ಶಸ್ತ್ರಾಸ್ತ್ರ ಕಳ್ಳಸಾಗಣೆ, ಭಾರತ ಸೇನೆಯಿಂದ ಪಾಕ್ ಯತ್ನ ಭಗ್ನ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕೇರನ್ ವಲಯದ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಹಗ್ಗ ಮತ್ತು ಟ್ಯೂಬ್ ಬಳಸಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡನ್ನು ಭಾರತದ ಒಳಕ್ಕೆ ತಳ್ಳುವ ಪಾಕಿಸ್ತಾನದ ಯತ್ನವನ್ನು ಭಾರತೀಯ ಸೇನೆಯು 2020 ಅಕ್ಟೋಬರ್ 10ರ ಶನಿವಾರ ವಿಫಲಗೊಳಿಸಿದೆ.
ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದ ಸೇನೆಯು ನಾಲ್ಕು ಎಕೆ ೭೪ ರೈಫಲ್‌ಗಳು ಸೇರಿದಂತೆ ಭಾರೀ ಮದ್ದುಗುಂಡು ಸಂಗ್ರಹವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ವಲಯಲ್ಲಿರುವ ನೈಜ ನಿಯಂತ್ರಣ ರೇಖೆಯಾದ್ಯಂತ ಶಸ್ತ್ರಾಸ್ತ್ರಗಳನ್ನು ತಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ಸೇನೆಯ ಜಾಗೃತಾ ಪಡೆಗಳು ವಿಫಲಗೊಳಿಸಿದವು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.
ಕಿಶೆನ್‌ಗಂಗಾ ನದಿಗೆ ಅಡ್ಡಲಾಗಿ ಹಗ್ಗಕ್ಕೆ ಕಟ್ಟಿದ ಟ್ಯೂಬ್‌ನಲ್ಲಿ ಇಬ್ಬರು- ಮೂವರು ವ್ಯಕ್ತಿಗಳು ಕೆಲವು ವಸ್ತುಗಳನ್ನು ಸಾಗಿಸುತ್ತಿರುವುದನ್ನು ಸೇನೆ ಗಮನಿಸಿತು. ಪಡೆಗಳು ತತ್ ಕ್ಷಣ ಸ್ಥಳಕ್ಕೆ ಧಾವಿಸಿದವು ಮತ್ತು ಎರಡು ಎಕೆ ೭೪ ರೈಫಲ್, ಎಂಟು ಮ್ಯಾಗಜೀನ್ ಮದ್ದುಗುಂಡು ಮತ್ತು ಎರಡು ಚೀಲಗಳಲ್ಲಿ ಅಡಗಿಸಿಟ್ಟಿದ್ದ ೨೪೦ ಸುತ್ತು ಮದ್ದುಗುಂಡನ್ನು ವಶಪಡಿಸಿಕೊಂಡವು.
ಪ್ರದೇಶವನ್ನು ಸುತ್ತುರೆಯಲಾಗಿದ್ದು, ಶೋಧ ಪ್ರಗತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರು ಯುದ್ಧ ಮಳಿಗೆಗಳನ್ನು ಕಳ್ಳಸಾಗಣೆ ಮಾಡುವ ಮತ್ತೊಂದು ಪ್ರಯತ್ನ ಇದಾಗಿತ್ತು. ಆದರೆ ಜಾಗೃತಾ ಪಡೆಗಳ ತ್ವರಿತ ಕ್ರಮದಿಂದ ಇದನ್ನು ಯಶಸ್ವಿಯಾಗಿ ವಿಫಲಗೊಳಿಸಲಾಯಿತು.
ಶ್ರೀನಗರ ಮೂಲದ ಚಿನಾರ್ ಕೋರ್‌ನ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಮಾತನಾಡಿ, ಪಾಕಿಸ್ತಾನದ ಉದ್ದೇಶಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. "ಇಂದು ಬೆಳಿಗ್ಗೆ, ಕೇರನ್ ವಲಯದಲ್ಲಿ, ಪಾಕಿಸ್ತಾನವು ಕಿಶೆನ್‌ಗಂಗಾ ನದಿಗೆ ಅಡ್ಡಲಾಗಿ ನಾಲ್ಕು ಎಕೆ ೭೪ ರೈಫಲ್‌ಗಳನ್ನು ಮತ್ತು ಒಂದು ಟ್ಯೂಬ್‌ನಲ್ಲಿ ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಕಳುಹಿಸಲು ಪ್ರಯತ್ನಿಸಿತು, ಆದರೆ ಕಣ್ಗಾವಲು ಸಾಧನಗಳ ಸಹಾಯದಿಂದ ನಮ್ಮ ಜಾಗೃತಾ ಪಡೆಗಳು ಅದನ್ನು ವಿಫಲಗೊಳಿಸಿ ಶಸ್ತ್ರಾಸ್ತ್ರ ಮದ್ದುಗುಂಡನ್ನು ವಶ ಪಡಿಸಿಕೊಂಡವು. ಇದು ಪಾಕಿಸ್ತಾನದ ಆಶಯ, ನಡವಳಿಕೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ’ ಎಂದು ಹೇಳಿದರು.
’ಭವಿಷ್ಯದಲ್ಲಿಯೂ ನಾವು ಅವರ ಪ್ರಯತ್ನಗಳನ್ನು ವಿಫಲಗೊಳಿಸುತ್ತೇವೆ’ಎಂದು ಲೆಫ್ಟಿನೆಂಟ್ ಜನರಲ್ ರಾಜು ಇಲ್ಲಿ ನಗರದ ಹೊರವಲಯದಲ್ಲಿರುವ ರಂಗ್ರೆತ್ ಪ್ರದೇಶದಲ್ಲಿ ನಡೆದ ಸಮಾರಂಭವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಕೇರನ್, ತಂಗ್ಧರ್, ಜಮ್ಮು ವಲಯ ಮತ್ತು ಪಂಜಾಬಿನಲ್ಲಿ ಇಂತಹ ಪ್ರಯತ್ನಗಳು ನಡೆದಿವೆ. ಕಾಶ್ಮೀರದ ಜನರನ್ನು ಯಾವಾಗಲೂ ಭಯೋತ್ಪಾದನೆಯಲ್ಲಿ ತೊಡಗಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ಆದರೆ, ಶಸ್ತ್ರಾಸ್ತ್ರಗಳು ಬರದಂತೆ ತಡೆಯುವುದು ನಮ್ಮ ಸಂಕಲ್ಪ, ಇದರಿಂದ ಇಲ್ಲಿನ ಜನರಿಗೆ ಕನಿಷ್ಠ ನಷ್ಟ ಸಂಭವಿಸುತ್ತದೆ. ಭಯೋತ್ಪಾದನೆಯನ್ನು ತಡೆಯಲು ನಮಗೆ ಜನರ ಸಹಕಾರ ಬೇಕು’ ಎಂದು ಕೋರ್ ಕಮಾಂಡರ್ ಹೇಳಿದರು.
No comments:
Post a Comment