Friday, August 7, 2020

ಇಡುಕ್ಕಿ ಮೇಘಸ್ಫೋಟ: ಭೂಕುಸಿಕ್ಕೆ 15 ಬಲಿ, 70 ಮಂದಿ ಸಮಾಧಿ ಶಂಕೆ

 ಇಡುಕ್ಕಿ ಮೇಘಸ್ಫೋಟ: ಭೂಕುಸಿಕ್ಕೆ 15 ಬಲಿ,
 70 ಮಂದಿ ಸಮಾಧಿ ಶಂಕೆ

ನವದೆಹಲಿ/ ತಿರುವನಂತಪುರ: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ 2020 ಆಗಸ್ಟ್  07ರ ಶುಕ್ರವಾರ ಭೀಕರ ಮಳೆಯಿಂದಾಗಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಕನಿಷ್ಠ ೧೫ ಮಂದಿ ಸಾವನ್ನಪ್ಪಿದ್ದು, ಇತರ ೭೦ಕ್ಕೂ ಹೆಚ್ಚು ಮಂದಿ ಮಣ್ಣಿನ ಅವಶೇಷಗಳ ಅಡಿ ಸಿಕ್ಕಿ ಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿದವು.

ಘಟನೆಯ ಬಗ್ಗೆ ತೀವ್ರ ಆತಂಕ ಮತ್ತು ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ತಲಾ ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇಡುಕ್ಕಿಯ ರಾಜಮಲೈಯಲ್ಲಿನ ಚಹಾ ಎಸ್ಟೇಟ್ ಕಾರ್ಮಿಕರ ವಸಾಹತು ಶುಕ್ರವಾರ ಮುಂಜಾನೆ ಭೂಕುಸಿvದಲ್ಲಿ ಸಿಕ್ಕಿಹಾಕಿಕೊಂಡಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.

ರಕ್ಷಣಾ ಕಾರ್ಯದಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಇಡುಕ್ಕಿಯ ರಾಜಮಲೈ ಭೂಕುಸಿತ ಸಂತ್ರಸ್ತರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪೊಲೀಸ್, ಅಗ್ನಿಶಾಮಕ, ಅರಣ್ಯ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತ್ರಿಶ್ಯೂರ್ ಮೂಲದ ಎನ್‌ಡಿಆರ್‌ಎಫ್‌ನ ಮತ್ತೊಂದು ತಂಡ ಶೀಘ್ರದಲ್ಲೇ ಇಡುಕಿಯನ್ನು ತಲುಪಲಿದೆಎಂದು ವಿಜಯನ್ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಮುಂಜಾನೆ ಇಡುಕ್ಕಿ ಜಿಲ್ಲೆಯ ಪರ್ವತ ಶ್ರೇಣಿಯಲ್ಲಿನ ಪೆಟ್ಟಿಮುಡಿಯಲ್ಲಿ ಚಹಾ ಎಸ್ಟೇಟ್ ಕಾರ್ಮಿಕರ ಮನೆಗಳದ್ದ ಭೂಮಿಯ ದಿಬ್ಬ ಭಾರೀ ಮಳೆಯ ಪರಿಣಾಮವಾಗಿ ಕುಸಿಯಿತು. ಮಣ್ಣು ಮತ್ತು ಕೆಸರಿನಲ್ಲಿ ಹೂತು ಹೋದ ೧೫ ಮಂದಿ ಸಾವನ್ನಪ್ಪಿದರೆ, ಇತರ ಹಲವರ ಕಣ್ಮರೆಯಾದರು ಎಂದು ವರದಿಗಳು ಹೇಳಿವೆ.

ಈವರೆಗೆ ಹದಿನೈದು ಶವಗಳನ್ನು ಪತ್ತೆ ಹಚ್ಚಲಾಗಿತ್ತು, ಗಾಯಗೊಂಡ ಐವರನ್ನು ಟಾಟಾ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಭೂಕುಸಿತದಲ್ಲಿ ತೋಟದ ಕಾರ್ಮಿಕರ ೨೦ ಮನೆಗಳು ಭೂ ಸಮಾಧಿಯಾಗಿದ್ದು, ಕನಿಷ್ಠ ೭೦ ಮಂದಿ ಮಣ್ಣಿನ ಅಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಜಿಲ್ಲಾಡಳಿತವು ಪ್ರದೇಶದ ಆಸ್ಪತ್ರೆಗಳನ್ನು ಸಿದ್ಧವಾಗಿರಲು ಸೂಚಿಸಿದೆ.

ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಸಮೀಪಬಂಧುಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ತಲಾ ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ ೫೦,೦೦೦ ರೂ.ಗಳನ್ನು ನೀಡಲಾಗುವುದು ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟಿನಲ್ಲಿ ತಿಳಿಸಿದೆ.

"ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಎನ್‌ಡಿಆರ್‌ಎಫ್ ಮತ್ತು ಆಡಳಿತವು ರಕ್ಷಣೆ ಮತ್ತು ಪರಿಹಾರ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂತ್ರಸ್ತರಿಗೆ ನೆರವು ನೀಡುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ನಲ್ಲಿ ತಿಳಿಸಿದರು.

ಇಡುಕ್ಕಿಯಲ್ಲಿ ಭೂಕುಸಿತದಿಂದ ಹಾನಿಗೊಳಗಾದವರಿಗೆ ವೈದ್ಯಕೀಯ ನೆರವು ನೀಡಲು ರಾಜ್ಯ ಆರೋಗ್ಯ ಇಲಾಖೆ ೧೫ ಆಂಬುಲೆನ್ಸ್‌ಗಳನ್ನು ಮತ್ತು ವಿಶೇಷ ವೈದ್ಯಕೀಯ ತಂಡವನ್ನು ರವಾನಿಸಿದೆ.

ಏತನ್ಮಧ್ಯೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯು ಇಡುಕ್ಕಿಯಲ್ಲಿ ದುರಂತದಲ್ಲಿ ಸಿಲುಕಿದವರ ರಕ್ಷಣೆಗಾಗಿ ಹೆಲಿಕಾಪ್ಟರ್ ನೆರವು ಕೋರಿ ವಾಯುಪಡೆಯನ್ನು ಸಂಪರ್ಕಿಸಿದೆ.

"ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯನ್ನು (ಎನ್‌ಡಿಆರ್‌ಎಫ್) ಇಡುಕ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ತಂq ಈಗಾಗಲೇ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ. ತ್ರಿಶ್ಯೂರಿನ ಮತ್ತೊಂದು ಎನ್‌ಡಿಆರ್‌ಎಫ್ ತಂಡವನ್ನು ಇಡುಕ್ಕಿಗೆ ತೆರಳುವಂತೆ ನಿರ್ದೇಶಿಸಲಾಗಿದೆ" ಎಂದು ವಿಜಯನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದರು.

ಭಾರತ ಹವಾಮಾನ ಇಲಾಖೆ ಶುಕ್ರವಾರ ಇಡುಕ್ಕಿಯಲ್ಲಿ ೨೦ ಸೆಂ.ಮೀ.ಗಿಂತ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿ  ಕಟ್ಟೆಚ್ಚg ವಹಿಸಲು ಸೂಚನೆ ನೀಡಿತ್ತು.

ಪ್ರದೇಶಕ್ಕೆ ಪ್ರವೇಶವನ್ನು ಒದಗಿಸುವ ಸೇತುವೆ ಮಳೆಯಲ್ಲಿ ಕೊಚ್ಚಿ ಹೋಗಿದ್ದರಿಂದ ಸ್ಥಳ ತಲುಪುವುದು ಕಷ್ಟ ಎಂದು ಮುನ್ನಾರ್ ಶಾಸಕ ಎಸ್ ರಾಜೇಂದ್ರನ್ ಮಾಧ್ಯಮಗಳಿಗೆ ತಿಳಿಸಿದರು.

"ಕನಿಷ್ಠ ೨೦೦-೩೦೦ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಸ್ಥಳದಲ್ಲಿ ಅನೇಕ ಪಥಗಳು ಮತ್ತು ಕ್ಯಾಂಟೀನುಗಳಿವೆ. ನಾವು ಇನ್ನೂ ಹೆಚ್ಚಿನ ವಿವರಗಳನ್ನು ಪಡೆಯಬೇಕಾಗಿದೆ. ನಿನ್ನೆ ರಾತ್ರಿ ಪ್ರದೇಶಕ್ಕೆ ಸೇತುವೆ ಕೊಚ್ಚಿ ಹೋದ ಕಾರಣ, ಪ್ರದೇಶವನ್ನು ಪ್ರವೇಶಿಸುವುದು ಕಷ್ಟಕರವಾಗಿದೆಎಂದು ರಾಜೇಂದ್ರನ್ ಹೇಳಿದರು.

"ಅಲ್ಲದೆ, ಅಲ್ಲಿರುವವರು ನಮ್ಮನ್ನು ಸಂಪರ್ಕಿಸುವುದು ಕೂಡಾ ಕಷ್ಟಕರವಾಗಿದೆ. ವಿದ್ಯುತ್ ವೈಫಲ್ಯದಿಂದಾಗಿ ಅಲ್ಲಿರುವ ಏಕೈಕ ಮೊಬೈಲ್ ಟವರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲಎಂದು ರಾಜೇಂದ್ರನ್ ನುಡಿದರು.

ರಕ್ಷಣಾ ಕಾರ್ಯಾಚರಣೆಗಾಗಿ ಹತ್ತಿರದ ಎಸ್ಟೇಟಿನ ಕಾರ್ಮಿಕರು ಸ್ಥಳಕ್ಕೆ ಧಾವಿಸಿದ್ದಾರೆ.

