Saturday, May 23, 2020

ಜಿಎಸ್‌ಟಿ ಮೇಲೆ ವಿಪತ್ತು ಸೆಸ್ ಇಲ್ಲ: ಕೇಂದ್ರ ನಕಾರ

ಜಿಎಸ್‌ಟಿ ಮೇಲೆ ವಿಪತ್ತು ಸೆಸ್ ಇಲ್ಲ: ಕೇಂದ್ರ 
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ವಿರೋಧಿ ಹೋರಾಟಕ್ಕಾಗಿ ಹಣಕಾಸು ಸಂಪನ್ಮೂಲ ಕ್ರೋಡೀಕರಿಸಲು ಹೆಚ್ಚುವರಿ ವಿಪತ್ತು ಸೆಸ್ ವಿಧಿಸುವುದಕ್ಕೆ ಸಂಬಂಧಿಸಿದ ಎಲ್ಲ ಊಹಾಪೋಹಗಳನ್ನು ವಿತ್ತ ಸಚಿವಾಲಯದ ಅಧಿಕಾರಿಗಳು 2020 ಮೇ 23ರ ಶನಿವಾರ ವಾರ ತಳ್ಳಿ ಹಾಕಿದರು.

ತೆರಿಗೆ ಪರಿಹಾರಗಳು ಸೇರಿದಂತೆ ವ್ಯವಹಾರಗಳಿಗೆ ನಿರಾಳತೆ ಒದಗಿಸಲು ಸರ್ಕಾರ ನಡೆಸುತ್ತಿರುವ ಯತ್ನಗಳಿಗೆ ವಿರುದ್ಧವಾದ ಕಲ್ಪನೆ ಇದು ಎಂದು ಅಧಿಕಾರಿಗಳು ಹೇಳಿದರು.

ಹಣಕಾಸು ಸಚಿವಾಲಯದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಇಂತಹ ಕ್ರಮವನ್ನು ಖಂಡತುಂಡವಾಗಿ ಅಲ್ಲಗಳೆದರು. ಕೋವಿಡ್ -೧೯ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೇಲೆ ವಿಪತ್ತು ಸೆಸ್ ವಿಧಿಸುವ ಬಗ್ಗೆ ಪರಿಶೀಲಿಸುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೆಲ್ಲವನ್ನೂ ಅವರು ತಿರಸ್ಕರಿಸಿದರು.

ಸೆಸ್ ಎಂಬುದು ವಿಶೇಷ ಸಂದರ್ಭಗಳಲ್ಲಿ ಬಜೆಟ್ ನಿಗದಿಗೆ ಹೊರತಾಗಿ ಆದಾಯ ಕ್ರೋಡೀಕರಿಸಲು ವಿಧಿಸಲಾಗುವ ಹೆಚ್ಚುವರಿ ತೆರಿಗೆಯಾಗಿದೆ (ಮೇಲ್ತೆರಿಗೆ).

ಹಾಲಿ ಆರ್ಥಿಕ ಪರಿಸ್ಥಿತಿಯಲ್ಲಿ ವಿಪತ್ತು ತೆರಿಗೆ ಅಳವಡಿಕೆಯ ಯಾವುದೇ ಪ್ರಸ್ತಾಪವು ಸರ್ಕಾರದ ನಿಲುವಿಗೇ ವಿರುದ್ಧವಾಗಿರುವುದಲ್ಲದೆ, ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ನಡೆಸುತ್ತಿರುವ ಯತ್ನಗಳಿಗೆ ತಿರುಗುಬಾಣವಾದೀತು ಎಂದು ಅಧಿಕಾರಿ ನುಡಿದರು.

No comments:

Advertisement