ಇಂದಿನ ಇತಿಹಾಸ
ಜೂನ್ 5
ಇಂದು ವಿಶ್ವ ಪರಿಸರ ದಿನ. ಜಗ ತಾಪ ಏರಿಕೆಯ ಪರಿಣಾಮವಾಗಿ ವಿಶ್ವದ ಕೋಟ್ಯಂತರ ಜನ ಕುಡಿಯಲು ಹಾಗೂ ಕೃಷಿಗೆ ಯೋಗ್ಯ ನೀರು ಲಭಿಸದೆ ಒದ್ದಾಡಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಎಚ್ಚರಿಸಿತು. ಜಗತಾಪ ಏರಿಕೆಯ ಪರಿಣಾಮವಾಗಿ ಮಂಜುಗಡ್ಡೆ ಮತ್ತು ನೀರ್ಗಲ್ಲುಗಳು ಕರಗುವ ಪರಿಣಾಮವಾಗಿ ಜಗತ್ತಿನಾದ್ಯಂತ ಪ್ರವಾಹಗಳು ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗುವುದು. ಕ್ರಮೇಣ ಹಿಮಾಲಯದ ನದಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವುದು ಎಂದು ಅಧ್ಯಯನ ಎಚ್ಚರಿಕೆ ನೀಡಿತು.
2007: ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳಲ್ಲಿ ಯಾವುದೇ ಪಕ್ಷ ಇಲ್ಲವೇ ಬಣಕ್ಕೆ ಸ್ಪಷ್ಟ ಬಹುಮತ ದೊರೆಯಲಿಲ್ಲ. ಆಡಳಿತಾರೂಢ ಕಾಂಗ್ರೆಸ್ - ಎನ್ಸಿಪಿ ಒಕ್ಕೂಟ ಒಟ್ಟು 19 ಸ್ಥಾನ (ಕಾಂಗ್ರೆಸ್ 16, ಎನ್ಸಿಪಿ 3) ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮರಳಿತು. ಬಿಜೆಪಿ 14 ಸ್ಥಾನ ಪಡೆಯಿತು. ಕರ್ನಾಟಕದ ಉಳ್ಳಾಲ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಯು.ಟಿ. ಖಾದರ್ ಅವರು ಬಿಜೆಪಿಯ ಚಂದ್ರಶೇಖರ ಉಚ್ಚಿಲ ಅವರನ್ನು ಪರಾಭವಗೊಳಿಸಿದರು. ಜೆ.ಡಿ.(ಎಸ್) ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
2007: ಓಮನ್ ಗೆ ಭಾರಿ ಚಂಡಮಾರುತ ಅಪ್ಪಳಿಸಿದ ಪರಿಣಾಮವಾಗಿ ಮಸಿರಾಹ್ ದ್ವೀಪದ ಸಹಸ್ರಾರು ಮಂದಿ ಮನೆ ಮಠ ಬಿಟ್ಟು ಓಡಿದರು.
2007: ಜಗ ತಾಪ ಏರಿಕೆಯ ಪರಿಣಾಮವಾಗಿ ವಿಶ್ವದ ಕೋಟ್ಯಂತರ ಜನ ಕುಡಿಯಲು ಹಾಗೂ ಕೃಷಿಗೆ ಯೋಗ್ಯ ನೀರು ಲಭಿಸದೆ ಒದ್ದಾಡಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಎಚ್ಚರಿಸಿತು. ಜಗತಾಪ ಏರಿಕೆಯ ಪರಿಣಾಮವಾಗಿ ಮಂಜುಗಡ್ಡೆ ಮತ್ತು ನೀರ್ಗಲ್ಲುಗಳು ಕರಗುವ ಪರಿಣಾಮವಾಗಿ ಜಗತ್ತಿನಾದ್ಯಂತ ಪ್ರವಾಹಗಳು ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗುವುದು. ಕ್ರಮೇಣ ಹಿಮಾಲಯದ ನದಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವುದು ಎಂದು ಅಧ್ಯಯನ ಎಚ್ಚರಿಕೆ ನೀಡಿತು. ಹಿಮಾಲಯದ ನೀರ್ಗಲ್ಲುಗಳಲ್ಲಿ ಈಗಾಗಲೇ ಬಿರುಕು ಕಾಣಿಸಿಕೊಂಡಿದೆ ಎಂದು ಭಾರತೀಯ ಭೂ ಸರ್ವೇಕ್ಷಣಾಲಯ ಇಲಾಖೆ ವರದಿ ಹೇಳಿತು.
