2,500 ವರ್ಷಗಳ ಹಿಂದೆ ಇವರು ಇಲ್ಲಿ ಓಡಾಡಿದ್ದರು..!
ತಮಿಳುನಾಡಿನ ಮಧುರೈ ಬಳಿಯ ಕೀಲಾಡಿಯಲ್ಲಿ ಸುಮಾರು 2,500 ವರ್ಷಗಳ ಹಿಂದೆ (ಕ್ರಿ.ಪೂ. 6ನೇ ಶತಮಾನದಲ್ಲಿ) ಅಸ್ತಿತ್ವದಲ್ಲಿದ್ದ ಪ್ರಾಚೀನ ನಾಗರಿಕತೆಯ ಕುರುಹುಗಳು ಸಿಕ್ಕಿವೆ. ಈಗ ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಸಂಶೋಧಕರು, ಲಿವರ್‌ಪೂಲ್ ಜಾನ್ ಮೂರ್ಸ್ ವಿಶ್ವವಿದ್ಯಾನಿಲಯದ (UK) ನೆರವಿನಿಂದ, ಆ ಕಾಲದಲ್ಲಿ ಜೀವಿಸಿದ್ದ ಇಬ್ಬರು ವ್ಯಕ್ತಿಗಳ ಮುಖದ ರೂಪವನ್ನು ಮರುಸೃಷ್ಟಿಸಿದ್ದಾರೆ.
ಈ ವ್ಯಕ್ತಿಗಳು ದಕ್ಷಿಣ ಭಾರತೀಯರಾಗಿದ್ದು, ಅವರಲ್ಲಿ ಪಶ್ಚಿಮ ಯುರೇಷಿಯಾದ (ಇರಾನಿಯನ್) ಬೇಟೆಗಾರರು ಮತ್ತು ಆಸ್ಟ್ರೋ-ಏಷಿಯಾಟಿಕ್ ಜನರ ಕುರುಹುಗಳಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ತಲೆಬುರುಡೆಗಳು ಕೀಲಾಡಿ ಉತ್ಖನನ ಸ್ಥಳದಿಂದ 800 ಮೀಟರ್ ದೂರದಲ್ಲಿರುವ ಕೊಂಡಗೈ ಎಂಬ ಸ್ಮಶಾನದಲ್ಲಿ ಪತ್ತೆಯಾಗಿವೆ. ಜನೆಟಿಕ್ಸ್ ಆಧಾರದ ಮೇಲೆ ಅವರ ಪೂರ್ವಜರನ್ನು ನಿಖರವಾಗಿ ಗುರುತಿಸಲು ಹೆಚ್ಚಿನ DNA ಅಧ್ಯಯನಗಳು ಅಗತ್ಯ ಎಂದು ಸಂಶೋಧಕರು ಹೇಳಿದ್ದಾರೆ.
- ಕಂಪ್ಯೂಟರ್ ನೆರವಿನ 3D ಮುಖ ಪುನರ್ನಿರ್ಮಾಣ ವ್ಯವಸ್ಥೆಯನ್ನು ಬಳಸಿಕೊಂಡು ಮುಖದ ಸ್ನಾಯುಗಳನ್ನು ಮತ್ತು ವೈಶಿಷ್ಟ್ಯಗಳನ್ನು ಮರುನಿರ್ಮಿಸಲಾಯಿತು.
- ತಲೆಬುರುಡೆಗಳ ಕೆಳ ದವಡೆಗಳು ಇರದ ಕಾರಣ, ಅವುಗಳ ಆಕಾರವನ್ನು ಅಂದಾಜು ಮಾಡಲು ಆರ್ಥೊಡಾಂಟಿಕ್ ಮಾನದಂಡಗಳನ್ನು ಬಳಸಲಾಗಿದೆ.
- ಆಧುನಿಕ ದಕ್ಷಿಣ ಭಾರತೀಯರ ಅಂಗಾಂಶದ ಆಳದ ದತ್ತಾಂಶವನ್ನು ಆಧರಿಸಿ ತಲೆಬುರುಡೆಗಳ ವಿವಿಧ ಭಾಗಗಳಲ್ಲಿ ಅಂಗಾಂಶದ ಆಳವನ್ನು ಅಂದಾಜಿಸಲಾಯಿತು.
- ಡಿಜಿಟಲ್ ಕೆತ್ತನೆಯ ಮೂಲಕ ಸ್ನಾಯು, ಕೊಬ್ಬು ಮತ್ತು ಚರ್ಮವನ್ನು ಮರುಸೃಷ್ಟಿಸಿ, ಕಣ್ಣು, ಮೂಗು, ಬಾಯಿಗಳಂತಹ ವೈಶಿಷ್ಟ್ಯಗಳನ್ನು ತಲೆಬುರುಡೆಯ ಗುಣಲಕ್ಷಣಗಳ ಆಧಾರದ ಮೇಲೆ ಅಂದಾಜು ಮಾಡಲಾಯಿತು.
- ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಬಣ್ಣ ಮತ್ತು ವಿನ್ಯಾಸವನ್ನು ನೀಡಲು ಛಾಯಾಗ್ರಹಣದ ದತ್ತಾಂಶವನ್ನು ಬಳಸಲಾಯಿತು.
"ಇದು 80% ವಿಜ್ಞಾನ ಮತ್ತು 20% ಕಲೆ" ಎಂದು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ವಿಭಾಗದ ಪ್ರೊಫೆಸರ್ ಜಿ. ಕುಮರೇಶನ್ ಹೇಳಿದ್ದಾರೆ. ಪುನರ್ನಿರ್ಮಿಸಿದ ಮುಖಗಳು, DNA ದತ್ತಾಂಶದೊಂದಿಗೆ, ಸಂಗಮ್ ಯುಗದಲ್ಲಿ ವಾಸಿಸುತ್ತಿದ್ದ ತಮಿಳರ ಪೂರ್ವಜರನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಕೀಲಾಡಿಯ ಪುರಾತನತೆಯ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯವಿದೆ.
- 2015-16ರಲ್ಲಿ ಕೀಲಾಡಿಯಲ್ಲಿ ಸಂಗಮ್ ಯುಗದ ಇಟ್ಟಿಗೆ ರಚನೆಯನ್ನು ಅಗೆದು, ಆ ಸ್ಥಳವನ್ನು ಕ್ರಿ.ಪೂ. 8ನೇ ಶತಮಾನಕ್ಕೆ ಸೇರಿದ್ದು ಎಂದು ಗುರುತಿಸಿದ್ದ ಪುರಾತತ್ವಶಾಸ್ತ್ರಜ್ಞ ಕೆ. ಅಮರನಾಥ್ ರಾಮಕೃಷ್ಣ ಅವರಿಗೆ, ಕೆಲವು ಅನಾಮಧೇಯ ತಜ್ಞರ ಪ್ರಕಾರ ಅದು ಕ್ರಿ.ಪೂ. 3ನೇ ಶತಮಾನಕ್ಕಿಂತ ಹಳೆಯದಿರಬಾರದು ಎಂದು ಹೇಳಿ, ವರದಿಯನ್ನು ಪರಿಷ್ಕರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸೂಚಿಸಿತ್ತು.
- ನ್ಯಾಯಾಲಯಗಳ ಮಧ್ಯಪ್ರವೇಶದ ನಂತರ 2018ರಲ್ಲಿ ASI ನಿಂದ ಉತ್ಖನನ ಕಾರ್ಯವನ್ನು ವಹಿಸಿಕೊಂಡ ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆ, ಕೀಲಾಡಿಯಲ್ಲಿ ಕ್ರಿ.ಪೂ. 6ನೇ ಶತಮಾನದಿಂದ ಕ್ರಿ.ಶ. 2ನೇ ಶತಮಾನದ ನಡುವಿನ 29 ರೇಡಿಯೊಕಾರ್ಬನ್ ದಿನಾಂಕಗಳನ್ನು ಪಡೆದುಕೊಂಡಿದೆ.
ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ವಿಭಾಗದ ಸಹಯೋಗದೊಂದಿಗೆ ಕೊಂಡಗೈ ಬೂದಿಗಡಿಗೆಗಳಿಂದ DNA ಯನ್ನು ವಿಶ್ಲೇಷಿಸುತ್ತಿದ್ದಾರೆ. ಕೊಂಡಗೈಯಲ್ಲಿ ಉತ್ಖನನ ಮಾಡಿದ ಸಮಾಧಿ ಬೂದಿಗಡಿಗೆಗಳ ವಿಷಯಗಳನ್ನು ಅಧ್ಯಯನ ಮಾಡಿದ ನಂತರ, ಹೆಚ್ಚಿನ ಅಸ್ಥಿಪಂಜರದ ಅವಶೇಷಗಳು ಸುಮಾರು 50 ವರ್ಷ ವಯಸ್ಸಿನ ಜನರದ್ದಾಗಿವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಪ್ರಾಚೀನ ನಿವಾಸಿಗಳ ವಲಸೆ ಮತ್ತು ಬೆರೆಯುವಿಕೆಯ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ DNA ಗುರುತುಗಳನ್ನು ಪಡೆಯುವ ಕೆಲಸ ಪ್ರಗತಿಯಲ್ಲಿದೆ ಎಂಬುದು ಕುಮರೇಶನ್ ಹೇಳಿಕೆ.
ಈ ಕುತೂಹಲಕಾರೀ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿವಿಡಿಯೋ ನೋಡಿ.
No comments:
Post a Comment