
35 ರೂಪಾಯಿ ಚಿಪ್ಸ್, ರೂ. 50,000 ಪರಿಹಾರ..!
ಪೊಟ್ಟಣಗಳಲ್ಲಿ ನಮೂದಿಸಿದ ಪ್ರಕಾರ 60 ಗ್ರಾಮ್ ಆಲೂಚಿಪ್ಸ್ ಇರಬೇಕಾಗಿತ್ತು. ಇದ್ದದ್ದು 15 ಗ್ರಾಮ್ ಗಿಂತಲೂ ಕಡಿಮೆ. ಇಂತಹ ಅಪ್ರಾಮಾಣಿಕ ವ್ಯಾಪಾರ ನಿರತರಿಗೆ ಸ್ಪಷ್ಟ ಸಂದೇಶ ಹೋಗಬೇಕು ಎಂದು ನ್ಯಾಯಾಲಯ ಹೇಳಿತು.
ನೆತ್ರಕೆರೆ ಉದಯಶಂಕರ
ವ್ಯಾಪಾರ-ವ್ಯವಹಾರ ಯಾವಾಗಲೂ ಪ್ರಾಮಾಣಿಕವಾಗಿ ಇರಬೇಕು. ಅಪ್ರಾಮಾಣಿಕ ವ್ಯಾಪಾರ ಸಲ್ಲದು. ನಿರ್ದಿಷ್ಟ ತೂಕ ಇದೆ ಎಂದು ನಮೂದಿಸಿ ಅಷ್ಟೇ ಪ್ರಮಾಣದ ಸಾಮಗ್ರಿ ಕೊಡದೇ ಇರುವುದು ಅಪ್ರಾಮಾಣಿಕ ವ್ಯಾಪಾರ ಪ್ರವೃತ್ತಿಯಾಗುತ್ತದೆ. ಈ ರೀತಿ ಅಪ್ರಾಮಾಣಿಕತೆ ತೋರಿದರೆ ಆಗ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿ ನ್ಯಾಯ ದೊರೆಯುತ್ತದೆಯೇ?
ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ ನ್ಯಾಯ ಒದಗಿಸಿದೆ.
ಈ ಪ್ರಕರಣದ ಅರ್ಜಿದಾರರು: ಉಡುಪಿ ಕುಂಜಿಬೆಟ್ಟು ನಿವಾಸಿ ವೈ.ಕೆ. ಕುಂದರ್ ಅವರ ಪುತ್ರ ಗಣೇಶ ಸಾಲಿಯಾನ್. ಪ್ರತಿವಾದಿಗಳು: (1) ಪೆಪ್ಸಿ ಫುಡ್ಸ್ ಪ್ರೈವೇಟ್ ಲಿಮಿಟೆಡ್, ಚನ್ನೋ ಗ್ರಾಮ, ಪಾಟಿಯಾಲ, ಭವಾನಿಘಡ, ಸಂಗ್ರೂರ್ ಪಂಜಾಬ್, (2) ಮೆಸರ್ಸ್ ಫ್ರಿಟೊ-ಲೇ ಇಂಡಿಯ, ರಂಗ್ಸೊಗಾಂವ್, ಶಿರೂರ್ ತಾಲ್ಲೂಕು, ಪುಣೆ, (3) ಕನ್ಸ್ಯೂಮರ್ ಸರ್ವೀಸ್ ಮ್ಯಾನೇಜರ್, ಗುಡಗಾಂವ್, ಹರ್ಯಾಣ, (4) ವೆಂಕಟೇಶ ಕಾಮತ್, ಕಾಮತ್ ಡಿಸ್ಟ್ರಿಬ್ಯೂಟರ್ಸ್, ಕಿನ್ನಿಮೂಲ್ಕಿ ಉಡುಪಿ.
ಅರ್ಜಿದಾರ ಗಣೇಶ ಸಾಲಿಯಾನ್ ಅವರು ಉಡುಪಿ ಕೋರ್ಟ್ ರಸ್ತ್ತೆಯ ಲಲಿತ ಸ್ಟೋರ್ಸ್ ಮತ್ತು ಜ್ಯೂಸ್ ಸೆಂಟರಿನಿಂದ 35 ರೂಪಾಯಿಗಳಿಗೆ ಆಲೂ ಚಿಪ್ಸ್ ನ ಏಳು ಪೊಟ್ಟಣಗಳನ್ನು ಖರೀದಿಸಿದರು. ಈ ಆಲೂ ಚಿಪ್ಸ್ ಅನ್ನು ಎರಡನೇ ಪ್ರತಿವಾದಿ ಮೆಸೆರ್ಸ್ ಫ್ರಿಟೊ- ಲೇ ಇಂಡಿಯ ಸಂಸ್ಥೆ ತಯಾರಿಸಿತ್ತು. ನಾಲ್ಕನೇ ಪ್ರತಿವಾದಿ ಕಾಮತ್ ಡಿಸ್ಟ್ರಿಬ್ಯೂಟರ್ಸ್ ಈ ಚಿಪ್ಸ್ ಅನ್ನು ಸರಬರಾಜು ಮಾಡಿತ್ತು.
