ಈಗ ೩ ದಿನಗಳ ಬದಲು ೬.೨ ದಿನಕ್ಕೊಮ್ಮೆ ಸೋಂಕು ದುಪ್ಪಟ್ಟು: ಇದು ದಿಗ್ಬಂಧನ ಪರಿಣಾಮ
ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಪಾಸಿಟಿವ್ ಪ್ರಕರಣಗಳ ದುಪ್ಪಟ್ಟು ಪ್ರಮಾಣವು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಬಳಿಕ ಇಳಿಮುಖವಾಗಿದ್ದು ಹಿಂದೆ ೩ ದಿನಗಳಿಗೊಮ್ಮ ಆಗುತ್ತಿದ್ದ ದುಪ್ಪಟ್ಟು ಸಂಖ್ಯೆ ಈಗ ೬.೨ ದಿನಗಳಿಗೊಮ್ಮೆ ಆಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್ 17ರ ಶುಕ್ರವಾರ ತಿಳಿಸಿತು.
ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ ಮೊದಲು ಕೋವಿಡ್-೧೯ ಪ್ರಕರಣಗಳು ೩ ದಿನಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿದ್ದವು. ಆದರೆ, ಕಳೆದ ೭ ದಿನಗಳ ಮಾಹಿತಿ ಪ್ರಕಾರ ದುಪ್ಪಟ್ಟು ದರವು ಈಗ ೬.೨ ದಿನಗಳಾಗಿವೆ. ೧೯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದುಪ್ಪಟ್ಟು ದರವು ಸರಾಸರಿ ದುಪ್ಪಟ್ಟು ದರಕ್ಕಿಂತಲೂ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘೧೯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದುಪ್ಪಟ್ಟು ದರವು ರಾಷ್ಟ್ರೀಯ ದುಪ್ಪಟ್ಟು ಮಟ್ಟಕ್ಕಿಂತ ಕೆಳಗಿದೆ. ಕೇರಳ, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಲಡಾಖ್, ಪುದುಚ್ಚೇರಿ, ದೆಹಲಿ, ಬಿಹಾರ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಪಂಜಾಬ್, ಅಸ್ಸಾಂ, ತ್ರಿಪುರ ಈ ಎಲ್ಲ ರಾಜ್ಯಗಳಲ್ಲಿ ಕೊರೋನಾವೈರಸ್ ಪ್ರಕರಣಗಳ ದುಪ್ಪಟ್ಟು ದರವು ಕಡಿಮೆ ಇದೆ ಎಂದು ಅಗರವಾಲ್ ನುಡಿದರು.
೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನದ ಬಳಿಕ ಮತ್ತು ಅದನ್ನು ಪುನಃ ವಿಸ್ತರಿಸಿದ ಪರಿಣಾಮವಾಗಿ ರಾಷ್ಟ್ರೀಯ ಮಟ್ಟದಲ್ಲಿ ಸೋಂಕಿನ ದುಪ್ಪಟ್ಟು ಪ್ರಮಾಣವು ೩ರಿಂದ ೬.೨ ದಿನಗಳಿಗೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು.
ಚೇತರಿಸಿದ ಕೋವಿಡ್-೧೯ ರೋಗಿಗಳು ಮತ್ತು ಸಾವುಗಳ ಅನುಪಾತವು ದೇಶದಲ್ಲಿ ೮೦:೨೦ ಪ್ರಮಾಣದಲ್ಲಿದೆ. ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಹೆಚ್ಚು ಎಂದು ಆರೋಗ್ಯ ಅಧಿಕಾರಿ ಹೇಳಿದರು.
ಕಳೆದ ೨೪ ಗಂಟೆಗಳಲ್ಲಿ ೧,೦೦೭ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿತ್ತು ೨೩ ಸಾವುಗಳು ಸಂಭವಿಸಿವೆ ಎಂದು ಅವರು ನುಡಿದರು.
ಕೋವಿಡ್-೧೯ ತೀವ್ರವಾಗಿ ಬಾಧಿಸಿರುವ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ೫ ಲಕ್ಷ ಕ್ಪಿಪ್ರ ಪ್ರತಿಕಾಯ ಪರೀಕ್ಸಾ ಕಿಟ್ಗಳನ್ನು ಕಳುಹಿಸಲಾಗಿದೆ. ಹೊಸ ಪ್ರಕರಣಗಳ ಬೆಳವಣಿಗೆಯಲ್ಲಿ ಶೇಕಡಾ ೪೦ರಷ್ಟು ಇಳಿಕೆ ಕಂಡು ಬಂದಿದೆ. ಕೊರೋನಾವೈರಸ್ ಪ್ರಕರಣಗಳ ವಿಶ್ಲೇಷಣೆಯಿಂದ ೮೦ ರೋಗಿಗಳು ಚೇತರಿಸುವಾಗ ೨೦ ರೋಗಿಗಳು ಮೃತರಾದದ್ದು ಬೆಳಕಿಗೆ ಬಂದಿದೆ ಎಂದು ಲವ ಅಗರವಾಲ್ ಹೇಳಿದರು.
ಈವರೆಗೆ ವರದಿಯಾಗಿರುವ ಒಟ್ಟು ೧೩,೩೮೭ ಪ್ರಕರಣಗಳ ಪೈಕಿ ೧೦೭೯ ಪ್ರಕರಣಗಳಲ್ಲಿ ರೋಗಿಗಳು ಚೇತರಿಸುವುದರೊಂದಿಗೆ ರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ ೧೩.೬ರಷ್ಟು ಇದೆ ಎಂದು ಅಗರವಾಲ್ ನುಡಿದರು.
