Tuesday, April 21, 2020

‘ನವರಂಗ’ ಪಕ್ಷಿಯ ನೋಡಿದಿರಾ?

ನವರಂಗ’ ಪಕ್ಷಿಯ ನೋಡಿದಿರಾ?
(ಇದು ಸುವರ್ಣ ನೋಟ)
ಒಂದಲ್ಲ, ಎರಡಲ್ಲ, ಮೂರಲ್ಲ.. ಒಂಬತ್ತು ಬಣ್ಣಗಳು ಮೇಳೈಸಿದ ಅಪರೂಪದ ಹಕ್ಕಿಯನ್ನು ನೋಡಿದ್ದೀರಾ? ಮೈನಾಗಾತ್ರದ ಈ ಪುಟ್ಟ ಹಕ್ಕಿಯ ಎದೆ ಹಳದಿ, ರೆಕ್ಕೆಗಳು ನೀಲಿ ಪಟ್ಟಿಗಳನ್ನು ಹೊಂದಿರುವ ಹಸಿರು, ಚೋಟುದ್ದದ ಬಾಲದ ಕೆಳೆಗೆ ರಕ್ತಕೆಂಪು ಬಣ್ಣ, ಹಾರುವಾಗ ರೆಕ್ಕೆಯ ಬಿಳಿ ಪಟ್ಟೆ ಎದ್ದು ಕಾಣುತ್ತದೆ. ಗೋಲಾಕಾರದ ದೇಹ. ಗಂಡು-ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ.

'ಇಂಡಿಯನ್ ಪಿಟ್ಟ' ಎಂಬುದಾಗಿಯೂ ಗುರುತಿಸಲ್ಪಡುವ ಈ ಹಕ್ಕಿ ತನ್ನಒಂಬತ್ತು ಬಣ್ಣಗಳ ಕಾರಣದಿಂದಲೇ ‘ನವರಂಗ ಪಕ್ಷಿ’ ಅಥವಾ ‘ನವರಂಗ ಹಕ್ಕಿ’ ಎಂಬ ಹೆಸರು ಪಡೆದಿದೆ. ಕನ್ನಡ, ಹಿಂದಿ, ಪಂಜಾಬಿ, ಗುಜರಾಥಿ ಭಾಷೆಗಳಲ್ಲಿ ‘ನವರಂಗ’  ಎಂಬ ಹೆಸರು ಪಡೆದಿರುವ ಈ ಹಕ್ಕಿಗೆ ತೆಲುಗು ಪದದ ಕಾರಣದಿಂದಾಗಿ ಇಂಡಿಯನ್ ‘ಪಿಟ್ಟ’ ಹೆಸರು ಪ್ರಾಪ್ತಿಯಾಗಿದೆ. ತೆಲುಗು ಭಾಷೆಯಲ್ಲಿ ಇದನ್ನು ‘ಪೋಲಂಕಿ ಪಿಟ್ಟ’ ಎಂಬುದಾಗಿ ಕರೆದರೆ  ಮಲಯಾಳಂ ಭಾಷೆಯಲ್ಲಿ ಇದು’ಕಾವಿ’  ತಮಿಳರು ಇದನ್ನು ‘ಅರುಮನಿ ಕುರುವಿ’ ಎಂಬುದಾಗಿ ಕರೆಯುತ್ತಾರೆ.

ಮೂಲತಃ  . ಪಿಟ್ಟ ಬ್ರಾಚಿಯುರಾ ವರ್ಗಕ್ಕೆ ಸೇರಿರುವ  ಈ ಪಕ್ಷಿಗಳು ಹಿಮಾಲಯ ವಾಸಿಗಳು. ಹಿಮಾಲಯದಲ್ಲಿ, ಉತ್ತರ ಪಾಕಿಸ್ತಾನದಿಂದ ನೇಪಾಳ ಮತ್ತು ಸಿಕ್ಕಿಂವರೆಗೂ ವ್ಯಾಪಿಸಿದೆ ಇವುಗಳ ಸಾಮ್ರಾಜ್ಯ.  ಬಾಂಗ್ಲಾದೇಶ, ಶ್ರೀಲಂಕೆಯಲ್ಲೂ ಇರುವುದುಂಟು.  ಕೆಲವೂಮ್ಮೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ಸಂತಾನೋತ್ಪತ್ತಿ ನಡೆಸುತ್ತವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದ ವರೆಗೂ ವಲಸೆ ಹೋಗುತ್ತವೆ.

ಜೂನ್ ದಿಂದ ಅಗಸ್ಟ್ ವರೆಗೆ ಸಂತಾನೋತ್ಪತ್ತಿ ನಡೆಸುವ ನವರಂಗ ಪಕ್ಷಿಗಳು  ನೆಲದ ಮೇಲೆ ಅಥವಾ ತಗ್ಗಿನ ಗಿಡಗಳ ಮೇಲೆ ಒಣ ಹುಲ್ಲು, ಕಡ್ಡಿಗಳನ್ನು ಬಳಸಿ ಗೂಡುಕಟ್ಟಿ, ತಿಳಿನೀಲಿ ಚುಕ್ಕೆಗಳಿರುವ ಬಿಳಿಯ ೪ ರಿಂದ ೫ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ. ಅಕಶೇರುಕಗಳು, ಕ್ರಿಮಿ ಕೀಟಗಳು ಮತ್ತು ಮರಿ ಹುಳುಗಳು ಇವುಗಳ  ಆಹಾರ.

