Saturday, May 31, 2008

ಬಿಜೆಪಿ ರಥ ರೆಡಿ, ರೈತರ ಸಂಕಟ ನಿವಾರಣೆಗೆ ಬರದಿರಲಿ ಅಡ್ಡಿ..!

ಬಿಜೆಪಿ ರಥ ರೆಡಿ, ರೈತರ ಸಂಕಟ

ನಿವಾರಣೆಗೆ ಬರದಿರಲಿ ಅಡ್ಡಿ..!

ಕೃಷಿಕರ, ಅವರ ಒಡನಾಡಿ ಗೋವುಗಳ ಸಂಕಷ್ಟಗಳನ್ನು ನಿವಾರಿಸಲು ಕಾಯಾ-ವಾಚಾ- ಮನಸಾ ಶ್ರಮಿಸುವ ಅಗತ್ಯವಿದೆ. ರೈತರ ಆತ್ಮಹತ್ಯೆ, ಗೋವುಗಳ ಹತ್ಯೆಗೊಂದು ಇತಿಶ್ರೀ ಹಾಡಬೇಕಾದ ತುರ್ತು ಇದೆ. ಬರಿದಾಗುತ್ತಿರುವ ಭೂಮಿಯ ಒಡಲಿಗೆ ಮಳೆ ನೀರುಕೊಯ್ಲಿನಂತಹ ಸರಳ ವಿಧಾನಗಳ ಮೂಲಕ ಜಲತುಂಬುವ ಜರೂರು ಇದೆ.

ನೆತ್ರಕೆರೆ ಉದಯಶಂಕರ

ಕರ್ನಾಟಕದ 25ನೇ ಮುಖ್ಯಮಂತ್ರಿಗಳಾಗಿ 30 ಮೇ 2008ರ ಶುಕ್ರವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡಿರುವ ಮಂಡ್ಯದ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವರೇ ಅಭಿನಂದನೆಗಳು.
29 ಮಂದಿ ಸಚಿವರ ತಂಡದೊಂದಿಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಂದ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಾವು ಇತಿಹಾಸ ನಿರ್ಮಿಸಿದ್ದೀರಿ.

ಇದರೊಂದಿಗೆ ದಕ್ಷಿಣ ಭಾರತದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತದ ಯುಗ ಆರಂಭವಾಗಿದೆ.

ವಿಧಾನಸೌಧದ ಮುಂದೆ ಮಟ ಮಟ ಮಧ್ಯಾಹ್ನದ ವೇಳೆಯಲ್ಲಿ ನೆರೆದಿದ್ದ ಸಹಸ್ರಾರು ಮಂದಿ ಅಭಿಮಾನಿಗಳ ಹರ್ಷೋದ್ಘಾರ, ಘೋಷಣೆಗಳ ಮಧ್ಯೆ ನಡೆದ ಪ್ರಮಾಣ ವಚನ ಸಮಾರಂಭಕ್ಕೆ ಬಿಜೆಪಿಯ ರಾಷ್ಟ್ರಮಟ್ಟದ ಧುರೀಣರಾದ ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯಂತಹ ಹಿರಿಯ ಧುರೀಣರು ಸಾಕ್ಷಿಯಾದರು.

