Monday, April 20, 2020

ಫಾಲ್ಗಾರ್: ಸಾಧುಗಳ ಹತ್ಯೆ ಪ್ರಕರಣ, ತಪ್ಪಿತಸ್ಥರ ವಿರುದ್ಧ ಉಗ್ರಕ್ರಮ, ಉದ್ಧವ್ ಠಾಕ್ರೆ ಭರವಸೆ

ಫಾಲ್ಗಾರ್:  ಸಾಧುಗಳ ಹತ್ಯೆ ಪ್ರಕರಣ, ತಪ್ಪಿತಸ್ಥರ ವಿರುದ್ಧ ಉಗ್ರಕ್ರಮ, ಉದ್ಧವ್ ಠಾಕ್ರೆ ಭರವಸೆ
ಮುಂಬೈ: ಮೂವರು ಸಾಧುಗಳನ್ನು ಕಳೆದವಾರ ಗುಂಪುದಾಳಿಯಲ್ಲಿ ಕೊಂದ ಪ್ರಕರಣದ ತಪ್ಪಿತಸ್ಥರ ವಿರುದ್ಧ ಮತ್ತು ಪ್ರಕರಣಕ್ಕೆ ಧಾರ್ಮಿಕ ಬಣ್ಣ ಬಳಿಯುವವರ ವಿರುದ್ಧ ಉಗ್ರಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು  2020 ಏಪ್ರಿಲ್ 20ರ ಸೋಮವಾರ  ಭರವಸೆ ನೀಡಿದರು.

ಫಾಲ್ಗಾರ್ನಲ್ಲಿ ಕಳೆದ ವಾರ ಮೂವರನ್ನು ಗುಂಪುದಾಳಿಯಲ್ಲಿ ಕೊಂದ ಪ್ರಕರಣಕ್ಕೆ ಧಾರ್ಮಿಕ ಬಣ್ಣ ನೀಡುವವರ ವಿರುದ್ಧವೂ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ತಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು ಪ್ರಕರಣದ ವಿವರಗಳನ್ನು ನೀಡಿರುವುದಾಗಿ ಉದ್ಧವ್ ಹೇಳಿದರು.

ಅಮಿತ್ ಶಾಜಿ ಅವರಿಗೂ ಪ್ರಕರಣಕ್ಕೆ ಯಾವುದೇ ಧಾರ್ಮಿಕ ಸಂಬಂಧ ಇಲ್ಲ ಎಂಬುದು ಗೊತ್ತಿದೆ. ಘಟನೆ ಸಂಭವಿಸಿದ ಗ್ರಾಮಕ್ಕೆ ಅಂತಹ ಯಾವುದೇ ಹಿನ್ನೆಲೆ ಕೂಡಾ ಇಲ್ಲ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಕೋಮು ಪ್ರಕ್ಷುಬ್ಧತೆ ಹರಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಅವರಿಗೂ ಮನವಿ ಮಾಡಿದ್ದೇನೆ ಎಂದು ಠಾಕ್ರೆ ಅವರು ಫೇಸ್ಬುಕ್ ಲೈವ್ನಲ್ಲಿ ನುಡಿದರು.

ಘಟನೆಯನ್ನು ಬಳಸಿಕೊಂಡು ಧಾರ್ಮಿಕ ಭಾವನೆಗಳಿಗೆ ಕಿಚ್ಚು ಹಚ್ಚಲು ಯತ್ನಿಸುವವರ ವಿರುದ್ಧ ನಾವು ಕೂಡಾ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಪಾಲ್ಘಾರ್ನಿಂದ ೧೧೦ ಕಿಮೀ ದೂರದ ಗಢಚಿಂಚಲೆ ಗ್ರಾಮದ ಹೊರಭಾಗದಲ್ಲಿ ಇಬ್ಬರು ಹಿಂದೂ ಸಾಧುಗಳ ಮತ್ತು ಅವರ ಚಾಲಕನನ್ನು ಮಕ್ಕಳ ಕಳ್ಳರು ಎಂಬ ಗುಮಾನಿಯಲ್ಲಿ ಭಾವಿಸಿ ಏಪ್ರಿಲ್ ೧೬ರಂದು ಜನರ ಗುಂಪೊಂದು ದಾಳಿ ನಡೆಸಿ ಕೊಂಡು ಹಾಕಿತ್ತು.

