಎಂದು ಸ್ಪಷ್ಟ ಪಡಿಸಿದ್ದರು.

No comments:

Advertisement