2007: ಭಾರತದ ಅತ್ಯಂತ ಪ್ರಾಚೀನ ವಿದ್ಯೆಗಳಲ್ಲಿ ಒಂದಾಗಿರುವ ಯೋಗದ ಆಸನಗಳಿಗೆ ತಾನು ಪೇಟೆಂಟ್ ನೀಡಿಲ್ಲ ಎಂದು ಅಮೆರಿಕ ಸರ್ಕಾರ ಸ್ಪಷ್ಟ ಪಡಿಸಿತು. ಯೋಗದಲ್ಲಿ ಬಳಸುವ ಅನೇಕ ಸಾಧನ, ಸಲಕರಣೆಗಳಿಗೆ ಅಮೆರಿಕದ ಪೇಟೆಂಟ್ ಇಲಾಖೆ ಪೇಟೆಂಟ್ ನೀಡಿದೆ. ಆದರೆ ಇದರಲ್ಲಿ ಯೋಗದ ಆಸನಗಳು ಸೇರಿಲ್ಲ ಎಂದು ನವದೆಹಲಯ ಅಮೆರಿಕ ರಾಯಭಾರ ಕಚೇರಿ ಸ್ಪಷ್ಟ ಪಡಿಸಿತು.
2007: ಲಖನೌನ ದಿನಗೂಲಿ ನೌಕರನೊಬ್ಬನ ಪುತ್ರಿ ಏಳೂವರೆ ವರ್ಷದ (ಜನನ: 2000) ಸುಷ್ಮಾ ವರ್ಮ ಉತ್ತರ ಪ್ರದೇಶ ಹೈಸ್ಕೂಲ್ ಪರೀಕ್ಷಾ ಮಂಡಳಿಯಿಂದ ಹತ್ತನೇ ತರಗತಿ ಪರೀಕ್ಷೆ ಉತ್ತೀರ್ಣಳಾದುದಕ್ಕೆ ಸರ್ಟಿಫಿಕೇಟ್ ಪಡೆಯುವ ಮೂಲಕ ಭಾರತದ ಅತ್ಯಂತ ಕಿರಿಯ `ಮೆಟ್ರಿಕ್ಯುಲೇಟ್' ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಅಕೆ 600ರಲ್ಲಿ 354 ಅಂಕಗಳನ್ನು ಪಡೆದಳು.
2006: ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರು ಆನಂದ್ ನ ಗ್ರಾಮೀಣ ನಿರ್ವಹಣಾ ಸಂಸ್ಥೆ (ಐಆರ್ಎಂಎ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಸತತ 30 ವರ್ಷಗಳಿಂದ ಈ ಹುದ್ದೆ ನಿಭಾಯಿಸಿದ ಅವರು ತಮ್ಮ ವಿರುದ್ಧ ಹೆಚ್ಚುತ್ತಿರುವ ಅತೃಪ್ತಿಯನ್ನು ಅನುಸರಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದರು.
2006: ಹಿರಿಯ ಪತ್ರಕರ್ತ ಹುಬ್ಬಳ್ಳಿಯ ಸುರೇಂದ್ರ ದಾನಿ ಅವರು 2005ರ ಸಾಲಿನ ಪ್ರತಿಷ್ಠಿತ ಟಿಯೆಸ್ಸಾರ್ ಪ್ರಶಸ್ತಿಗೆ ಆಯ್ಕೆಯಾದರು.
2006: ಮಾದಕ ದ್ರವ್ಯ ಸೇವನೆ ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ದಿವಂಗತ ಪ್ರಮೋದ ಮಹಾಜನ್ ಪುತ್ರ ರಾಹುಲ್ ಮಹಾಜನ್ ಅವರನ್ನು ಪೊಲೀಸರು ಬಂಧಿಸಿದರು.