ಬಳಿಕ ಹತರಾದವರು ೭೦ ವರ್ಷದ ಸ್ವಾಮಿ ಕಲ್ಪವೃಕ್ಷ ಗಿರಿ ಮತ್ತು ೩೫ ವರ್ಷ ಸುಶೀಲ್ ಗಿರಿ ಎಂಬ ವಾರಾಣಸಿ ಮೂಲದ ಜುನಾ ಆಖಾಡದ ಸಾಧುಗಳು ಎಂಬುದು ಬೆಳಕಿಗೆ ಬಂದಿತ್ತು. ಅವರು ಗುಜರಾತಿಗೆ ತಮ್ಮ ಗುರು ಮಹಂತ ಶ್ರೀ ರಾಮಗಿರಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು.

ಪಾಲ್ಘಾರ್ ಗುಂಪು ದಾಳಿಯಲ್ಲಿ ಪಾಲ್ಗೊಂಡ ಯಾವ ವ್ಯಕ್ತಿಯನ್ನೂ ಬಿಡುವುದಿಲ್ಲ ಎಂಬುದಾಗಿ ನುಡಿದ ಮುಖ್ಯಮಂತ್ರಿ ಘಟನೆಯ ಬಗ್ಗೆ ಕ್ರಿಮಿನಲ್ ತನಿಖಾ ವಿಭಾಗದ (ಸಿಐಡಿ) ಮುಖ್ಯಸ್ಥ ಅತುಲ್ ಚಂದ್ರ ಕುಲಕರ್ಣಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಪ್ರಕಟಿಸಿದರು.

ಗುಂಪಿನಲ್ಲಿದ್ದ  ಆಪಾದಿತರ ವಿರುದ್ಧ ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನೂ ಸೇನಾ ಮುಖ್ಯಸ್ಥ ಪಟ್ಟಿ ಮಾಡಿದರು.

ಪೊಲೀಸರು ಈಗಾಗಲೇ ಘಟನೆಗೆ ಕಾರಣರಾದ ಐವರು ಮುಖ್ಯ ಆರೋಪಿಗಳು ಸೇರಿದಂತೆ ೧೦೦ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿಗಳನ್ನು ಏಪ್ರಿಲ್ ೩೦ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ. ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಹೀನ ಕೃತ್ಯದಲ್ಲಿ ಶಾಮೀಲಾದ ಯಾರನ್ನೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ನುಡಿದರು.

ಇಬ್ಬರು ಸಾಧುಗಳು ಕೇಂದ್ರಾಡಳಿತ ಪ್ರದೇಶ ದಾದ್ರ ನಗರ ಹವೇಲಿಯನ್ನು ತಲುಪಿದ್ದರು. ಆದರೆ ಸ್ಥಳೀಯ ಅಧಿಕಾರಿಗಳು ಅವರಿಗೆ ಪ್ರದೇಶವನ್ನು ಪ್ರವೇಶಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಅವರು ಒಳದಾರಿಯ ಮೂಲಕ ಹಿಂದಕ್ಕೆ ಹೊರಟಿದ್ದರು ಎಂದು ಉದ್ಧವ್ ವಿವರಿಸಿದರು.

ಲಾಕ್ ಡೌನ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಮೂವರನ್ನೂ ದಾದ್ರ ನಗರ ಹವೇಲಿಯ ಗಡಿಯಿಂದಲೇ ವಾಪಸ್ ಕಳುಹಿಸಲಾಗಿತ್ತು. ಅವರಿಗೆ ಅಧಿಕಾರಿಗಳು ಆಶ್ರಯ ನೀಡಿದ್ದರೆ ಅಥವಾ ನಮ್ಮೊಂದಿಗೆ ಸಮನ್ವಯ ಸಾಧಿಸಿದ್ದರೆ ದುರ್ಘಟನೆಯನ್ನು ತಪ್ಪಿಸಬಹುದಾಗಿತ್ತು ಎಂದು ಮುಖ್ಯಮಂತ್ರಿ ನುಡಿದರು.

ಘಟನೆ ಬಗ್ಗೆ ನಾನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿಯೂ ಮಾತನಾಡಿದ್ದೇನೆ ಎಂದೂ ಠಾಕ್ರೆ ಹೇಳಿದರು. ಆದಿತ್ಯನಾಥ್ ಅವರು ಠಾಕ್ರೆ ಅವರಿಗೆ ಕರೆ ಮಾಡಿ ಪಾಲ್ಘಾರ್ ಜಿಲ್ಲೆಯಲ್ಲಿ ಮೂವರ ಹತ್ಯೆಗೆ ಕಾರಣರಾದವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಘಟನೆಗಾಗಿ ಸರ್ಕಾರದ ಮೇಲೆ ದಾಳಿ ನಡೆಸಿದ ವಿರೋಧೀ ಭಾರತೀಯ ಜನತಾ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ದೇವೇಂದ್ರ ಫಡ್ನಿವಿಸ್ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ಗುಂಪು ಹತ್ಯೆಗಳನ್ನು ನೆನಪಿಸಿದರು.

No comments:

Advertisement