Friday, March 13, 2020

ಕೇರಳ: ಕೋರೋನಾ ಐಸೋಲೇಷನ್ ವಾರ್ಡಿನಲ್ಲಿ ಒಬ್ಬನ ಸಾವು

ಕೇರಳ: ಕೋರೋನಾ ಐಸೋಲೇಷನ್ ವಾರ್ಡಿನಲ್ಲಿ ಒಬ್ಬನ ಸಾವು
ತಿರುವನಂತಪುರಂ: ಕೇರಳದ ಕೊಟ್ಟಾಯಂ ಆಸ್ಪತ್ರೆಯ ಕೊರೋನಾವೈರಸ್ ಏಕಾಂಗಿ ವಾರ್ಡಿಗೆ (ಐಸೋಲೇಷನ್ ವಾರ್ಡ್) ದಾಖಲಾಗಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದಾಗಿ ಕೇರಳ ಸರ್ಕಾರದ ಅಧಿಕಾರಿಯೊಬ್ಬರು 2020 ಮಾರ್ಚ್  13ರ ಶುಕ್ರವಾರ ತಿಳಿಸಿದರು.  ೭೨ ವರ್ಷದ ವ್ಯಕ್ತಿಯ ಸಾವಿಗೆ ನೆತ್ತರುನಂಜು ಅಥವಾ ರಕ್ತವಿಷ (ಸೆಪ್ಟಿಸೆಮಿಯಾ) ಕಾರಣ ಎಂದು ಜಿಲ್ಲಾ ವೈದ್ಯಾಧಿಕಾರಿ ನುಡಿದರು. ರೋಗಿಗೆ ಕೊರೋನಾವೈರಸ್ ಸೋಂಕು ತಗಲಿದ್ದು ಪರೀಕ್ಷೆಯಲ್ಲಿ ಕಂಡು ಬಂದಿರಲಿಲ್ಲ ಎಂದು ಅವರು ಹೇಳಿದರು.
ಕೊಟ್ಟಾಯಂನಲ್ಲಿ ಕೆಲವು ಕೊರೋನಾವೈರಸ್ ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದಿದ್ದ ಕಾರಣ ಅವರನ್ನು ಮುಂಜಾಗರೂಕತಾ ಕ್ರಮವಾಗಿ ಏಕಾಂಗಿ ವಾರ್ಡಿನಲ್ಲಿ ಇರಿಸಲಾಗಿತ್ತು ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಎಎನ್ ಶೀಜಾ ಹೇಳಿದರು. ಭಾರತದ ೮೧ ಕೊರೋನಾ ಸೋಂಕು ಪ್ರಕರಣಗಳಲ್ಲಿ ೧೭ ಪ್ರಕರಣಗಳು ಕೇರಳದಿಂದಲೇ ವರದಿಯಾಗಿವೆ.
ಆದಾಗ್ಯೂ ಸರ್ಕಾರೀ ಅಧಿಕಾರಿಗಳು ಮೃತ ವ್ಯಕ್ತಿಯ ಪ್ರಾಥಮಿಕ ಕೊರೋನಾವೈರಸ್ ಪರೀಕ್ಷಾ ಫಲಿತಾಂಶವನ್ನು ಎದುರುನೋಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತದ ಮೊದಲ ಕೊರೋನಾವೈರಸ್ ಸಾವು ನೆರೆಯ ಕರ್ನಾಟಕದಿಂದ ವರದಿಯಾಗಿರುವುದನ್ನು ಕೇಂದ್ರ ಸರ್ಕಾರವು ದೃಢ ಪಡಿಸಿದ ಒಂದು ದಿನದ ಬಳಿಕ ಕೇರಳದಲ್ಲಿ ಸಂಭವಿಸಿರುವ ಸಾವು ಆತಂಕವನ್ನು ಉಂಟು ಮಾಡಿದೆ. ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಮೃತನಾದ ೭೬ರ ಹರೆಯದ ವ್ಯಕ್ತಿಗೆ ಕೊರೋನಾವೈರಸ್ ಸೋಂಕು ತಗುಲಿದ್ದುದು ಕಳೆದ ರಾತ್ರಿ ಗಂಟಲ ದ್ರವದ ಮಾದರಿಯ ಪರೀಕ್ಷಾ ಫಲಿತಾಂಶದಿಂದ ಖಚಿತವಾಗಿತ್ತು.

No comments:

Advertisement