ಉಚಿತ ಕೊರೋನಾ ಪರೀಕ್ಷೆ: ಸುಪ್ರೀಂ ತೀರ್ಪಿಗೆ ಉದ್ಯಮ ವಲಯದಲ್ಲಿ ಆತಂಕ
ನವದೆಹಲಿ: ಕೊರೋನಾವೈರಸ್ ಪರೀಕ್ಷೆಗಳನ್ನು ಉಚಿತವಾಗಿ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವೈದ್ಯಕೀಯ ಸಂಸ್ಥೆಗಳ ಮೇಲೆ ಅನುಚಿತ ಆರ್ಥಿಕ ಹೊರೆ ಉಂಟು ಮಾಢುವುದರ ಜೊತೆಗೆ ವಿಶ್ವದಲ್ಲಿ ಈಗಾಗಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ಕೋವಿಡ್ ಪರೀಕ್ಷೆಗಳ ಪ್ರಮಾಣವನ್ನು ಇನ್ನಷ್ಟು ಕುಗ್ಗಿಸಬಹುದು ಎಂಬ ಆತಂಕ 2020 ಏಪ್ರಿಲ್ 09ರ ಗುರುವಾರ ಉದ್ಯಮ ವಲಯಗಳು ಮತ್ತು ಆರೋಗ್ಯ ತಜ್ಞರಿಂದ ವ್ಯಕ್ತವಾಯಿತು.
ಇತರ ಹಲವಾರು ವ್ಯಾಪಾರೋದ್ದಿಮೆ ಸಂಸ್ಥೆಗಳಂತೆಯೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಯಾವುದೇ ಹಣಕಾಸು ನೆರವೂ ಇಲ್ಲದೆಯೇ ಉಚಿತವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕಾಗಿ ಬಂದರೆ ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ಉದ್ಯಮ ವಲಯಗಳು ಅಭಿಪ್ರಾಯಪಟ್ಟವು.
ಭಾರತದ ಅತಿದೊಡ್ಡ ಬಯೋಟೆಕ್ ಸಂಸ್ಥೆಗಳಲ್ಲಿ ಒಂದಾಗಿರುವ ಬಯೋಕಾನ್ ಲಿಮಿಟೆಡ್ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿರುವ ಕಿರಣ್ ಮಜುಂದಾರ್ ಶಾ ಅವರು ’ಖಾಸಗಿ ಸಂಸ್ಥೆಗಳು ಸಾಲದ ಮೇಲೆ ನಡೆಯಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಮಾನವೀಯ ಉದ್ದೇಶವು ಸರಿ, ಆದರೆ ಅನುಷ್ಠಾನದೃಷ್ಟಿಯಿಂದ ಪ್ರಾಯೋಗಿಕವಲ್ಲ, ಪರೀಕ್ಷೆಗಳೇ ಕುಸಿದುಬೀಳಬಹುದು ಎಂಬ ಭೀತಿ ನನಗಿದೆ’ ಎಂದು ಶಾ ಗುರುವಾರ ಟ್ವೀಟ್ ಮೂಲಕ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ. ’ಇವೆಲ್ಲ ಸಣ್ಣ ಉದ್ಯಮಗಳು. ಅವುಗಳು ಪರೀಕ್ಷೆಗಳಿಗೆ ವೆಚ್ಚವನ್ನಷ್ಟೇ ಪಡೆಯುತ್ತಿವೆ, ಲಾಭ ಪಡೆಯುತ್ತಿಲ್ಲ. ಅವುಗಳು ತಮ್ಮ ಉದ್ಯೋಗಿಗಳಿಗೆ ಹೇಗೆ ವೇತನ ನೀಡುತ್ತವೆ?’ ಎಂದು ಶಾ ಪ್ರಶ್ನಿಸಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಬುಧವಾರ ’ಖಾಸಗಿ ವೈದ್ಯಕೀಯ ಸಂಸ್ಥೆಗಳು ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಉದಾತ್ತ ಪಾತ್ರ ವಹಿಸಬೇಕು ಮತ್ತು ಭಾರತದ ಬಡವರು ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ವೈರಸ್ ಪತ್ತೆಯ ಪರೀಕ್ಷೆಯನ್ನು ಕೂಡಾ ಮಾಡಿಸಿಕೊಳ್ಳಲಾಗದ ಪರಿಸ್ಥಿತಿಗೆ ತಾನು ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಸುಪ್ರೀಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು.
