Saturday, October 31, 2020

ಭಾರತದ ಚೊಚ್ಚಲ ಸೀಪ್ಲೇನ್ ಗುಜರಾತಿನಲ್ಲಿ ಹಾರಿತು.!

 ಭಾರತದ ಚೊಚ್ಚಲ ಸೀಪ್ಲೇನ್ ಗುಜರಾತಿನಲ್ಲಿ ಹಾರಿತು.!

ಸ್ವತಃ ಸವಾರಿ ಮೂಲಕ ಪ್ರಧಾನಿ ಮೋದಿ ಚಾಲನೆ

ಅಹಮದಾಬಾದ್: ನರ್ಮದಾ ನದಿಯ ಏಕತಾ ಪ್ರತಿಮೆ ಇರುವ ಕೇವಡಿಯಾದಿಂದ ಅಹಮದಾಬಾದಿನ ಸಬರಮತಿ ನದಿ ಮುಂಭಾಗದವರೆಗೆ ಭಾರತದ ಮೊತ್ತ ಮೊದಲ ಸೀಪ್ಲೇನ್ ಸೇವೆಯ ಚೊಚ್ಚಲ ಹಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಸವಾರಿ ಮಾಡುವ ಮೂಲಕ 2020 ಅಕ್ಟೋಬರ್ 31ರ ಶನಿವಾರ ಚಾಲನೆ ನೀಡಿದರು.

ಹಾರಾಟವನ್ನು ಸ್ಪೈಸ್ಜೆಟ್ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಸ್ಪೈಸ್ ಷಟಲ್ ನಿರ್ವಹಿಸುತ್ತದೆ.

ಸೀ ಪ್ಲೇನ್ ಅಥವಾ ಸಮುದ್ರ ವಿಮಾನ ಎಂದರೆ ರೆಕ್ಕೆ ಜೋಡಿಸಲ್ಪಟ್ಟಿರುವ ಆಗಸದಲ್ಲಿ ಹಾರುವುದರ ಜೊತೆಗೆ ನೀರಿನಲ್ಲಿ ಇಳಿಯುವ ಸಾಮರ್ಥ್ಯವಿರುವ ವಿಶಿಷ್ಟ ವಿಮಾನ.

ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ಸಿಎಸ್) - ಉಡಾನ್ ಅಡಿಯಲ್ಲಿ ಪ್ರಾರಂಭಿಸಲಾದ ಸೀಪ್ಲೇನ್ ಸೇವೆಯು ಕೊನೆಯ ಮೈಲಿನವರೆಗೆ ಜನರಿಗೆ ಸಂಪರ್ಕವನ್ನು ಕಲ್ಪಿಸುವುದರಿಂದ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಅಹಮದಾಬಾದಿನಲ್ಲಿ ಇಳಿದ ಕೂಡಲೇ ಪ್ರಧಾನಿ ಮೋದಿ ಅವರು ಸಬರಮತಿ ನದಿಯ ಮುಂಭಾಗದಲ್ಲಿ ವಾಟರ್ ಡ್ರೋಮ್ನ್ನು ಉದ್ಘಾಟಿಸಿದರು, ನಂತರ ಅವರು ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ (ಎಸ್ವಿಪಿಐ) ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದರು.

ಸ್ಪೈಸ್ ಜೆಟ್ ಅಹಮದಾಬಾದ್-ಕೇವಡಿಯಾ ಮಾರ್ಗದಲ್ಲಿ ಅಕ್ಟೋಬರ್ ೩೧ ರಿಂದ ಪ್ರತಿದಿನ ಎರಡು ವಿಮಾನಗಳನ್ನು ನಿರ್ವಹಿಸಲಿದೆ

ಕೇವಡಿಯಾದಿಂದ ಅಹ್ಮದಾಬಾದ್ ತಲುಪಲು ಪ್ರಧಾನ ಮಂತ್ರಿಯವರು ೫೦ ನಿಮಿಷಗಳ ಕಾಲವನ್ನು ಸೀಪ್ಲೇನ್ ಸವಾರಿಗೆ ತೆಗೆದುಕೊಂಡರು. ಸೇವೆಯು ಈಗ ನವೆಂಬರ್ ೧ರ ಭಾನುವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಸಮುದ್ರ ವಿಮಾನ ಸವಾರಿಗಾಗಿ ಈಗಾಗಲೇ ಆನ್ಲೈನ್ನಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ ಮತ್ತು ವೆಬ್ಸೈಟ್ನಲ್ಲಿಯೂ ಬುಕ್ಕಿಂಗ್ ಪ್ರಾರಂಭವಾಗುವ ನಿರೀಕ್ಷೆಯಿದೆ.

ಆದರೆ, ಪ್ರಯಾಣಿಕರಿಗೆ ದೃಢಪಡಿಸಿದ ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕೇವಡಿಯಾದ ಏಕತಾ ಪ್ರತಿಮೆ ಇರುವ ತಾಣದಿಂದ ಸಮುದ್ರ ವಿಮಾನ ಸವಾರಿಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯಂದು ಏಕ್ ಭಾರತ್ ಶ್ರೇಷ್ಠ ಭಾರತ್ ಆಚರಣೆಯ ಅಂಗವಾಗಿ ನೆರವೇರಿಸಿದರು.