2006: ಅಮೀರ್ ಖಾನ್ ನಟಿಸಿದ `ಫನಾ' ಚಿತ್ರವನ್ನು ಗುಜರಾತಿನ ಚಿತ್ರಮಂದಿರಗಳಲ್ಲಿ ಶಾಂತಿಯುತವಾಗಿ ಪ್ರದರ್ಶಿಸುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಚಿತ್ರ ನಿರ್ಮಾಪಕ ಮಹೇಶ ಭಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ನ್ಯಾಯಮೂರ್ತಿ ಸಿ.ಕೆ. ಥಕ್ಕರ್ ಅವರನ್ನು ಒಳಗೊಂಡ ರಜಾಕಾಲೀನ ಪೀಠವು ಅರ್ಜಿಯನ್ನು ತಿರಸ್ಕರಿಸಿ `ಚಿತ್ರ ಮಂದಿರಗಳ ಮಾಲೀಕರು ಚಿತ್ರ ಪ್ರದರ್ಶಿಸಲು ಬಯಸುವುದಾದರೆ ಪೊಲೀಸ್ ರಕ್ಷಣೆ ಕೇಳಬಹುದು' ಎಂದು ಹೇಳಿತು.
1995: ಅಸ್ಸಾಂನಿಂದ ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ಆಯ್ಕೆಯಾದರು.
1989: ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ.
1984: ಪಂಜಾಬಿನ ಅಮೃತಸರ ಸರ್ಣಮಂದಿರದಲ್ಲಿ ಸೇರಿಕೊಂಡಿದ್ದ ಉಗ್ರಗಾಮಿಗಳ ವಿರುದ್ಧ `ಆಪರೇಷನ್ ಬ್ಲೂಸ್ಟಾರ್' ಕಾರ್ಯಾಚರಣೆ ನಡೆಸಲಾಯಿತು.
1968: ಲಾಸ್ ಏಂಜೆಲಿಸ್ ಅಂಬಾಸಿಡರ್ ಹೊಟೇಲಿನಿಂದ ಹೊರ ಹೊರಟಿದ್ದ ಅಮೆರಿಕದ ಸೆನೆಟರ್ ರಾಬರ್ಟ್ ಕೆನಡಿ ಅವರಿಗೆ ಪ್ಯಾಲೆಸ್ತೀನಿ ವಲಸೆಗಾರ ಸಿರ್ ಹಾನ್ ಬಿಶಾರ ಸಿರ್ ಹಾನ್ ಎಂಬಾತ ಗುಂಡು ಹಾರಿಸಿದ. ಕೆನಡಿ ಮರುದಿನ ಅಸುನೀಗಿದರು.
1952: ಸಾಹಿತಿ ಮಲ್ಲೇಪುರಂ ವೆಂಕಟೇಶ್ ಜನನ.
1947: ಜಾನಪದ ಗಾರುಡಿಗ ಎಸ್. ಕೆ. ಕರೀಂಖಾನ್ ಅವರ ಪ್ರಭಾವದಿಂದ ಜಾನಪದ ಗೀತೆಗಳ ಗಾಯನ ಮೈಗೂಡಿಸಿಕೊಂಡ ಗಾಯಕ ವೈ.ಕೆ. ಮುದ್ದುಕೃಷ್ಣ ಅವರು ತಂದೆ ಕೃಷ್ಣೇಗೌಡ- ತಾಯಿ ಕೆಂಚಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಯಡಕೆರೆಯಲ್ಲಿ ಜನಿಸಿದರು.
1939: ಚಾರ್ಲ್ಸ್ ಜೋಸೆಫ್ ಕ್ಲಾರ್ಕ್ ಜನ್ಮದಿನ. ಇವರು 1979ರಲ್ಲಿ ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾದರು.
1935: ಸಾಹಿತಿ ಸೂ. ಸುಬ್ರಹ್ಮಣ್ಯಂ ಜನನ.
