ರೈತ ಪ್ರತಿಭಟನೆ: ಟ್ರುಡೊ ಟೀಕೆಗೆ ಭಾರತದ ತೀವ್ರ ಆಕ್ಷೇಪ
ದೆಹಲಿ: ವಿದೇಶಾಂಗ ಸಚಿವಾಲಯವು ಕೆನಡಾದ ಹೈಕಮಿಷನರ್ ಅವರನ್ನು 2020 ಡಿಸೆಂಬರ್ 04ರ ಶುಕ್ರವಾರ ಬುಲಾವ್ ನೀಡಿ ಕರೆಸಿಕೊಂಡು, ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಟೀಕೆಗಳು ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳ ಮೇಲೆ "ಗಂಭೀರವಾದ ಹಾನಿಕಾರಕ ಪರಿಣಾಮ ಬೀರಬಹುದು’ ಎಂದು ಎಚ್ಚರಿಸಿತು.
ಕೆನಡಾದ ಪ್ರಧಾನ ಮಂತ್ರಿ, ಕೆಲವು ಸಂಪುಟ ಸಚಿವರು ಮತ್ತು ಸಂಸತ್ತಿನ ಸದಸ್ಯರು ಭಾರತೀಯ ರೈತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಡಿರುವ ಟೀಕೆಗಳು "ನಮ್ಮ ಆಂತರಿಕ ವ್ಯವಹಾರಗಳಲ್ಲಿ ಸ್ವೀಕಾರಾರ್ಹವಲ್ಲದ ಹಸ್ತಕ್ಷೇಪವಾಗಿದೆ" ಎಂದು ಕೆನಡಾದ ರಾಯಭಾರಿಗೆ ತಿಳಿಸಲಾಗಿದೆ ಎಂದು ಎಂಇಎ ದೃಢವಾಗಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಇಂತಹ ಕ್ರಮಗಳು ಮುಂದುವರೆದರೆ, ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳ ಮೇಲೆ ಗಂಭೀರ ಹಾನಿಕಾರಕ ಪರಿಣಾಮ ಬೀರುತ್ತದೆ’ ಎಂದು ಹೇಳಿಕೆ ತಿಳಿಸಿದೆ.
ಗುರುನಾನಕ್ ಅವರ ೫೫೧ ನೇ ಜನ್ಮ ದಿನಾಚರಣೆಯಂದು ಸೋಮವಾರ ನಡೆದ ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಟ್ರೂಡೊ, ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಬಗ್ಗೆ ಮಾತನಾಡಿದ್ದರು. ಭಾರತದಿಂದ ಬರುತ್ತಿರುವ ಸುದ್ದಿಗಳು "ಕಳವಳಕಾರಿಯಾಗಿವೆ’ ಮತ್ತು ಅವರ ದೇಶವು "ಶಾಂತಿಯುತ ಪ್ರತಿಭಟನೆಯ ಹಕ್ಕುಗಳನ್ನು ರಕ್ಷಿಸಲು ಯಾವಾಗಲೂ ಬದ್ಧವಾಗಿರುತ್ತದೆ’ ಎಂದು ಅವರು ಹೇಳಿದ್ದರು.
"ನಾವೆಲ್ಲರೂ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ತುಂಬಾ ಚಿಂತಿತರಾಗಿದ್ದೇವೆ. ಸಂಭಾಷಣೆಯ ಮಹತ್ವವನ್ನು ನಾವು ನಂಬುತ್ತೇವೆ ಮತ್ತು ಅದಕ್ಕಾಗಿಯೇ ನಮ್ಮ ಕಾಳಜಿಗಳನ್ನು ಎತ್ತಿ ಹಿಡಿಯಲು ನಾವು ಅನೇಕ ವಿಧಾನಗಳ ಮೂಲಕ ನೇರವಾಗಿ ಭಾರತೀಯ ಅಧಿಕಾರಿUಳನ್ನು ತಲುಪಿದ್ದೇವೆ’ ಎಂದು ಗುರುನಾನಕ್ ಜಯಂತಿಯ ವರ್ಚುಯಲ್ ಸಮಾರಂಭದಲ್ಲಿ ಅವರು ಹೇಳಿದ್ದರು.