ಪ್ರಧಾನಮಂತ್ರಿಯವರ ಭದ್ರತೆಗಾಗಿ ನಗರದ ಪೂರ್ವ ಮತ್ತು ಪಶ್ಚಿಮ ದಂಡೆಯ ಸಬರಮತಿ ರಿವರ್ಫ್ರಂಟ್ ರಸ್ತೆಗೆ ಭದ್ರ ಕಾವಲು ಹಾಕಿ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು. ಮೋದಿಯವರು ಶುಕ್ರವಾರ ಬೆಳಗ್ಗೆ ಗುಜರಾತ್ ತಲುಪಿದರು. ನಂತರ ಅವರು ವಾರದ ಆರಂಭದಲ್ಲಿ ನಿಧನರಾದ ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಮತ್ತು ಜನಪ್ರಿಯ ಗುಜರಾತಿ ನಟ ಮತ್ತು ಸಂಗೀತಗಾರ ನರೇಶ್ ಕನೋಡಿಯಾ ಹಾಗೂ ಮಹೇಶ್ ಕನೋಡಿಯಾ ಅವರಿಗೆ ಗೌರವ ಸಲ್ಲಿಸಿದರು.

 ಭಾರತದ ಚೊಚ್ಚಲ ಸೀ ಪ್ಲೇನ್ ಸೇವೆಯ ವೈಶಿಷ್ಟ್ಯ

* ಮಾದರಿಯ ಮೊದಲ ಸೇವೆಯಲ್ಲಿ, ೧೯ ಆಸನಗಳ ಸಮುದ್ರ ವಿಮಾನವನ್ನು (ಸೀಪ್ಲೇನ್) ಸಬರಮತಿ ನದಿಯ ಮುಂಭಾಗ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ (ಸ್ಟಾಚ್ಯೂ ಆಫ್ ಯೂನಿಟಿ) ನಡುವಣ ವಿಮಾನಗಳಿಗಾಗಿ ಬಳಸಲಾಗುತ್ತದೆ. ಸೀಪ್ಲೇನ್ ಮಾಲ್ದೀವ್ಸ್ ನಿಂದ ಬಂದಿದೆ.

* ಸ್ಪೈಸ್ಜೆಟ್ನಿಂದ ಗುತ್ತಿಗೆ ಪಡೆದಿರುವ ಟ್ವಿನ್ ಒಟ್ಟರ್ ೩೦೦ ಸೀಪ್ಲೇನ್ನಲ್ಲಿ ೧೨ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು.

* ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇವೆಗಳಿಗೆ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ನೀಡಲಾಗುವುದು. ಗುಜರಾತ್ ಸರ್ಕಾರ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಡುವಿನ ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

* ಅಹಮದಾಬಾದಿನ ಸಬರಮತಿ ನದಿಯ ಮುಂಭಾಗ ಮತ್ತು ಕೇವಡಿಯಾದಲ್ಲಿನ ಏಕತಾ ಪ್ರತಿಮೆ ನಡುವಣ ಪ್ರಯಾಣದ ಸಮಯವನ್ನು ಸೀಪ್ಲೇನ್ ಕಡಿತಗೊಳಿಸುತ್ತದೆ. ಕೇವಡಿಯಾದ ಏಕತಾ ಪ್ರತಿಮೆಯು ವಡೋದರಾದಿಂದ ಸುಮಾರು ೯೦ ಕಿ.ಮೀ, ಸೂರತ್ನಿಂದ ೧೫೦ ಕಿ.ಮೀ ಮತ್ತು ಅಹಮದಾಬಾದಿನಿಂದ ೨೦೦ ಕಿ.ಮೀ ದೂರದಲ್ಲಿದೆ.

*. ಅಹಮದಾಬಾದಿನಿಂದ ಕೇವಡಿಯಾ ನಡುವೆ ೨೦೦ ಕಿ.ಮೀ ದೂರ ಸಾಮಾನ್ಯವಾಗಿ ರಸ್ತೆ ಮೂಲಕ ಪಯಣಕ್ಕೆ ನಾಲ್ಕು ಗಂಟೆ ಬೇಕಾಗುತ್ತದೆ. ಆದರೆ ಈಗ ಸೀಪ್ಲೇನ್ ತನ್ನ ಗಮ್ಯಸ್ಥಾನವನ್ನು ತಲುಪಲು ಕೇವಲ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ.

* ಸ್ಪೈಸ್ ಜೆಟ್ ಒಂದು ದಿನದಲ್ಲಿ ನಾಲ್ಕು ಸುತ್ತಿನ ಸೀಪ್ಲೇನ್ ಪಯಣವನ್ನು ನಡೆಸುತ್ತದೆ, ಅಂದರೆ, ಅಹಮದಾಬಾದ್ ಮತ್ತು ಕೇವಡಿಯಾ ನಡುವೆ ಎಂಟು ವಿಮಾನಗಳು ಸಂಚರಿಸುತ್ತವೆ.

* ಒಂದು ಸೀಪ್ಲೇನ್ ಟಿಕೆಟ್ ಟಿಕೆಟ್ ಬೆಲೆ ೧೫೦೦ ರೂ.ಗಳಷ್ಟು ಕಡಿಮೆ ಎಂದು ನಿರೀಕ್ಷಿಸಲಾಗಿದೆ.

No comments:

Advertisement