ನವದೆಹಲಿ: ಸುಪ್ರೀಂಕೋರ್ಟ್ ಆದೇಶ ನೀಡಿದ ಐದು ತಿಂಗಳುಗಳ ಬಳಿಕ ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗ ರಚನೆಗೆ ಅನುಮತಿ ಪತ್ರವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ 2020 ಜುಲೈ 23ರ ಗುರುವಾರ ಬಿಡುಗಡೆ ಮಾಡಿತು.
ನ್ಯಾಯಾಧೀಶರು ಮತ್ತು ಅಡ್ವೊಕೇಟ್ ಜನರಲ್ (ಜೆಎಜಿ) ಮತ್ತು ಆರ್ಮಿ ಎಜುಕೇಷನಲ್ ಕೋರ್ ನ
(ಎಇಸಿ) ಶಾಖೆಗಳಿಗೆ ಹೆಚ್ಚುವರಿಯಾಗಿ ಭಾರತೀಯ ಸೇನೆಯ ಎಲ್ಲಾ ಹತ್ತು ಶಾಖೆಗಳಲ್ಲಿ ಇರುವ ಶಾರ್ಟ್ ಸರ್ವಿಸ್ ಕಮಿಷನ್ಡ್ (ಎಸ್ಎಸ್ಸಿ)
ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗದ ಅನುದಾನವನ್ನು ಈ ಆದೇಶವು ನಿರ್ದಿಷ್ಟಪಡಿಸುತ್ತದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ಈ
ಆದೇಶವು ಮಹಿಳಾ ಅಧಿಕಾರಿಗಳಿಗೆ ಸಂಸ್ಥೆಯಲ್ಲಿ ಹೆಚ್ಚಿನ ಪಾತ್ರಗಳನ್ನು ವಹಿಸುವ ಅಧಿಕಾರವನ್ನು ನೀಡುತ್ತದೆ ಎಂದು ವಕ್ತಾರರು ಹೇಳಿದರು. "ಎಲ್ಲಾ ಎಸ್ಎಸ್ಸಿ ಮಹಿಳಾ ಅಧಿಕಾರಿಗಳು ತಮ್ಮ ಆಯ್ಕೆಯನ್ನು ಮತ್ತು ಸಂಪೂರ್ಣ ಅಗತ್ಯ ದಾಖಲಾತಿಗಳನ್ನು ಒದಗಿಸಿದ ಕೂಡಲೇ ಅವರ ಆಯ್ಕೆ ಮಂಡಳಿಯನ್ನು ನಿಗದಿಪಡಿಸಲಾಗುತ್ತದೆ" ಎಂದು ವಕ್ತಾರರು ನುಡಿದರು.
ಇದಕ್ಕೆ ಮುನ್ನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಮಹಿಳಾ ಅಧಿಕಾರಿಗಳಿಗಾಗಿ ಶಾಶ್ವತ ಆಯೋಗ ರಚಿಸುವಂತೆ ನಿರ್ದೇಶಿಸಿದ ತನ್ನ ತೀರ್ಪಿನ ಜಾರಿಗೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಇನ್ನೂ ಒಂದು ತಿಂಗಳ ಕಾಲಾವಕಾಶವನ್ನು ಮಂಜೂರು ಮಾಡಿತ್ತು.
ಸುಪ್ರೀಂಕೋರ್ಟ್ ಫೆಬ್ರುವರಿ ೧೭ರಂದು ನೀಡಿದ ತನ್ನ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ಆದೇಶವನ್ನು ಮನ್ನಿಸಿ ಕಾಯಂ ಆಯೋಗದ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿತ್ತು. ಎಲ್ಲ ಮಹಿಳಾ ಅಧಿಕಾರಿಗಳೂ ಸೇನೆಯಲ್ಲಿ ಪುರುಷರಿಗೆ ಸಮಾನವಾಗಿ ‘ಆಜ್ಞೆ ಮತ್ತು ಮಾನದಂಡ’ ನೇಮಕಾತಿಗಳನ್ನು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಸಸ್ತ್ರ ಪಡೆಗಳಲ್ಲಿ ಮಹಿಳೆಯರ ನೇಮಕಾತಿಯು ‘ಕ್ರಾಂತಿಕಾರಿ ಪ್ರಕ್ರಿಯೆ’ ಎಂದು ಬಣ್ಣಿಸಿದ್ದ ಸುಪ್ರೀಂಕೋರ್ಟ್, ಮಹಿಳಾ ಅಧಿಕಾರಿಗಳ ನೇಮಕಾತಿ ಸಂಬಂಧ ಕೇಂದ್ರ ಸರ್ಕಾರದ ನೀತಿ ನಿರ್ಣಯಗಳು ‘ಅತ್ಯಂತ ವಿಶಿಷ್ಠ’ ಎಂದು ಹೇಳಿತ್ತು.
ಸೇನೆಯಲ್ಲಿ ‘ಕರ್ತವ್ಯ ಮೀರಿದ ಕರೆಗಳಿಗೆ’ ಉತ್ತರಿಸಲು ಮಹಿಳೆಯರು ದೈಹಿಕವಾಗಿ ಸಮರ್ಥರಲ್ಲ ಎಂಬುದಾಗಿ ಬಿಂಬಿಸುವ ಟಿಪ್ಪಣಿಯನ್ನು ಸರ್ಕಾರ ಸಲ್ಲಿಸಿದ್ದುದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದ ಸುಪ್ರೀಂಕೋರ್ಟ್, ‘ಕೇಂದ್ರದ ಟಿಪ್ಪಣಿಯು ಲೈಂಗಿಕ ಸ್ಟೀರಿಯೋಟೈಪ್ನ್ನು ಶಾಶ್ವತಗೊಳಿಸಿದೆ’ ಎಂದು ಹೇಳಿತ್ತು.
‘ಕೇಂದ್ರದ ವಾದವು ಪುರುಷ ದೈಹಿಕ ಬಲ ಮತ್ತು ಮಹಿಳೆಯರ ತಾಯ್ತನ, ಕುಟುಂಬ ಇತ್ಯಾದಿಗಳನ್ನು ಆಧರಿಸಿದ್ದು ಇದು ಸಮಾನತೆಯನ್ನು ಉಲ್ಲಂಘಿಸುತ್ತದೆ’ ಎಂದು ತೀರ್ಪು ಹೇಳಿತ್ತು.
‘ಮಹಿಳೆಯರ ಸಾಮರ್ಥ್ಯ ಮತ್ತು ಸೇನೆಯಲ್ಲಿನ ಅವರ ಪಾತ್ರ ಮತ್ತು ಸಾಧನೆಯನ್ನು ಶಂಕಿಸುವುದು ಮಹಿಳೆಯರಿಗೆ ಮಾತ್ರವೇ ಅಲ್ಲ ಭಾರತೀಯ ಸೇನೆಗೂ ಮಾಡು ಅವಮಾನ’ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
No comments:
Post a Comment