Saturday, April 25, 2020

ಕೇಂದ್ರದ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ದೆಹಲಿ ಸರ್ಕಾರದ ಅಸ್ತು

ಕೇಂದ್ರದ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ದೆಹಲಿ ಸರ್ಕಾರದ  ಅಸ್ತು
ನವದೆಹಲಿ: ಲಾಕ್ಡೌನ್ ಮಧ್ಯೆ ಅಂಗಡಿಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೆ ತರಲು ದೆಹಲಿ ಸರ್ಕಾರವು 2020 ಏಪ್ರಿಲ್ 25ರ ಶನಿವಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಗತ್ಯೇತರ ಅಂಗಡಿಗಳಿಗೆ ತೆರೆಯಲು ಅವಕಾಶ ನೀಡಲಾಗುವುದು, ಆದರೆ ಕೊರೋನಾವೈರಸ್ ಕಂಟೈನ್ಮೆಂಟ್ ವಲಯಗಳಲ್ಲಿ ಅಲ್ಲ. ಕಂಟೈನ್ಮೆಂಟ್ ವಲಯಗಳಲ್ಲಿ ಯಾವುದೇ ಚಟುವಟಿಕೆಗೂ ಅವಕಾಶ ನೀಡಲಾಗುವುದಿಲ್ಲ ಎಂದು ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು.

ರಾಷ್ಟ್ರೀಯ ರಾಜಧಾನಿಯಲ್ಲಿ ೯೨ ಕಂಟೈನ್ಮೆಂಟ್ ವಲಯಗಳಿವೆ.

ಸ್ವತಂತ್ರ ಅಂಗಡಿಗಳು ಮತ್ತು ವಸತಿ ಪ್ರದೇಶಗಳಲ್ಲಿನ ಅಂಗಡಿಗಳು ತೆರೆಯಬಹುದು, ಆದರೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಎಂದು ಅಧಿಕಾರಿ ನುಡಿದರು.

ಶುಕ್ರವಾರ ತಡರಾತ್ರಿಯಲ್ಲಿ ಹೊರಡಿಸಿದ ಆದೇಶದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನೆರೆಹೊರೆಯಲ್ಲಿ ಮತ್ತು ವಸತಿ ಸಮುಚ್ಚಯಗಳ ಸಮೀಪದ ಸ್ವತಂತ್ರ ಅಂಗಡಿಗಳು ಸೇರಿದಂತೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

ಒಂದು ತಿಂಗಳ ಕೊರೋನಾವೈರಸ್ ದಿಗ್ಬಂಧನದ (ಲಾಕ್ ಡೌನ್) ಬಳಿಕ ಸಣ್ಣ ವರ್ತಕರು ಮತ್ತು ವ್ಯಾಪಾರಿಗಳಿಗೆ ಕೇಂದ್ರದ ಆದೇಶವು ದೊಡ್ಡ ನಿರಾಳತೆಯನ್ನು ನೀಡಿತ್ತು.

ಏನಿದ್ದರೂ, ಹೊಸ ಸಡಿಲಿಕೆಗಳು ದೇಶದಲ್ಲಿನ ಹಾಟ್ಸ್ಪಾಟ್ಗಳು ಅಥವಾ ಕಂಟೈನ್ಮೆಂಟ್ ವಲಯಗಳಿಗೆ ಅನ್ವಯಿಸುವುದಿಲ್ಲ ಮತ್ತು ಸಾಮಾಜಿಕ ಅಂತರ ಪಾಲನೆಯ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಸಚಿವಾಲಯ ಹೇಳಿತ್ತು.

No comments:

Advertisement