ಅರ್ಜಿದಾರರು ಏಳು ಪೊಟ್ಟಣಗಳ ಪೈಕಿ ಮೂರು ಪೊಟ್ಟಣಗಳನ್ನು ತೆರೆದಾಗ ಅವುಗಳ ಒಳಗೆ ಕಡಿಮೆ ಚಿಪ್ಸ್ ಕಂಡು ಬಂದವು. ತತ್ ಕ್ಷಣವೇ ಅರ್ಜಿದಾರರು ತಮ್ಮ ವಕೀಲ ಕೆ.ಎ. ಅರಿಗಾ ಅವರ ಮೂಲಕ ಪ್ರತಿವಾದಿಗಳಿಗೆ ನೋಟಿಸ್ ಕಳುಹಿಸಿ ಪರಿಹಾರ ನೀಡುವಂತೆ ಆಗ್ರಹಿಸಿದರು. ಎರಡು ಮತ್ತು ಮೂರನೇ ಪ್ರತಿವಾದಿಗಳಿಗೆ ನೋಟಿಸ್ ತಲುಪಿತು, ನಾಲ್ಕನೇ ಪ್ರತಿವಾದಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದರು.
ಹೀಗಾಗಿ ಪ್ರತಿವಾದಿಗಳು ಅಪ್ರಾಮಾಣಿಕ ವ್ಯಾಪಾರ ನಿರತರಾಗಿದ್ದಾರೆ ಎಂದು ಆಪಾದಿಸಿ ಅರ್ಜಿದಾರರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತು. ಎಲ್ಲ ಪ್ರತಿವಾದಿಗಳಿಗೆ ನ್ಯಾಯಾಲಯದ ನೋಟಿಸ್ ತಲುಪಿತಾದರೂ ಯಾರೊಬ್ಬರೂ ಹಾಜರಾಗಲಿಲ್ಲ.
ತನ್ನ ಮುಂದೆ ಹಾಜರು ಪಡಿಸಲಾದ ಸಾಕ್ಷ್ಯಾಧಾರಗಳನ್ನು ಆಧರಿಸಿ ದೂರನ್ನು ಭಾಗಶಃ ಅಂಗೀಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು 35 ರೂಪಾಯಿಗಳನ್ನು 500 ರೂಪಾಯಿ ಪರಿಹಾರ ಹಾಗೂ ಶೇಕಡಾ 10 ಬಡ್ಡಿ ಸಹಿತವಾಗಿ ಪಾವತಿ ಮಾಡುವಂತೆ ಪ್ರತಿವಾದಿಗಳಿಗೆೆ ಆದೇಶ ನೀಡಿತು. ಆದರೆ ಜಿಲ್ಲಾ ಗ್ರಾಹಕ ನ್ಯಾಯಾಲವು ನೀಡಿದ ಪರಿಹಾರದ ಬಗ್ಗೆ ಸಂತೃಪ್ತರಾಗದ ಅರ್ಜಿದಾರರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.
ಅಧ್ಯಕ್ಷ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಮತ್ತು ಎಂ. ಶಾಮಭಟ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಅಹವಾಲು ಆಲಿಸಿ ಸಾಕ್ಷಾಧಾರಗಳನ್ನು ಪರಿಶೀಲಿಸಿತು.
ಜಿಲ್ಲಾ ಗ್ರಾಹಕ ನ್ಯಾಯಾಲಯದ ಮುಂದೆ ಅರ್ಜಿದಾರರು ಪ್ರಮಾಣಪತ್ರದ ಜೊತೆಗೆ ತಮ್ಮ ದೂರಿಗೆ ಸಮರ್ಥನೆಯಾಗಿ ಎರಡು ದಾಖಲೆಗಳನ್ನು ಸಲ್ಲಿಸಿದ್ದರು. ಖರೀದಿಸಲಾದ ಏಳು ಆಲೂ ಚಿಪ್ಸ್ ಪೊಟ್ಟಣಗಳ ಪೈಕಿ ನಾಲ್ಕು ಪೊಟ್ಟಣಗಳನ್ನೂ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಈ ಪೊಟ್ಟಣಗಳ ತೂಕ ಅವುಗಳ ಹಿಂಭಾಗದಲ್ಲಿ ನಮೂದಿಸಲಾಗಿದ್ದ ತೂಕಕ್ಕಿಂತ ಕಡಿಮೆ ಇದ್ದುದು ನ್ಯಾಯಾಲಯದಲ್ಲಿ ಬೆಳಕಿಗೆ ಬಂದಿತ್ತು.
