Friday, May 15, 2020

ಮೌಖಿಕ ಸ್ವರದಲ್ಲಿ ಆಝಾನ್ ಗೆ ಅಸ್ತು, ಧ್ವನಿವರ್ಧಕ ಸಲ್ಲದು: ಹೈಕೋರ್ಟ್

ಮೌಖಿಕ ಸ್ವರದಲ್ಲಿ ಆಝಾನ್ ಗೆ ಅಸ್ತು, ಧ್ವನಿವರ್ಧಕ ಸಲ್ಲದು
ಅಲಹಾಬಾದ್ ಹೈಕೋರ್ಟ್ ಆದೇಶ
ಪ್ರಯಾಗರಾಜ್: ಮಸೀದಿಯ ಗೋಪುರಗಳಿಂದ  ಮೊಯಿಜ್ಜೀನ್ ಅಥವಾ ಮೌಲ್ವಿಗಳು ಮುಸ್ಲಿಮರ ಪ್ರಾರ್ಥನಾ ವಿಧಿಗಾಗಿ ನೀಡುವ ಆಝಾನ್ ಅಥವಾ ಇಸ್ಲಾಮಿಕ್ ಕರೆಯನ್ನು ಧ್ವನಿ ವರ್ಧಕದ ಮೂಲಕ ನೀಡುವಂತಿಲ್ಲ, ಕೇವಲ ಮೌಖಿಕ ಧ್ವನಿಯಲ್ಲಿ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ 2020 ಮೇ 15ರ ಶುಕ್ರವಾರ ತೀರ್ಪು ನೀಡಿದೆ.

ಆದರೆ, ಕೊರೋನಾವೈರಸ್ ಹರಡದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಉಲ್ಲಂಘನೆಯಾಗುತ್ತದೆ ಎಂಬ ನೆಪದಲ್ಲಿ ಮೌಖಿಕ ಧ್ವನಿಯಲ್ಲಿ ಆಝಾನ್ ಪಠಣಕ್ಕೆ ಅಡ್ಡಿ ಪಡಿಸುವಂತಿಲ್ಲ ಎಂದು ಪೀಠ ಹೇಳಿತು.

ಕಾನೂನಿನ ಪ್ರಕಾರ ಜಿಲ್ಲಾ ಆಡಳಿತದ ಪೂರ್ವಾನುಮತಿ ಇಲ್ಲದೆ ಆಝಾನ್ ಕರೆಗಾಗಿ ಯಾರು ಕೂಡಾ ಧ್ವನಿ ವರ್ಧಕವನ್ನು ಬಳಸುವಂತಿಲ್ಲ ಎಂದೂ ಹೈಕೋರ್ಟ್ ಹೇಳಿತು.

ಆಝಾನ್ ಇಸ್ಲಾಮಿನ ಅತ್ಯಗತ್ಯ ಮತ್ತು ಅವಿಭಾಜ್ಯ ಅಂಗವಾಗಿರಬಹುದು ಎಂಬುದು ನಮ್ಮ ಅಭಿಪ್ರಾಯ. ಅದರೆ ಧ್ವನಿವರ್ಧಕದ ಮೂಲಕ ಅದನ್ನು ಪಠಿಸುವುದು ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದಾಗಲೀ ಅದು ಸಂವಿಧಾನದ ೨೫ನೇ ಪರಿಚ್ಛೇದ ಅಡಿಯಲ್ಲಿ ವಿವರಿಸಲಾಗಿರುವ  ಪ್ರಕಾರ ರಕ್ಷಣೆ ಪಡೆದಿರುವ ಮೂಲಭೂತ ಹಕ್ಕು ಎಂದಾಗಲೀ ಹೇಳಲಾಗದು ಎಂದು ಪೀಠ ಹೇಳಿತು.

ಇದು ಸಾರ್ವಜನಿಕ ವ್ಯವಸ್ಥೆ, ನೈತಿಕತೆ ಅಥವಾ ಆರೋಗ್ಯ ಮತ್ತು ಸಂವಿಧಾನದ ೩ನೇ ಭಾಗದಲ್ಲಿರುವ ಇತರ ವಿಧಿಗಳಿಗೆ ಅನುಗುಣವಾದ ವಿಷಯವಾಗುತ್ತದೆ ಎಂದು ಪೀಠ ಹೇಳಿತು.

ತನಗೆ ಇಷ್ಟವಿಲ್ಲದ ಅಥವಾ ಅಗತ್ಯವಿಲ್ಲದ ಯಾವುದನ್ನೂ ಕೇಳುವಂತೆ ನಾಗರಿಕರನ್ನು ಬಲವಂತಕ್ಕೆ ಒಳಪಡಿಸಲಾಗದು, ಏಕೆಂದರೆ ಅದು ಇತರ ವ್ಯಕ್ತಿಗಳ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವುದಕ್ಕೆ ಸಮವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಆದಾಗ್ಯೂ, ಮೌಖಿಕವಾಗಿ ಆಝಾನ್ ಪಠಣವೂ ಕಾನೂನಿನ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ಕೇವಲ ಮೌಖಿಕವಾಗಿ ಆಝಾನ್ ಪಠಣ ಮಾಡುವುದು ಕಾನೂನನ್ನ್ಲು ಅಥವಾ ಕೋವಿಡ್-೧೯ರ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿರುವ ಮಾರ್ಗಸೂಚಿಯನ್ನು ಹೇಗೆ ಉಲ್ಲಂಘಿಸುತ್ತದೆ ಎಂದು ವಿವರಿಸಲು ಸರ್ಕಾರ ಸಮರ್ಥವಾಗಿಲ್ಲ ಎಂದು ಪೀಠ ಹೇಳಿತು.

ಏನಿದ್ದರೂ ಆಝಾನ್ ಪಠಣಕ್ಕೆ ಧ್ವನಿವರ್ಧಕ ಬಳಸಲು ಅನುಮತಿಗಾಗಿ ಜಿಲ್ಲಾ ಆಡಳಿತವನ್ನು ಸಂಪರ್ಕಿಸಲು ಅರ್ಜಿದಾರರು ಮುಕ್ತರಾಗಿದ್ದಾರೆ. ಆಝಾನ್ ಅಥವಾ ಬೇರೆ ಯಾವುದೇ ಉದ್ದೇಶಕ್ಕಾಗಿ ಜಿಲ್ಲಾ ಆಡಳಿತದ ಪೂರ್ವಾನುಮತಿ ಇಲ್ಲದೆ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಪೀಠ ತಿಳಿಸಿತು.

No comments:

Advertisement