ನೂತನ ಸಚಿವರಾಗಿ ತಮ್ಮ ಜೊತೆಗೆ ಕೆ.ಎಸ್.ಈಶ್ವರಪ್ಪ, ಡಾ.ವಿ.ಎಸ್. ಆಚಾರ್ಯ, ಗೋವಿಂದ ಕಾರಜೋಳ, ರಾಮಚಂದ್ರಗೌಡ, ಸಿ.ಎಂ.ಉದಾಸಿ, ಆರ್. ಅಶೋಕ್, ಮುಮ್ತಾಜ್ ಅಲಿಖಾನ್, ಶೋಭಾ ಕರಂದ್ಲಾಜೆ, ಬಿ.ಎನ್. ಬಚ್ಚೇಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ. ಶ್ರೀರಾಮುಲು, ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಎಸ್.ಎ. ರವೀಂದ್ರ ನಾಥ್, ಬಸವರಾಜ ಬೊಮ್ಮಾಯಿ, ಎಸ್. ಸುರೇಶ ಕುಮಾರ್, ರೇವು ನಾಯ್ಕ್ ಬೆಳಮಗಿ, ಕೃಷ್ಣ ಪಾಲೆಮಾರ್, ಅರವಿಂದ ಲಿಂಬಾವಳಿ, ಎಸ್.ಕೆ. ಬೆಳ್ಳುಬ್ಬಿ, ಶಿವರಾಜ್ ತಂಗಡಗಿ, ಎಸ್. ಎನ್. ಕೃಷ್ಣಯ್ಯ ಶೆಟ್ಟಿ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ನರೇಂದ್ರಸ್ವಾಮಿ, ಹಾಲಪ್ಪ ವೆಂಕಟರವಣಪ್ಪ, ಡಿ. ಸುಧಾಕರ್ ಮತ್ತು ಗೂಳಿಹಟ್ಟಿ ಶೇಖರ್ ಅವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪಕ್ಷದಲ್ಲಿ ಹಿರಿಯರೂ ಅನುಭವಿಗಳೂ ಆಗಿದ್ದ ಡಿ.ಎಚ್. ಶಂಕರಮೂರ್ತಿ, ಜಗದೀಶ ಶೆಟ್ಟರ ಅವರಂತಹ ಇನ್ನೊಂದಷ್ಟು ಸಹೋದ್ಯೋಗಿಗಳೂ ತಮ್ಮ ಜೊತೆಗಿರಬೇಕಾಗಿತ್ತು. ಆದರೆ ಎರಡನೇ ತಂಡದಲ್ಲಿ ಇಂತಹ ಇನ್ನಷ್ಟು ಪರಿಣತರು ತಮ್ಮ ಜೊತೆಗೂಡಬಹುದು ಎಂಬುದು ಜನರ ನಿರೀಕ್ಷೆ.

ಯಡಿಯೂರಪ್ಪನವರೇ ಅಧಿಕಾರ ಸ್ವೀಕರಿಸಿದ ಆರಂಭದಲ್ಲೇ ದ್ವೇಷ ರಾಜಕಾರಣಕ್ಕೆ ಅವಕಾಶವಿಲ್ಲ, ರೈತರ, ಜನ ಸಾಮಾನ್ಯರ ಹಿತಕ್ಕೆ ಬದ್ಧ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಕರ್ನಾಟಕದ ಅಭಿವೃದ್ಧಿಗಾಗಿ ನೀಡಿದ್ದ 'ವಿಷನ್ 2020' ತಮ್ಮ ಸರ್ಕಾರದ ಆದರ್ಶ, ಪಕ್ಷದ ಚುನಾವಣಾ ಪ್ರಣಾಳಿಕೆಯ ಬುನಾದಿಯೇ ಅದು ಎಂಬುದಾಗಿ ಸ್ಪಷ್ಟ ಪಡಿಸಿದ್ದೀರಿ. ಸಂತೋಷ. ತಮ್ಮ ಈ ನುಡಿಗಳು ಮುಂದಿನ ನಡೆಯಲ್ಲಿ ಪ್ರತಿಫಲಿಸಲಿ ಎಂದು ಹಾರೈಸುತ್ತೇವೆ.

ಈ ಸಂದರ್ಭದಲ್ಲಿ ಯಡಿಯೂರಪ್ಪನವರೇ ಒಂದೆರಡು ಹಳೆ ವಿಚಾರಗಳನ್ನು ನೆನಪಿಗೆ ತರಲೇ ಬೇಕು ಅನ್ನಿಸುತ್ತಿದೆಯಾದ್ದರಿಂದ ಅವುಗಳನ್ನು ಇಲ್ಲಿ ನೆನಪಿಸುತ್ತಿದ್ದೇವೆ.

ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿದ ತಾವು ಮಹಾ ಹಠವಾದಿ. ಹಿಡಿದ ಕೆಲಸವನ್ನು ಪಟ್ಟು ಹಿಡಿದು ಮಾಡಿ ಮುಗಿಸುವ ಛಲಗಾರ ಎಂಬುದು ಎಲ್ಲರಿಗೂ ಗೊತ್ತು.

ಸದಾ ಶ್ವೇತ ವಸ್ತ್ರಧಾರಿಯಾದ ತಾವು ಸಿಟ್ಟಿಗೆ ಹೆಸರಾದ ವ್ಯಕ್ತಿ. ಆದರೆ ಅದು ಸಾತ್ವಿಕ ಸಿಟ್ಟು. ಈ ಸಿಟ್ಟಿನಿಂದಾಗಿ ಹಲವರಿಗೆ ಸಿಡುಕಿನ ವ್ಯಕ್ತಿಯಂತೆ ಕಂಡರೂ, ಆಂತರ್ಯದಲ್ಲಿ ತಮ್ಮದು ಮೃದು ಸ್ವಭಾವ. ಕೃಷಿಕರು, ಬಡವರ ಕಷ್ಟ ಕಂಡರೆ ಬೆಣ್ಣೆಯಂತೆ ಕರಗುವ ಮನಸ್ಸು.

ಹೋರಾಟದ ಜೀವನವನ್ನೇ ನಡೆಸುತ್ತಾ ಬಂದ ತಮಗೆ ಈಗ ಈಗ 64 ವರ್ಷ. (ಹುಟ್ಟಿದ್ದು: 27-2-1943). ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆ ಹುಟ್ಟೂರು. ತಂದೆ ಸಿದ್ಧಲಿಂಗಪ್ಪ. ತಾಯಿ ಪುಟ್ಟತಾಯಮ್ಮ. ಆದರೆ ತಾವು ಬೆಳೆದದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಅದೇ ತಮ್ಮ ಕಾರ್ಯಕ್ಷೇತ್ರವೂ ಆಯಿತು.

ಮುಂದೆ ತಾವು ಕೆಲಸಕ್ಕೆ ಸೇರಿದ್ದ ಸಂಸ್ಥೆಯ ಮಾಲೀಕರ ಪುತ್ರಿ ಮೈತ್ರಾದೇವಿ ಅವರನ್ನು ಕೈ ಹಿಡಿದು ಶಿಕಾರಿಪುರದ ಅಳಿಯನೂ ಆದಿರಿ.

ಇಪ್ಪತ್ತೆರಡರ ತರುಣಾವಸ್ಥೆಯಲ್ಲಿ ತಮ್ಮನ್ನು ಸೆಳೆದದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಅಲ್ಲಿಂದ ಮುಂದೆ ನಿಮ್ಮದು ನಿರಂತರ ಹೋರಾಟ- ಚಳವಳಿಯ ಬದುಕು. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ, ಜೈಲುವಾಸವೂ ಸೇರಿದಂತೆ ಚಳವಳಿ, ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಪಕ್ಷದಲ್ಲಿ ಬಹು ಬೇಗನೇ ಮೇಲಕ್ಕೇರಿದ ತಾವು ಸಮಾಜ - ಸಂಘಟನೆಯಲ್ಲಿ ಕ್ಷಿಪ್ರಗತಿಯಲ್ಲೇ ಮಾನ್ಯತೆ ಪಡೆದಿರಿ.

1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾದ ತಮಗೆ ಎರಡೇ ವರ್ಷದಲ್ಲಿ ಅಧ್ಯಕ್ಷರ ಪಟ್ಟವೂ ಸಿಕ್ಕಿತು. ರಾಜಕೀಯವಾಗಿ ಒಂದೊಂದೇ ಮೆಟ್ಟಿಲು ಏರಿದ ತಾವು 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದಿರಿ.

