Wednesday, May 20, 2020

ದೇಶೀ ವಿಮಾನ ಸಂಚಾರ ಮೇ ೨೫ರಿಂದ ಆರಂಭ

ದೇಶೀ ವಿಮಾನ ಸಂಚಾರ ಮೇ ೨೫ರಿಂದ ಆರಂಭ
ನವದೆಹಲಿ: ಕೊರೋನಾವೈರಸ್ ಸೋಂಕು ಹರಡುವಿಕೆ ತಡೆಗಾಗಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ವಿಧಿಸಿದ್ದರಿಂದ ಮಾರ್ಚ್ ತಿಂಗಳಲ್ಲಿ ಅಮಾನತುಗೊಂಡಿದ್ದ ದೇಶೀ ವಿಮಾನಗಳ ಸಂಚಾರ ಮೇ ೨೫ರಿಂದ ಹಂತಹಂತವಾಗಿ ಆರಂಭವಾಗಲಿದೆ. ನಿಟ್ಟಿನಲ್ಲಿ ದಿಗ್ಬಂಧನ ನಿಯಮಗಳನ್ನು ಇನ್ನಷ್ಟು ಸಡಿಲಗೊಳಿಸಲಾಗಿದೆ.

ಪ್ರಸ್ತುತ ಸರಕು ಮತ್ತು ಸ್ಥಳಾಂತರಿಸುವ/ ತೆರವು ವಿಮಾನ ಸೇವೆಗಳಿಗೆ ಮಾತ್ರ ಅನುಮತಿ ಇದೆ.
ರಾಷ್ಟವ್ಯಾಪಿ ದಿಗ್ಬಂಧನವನ್ನು ಮೇ ೩೧ರವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ ಕೆಲವೊಂದು ಸಡಿಲಿಕೆಗಳಿಗೆ ಅವಕಾಶ ನೀಡಲಾಗಿದೆ.

ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಮುಂದಿನ ವಾರದಿಂದ ವಿಮಾನ ಹಾರಾಟಕ್ಕೆ ಸಜ್ಜಾಗಿರುವಂತೆ ಸೂಚಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ  2020 ಮೇ 20ರ  ಬುಧವಾರ ಟ್ವೀಟ್ ಮಾಡಿದರು.

ಪ್ರಯಾಣಿಕರ ಚಲನವಲನಕ್ಕಾಗಿ ಮಾನದಂಡ ನಿಯಮಾವಳನ್ನು ಸಚಿವಾಲಯವು ಪ್ರತ್ಯೇಕವಾಗಿ ಬಿಡುಗಡೆ ಮಾಡಲಿದೆ ಎಂದು ಸಚಿವರು ನುಡಿದರು.

ಒಕ್ಕೂಟ ಸಹಕಾರದ ಸ್ಫೂರ್ತಿಯೊಂದಿಗೆ ರಾಜ್ಯ ಸರ್ಕಾರಗಳು ವಿಮಾನಯಾನ ಸೇವೆಗಳಿಗೆ ಅನುಮತಿ ನೀಡುವವರೆಗೆ ಪ್ರಯಾಣಿಕ ವಿಮಾನಗಳ ಹಾರಾಟ ಬಗ್ಗೆ ಕೇಂದ್ರವು ಏಕಪಕ್ಷೀಯವಾಗಿ ನಿರ್ಧರಿಸುವಂತಿಲ್ಲ ಎಂದು ಮಂಗಳವಾರವಷ್ಟೇ ಪುರಿ ಹೇಳಿದ್ದರು.

ಮೊದಲ ಹಂತದ ದಿಗ್ಬಂಧನವನ್ನು ಮಾರ್ಚ್ ೨೫ರಂದು ಘೋಷಿಸಿದಂದಿನಿಂದ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿತ್ತು.

ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಂಡ ಬಳಿಕ ಮಾತ್ರವೇ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಪುನರಾಂಭ ಮಾಡುವಂತೆ ಸಚಿವ ಪುರಿ ಅವರು ತಿಳಿಸಿದ ಬಳಿಕ ಆನ್ ಲೈನ್ ಬುಕ್ಕಿಂಗ್ ಮಾಡದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಕಳೆದ ತಿಂಗಳು ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದರು.

ಏನಿದ್ದರೂ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸುವ ಬಗ್ಗೆ ಸಚಿವರಿಂದ ಯಾವುದೇ ಮಾತು ಬಂದಿಲ್ಲ.

No comments:

Advertisement