ಅತಿ ಹೆಚ್ಚು ಜನಸಂಖ್ಯೆಯಿರುವ ಜಗತ್ತಿನ ಎರಡನೇ ರಾಷ್ಟ್ರವಾಗಿರುವ ಭಾರತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪರೀಕ್ಷೆಗಳು ನಡೆಯಬೇಕಾಗಿರುವುದು ಈಗಿನ ಅಗತ್ಯ, ಅವುಗಳ ಹಣ ಮರುಪಾವತಿ ವಿಚಾರವನ್ನು ನಾವು ಆಮೇಲೆ ಪರಿಶೀಲಿಸುತ್ತೇವೆ ಎಂದು ಕೋರ್ಟ್ ಹೇಳಿತ್ತು.
ಭಾರತದಲ್ಲಿ ಕೊರೋನಾವೈರಸ್ ಸೋಂಕು ತಗುಲಿದ ೫,೭೩೪ ಪ್ರಕರಣಗಳು ವರದಿಯಾಗಿದ್ದು ೧೬೬ ಸಾವುಗಳು ಸಂಭವಿಸಿವೆ, ಬುಧವಾರ ಒಂದೇ ದಿನ ೫೬೦ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತ್ತು.
ಅಮೆರಿಕ, ಇಟಲಿ, ಸ್ಪೇನ್ ದೇಶಗಳಿಗೆ ಹೋಲಿಸಿದರೆ ಈ ಅಂಕಿ ಸಂಖ್ಯೆಗಳು ಸಣ್ಣವು. ಇವರಲ್ಲಿ ವಿದೇಶಗಳಿಗೆ ಪಯಣಿಸಿದವರು, ಅವರ ಸಂಪರ್ಕಕ್ಕೆ ಬಂದು ರೋಗಲಕ್ಷಣ ಕಂಡು ಬರುತ್ತಿರುವವರು, ರೋಗಲಕ್ಷಣಗಳಿರುವ ಆರೋಗ್ಯ ಕಾರ್ಯಕರ್ತರು, ಉಸಿರಾಟದ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಮತ್ತು ಸೋಂಕು ದೃಢಪಟ್ಟ ರೋಗಿಯ ಸಂಪರ್ಕಕ್ಕೆ ಬಂದವರು ಸೇರಿದ್ದಾರೆ.
ಬುಧವಾರ ರಾಷ್ಟಾದ್ಯಂತ ೧೩,೧೪೩ ಮಾದರಿಗಳನ್ನು ಪರೀಕ್ಷಿಸಲಾಗಿದೆ, ದಕ್ಷಿಣ ಕೊರಿಯಾದಲ್ಲಿ ಪ್ರತಿದಿನ ೨೦,೦೦೦ ಜನರನ್ನು ಪರೀಕ್ಷಿಸಲಾಗುತ್ತಿದ್ದು, ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ನಡೆಯುತ್ತಿರುವ ಪರೀಕ್ಷೆಗಳ ಸಂಖ್ಯೆ ಕಡಿಮೆ ಎಂದು ಭಾರತೀಯ ವೈದಕೀಯ ಸಂಶೋಧನಾ ಮಂಡಳಿ ಹೇಳಿದೆ.
ಸರ್ಕಾರವು ೧೩೬ ಸರ್ಕಾರಿ ಪ್ರಯೋಗಾಲಯಗಳ ಜೊತೆಗೆ ೫೬ ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್ -೧೯ ಸಲುವಾಗಿ ಸ್ಕ್ರೀನಿಂಗ್ ನಡೆಸಲು ಅನುಮೋದನೆ ನೀಡಿ ಪ್ರತಿ ಪರೀಕ್ಷೆಗೆ ೪,೫೦೦ ರೂಪಾಯಿ (೫೯.೧೩ ಡಾಲರ್) ದರವನ್ನು ನಿಗದಿ ಪಡಿಸಿತ್ತು. ಪರೀಕ್ಷೆಗಳನ್ನು ಮುಂದಿನ ಕೆಲವು ದಿನಗಳಲ್ಲಿ ೨೦,೦೦೦ಕ್ಕೇ ಹೆಚ್ಚಿಸುವುದು ಮತ್ತು ಅಗತ್ಯ ಬಿದ್ದಲ್ಲಿ ದಿನಕ್ಕೆ ೧,೦೦,೦೦೦ ಪರೀಕ್ಷೆಗಳನ್ನು ನಡೆಸಲು ಸಜ್ಜಾಗುವುದು ಸರ್ಕಾರದ ಯೋಜನೆಯಾಗಿತ್ತು.