ರೈತರು, ಬಡವರ ನೋವಿಗೆ ಸ್ಪಂದನೆ, 1983ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಬಿಜೆಪಿ ಹೊರಗಿನಿಂದ ಬೆಂಬಲ ನೀಡಿದಾಗ, ರೈತರ ಸಾಲ ಮನ್ನಾ ಮಾಡುವಲ್ಲಿ ನೀವು ವಹಿಸಿದ್ದ ಶ್ರಮ ಮರೆಯಲಾಗದಂತಹವುದು.

ಯಡಿಯೂರಪ್ಪನವರೇ, ಬಿಜೆಪಿ- ಜನತಾದಳ (ಎಸ್) ಮೈತ್ರಿ ಕುದುರಿ, ಅಸ್ತಿತ್ವಕ್ಕೆ ಬಂದ ಎಚ್. ಡಿ. ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಖಾತೆ ಹೊಣೆ ಹೊತ್ತಾಗ ಕೃಷಿಕರಿಗೆ ಶೇ.4 ಬಡ್ಡಿ ದರದಲ್ಲಿ ಸಾಲ ಯೋಜನೆ ಜಾರಿಗೆ ತಂದ ಹೆಗ್ಗಳಿಕೆ ನಿಮ್ಮದೇ.
ಈ ಯೋಜನೆಗೆ ರಿಸರ್ವ್ ಬ್ಯಾಂಕ್, ನಬಾರ್ಡ್ ಸೇರಿದಂತೆ ಬಹುತೇಕ ಕಡೆಗಳಿಂದ ಪ್ರಬಲ ವಿರೋಧ ವ್ಯಕ್ತವಾದರೂ ಅದ್ಯಾವುದಕ್ಕೂ ಹೆದರದೆ ತರಾತುರಿಯಲ್ಲಿ ಸರ್ಕಾರಿ ಆದೇಶ ಹೊರಡಿಸಿದಿರಿ.

ಜೊತೆಗೇ ರೈತರ ಸಾಲ ಮನ್ನಾ ಮಾಡಬೇಕೆಂಬ ಮಿತ್ರ ಪಕ್ಷ ಜೆಡಿಎಸ್ ಒತ್ತಡಕ್ಕೂ ಮಣಿದು ಸಾಲ ಮನ್ನಾ ಯೋಜನೆಗೆ ಹಸಿರು ನಿಶಾನೆ ತೋರಿದಿರಿ. ರೈತರ ಜೀವ ನಾಡಿಗಳಾದ ಭಾರತೀಯ ಗೋವುಗಳ ಸಂರಕ್ಷಣೆಗೆ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಜನ ಜಾಗೃತಿ ಚಳವಳಿ ಆರಂಭಿಸಿದಾಗ ಟೀಕೆಗಳಿಗೆ ಜಗ್ಗದೆ ಮುಂಗಡ ಪತ್ರದಲ್ಲೇ ಗೋ ಸಂರಕ್ಷಣೆ ಕಾರ್ಯಕ್ಕೆ, ವಿಶ್ವ ಗೋ ಸಮ್ಮೇಳನಕ್ಕೆ ತಾವು ಹಣಕಾಸು ಒದಗಿಸಿದ್ದು ಸಣ್ಣ ಕೆಲಸವೇನಲ್ಲ.

ಜೀತಮುಕ್ತರ ಪರ ತಿಂಗಳುಗಟ್ಟಲೆ ಹೋರಾಟ, ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ಮಾಡಿ ಪರಿಹಾರ ಕೊಡಿಸಿದ್ದು, ಸಿ ಮತ್ತು ಡಿ ವರ್ಗದ ಜಮೀನನ್ನು ರೈತರಿಂದ ಕಸಿದು ಅರಣ್ಯ ಇಲಾಖೆಗೆ ಕೊಡುವ ಸರ್ಕಾರದ ತೀರ್ಮಾನ ವಿರೋಧಿಸಿ ವಿಧಾನಸಭೆ ಒಳಗೆ, ಹೊರಗೆ ಪ್ರತಿಭಟನೆ ನಡೆಸಿದ್ದು, ಈ ಸಂಬಂಧದ ಮಸೂದೆ ಅಂಗೀಕಾರವಾದಾಗ ಸದನದಲ್ಲಿ ಅತ್ತದ್ದು ಇವೆಲ್ಲ ಇತಿಹಾಸ. ತಮ್ಮ ಕಣ್ಣೀರಿಗೆ ಕರಗಿ ಸರ್ಕಾರ ಮಸೂದೆಯನ್ನೇ ಹಿಂದಕ್ಕೆ ಪಡೆದಿತ್ತು ಎಂಬುದು ಮರೆತು ಹೋಗುವ ವಿಚಾರವಲ್ಲ.