ಆಲೂ ಚಿಪ್ಸ್ ನ ನಾಲ್ಕು ಪೊಟ್ಟಣಗಳಲ್ಲಿ ಒಟ್ಟು ತೂಕವು 15 ಗ್ರಾಮ್ಗಳಿಗಿಂತಲೂ ಕಡಿಮೆ ಇದ್ದು, ಹಿಂಭಾಗದಲ್ಲಿ ನಮೂದಿಸಿದಂತೆ ಅವುಗಳ ಒಟ್ಟು ತೂಕ 60 ಗ್ರಾಮ್ ಇರಬೇಕಾಗಿತ್ತು.
ಇದು ಪ್ರತಿವಾದಿಗಳು ಅಪ್ರಾಮಾಣಿಕ ವ್ಯಾಪಾರ ನಿರತರಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ರಾಜ್ಯ ಗ್ರಾಹಕ ನ್ಯಾಯಾಲಯವು ಇದನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯವು ತೀರ್ಪಿನಲ್ಲಿ ದಾಖಲಿಸಿದ್ದು ಸಮರ್ಪಕವಾಗಿದೆ ಎಂದು ಹೇಳಿತು.
ಅರ್ಜಿದಾರರು ಪ್ರತಿವಾದಿಗಳಿಂದ 2 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸುವಂತೆ ಕೋರಿದ್ದರು. ಅರ್ಜಿದಾರರು ತಿಳಿಸಿದ ಪ್ರಕಾರ ಎರಡನೇ ಪ್ರತಿವಾದಿಯೇ ಈ ಆಲೂ ಚಿಪ್ಸ್ ನ ತಯಾರಕರು. ನೋಟಿಸ್ ನೀಡಿದರೂ ನ್ಯಾಯಾಲಯದಲ್ಲಿ ಅವರು ನೋಟಿಸ್ ನ್ನು ಪ್ರಶ್ನಿಸಲಿಲ್ಲ. ಇದರಿಂದ ಎರಡನೇ ಪ್ರತಿವಾದಿಯೇ ಈ ಚಿಪ್ಸ್ ತಯಾರಕರು ಎಂಬುದು ಖಚಿತವಾಗುತ್ತಿದೆ. ಆದ್ದರಿಂದ ಪರಿಹಾರ ಪಾವತಿಗೆ ಎರಡನೇ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯ ನಿರ್ಧಿರಿಸಿತು.
ಪ್ರತಿವಾದಿಗಳ ಅಪ್ರಾಮಾಣಿಕ ವ್ಯಾಪಾರವನ್ನು ಗಮನಕ್ಕೆ ತಂದ ಅರ್ಜಿದಾರರಿಗೆ ಜಿಲ್ಲಾ ಗ್ರಾಹಕ ನ್ಯಾಯಾಲಯ 500 ರೂಪಾಯಿ ಪರಿಹಾರ ನೀಡಿದೆ. ಆದರೆ ದೇಶದಲ್ಲಿ ಇದೇ ಆಲೂ ಚಿಪ್ಸನ್ನು ಖರೀದಿಸಿದ ಮಂದಿ ಬಹಳಷ್ಟು ಇದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಅಪ್ರಾಮಾಣಿಕ ವ್ಯಾಪಾರ ನಿರತರಾದ ಎಲ್ಲರಗೂ ಸ್ಪಷ್ಟ ಸಂದೇಶ ಹೋಗಬೇಕು ಎಂದು ಅಭಿಪ್ರಾಯಪಟ್ಟ ರಾಜ್ಯ ಗ್ರಾಹಕ ನ್ಯಾಯಾಲಯವು 50,000 ರೂಪಾಯಿಗಳ ಪರಿಹಾರವನ್ನು 2000 ರೂಪಾಯಿಗಳ ಖಟ್ಲೆ ವೆಚ್ಚ ಸಹಿತವಾಗಿ ಎರಡು ತಿಂಗಳ ಒಳಗೆ ಪಾವತಿ ಮಾಡುವಂತೆ ಎರಡನೇ ಪ್ರತಿವಾದಿಗೆ ಆಜ್ಞಾಪಿಸಿತು. ಎರಡು ತಿಂಗಳ ಒಳಗೆ ಪರಿಹಾರ ಪಾವತಿ ಮಾಡಲು ವಿಫಲವಾದಲ್ಲಿ ಈ ಆದೇಶ ನೀಡಿದ ದಿನದಿಂದ ಹಣ ಪಾವತಿ ಮಾಡುವವರೆಗೂ ಶೇಕಡಾ 9 ಬಡ್ಡಿಯನ್ನೂ ತೆರಬೇಕು ಎಂದೂ ರಾಜ್ಯ ನ್ಯಾಯಾಲಯ ಆದೇಶ ನೀಡಿತು.
No comments:
Post a Comment