
ಬಂದಿತು ಮಳೆ..!
ಅನುಪಕೃಷ್ಣ ಭಟ್ ನೆತ್ರಕೆರೆ
ಬಂದಿತು ಮಳೆಯು
ತುಂಬಿತು ಮೋರಿಯು
ಒಡೆಯಿತು ಕಟ್ಟೆಯು ರಭಸದಲಿ
ಜನರ ಕೋಪವು ಉಕ್ಕಿ ಹರಿಯಿತು
ಪಾಪದ ಆ ಮಳೆ ರಾಯನಲಿ..!
ಮನೆಯೊಳಗೆಲ್ಲ ಕೊಳೆಯು ಬಂದಿತು,
ಕಸ-ಕಡ್ಡಿ, ಹಾವು ಚೇಳುಗಳು!
ಗ್ರಾನೈಟ್ ನೆಲದಲಿ ಜರಭರ ಜಾರುತ
ಮುರಿದವು ಹಲವರ ಕೈಕಾಲುಗಳು!
ಟಿ.ವಿ, ಕಂಪ್ಯೂಟರ್ ಹಾಳಾಗಿ ಹೋಯಿತು
ಕಷ್ಟದ ಜೊತೆಗೇ ಬಲುನಷ್ಟ..!
ಜನರ ಚಿಂತೆ ನೆತ್ತಿಗೆ ಏರಿ
ಬಿದ್ದವು ಚಿಣ್ಣರಿಗೇಟುಗಳು.!
ಜೊತೆಗೇ ಬೈಗುಳ ಸರಮಾಲೆಗಳು..!
ಒಂದೇ ಮಳೆಗೆ ತತ್ತರಿಸಿದರು
ನಮ್ಮ ನಾಡಿನ ಜನರೆಲ್ಲ..
ಗಡ ಗಡ ನಡುಗುತ, ಶಾಪವ ಹಾಕುತ
ಜರೆದರು.. 'ಇದು ಮಳೆಯಲ್ಲ'..!
ಅಬ್ಬಾಬ್ಬಾ ಇದು ಮಳೆಯಲ್ಲ!!
ಇಷ್ಟೆಲ್ಲಾದರೂ ಸ್ವಾರ್ಥ ಬುದ್ಧಿಯ
ಜನರಿಗೆ ಅರಿವು ಬರಲಿಲ್ಲ,
ಕೆರೆ ಸೈಟಿನಲಿ ಮನೆಯನು ಕಟ್ಟುವ
ವ್ಯಾಮೋಹವನು ಬಿಡಲಿಲ್ಲ.!
ಮೋರಿಯ ಒಳಗೆ ಕಸವನು ತುಂಬುವ
ಹುಚ್ಚಾಟಕೆ ಕೊನೆ ಮೊದಲಿಲ್ಲ..!
ಈ ಹುಚ್ಚಾಟವು ಮುಂದುವರೆದರೆ
ಭೂಮಿಗೆ ಖಂಡಿತ ಅಪಾಯವು
ಇದನ್ನು ಅರಿತು ಬಾಳಿರಿ ಚಿಣ್ಣರೆ
ನೀರಿಗೆ ನೀಡುತ ದಾರಿಯನು.
ಮಳೆ ನೀರಿಗೆ ನೀಡುತ ದಾರಿಯನು..!
2 comments:
ತುಂಬಾ ಚೆನ್ನಾಗಿದೆ.ಇದನ್ನು ಮುಂದುವರೆಸಿ.ಇನ್ನಷ್ಟು ಕವನಗಳನ್ನು ಹಾಕಿರಿ.
-ಮಧು ಭಟ್ ಪೂರ್ಲುಪಾಡಿ
ಕವನ ಚೆನ್ನಾಗಿದೆ.ಇನ್ನಷ್ಟು ಕವನಗಳನ್ನು ಹಾಕಿರಿ. ಕೆಲ ಕತೆಗಳನ್ನು ಹಾಕಿದರೆ ಒಳ್ಳೆಯದು. ಗಿರೀಶ
Post a Comment