ಮುಂಚೂಣಿಯ ೩ ಕೋಟಿ ಜನರಿಗೆ ಉಚಿತ ಲಸಿಕೆ
ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮೂರು ಕೋಟಿ ಜನರಿಗೆ ಮೊದಲ ಹಂತದಲ್ಲಿ ಉಚಿತ ಕೊರೊನಾವೈರಸ್ ಲಸಿಕೆಗಳನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ 2021 ಜನವರಿ 02ರ ಶನಿವಾರ ಹೇಳಿದರು.
ಭಾರತವು ಕೋವಿಡ್ ಲಸಿಕೆ ಚುಚ್ಚುಮದ್ದು ನೀಡಲು ಪ್ರಾರಂಭಿಸಿದಾಗ ೧ ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ೨ ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಅವರು ಹೇಳಿದರು.
"೧ ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ೨ ಕೋಟಿ ಮುಂಚೂಣಿ ಕಾರ್‍ಯಕರ್ತರನ್ನು ಒಳಗೊಂಡ ಹೆಚ್ಚಿನ ಆದ್ಯತೆಯ ಫಲಾನುಭವಿಗಳಿಗೆ ಉಚಿತ ಕೋವಿಡ್-೧೯ ಚುಚ್ಚುಮದ್ದನ್ನು ದೇಶಾದ್ಯಂತ ಒದಗಿಸಲಾಗುವುದು. ಜುಲೈ ಅಂತ್ಯದ ಒಳಗಾಗಿ ಇನ್ನೂ ೨೭ ಕೋಟಿ ಆದ್ಯತೆಯ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಡಾ. ಹರ್ಷ ವರ್ಧನ್ ಅವರು ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದರು.
ಭಾರತದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಜನರನ್ನು ಬಾಧಿಸಿ, ೧.೪೯ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಈ ಕಾಯಿಲೆ ವಿರುದ್ಧ ಲಸಿಕೆ ಪಡೆಯಲು ಭಾರತ ಒಂದು ಹೆಜ್ಜೆ ಹತ್ತಿರ ಹೋದ ಒಂದು ದಿನದ ನಂತರ ಅವರ ಹೇಳಿಕೆ ಬಂದಿದೆ.
ಸರ್ಕಾರದಿಂದ ನೇಮಕಗೊಂಡ ವಿಷಯ ತಜ್ಞರ ಸಮಿತಿಯು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ - ಕೋವಿಶೀಲ್ಡ್ ತಯಾರಿಸಿದ ಆಕ್ಸ್‌ಫರ್ಡ್ ಲಸಿಕೆಗಾಗಿ ತನ್ನ ಶಿಫಾರಸುಗಳನ್ನು ಭಾರತದ ಔಷಧ ಮಹಾ ನಿಯಂತ್ರಕರಿಗೆ (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ -ಡಿಸಿಜಿಐ) ಶುಕ್ರವಾರ ಕಳುಹಿಸಿದೆ.
ದೆಹಲಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಅಣಕು ವ್ಯಾಕ್ಸಿನೇಷನ್ ಕಾರ್‍ಯಾಚರಣೆಯನ್ನು ಪರಿಶೀಲಿಸಿದ ಬಳಿಕ ಆರೋಗ್ಯ ಸಚಿವರು ಸುದ್ದಿಗಾರರ ಜೊತೆ ಮಾತನಾಡಿದರು.
ಲಸಿಕೆಯ ಸುರಕ್ಷತೆಯ ಬಗ್ಗೆಯೂ ಸಚಿವರು ಭರವಸೆ ನೀಡಿದರು. "ಲಸಿಕೆಯ ಸುರಕ್ಷತೆಯ ಬಗ್ಗೆ ಯಾವುದೇ ವದಂತಿಗಳು ಇರಬಾರದು ... ಎಲ್ಲವನ್ನೂ ವಿವರವಾಗಿ ಪರಿಶೀಲಿಸಲಾಗಿದೆ. ಆರಂಭದಲ್ಲಿ ಪೋಲಿಯೊ ಲಸಿಕೆ ಹೊರಬಂದಾಗಲೂ ವದಂತಿಗಳು ಹರಡುತ್ತಿದ್ದವು. ಆದರೆ ಒಮ್ಮೆ ವ್ಯಾಕ್ಸಿನೇಷನ್ ಆದ ಬಳಿಕ ಅದರ ಸುರಕ್ಷತೆಯ ಬಗ್ಗೆ ಎಲ್ಲರಿಗೂ ಭರವಸೆ ಮೂಡಿತು’ ಎಂದು ಹರ್ಷವರ್ಧನ್ ಹೇಳಿದರು.
ಇಂದು, ಎಲ್ಲಾ ರಾಜ್ಯಗಳು ಅಣಕು ವ್ಯಾಕ್ಸಿನೇಷನ್ ನಡೆಸುತ್ತಿವೆ. ಇದರಿಂದಾಗಿ ನಿಜವಾದ ವ್ಯಾಕ್ಸಿನೇಷನ್ ಅಭಿಯಾನಕ್ಕಿಂತ ಮುಂಚಿತವಾಗಿ ವ್ಯವಸ್ಥೆಯಲ್ಲಿ ಇರಬಹುದಾದ ಸಂಭವನೀಯ ಅಂತರವನ್ನು ಪತ್ತೆ ಹಚ್ಚಬಹುದು. ಈ ವಾರದ ಆರಂಭದಲ್ಲಿ ಅಸ್ಸಾಂ, ಆಂಧ್ರಪ್ರದೇಶ, ಪಂಜಾಬ್ ಮತ್ತು ಗುಜರಾತಿನಲ್ಲಿ ಎರಡು ದಿನಗಳ ಅಣಕು ವ್ಯಾಕ್ಸಿನೇಷನ್ ನಡೆಯುತ್ತಿದೆ.
ಕಳೆದ ನಾಲ್ಕು ತಿಂಗಳಿಂದ ಲಸಿಕೆ ಅಭಿಯಾನಕ್ಕಾಗಿ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಸೆಪ್ಟೆಂಬರಿನಲ್ಲಿ ಇಂಗ್ಲೆಂಡಿನಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿ ವೈರಸ್ಸಿನ ಹೊಸ ಸೋಂಕು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಹೊಸ ನಿರ್ಬಂಧಗಳಿಗೆ ಕಾರಣವಾಗಿದೆ. ದೇಶದಲ್ಲಿ ಈವರೆಗೆ ೨೯ ಪ್ರಕರಣಗಳು ದಾಖಲಾಗಿವೆ. ಹೇಗಾದರೂ, ಪ್ರಸ್ತುತ ಲಸಿಕೆಗಳು ಹೊಸ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸರ್ಕಾರ ಹೇಳಿದೆ.
No comments:
Post a Comment