ಭಾರತ: ಮಾಲ್, ರೆಸ್ಟೋರೆಂಟ್ ದೇಗುಲ ‘ಅನ್ಲಾಕ್’
ಪಶ್ಚಿಮ ಬಂಗಾಳ, ಮಿಜೋರಂ ಲಾಕ್ ಡೌನ್ ವಿಸ್ತರಣೆ
ನವದೆಹಲಿ: ’ಅನ್ಲಾಕ್’ ಹಂತಕ್ಕೆ ಅಡಿಯಿಟ್ಟ ಭಾರತದಾದ್ಯಂತ 2020 ಜೂನ್ 08ರ ಸೋಮವಾರ ಮಾಲ್‌ಗಳು, ರೆಸ್ಟೋರೆಂಟ್‌ಗಳು, ದೇವಸ್ಥಾನಗಳು ಬಾಗಿಲು ತೆರೆದವು, ಆದರೆ ಕೊರೋನಾವೈರಸ್ ಪ್ರಕರಣಗಳ ದಿಢೀರ್ ಏರಿಕೆ ಕಂಡದ್ದನ್ನು ಅನುಸರಿಸಿ ಪಶ್ಚಿಮ ಬಂಗಾಳ ಮತ್ತು ಮಿಜೋರಂ ಸರ್ಕಾರಗಳು ರಾಜ್ಯಗಳಲ್ಲಿ ಇನ್ನೂ ಎರಡು ವಾರ (ಜೂನ್ ೩೦ರವರೆಗೆ) ಸಂಪೂರ್ಣ ದಿಗ್ಬಂಧನ (ಲಾಕ್‌ಡೌನ್) ವಿಸ್ತರಿಸಲು ನಿರ್ಧರಿಸಿದವು.
ಉಭಯ ರಾಜ್ಯಗಳಲ್ಲೂ ದಿಗ್ಬಂಧನ ನಿರ್ಬಂಧಗಳು ಮಂಗಳವಾರ ಜಾರಿಗೆ ಬರಲಿವೆ.
‘ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯು ಹಾಲಿ ಪರಿಸ್ಥಿತಿಯನ್ನು ಅನುಸರಿಸಿ ರಾಜ್ಯದಲ್ಲಿ ೨೦೨೦ ಜೂನ್ ೯ರಂದು ಬೆಳಗ್ಗಿನ ೦೦.೦೦ ಗಂಟೆಯಿಂದ ಅನ್ವಯವಾಗುವಂತೆ ೨ ವಾರಗಳ ಕಾಲ ಸಂಪೂರ್ಣ ದಿಗ್ಬಂಧನ ಜಾರಿಗೊಳಿಸಲು ನಿರ್ಧರಿಸಿದೆ. ದಿಗ್ಬಂಧನ ಮಾರ್ಗಸೂಚಿಗಳನ್ನು ಇಷ್ಟರಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ಮಿಜೋರಂನ ಮಾಹಿತಿ ಮತ್ತು ಸಾರ್ವಜನಿಕ ಬಾಂಧವ್ಯಗಳ ನಿರ್ದೇಶನಾಲಯ ಟ್ವೀಟ್ ಮಾಡಿತು.
ಇದಕ್ಕೂ ಹೆಚ್ಚಾಗಿ, ಪ್ರಸ್ತುತ ೧೪ ದಿನಗಳ ಅವಧಿಗೆ ವಿಧಿಸಲಾಗಿರುವ ಪ್ರತ್ಯೇಕವಾಸದ (ಕ್ವಾರಂಟೈನ್) ಅವಧಿಯನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ೨೧ ದಿನಗಳ ಅವಧಿಗೆ ವಿಸ್ತರಿಸಲೂ ಸರ್ಕಾರ ನಿರ್ಧರಿಸಿತು.
ಸೋಮವಾರ ಇನ್ನೂ ೮ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು, ರಾಜ್ಯದಲ್ಲಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆಯನ್ನು ೪೨ಕ್ಕೆ ಏರಿಸಿದೆ.
‘ದಿಗ್ಬಂಧನವನ್ನು (ಲಾಕ್‌ಡೌನ್) ಜೂನ್ ೩೦ರವರೆಗೆ ವಿಸ್ತರಿಸಲಾಗುತ್ತಿದೆ. ಈಗಿನ ಎಲ್ಲ ಸಡಿಲಿಕೆಗಳು ಮತ್ತು ಶರತ್ತುಗಳು ಹಾಗೆಯೇ ಮುಂದುವರೆಯುತ್ತವೆ. ಈ ಮುನ್ನ ನಾವು ಮದುವೆ, ಅಂತ್ಯಕ್ರಿಯೆ ಇತ್ಯಾದಿ ಸಾಮಾಜಿಕ ಕಾರ್‍ಯಕ್ರಮಗಳಲ್ಲಿ ಕೇವಲ ೧೦ ಮಂದಿಗೆ ಅವಕಾಶ ಕೊಟ್ಟಿದ್ದೆವು. ನಾವೀಗ ಅದನ್ನು ೨೫ಕ್ಕೆ ಏರಿಸಿದ್ದೇವೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದರು.
ಮಮತಾ ಬಾನರ್ಜಿ ನೇತೃತ್ವದ ಸರ್ಕಾರವು ಜೂನ್ ೧ರಿಂದ ರಾಜ್ಯದಲ್ಲಿ ದೇವಾಲಯಗಳ ಪುನಾರಂಭ ಹಾಗೂ ಸೆಣಬು, ಚಹಾ ಮತ್ತು ನಿರ್ಮಾಣ ರಂಗಗಳಿಗೆ ಪೂರ್ಣ ಪ್ರಮಾಣದ ಕಾರ್‍ಯಾಚರಣೆಗಳಿಗೆ ಅವಕಾಶ ತೆರೆದಿತ್ತು.
ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಸಂಸ್ಥೆಗಳು ಪಶ್ಚಿಮ ಬಂಗಾಳದಲ್ಲಿ ಎರಡಕ್ಕೂ ಹೆಚ್ಚು ತಿಂಗಳುಗಳ ಬಳಿಕ ಸೋಮವಾರ ಸೇವೆ ಆರಂಭಿಸಿದವು.
‘ಅನ್ಲಾಕ್-೧’ ಅಡಿಯಲ್ಲಿ ಇನ್ನಷ್ಟು ಸಡಿಲಿಕೆಗಳಿಗೆ ಸರ್ಕಾರ ಅವಕಾಶ ನೀಡಿತ್ತು. ದೇಶಾದ್ಯಂತ ಮಾರ್ಚ್ ತಿಂಗಳಲ್ಲಿ ವಿಧಿಸಲಾಗಿದ್ದ ದಿಗ್ಬಂಧನದಿಂದ (ಲಾಕ್‌ಡೌನ್) ಹಂತ ಹಂತವಾಗಿ ನಿರ್ಗಮಿಸುವ ಸರ್ಕಾರದ ಯೋಜನೆಯ ಮೊದಲ ಹಂತ ಇದಾಗಿದೆ.
No comments:
Post a Comment