1932: ಸಾಹಿತಿ ನೀಳಾದೇವಿ ಜನನ.
1916: ಬ್ರಿಟಿಷ್ ಫೀಲ್ಡ್ ಮಾರ್ಷಲ್ ಹಾಗೂ ಸಮರ ಸಂಬಂಧಿ ವಿದೇಶಾಂಗ ಕಾರ್ಯದರ್ಶಿ ವಿಸ್ಕೌಂಟ್ ಕಿಚ್ನರ್ ಸಮುದ್ರದಲ್ಲಿ ಮುಳುಗಿ ಅಸುನೀಗಿದರು. ಅವರು ಕುಳಿತಿದ್ದ ಎಚ್ಎಂಎಸ್ ಹ್ಯಾಂಪ್ ಶೈರ್ ನೌಕೆಯು ರಷ್ಯದತ್ತ ಹೊರಟಿದ್ದಾಗ ಜರ್ಮನಿಯ ಸ್ಫೋಟಕವೊಂದಕ್ಕೆ ಡಿಕ್ಕಿ ಹೊಡೆದು ಸ್ಕಾಟ್ ಲ್ಯಾಂಡ್ಗೆ ಸೇರಿದ ಆರ್ಕ್ನೀ ದ್ವೀಪದ ಬಳಿ ಸಮುದದಲ್ಲಿ ಮುಳುಗಿದ್ದರಿಂದ ಈ ದುರ್ಘಟನೆ ಸಂಭವಿಸಿತು.
1903: ಸಾಹಿತಿ ಸೀತಾದೇವಿ ಪಡುಕೋಣೆ ಜನನ.
1894: ರಾಯ್ ಹರ್ಬರ್ಟ್ ಥಾಮ್ಸನ್ (1894-1976) ಜನ್ಮದಿನ. ಕೆನಡಾ ಸಂಜಾತ ಬ್ರಿಟಿಷ್ ಮುದ್ರಕನಾದ ಈತ `ದಿ ಟೈಮ್ಸ್ ಆಫ್ ಲಂಡನ್' ಮತ್ತು ಇತರ ವೃತ್ತ ಪತ್ರಿಕೆಗಳು ಮತ್ತು ಸಂಪರ್ಕ ಮಾಧ್ಯಮಗಳ ಸಂಸ್ಥೆಯ ಮಾಲೀಕ.
1891: ಆಯುರ್ವೇದ, ಯೋಗಶಾಸ್ತ್ರ, ಸಂಗೀತ, ತತ್ವಜ್ಞಾನ, ಶಿಕ್ಷಣ, ಸಾಹಿತ್ಯ, ರಾಜಕಾರಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದುಡಿದ ಪಂಡಿತ ತಾರಾನಾಥ (5-6-1891ರಿಂದ 30-10-1942) ಅವರು ರಂಗರಾಯರು-ರಾಜೀವಮ್ಮ ದಂಪತಿಯ ಪುತ್ರನಾಗಿ ಮಂಗಳೂರಿನಲ್ಲಿ ಈದಿನ ಜನಿಸಿದರು.
1879: ನಾರಾಯಣ ಮಲ್ಹಾರ್ ಜೋಷಿ (1879-1955) ಜನ್ಮದಿನ. ಇವರು ಭಾರತೀಯ ಟ್ರೇಡ್ ಯೂನಿಯನ್ ಚಳವಳಿಯ ಪಿತಾಮಹ.
1819: ಬ್ರಿಟಿಷ್ ಗಣಿತಜ್ಞ ಹಾಗೂ ಖಗೋಳ ವಿಜ್ಞಾನಿ ಜಾನ್ ಕೌಚ್ ಆಡಮ್ಸ್ (1819-1992) ಜನ್ಮದಿನ. ನೆಪ್ಚೂನ್ ಗ್ರಹವನ್ನು ಕಂಡು ಹಿಡಿದ ಇಬ್ಬರು ವಿಜ್ಞಾನಿಗಳಲ್ಲಿ ಒಬ್ಬ ಈ ವ್ಯಕ್ತಿ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment