ಪಂಜಾಬ್ ಕಳ್ಳಭಟ್ಟಿ ಸೇವನೆ: ೨೧ ಸಾವು, ತನಿಖೆಗೆ ಆದೇಶ
ಚಂಡೀಗಢ: ಅಮೃತಸರ, ಬಟಾಲಾ ಮತ್ತು ತರನ್ ತಾರನ್‌ನಲ್ಲಿ ನಕಲಿ ಮದ್ಯ ಸೇವನೆಯಿಂದಾಗಿ ೨೧ ಜನರ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಈ ಶಂಕಾಸ್ಪದ ಸಾವುಗಳ ಬಗ್ಗೆ ಜಲಂಧರದ ವಿಭಾಗೀಯ ಆಯುಕ್ತರಿಂದ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ 2020 ಜುಲೈ 31ರ ಶುಕ್ರವಾರ ಆದೇಶ ನೀಡಿದರು.
ಶಂಕಿತ ಕಳ್ಳಭಟ್ಟಿ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿದವು.
ತನಿಖೆಯು ಘಟನೆಗಳಿಗೆ ಕಾರಣವಾದ ಸಂದರ್ಭಗಳು ಮತ್ತು ವಾಸ್ತವಾಂಶಗಳು ಹಾಗೂ ಇತರ ಸಂಬಂಧಿತ ವಿಷಯಗಳ ಬಗ್ಗೆ ಪರಿಶೀಲಿಸಲಿದೆ. ಜಲಂಧರ್ ವಿಭಾಗೀಯ ಕಮೀಷನರ್ ಅವರು ಪಂಜಾಬಿನ ಅಬಕಾರಿ ಮತ್ತು ತೆರಿಗೆ ಜಂಟಿ ಆಯುಕ್ತರು ಹಾಗೂ ಸಂಬಂಧಿತ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಹಯೋಗದೊಂದಿಗೆ ತನಿಖೆ ನಡೆಸುವರು ಎಂದು ಅಧಿಕೃತ ವಕ್ತಾರರು ತಿಳಿಸಿದರು.
ತನಿಖೆಯನ್ನು ತ್ವರಿತಗೊಳಿಸಲು ಯಾರೇ ನಾಗರಿಕ/ ಪೊಲೀಸ್ ಅಧಿಕಾರಿ ಅಥವಾ ಯಾರೇ ತಜ್ಞರನ್ನು ತಮ್ಮ ಜೊತೆಗೆ ಸೇರಿಸಿಕೊಳ್ಳಲು ಮುಖ್ಯಮಂತ್ರಿಯವರು ಜಲಂಧರ್ ಆಯುಕ್ತರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡು ಬರುವ ಯಾರೇ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಯಾಪ್ಟನ್ ಸಿಂಗ್ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ.
ಕಳ್ಳ ಭಟ್ಟಿ ಸಾವು ನೋವಿನ ಪ್ರಕರಣಗನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ರಾಜ್ಯದಲ್ಲಿ ಕಾರ್‍ಯಾಚರಿಸುತ್ತಿರುವ ಯಾವುದೇ ನಕಲಿ ಮದ್ಯ ತಯಾರಿ ಘಟಕಗಳ ವಿರುದ್ಧ ತತ್ ಕ್ಷಣ ಶೋಧ ಮತ್ತು ದಮನ ಕಾರ್‍ಯಾಚರಣೆ ನಡೆಸುವಂತೆಯೂ ಪೊಲೀಸರಿಗೆ ಆಜ್ಞಾಪಿಸಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೦೪ ಮತ್ತು ಅಬಕಾರಿ ಕಾಯ್ದೆಯ ಸೆಕ್ಷನ್ ೬೧/೧/೧೪ರ ಅಡಿಯಲ್ಲಿ ಮುಚ್ಚಲ್ ನಿವಾಸಿ ಬಲವಿಂದರ್ ಕೌರ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಅಮೃತಸರ -ಗ್ರಾಮೀಣ ಎಸ್ ಎಸ್ ಪಿ ಅವರು ರಚಿಸಿದ ವಿಶೇಷ ತನಿಖಾ ತಂಡವು ಪ್ರಕರಣಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದೆ. ಅಮೃತಸರದಲ್ಲೇ ಮೊದಲ ನಾಲ್ಕು ಕಳ್ಳಭಟ್ಟಿ ಸಾವು ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಶಂಕಿತ ಸಾವುಗಳ ನಿರ್ದಿಷ್ಟ ಕಾರಣಗಳ ಪತ್ತೆಗಾಗಿ ಜಸ್ವಿಂದರ್ ಸಿಂಗ್, ಕಾಶ್ಮೀರ ಸಿಂಗ್, ಕೃಪಾಲ್ ಸಿಂಗ್ ಮತ್ತು ಜಸ್ವಂತ್ ಸಿಂಗ್ ಈ ನಾಲ್ವರ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗುವುದು ಎಂದು ವರದಿಗಳು ಹೇಳಿವೆ.
ಪಂಜಾಬಿನ ಪೊಲೀಸ್ ಮಹಾ ನಿರ್ದೇಶಕ ದಿನಕರ್ ಗುಪ್ತ ಅವರು ಅಮೃತಸರ ಗ್ರಾಮೀಣ ಜಿಲ್ಲೆಯ ಮುಚ್ಚಲ್ ಮತ್ತು ತಾರ್ಸಿಕ್ಕ ಪೊಲೀಸ್ ಠಾಣೆ ವ್ಯಾಪ್ತಿಯ ತಂಗ್ರದ ಗ್ರಾಮಗಳಿಂದ ಜುಲೈ ೨೯ರ ರಾತ್ರಿ ಮೊದಲ ಐದು ಸಾವುಗಳು ವರದಿಯಾಗಿವೆ ಎಂದು ಹೇಳಿದರು.
ಜುಲೈ ೩೦ರಂದು ಇನ್ನಿಬ್ಬರು ಮುಚ್ಚಲ್‌ನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತ ಬಳಿಕ ಶ್ರೀ ಗುರು ರಾಮದಾಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಬಳಿಕ ಮುಚ್ಚಲ್ ಗ್ರಾಮದಿಂದ ಇನ್ನೆರಡು ಸಾವುಗಳು ವರದಿಯಾದವು ಮತ್ತು ಬಟಾಲಾ ನಗರದಲ್ಲಿ ಇನ್ನಿಬ್ಬರು ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿದರು.
ಶುಕ್ರವಾರ ಇನ್ನೂ ಐವರು ಬಟಾಲದಲ್ಲಿ ಮೃತರಾದರು. ಇದರೊಂದಿಗೆ ನಗರದಲ್ಲಿ ಕಳ್ಳಭಟ್ಟಿಗೆ ಬಲಿಯಾದವರ ಸಂಖ್ಯೆ ೭ಕ್ಕೆ ಏರಿತು. ಒಬ್ಬ ವ್ಯಕ್ತಿಯನ್ನು ಬಟಾಲಾ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಇದೇ ಮಾದರಿಯ ಇತರ ಶಂಕಾಸ್ಪದ ಸಾವುಗಳು ತರನ್ ತಾರನ್‌ನಿಂದ ವರದಿಯಾಗಿವೆ.
No comments:
Post a Comment