ಭೂಕುಸಿತ ಮುಖ್ಯಾಂಶಗಳು

* ರಾಜಮಲೈನ ಚಹಾ ತೋಟ ಕಾರ್ಮಿಕರ ವಸಾಹತು ಇದ್ದ ಪ್ರದೇಶದ ದಿಬ್ಬ ಕುಸಿದು ಕೆಸರಿನಲ್ಲಿ ಹೂತುಹೋದ ಮನೆಗಳು.

* ವಸಾಹತು ಮುನ್ನಾರ್‌ನ ಬೆಟ್ಟದ ರೆಸಾರ್ಟ್‌ನಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ, ಇದು ೨೦೧೮ ರಲ್ಲಿ ಪ್ರವಾಹದಿಂದ ಹಾನಿಗೊಳಗಾಗಿತ್ತು.

* ಭೂಕುಸಿತವು ಪ್ರದೇಶಕ್ಕೆ ಅಪ್ಪಳಿಸಿದಾಗ ಅನೇಕ ನಿವಾಸಿಗಳು ಗಾಢ ನಿದ್ರೆಯಲ್ಲಿದ್ದರು ಮತ್ತು ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಸಾಹತು ಪ್ರದೇಶದಲ್ಲಿ ಕನಿಷ್ಠ ೮೪ ಜನರು ವಾಸಿಸುತ್ತಿದ್ದರು ಎಂದು ಅವರು ಹೇಳಿದರು.

* ಇಡುಕ್ಕಿ ಜಿಲ್ಲಾಧಿಕಾರಿ ಎಚ್. ದಿನೇಶನ್ ಹೇಳಿಕೆಯ ಪ್ರಕಾರ ಕಾರ್ಮಿಕರೊಬ್ಬರು ತಪ್ಪಿಸಿಕೊಂಡು ಎರಾವಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಅಧಿಕಾರಿಗಳನ್ನು ಎಚ್ಚರಿಸಿದ ನಂತರ ಅಪಘಾತದ ಬಗ್ಗೆ ಜಿಲ್ಲಾ ಆಡಳಿತಕ್ಕೆ ಮಾಹಿತಿ ಲಭಿಸಿತು.

* ಪ್ರದೇಶದಲ್ಲಿ ಭಾರಿ ಮಳೆ ಮತ್ತು ಮಂಜಿನ ವಾತಾವರಣವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

* ಕನಿಷ್ಠ ೧೬ ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ.

* ರಾಜ್ಯ ಕಂದಾಯ ಸಚಿವ ಚಂದ್ರಶೇಖರನ್ ಅವರು ಗಾಯಾಳುಗಳನ್ನು ವಿಮಾನ ಮೂಲಕ ಒಯ್ಯಲು  ಭಾರತೀಯ ವಾಯುಪಡೆಯ ಸಹಾಯವನ್ನು ಕೋರಿದ್ದಾರೆ ಆದರೆ ಪ್ರತಿಕೂಲ ವಾತಾವರಣದಲ್ಲಿ ಇದು ಕಷ್ಟಕg  ಎಂದು ತಿಳಿಸಲಾಗಿದೆ.

* ಕಳೆದ ಮೂರು ದಿನಗಳಿಂದ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ ಮತ್ತು ಸುರಿಯುತ್ತಿರುವ ಮಳೆಯಿಂದಾಗಿ ಪ್ರದೇಶದಲ್ಲಿ ವಿದ್ಯುತ್ ಮತ್ತು ಸಂವಹನ ಜಾಲಗಳು ಅಸ್ತವ್ಯಸ್ತಗೊಂಡಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ.

* ವರದಿಗಳ ಪ್ರಕಾರ, ಪಟ್ಟಣಂತಿಟ್ಟದ ಶಬರಿಮಲೈ ಬೆಟ್ಟದ ಅಯ್ಯಪ್ಪ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದೆ. ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆ ಎರ್ನಾಕುಲಂ ಜಿಲ್ಲೆಯ ಪ್ರಸಿದ್ಧ ಶಿವ ದೇವಾಲಯ ಬಹುತೇಕ ಮುಳುಗಿತು.

* ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಇಡುಕ್ಕಿ, ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವುದಕ್ಕಾಗಿ ರೆಡ್ ಅಲರ್ಟ್ ಘೋಷಿಸಿದೆ ಮತ್ತು ದಕ್ಷಿಣ ರಾಜ್ಯದ ಇತರ ಐದು ಜಿಲ್ಲೆಗಳಲ್ಲಿ ಕಿತ್ತಳೆ ಎಚ್ಚರಿಕೆ ಘೋಷಿಸಿದೆ.

No comments:

Advertisement