ಆದರೆ ನ್ಯಾಯಾಲಯದ ತೀರ್ಪು ಪರೀಕ್ಷೆಗಳನ್ನು ವಿಸ್ತರಿಸುವ ಯೋಜನೆಯ ದಾರಿತಪ್ಪಿಸುವ ಅಪಾಯವಿದೆ ಎಂದು ಭಾರತದ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯ ಹಾಗೂ ಆರೋಗ್ಯ ತಜ್ಞೆ ಶಮಿಕ ರವಿ ಹೇಳಿದರು.
‘ನಾವು ಪರೀಕ್ಷಾ ವ್ಯವಸ್ಥೆಗಳನ್ನೇ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಇದು ಪ್ರಸ್ತುತ ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ, ದೇಶಾದ್ಯಂತ ಪರೀಕ್ಷೆ ಸಾಮರ್ಥ್ಯ ಹೆಚ್ಚಳದ ಬಗ್ಗೆ ನಾವೀಗ ಹೆಚ್ಚಿನ ಗಮನ ಹರಿಸಬೇಕಾಗಿದೆ’ ಎಂದು ಅವರು ನುಡಿದರು.
ಇತರ ಸಂಸ್ಥೆಗಳಂತೆಯೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಆರೋಗ್ಯ ರಂಗವು ಕೂಡಾ ಉಚಿತ ಪರೀಕ್ಷೆಗಳನ್ನು ನಡೆಸುವ ಸ್ಥಿತಿಯಲ್ಲಿ ಇಲ್ಲ ಎಂದು ಅವರು ಹೇಳಿದರು.
‘ಡಯಾಗ್ನಾಸ್ಟಿಕ್ಸ್ ಸೇರಿದಂತೆ ಪ್ರತಿಯೊಂದು ವ್ಯವಹಾರ ಕ್ಷೇತ್ರವು ಇಂದು ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ. ಯಾವುದೇ ನೆರವಿನ ಭರವಸೆ ಇಲ್ಲದೆ ಇನ್ನಷ್ಟು ಆರ್ಥಿಕ ಹೊರೆ ಮಾಡಿಕೊಳ್ಳಲು ಜನರು ಇಚ್ಛಿಸುವುದಿಲ್ಲ’ ಎಂದು ಅವರು ನುಡಿದರು.
ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈಯಲ್ಲಿ ೮೫೭ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿರುವುದು ಚಿಂತೆ ಹೆಚ್ಚಳಕ್ಕೆ ಕಾರಣವಾಗಿದೆ. ಇದು ರಾಷ್ಟ್ರದಲ್ಲೇ ದೊಡ್ಡ ಪ್ರಮಾಣವಾಗಿದೆ. ಇಲ್ಲಿನ ಕೊಳೆಗೇರಿಗಳಿಗೆ ಆರೋಗ್ಯ ಕಾರ್ಯಕರ್ತರೂ ಹೋಗಲು ಇಚ್ಛಿಸುತ್ತಿಲ್ಲ. ನಮ್ಮ ವೈದ್ಯಕೀಯ ಸಿಬ್ಬಂದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೋಂಕಿಗೆ ಒಳಗಾಗುತ್ತಿರುವುದು ಅಥವಾ ಅವರು ಕೆಲಸಕ್ಕೇ ಬಾರದೆ ಇರುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ ಎಂದು ನಗರ ಅರೋಗ್ಯ ಇನ್ಸ್ಪೆಕ್ಟರ್ ಒಬ್ಬರು ನುಡಿದರು.
No comments:
Post a Comment