ತಮ್ಮ ಹೋರಾಟಗಳನ್ನು ಪಟ್ಟಿ ಮಾಡಿದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತದೆ. ಒಂದಲ್ಲ, ಎರಡಲ್ಲ, ನೂರಾರು. ಐದು ವರ್ಷಗಳ ಹಿಂದೆ ಬಗರ್ ಹುಕುಂ ಸಾಗುವಳಿದಾರರ ಪರ ಒಂದು ವಾರ ಅಹೋರಾತ್ರಿ ಧರಣಿ ಮಾಡಿದ್ದು, ಕಾವೇರಿಯೇ ಆಗಲಿ ಅಥವಾ ಕೃಷ್ಣೆಯೇ ಇರಲಿ ನದಿ ನೀರಿನ ಹಂಚಿಕೆ ವಿವಾದ ಎದುರಾದಾಗ ದನಿ ಎತ್ತಿದ್ದು, ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕರೀಂಲಾಲ್ ತೆಲಗಿಯ ಛಾಪಾ ಕಾಗದ ಹಗರಣದ ವಿವರಗಳನ್ನು ಜೀವದ ಹಂಗು ತೊರೆದು ಬಯಲು ಮಾಡಿದ್ದು ನಿಮ್ಮ ಛಲ ಬಿಡದ ಹೋರಾಟಕ್ಕೆ ಸಾಕ್ಷಿ.

ಆರು ಸಲ ವಿಧಾನಸಭೆ, ಒಂದು ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಿರುವ ತಾವು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷಕ್ಕೆ ಭದ್ರ ನೆಲೆ ಒದಗಿಸಿದವರು. ವಿರೋಧ ಪಕ್ಷದ ನಾಯಕರಾಗಿ ಲೆಕವಿಲ್ಲದಷ್ಟು ಬಾರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರು.

ಶಿವಮೊಗ್ಗ ಜಿಲ್ಲೆಯ ಸೋಗಾನೆ ಬಳಿ ವಿಮಾನ ನಿಲ್ದಾಣಕ್ಕೆ ಸ್ವಾಧೀನ ಮಾಡಿಕೊಂಡ ಜಮೀನಿಗೆ ಕೆಲವೇ ವಾರಗಳಲ್ಲಿ ಪರಿಹಾರ ವಿತರಿಸಿ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದವರು ತಾವೇ ಅಲ್ಲವೇ?

ಇದೇ ವಿಮಾನ ನಿಲ್ದಾಣ ಯೋಜನೆಯಿಂದ ನೆಲೆ ಕಳೆದುಕೊಂಡ ಬಗರ್ ಹುಕುಂ ರೈತರಿಗೂ ನಿರೀಕ್ಷೆ ಮೀರಿ ಪರಿಹಾರ ಕೊಟ್ಟು ಹೊಸ ಪರಂಪರೆಯನ್ನೇ ಹುಟ್ಟು ಹಾಕಿದ ಹೆಗ್ಗಳಿಕೆ ತಮ್ಮದೇ.
ಜನತಾದಳದ ಜೊತೆಗಿನ ಮೈತ್ರಿ ಮುರಿದುಹೋಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ಮುಂದುವರೆಯಲಾಗದೇ ಹೋದಾಗ ಛಲ ಬಿಡದ ತ್ರಿವಿಕ್ರಮನಂತೆ ರಾಜ್ಯವ್ಯಾಪಿ ಸಂಚಾರ, ಪ್ರಚಾರ ಮಾಡಿ ಪಕ್ಷವು ಮತ್ತೆ ಬಹುತೇಕ ಸ್ವಂತ ಬಲದ ಮೇಲೆ ಸರ್ಕಾರ ಸ್ಥಾಪಿಸುವಂತೆ ಮಾಡಿದ್ದೂ ನಿಮ್ಮ ಸಾಧನೆಗಳ ಪಟ್ಟಿಗೆ ಸೇರುವ ವಿಚಾರವೇ.