ಈ ಟೀಕೆಗಳು ನಮ್ಮ ಹೈಕಮಿಷನ್ ಮತ್ತು ಕೆನಡಾದ ಕಾನ್ಸುಲೇಟ್ಗಳ ಮುಂದೆ ಸುರಕ್ಷತೆಯ ಸಮಸ್ಯೆಗಳನ್ನು ಹುಟ್ಟುಹಾಕುವ ‘ಉಗ್ರಗಾಮಿ ಚಟುವಟಿಕೆಗಳ’ ಕೂಟಗಳನ್ನು ಪ್ರೋತ್ಸಾಹಿಸಿದೆ ಎಂದು ಎಂಇಎ ಹೇಳಿದೆ.
"ಕೆನಡಾ ಸರ್ಕಾರವು ಭಾರತೀಯ ರಾಜತಾಂತ್ರಿಕ ಸಿಬ್ಬಂದಿ ಮತ್ತು ನಮ್ಮ ರಾಜಕೀಯ ನಾಯಕರ ಸಂಪೂರ್ಣ ಭದ್ರತೆಗೆ ಧಕ್ಕೆಯಾಗುವಂತಹ ಉಗ್ರಗಾಮಿ ಕ್ರಿಯಾಶೀಲತೆಯನ್ನು ನ್ಯಾಯಸಮ್ಮತಗೊಳಿಸುವ ಘೋಷಣೆಗಳಿಂದ ದೂರವಿರಬೇಕೆಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿಕೆ ತಿಳಿಸಿದೆ.
ಮಂಗಳವಾರ ಕೂಡ, ಟ್ರೂಡೊ ಹೇಳಿಕೆಯ ಒಂದು ದಿನದ ನಂತರ, ರೈತರ ಪ್ರತಿಭಟನೆಯ ಬಗ್ಗೆ ಕೆನಡಾದ ಪ್ರಧಾನಮಂತ್ರಿಯವರ ಹೇಳಿಕೆಯನ್ನು ಭಾರತವು "ಅನಪೇಕ್ಷಿತ" ಮತ್ತು "ಅನಗತ್ಯ" ಎಂದು ಖಂಡಿಸಿತ್ತು. "ಇಂತಹ ಟೀಕೆಗಳು ವಿಶೇಷವಾಗಿ ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನಗತ್ಯ’ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದರು.
ಟ್ರೂಡೊ ಅವರ ಹೇಳಿಕೆಗಳನ್ನು ಕನ್ಸರ್ವೇಟಿವ್ ಪಕ್ಷದ ನಾಯಕ ಎರಿನ್ ಒ ಟೂಲ್ ಸೇರಿದಂತೆ ಇತರ ಕೆನಡಾದ ನಾಯಕರು ಪ್ರತಿಧ್ವನಿಸಿದ್ದರು. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಪ್ರಜಾಪ್ರಭುತ್ವಕ್ಕೆ ಮೂಲಭೂತವಾದ್ದು ಎಂದು ಅವರು ಹೇಳಿದ್ದರು.
ವಿವಾದಾತ್ಮಕ ಕೃಷಿ ಸುಧಾರಣೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ವಾರದಲ್ಲಿ ಸಾವಿರಾರು ರೈತರು ದೆಹಲಿಗೆ ಪ್ರಯಾಣಿಸಿದ ನಂತರ ಈ ಹೇಳಿಕೆಗಳನ್ನು ನೀಡಲಾಗಿದೆ. ಕಳೆದ ವಾರ ದೆಹಲಿಯ ಗಡಿಯಲ್ಲಿ ಬ್ಯಾರಿಕೇಡ್ಗಳೊಂದಿಗೆ ಪ್ರತಿಭಟನಾಕಾರರನ್ನು ತಡೆದಾಗ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದಿದ್ದವು.
No comments:
Post a Comment