ಈ ಹಕ್ಕಿಗಳು  ದಟ್ಟ ಮರಗಳಿರುವೆಡೆ ತಂಪಾದ ಜಾಗಗಳಲ್ಲಿ ಇರುತ್ತವೆ. ಮರಗಳ ಕೊಂಬೆಗಳಲ್ಲಿ ಕೂರುವುದು ಅಪರೂಪ. ಸಾಧಾರಣವಾಗಿ ನೆಲದಮೇಲೆ ಕುಪ್ಪಳಿಸಿಕೊಂಡೇ  ಓಡಾಡುತ್ತವೆ. ಚೋಟುದ್ದದ ಬಾಲವನ್ನು ಲಯಬದ್ಧವಾಗಿ ಎತ್ತಿ ಎತ್ತಿ ಕುಣಿಸುವುದು ನೋಡಲು ಚೆಂದ.  ನಸುಕಿನಲ್ಲಿ ಹಾಗು ಸಂಜೆಯಲ್ಲಿ’ ವೀಟ್ವೀ..’ ಎಂದು ಮೆಲುದನಿಯಲ್ಲಿ ಕೂಗುವುದು ಈ ಪಕ್ಷಿಗಳ ಹವ್ಯಾಸ.


ಬೆಳಗ್ಗೆಯಾಗುತ್ತಿದ್ದಂತೆಯೇ ಗೂಡು ಬಿಟ್ಟು ಬಂದರೆ ಸಂಜೆ ೬ ಗಂಟೆಗೆಲ್ಲ ಮತ್ತೆ ಗೂಡು ಸೇರುತ್ತವೆ. ಸಮಯಪಾಲನೆಯನ್ನು ಇವುಗಳಿಂದ ಕಲಿಯಬೇಕು. ಸಂಜೆ ೬ ಗಂಟೆಗೆ ಗುಂಪು ಸೇರಿ ಮರಗಳಲ್ಲಿ ವಾಸ್ತವ್ಯ ಹೂಡುತ್ತವೆ. ಹೀಗಾಗಿ ಇವುಗಳಿಗೆ ’ಸಿಕ್ಸ್ ವೋ ಕ್ಲಾಕ್ ಬರ್ಡ್ (6 ಗಂಟೆಯ ಹಕ್ಕಿ) ಎಂಬ ಅನ್ವರ್ಥ ನಾಮವೂ  ಇದೆ.

ಚಳಿಗಾಲದಲ್ಲಿ ದಕ್ಷಿಣಭಾರತದ ಕಡೆ ವಲಸೆ ಬರುವ ಇವು, ಮೇ ನಂತರ ತವರಿಗೆ ಮರಳಿ ಜೂನ್- ಅಕ್ಟೋಬರ್ ನಲ್ಲಿ ಹಿಮಾಲಯದಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಅಳಿವಿನ ಅಂಚಿನಲ್ಲಿ ಇರುವ ನಿರುಪದ್ರವಿಯಾಗಿರುವ ಈ ಹಕ್ಕಿಗಳು ವಲಸೆ ಬಂದ ಸಮಯದಲ್ಲಿ ಕರ್ನಾಟಕದ  ಗುಂಡ್ಲುಪೇಟೆ,  ಮೈಸೂರಿನ ಚಾಮುಂಡಿಬೆಟ್ಟಗಳಲ್ಲಿ ಕಾಣಸಿಗುತ್ತವೆ.



ಥಾಮಸ್ ಹಾರ್ಡ್ವಿಕ್ ಎಂಬ ವ್ಯಕ್ತಿ 1834ರಲ್ಲಿ ಈ ಹಕ್ಕಿ ರೆಕ್ಕಿ ಬಿಚ್ಚಿದಾಗ ಹೀಗೆ ಕಾಣುತ್ತದೆ ಎಂದು ಚಿತ್ರಿಸಿದ್ದ.

ಕೆಲ ಸಮಯದ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ಹಕ್ಕಿಗಳು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಮೂಡಿ ಬಂದದ್ದು ಹೀಗೆ.
ಸಮೀಪ ದೃಶ್ಯದ ಅನುಭವಕ್ಕೆ ಫೊಟೋ ಗಳನ್ನು ಕ್ಲಿಕ್ಕಿಸಿ.

3 comments:

dr.shankara said...

Great pictures. Neevu, maneyalle iddera? Officenalli iddera?

PARYAYA said...

ಮನೆಯಲ್ಲೇ- ಗೃಹ ಬಂಧನ!

Lakshmana said...

ಉಪಯುಕ್ತ ವಿವರಗಳು... ಅರ್ಥಪೂರ್ಣ ಪೋಸ್ಟ್

Advertisement