ಬಿಹಾರ ವಿಧಾನಸಭೆ: ಶೇಕಡಾ ೫೩.೫೪ ಮತದಾನ
ಪಾಟ್ನಾ: ೨೪೩ ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಮೊದಲ ಹಂತದ ಚುನಾವಣೆ 2020 ಅಕ್ಟೋಬರ್ 28ರ ಬುಧವಾರ ಸಂಜೆ ೬ ಗಂಟೆಯವರೆಗೆ ನಡೆದಿದ್ದು ಶೇಕಡಾ ೫೩.೫೪ರಷ್ಟು ಮತದಾನವಾಯಿತು.
ಮತ ಚಲಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಇದೇ ಮೊದಲ ಬಾರಿಗೆ ಸಂಜೆ ೫ ಗಂಟೆಯ ಬದಲು ೬ ಗಂಟೆಯವರೆಗೂ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಹಲವೆಡೆಗಳಲ್ಲಿ ಸಂಜೆ ೬ ಗಂಟೆಯ ಬಳಿಕವೂ ಉದ್ದನೆಯ ಸಾಲುಗಳು ಕಂಡು ಬಂದವು.
ಕೋವಿಡ್ -೧೯ ಸಾಂಕ್ರಾಮಿಕ ರೋಗದ ಮಧ್ಯೆ ನಡೆಸಿದ ಮೊದಲ ಪ್ರಮುಖ ಚುನಾವಣೆ ಇದು. ಯಾವುದೇ ಪ್ರಮುಖ ಘಟನೆ ಅಥವಾ ಇವಿಎಂ ತೊಂದರೆಗಳಿಲ್ಲದೆ ಮತದಾನವು ಶಾಂತಿಯುತವಾಗಿದ್ದರೂ, ನವೆಂಬರ್ ೩ಕ್ಕೆ ನಿಗದಿಯಾಗಿರುವ ಎರಡನೇ ಹಂತದ ಚುನಾವಣೆಗೆ ಬಿರುಸಿನ ಸಿದ್ಧತೆಗೂ ಸಾಕ್ಷಿಯಾಯಿತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಬ್ಬರೂ ಬುಧವಾರ ರಾಜ್ಯದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಮತದಾನ ಸಂಜೆ ೫ ರ ಬದಲು ಸಂಜೆ ೬ ರವರೆಗೆ ನಡೆಯಿತು. ಯಾವುದೇ ಮತಗಟ್ಟೆಯಲ್ಲಿ ಜನಸಂದಣಿ ಆಗದಂತೆ ತಡೆಯಲು ಚುನಾವಣಾ ಆಯೋಗವು ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಿತು. ಸಂಜೆ ೬ ಗಂಟೆಯ ನಂತರವೂ ಮತದಾನ ಮುಂದುವರೆಯಿತು ಎಂದು ಚುನಾವಣಾ ಆಯೋಗ ತಿಳಿಸಿತು.
"ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗಿಂತ ಹೆಚ್ಚಿನ ಮತದಾನವಾಗಿದೆ. ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ, ಜನರು ಮತ ಚಲಾಯಿಸಲು ಬಂದರು ಎಂಬುದು ಪ್ರೋತ್ಸಾಹದಾಯಕವಾಗಿದೆ. ೨೦೧೫ ರ ವಿಧಾನಸಭಾ ಚುನಾವಣೆಯಲ್ಲಿ ಸಂಜೆ ೫ ರವರೆಗೆ ಮತದಾನ ಪ್ರಮಾಣಶೆಕಡಾ ೫೪.೯೪ ಆಗಿತ್ತು. ಮತ್ತು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಸಂಜೆ ೫ ರವರೆಗೆ ಮತದಾನ ಪ್ರಮಾಣ ಶೇಕಡಾ ೫೩.೫೪ ಆಗಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ತಿಳಿಸಿದರು.
ಕೊರೊನಾವೈರಸ್ ಮಧ್ಯೆ ಮೊದಲ ಚುನಾವಣೆಯನ್ನು ಸುಗಮವಾಗಿ ನಡೆಸಿದ ಬಿಹಾರ ಮತದಾರರು, ರಾಜಕೀಯ ಪಕ್ಷಗಳು, ಮಾಧ್ಯಮ ವ್ಯಕ್ತಿಗಳಿಗೆ ಅರೋರ ಧನ್ಯವಾದಗಳನ್ನು ಅರ್ಪಿಸಿದರು.
ಮಧ್ಯಾಹ್ನ ೩ ರವರೆಗೆ ಮತದಾನದ ಶೇಕಡಾ ೪೬.೨೯ ರಷ್ಟಿತ್ತು. ಮುಂಜಾನೆ ಬೆಳಿಗ್ಗೆ ೧೧ ರವರೆಗೆ ಮತದಾನ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿದ್ದು, ಕೇವಲ ಶೇಕಡಾ ೧೮.೩೦ ರಷ್ಟು ಮತ ಚಲಾವಣೆಯಾಗಿತ್ತು.
ಮತದಾನದ ಶೇಕಡಾವಾರು ಪ್ರಮಾಣವು ಬಿಹಾರ ಜನರು ಶಾಂತಿ, ಅಭಿವೃದ್ಧಿ ಮತ್ತು ಸ್ಥಿರತೆಯನ್ನು ಬಯಸುತ್ತಾರೆ ಎಂಬುದನ್ನು ಸೂಚಿಸುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಗಿರಿರಾಜ್ ಸಿಂಗ್ ಅವರು ಲಖಿಸರೈನ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರೆ, ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಎಚ್ಎಎಂ ಅಧ್ಯಕ್ಷ ಜಿತನ್ ರಾಮ್ ಮಾಂಝಿ ಅವರು ಗಯಾದಲ್ಲಿನ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ರಾಜ್ಯ ಸಚಿವರು ಮತ್ತು ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳಾದ ವಿಜಯ್ ಸಿನ್ಹಾ ಮತ್ತು ಕೃಷ್ಣಂದನ್ ವರ್ಮಾ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಹಾಗೂ ಜಮುಯಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೇಯಾಸಿ ಸಿಂಗ್ ಮತ ಚಲಾಯಿಸಿದರು.
ಈ ಮಧ್ಯೆ, ರಾಹುಲ್ ಗಾಂಧಿ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಮುಖಂಡ ಮತ್ತು ಬಿಹಾರ ಕೃಷಿ ಸಚಿವ ಪ್ರೇಮ್ ಕುಮಾರ್ ವಿರುದ್ಧ ತಮ್ಮ ಪಕ್ಷದ ಚಿಹ್ನೆ ಇದ್ದ ಮುಖಗವಸು ಧರಿಸಿ ಮತ ಚಲಾಯಿಸಿದ್ದಕ್ಕಾಗಿ ಚುನಾವಣಾ ಆಯೋಗ ಎಫ್ಐಆರ್ ಸಲ್ಲಿಸಲು ಆದೇಶ ನೀಡಿದೆ.
No comments:
Post a Comment