ಇಂತಹ ಹೊತ್ತಿನಲ್ಲಿ ನಿಮ್ಮ ಜೊತೆಗೆ ಸಹಕರಿಸಿದ ಇತರ ಎಲ್ಲ ನಾಯಕರು, ಬೆನ್ನುಲುಬಾಗಿ ದುಡಿದ ಕಾರ್ಯಕರ್ತರ ಶ್ರಮವೂ ಸಣ್ಣದೇನಲ್ಲ. ಅವರೆಲ್ಲರ ಸಂಘಟಿತ ಯತ್ನದ ಫಲವಾಗಿಯೇ ಪಕ್ಷಕ್ಕೆ ಇಂದು ದಕ್ಷಿಣ ಭಾರತದಲ್ಲಿ ಅಧಿಕಾರದ ಹೆಬ್ಬಾಗಿಲು ತೆರೆಯಲು ಸಾಧ್ಯವಾಗಿದೆ ಎಂಬುದು ಮರೆಯಲಾಗದ, ಮರೆಯಬಾರದ ಸತ್ಯ.

ರಾಜ್ಯದಲ್ಲಿ ಹೊಸ ಶಕೆ ಆರಂಭಿಸಿರುವ ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ಓಟು ಕೊಟ್ಟ ಮತದಾರರನ್ನು, ವಿಶೇಷವಾಗಿ ಪಕ್ಷವನ್ನು ಮೇಲಕ್ಕೆ ಎತ್ತಿರುವ ರೈತ ಸಮುದಾಯವನ್ನು ಮರೆಯದೆ ಅವರ ಏಳಿಗೆಗಾಗಿ ದುಡಿಯುವ ಅಗತ್ಯವಿದೆ. ಕೃಷಿಕರ, ಅವರ ಒಡನಾಡಿ ಗೋವುಗಳ ಸಂಕಷ್ಟಗಳನ್ನು ನಿವಾರಿಸಲು ಕಾಯಾ-ವಾಚಾ- ಮನಸಾ ಶ್ರಮಿಸುವ ಅಗತ್ಯವಿದೆ. ರೈತರ ಆತ್ಮಹತ್ಯೆ, ಗೋವುಗಳ ಹತ್ಯೆಗೊಂದು ಇತಿಶ್ರೀ ಹಾಡಬೇಕಾದ ತುರ್ತು ಇದೆ. ಬರಿದಾಗುತ್ತಿರುವ ಭೂಮಿಯ ಒಡಲಿಗೆ ಮಳೆ ನೀರುಕೊಯ್ಲಿನಂತಹ ಸರಳ ವಿಧಾನಗಳ ಮೂಲಕ ಜಲತುಂಬುವ ಜರೂರು ಇದೆ.

ನೆಲ- ಜಲ ಸಮೃದ್ಧಿಯ ಈ ತುರ್ತು ಕರ್ತವ್ಯವನ್ನು ನೆನಪಿಸುತ್ತಾ 'ಪರ್ಯಾಯ' ತಮ್ಮ ನೇತೃತ್ವದ ಹೊಸ ಸರ್ಕಾರವನ್ನು ಅಭಿನಂದಿಸುತ್ತದೆ. ಪೂರ್ಣಾವಧಿ ಬಾಳಲಿ ಎಂದು ಹಾರೈಸುತ್ತದೆ.

No comments:

Advertisement