ಐಸಿಎಂಆರ್ ನಿಂದ ಬಿಸಿಜಿ ಲಸಿಕೆಯ ಅಧ್ಯಯನ
ಕೋವಿಡ್-೧೯ರ ವಿರುದ್ಧದ ಸಮರದಲ್ಲಿ ಬಿಸಿಜಿ ಲಸಿಕೆ ಬಳಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಾ. ಆರ್. ಗಂಗಾಖೇತ್ಕರ್ ಅವರು ’ಭಾರತದಲ್ಲಿ ಕೊರೋನಾವೈರಸ್ ಕಳೆದ ೩ ತಿಂಗಳಿನಿಂದ ಇದೆ. ವಿಭಜನೆ (ಮ್ಯೂಟೇಷನ್) ಕ್ಷಿಪ್ರವಾಗಿ ಆಗುವುದಿಲ್ಲ. ಯಾವುದೇ ಲಸಿಕೆ ಬಂದರೂ ಅದು ಭವಿಷ್ಯದಲ್ಲಿ ಬಳಕೆಯಾಗುತ್ತದೆ. ಬಿಸಿಜಿ ಲಸಿಕೆ ಬಳಕೆಯ ಬಗ್ಗೆ ಐಸಿಎಂಆರ್ ಒಂದು ವಾರದಲ್ಲಿ ಅಧ್ಯಯನ ಆರಂಭಿಸಲಿದೆ. ಅಧ್ಯಯನದಿಂದ ಖಚಿತ ಫಲಿತಾಂಶ ಬರುವವರೆಗೆ ಆರೋಗ್ಯ ಕಾರ್ಯಕರ್ತರಿಗೆ ಕೂಡಾ ಅದನ್ನು ಶಿಫಾರಸು ಮಾಡಲಾಗುವುದಿಲ್ಲ ಎಂದು ಹೇಳಿದರು.
ದೇಶದಲ್ಲಿ ಪ್ರಸ್ತುತ ಕೊರೋನಾವೈರಸ್ ಚಿಕಿತ್ಸೆಗಾಗಿಯೇ ಮೀಸಲಾದ ೧೯೧೯ ಆಸ್ಪತ್ರೆಗಳಿವೆ, ೧,೭೩,೦೦೦ ಐಸೋಲೇಷನ್ ಹಾಸಿಗೆಗಳು ಇವೆ ಮತ್ತು ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ೨೧,೦೦೦ ಹಾಸಿಗೆಗಳು ಲಭ್ಯ ಇವೆ ಎಂದು ಲವ ಅಗರವಾಲ್ ಹೇಳಿದರು.
ಪ್ರಸ್ತುತ ದೇಶವು ತಿಂಗಳಿಗೆ ೬೦೦೦ ವೆಂಟಿಲೇಟರ್ಗಳ ನಿರ್ಮಾಣ ಸಾಮರ್ಥ್ಯ ಹೊಂದಿದೆ. ಸಿಎಸ್ಐಆರ್ ಪ್ರಯೋಗಾಲಯಗಳು ಚೇತರಿಕೆಯ ಭರವಸೆ ಹುಟ್ಟಿಸಿರುವ ದೇಶೀಯ ವೈರಾಣು ನಿರೋಧಿ ಔಷಧಗಳ ಬಗ್ಗೆ ಕಾರ್‍ಯ ನಿರತವಾಗಿವೆ. ೩,೧೯,೪೦೦ ರೋಗಿಗಳನ್ನು ಈವರೆಗೆ ಕೋವಿಡ್-೧೯ ಸಲುವಾಗಿ ಪರೀಕ್ಷಿಸಲಾಗಿತ್ತು, ಈ ಪೈಕಿ ೨೮,೩೪೦ ಪರೀಕ್ಷೆಗಳನ್ನು ಗುರುವಾರ ನಡೆಸಲಾಗಿದೆ. ಈ ಪೈಕಿ ೪,೪೦೮ ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳು ಪರೀಕ್ಷಿಸಿವೆ ಎಂದು ಲವ ಅಗರವಾಲ್ ನುಡಿದರು.
ಮೇ ತಿಂಗಳ ವೇಳೆಗೆ ೧೦ ಲಕ್ಷ ಆರ್ಟಿಪಿಸಿಆರ್ ಕಿಟ್ಗಳನ್ನು ದೇಶೀಯವಾಗಿ ನಿರ್ಮಿಸುವತ್ತ ಈಗ ನಮ್ಮ ಗಮನ ಇದೆ. ಕೋವಿಡ್-೧೯ ಲಸಿಕೆ ತಯಾರಿಸುವ ನಿಟ್ಟಿನಲ್ಲೇ ಈಗ ನಮ್ಮ ಗಮನ ಕೇಂದ್ರೀಕೃತವಾಗಿದೆ. ಬಿಸಿಜಿ, ಪ್ಲಾಸ್ಮಾ ಥೆರೆಪಿ, ಮೋನೋಕೊಲೋನಲ್ ಆಂಟಿಬಾಡಿ (ಪ್ರತಿಕಾಯ) ಥೆರೆಪಿಗಳನ್ನು ಕೊರೋನಾವೈರಸ್ ವಿರುದ್ಧ ಬಳಸುವ ನಿಟ್ಟಿನಲ್ಲಿ ನಮ್ಮ ಗಮನವಿದೆ ಎಂದು ಅಗರವಾಲ್ ಹೇಳಿದರು.
No comments:
Post a Comment