Traditional
paddy seed:
Give a Ring
Bhatta Utsava is being held at Banavasi of Uttara Kannada district on 7 and 8th of June 2008 to awaken people to protect traditional seeds of paddy. At the same time Dr. Mohan Talakalukoppa, a scientist from Kodagu has appealed people to give a ring to Agricultural Research Centre, Ponnampet, Kodagu to save traditional seeds of paddy. Here is the small write up by Nethrakere Udaya Shankara, based on the letter published in 'Adike Pathrike'
ಭತ್ತದ ತಳಿ ಉಂಟಾ:
ಒಂದು 'ಕರೆ' ಮಾಡಿ...!
ಬನವಾಸಿಯಲ್ಲಿ 'ಭತ್ತ ಉತ್ಸವ' ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಕೊಡಗಿನ ಪೊನ್ನಂಪೇಟೆಯ ಕೃಷಿ ವಿಜ್ಞಾನಿ ಡಾ. ಮೋಹನ ತಲಕಾಲುಕೊಪ್ಪ ಭತ್ತ ತಳಿ ಪ್ರಿಯರಿಗೆ ಒಂದು ಅಪ್ಯಾಯ ಮಾನ ಮನವಿ ಮಾಡುತ್ತಿದ್ದಾರೆ. ನಿಮ್ಮಲ್ಲಿ ಪರಂಪರಾಗತ ಭತ್ತ ತಳಿ ಇದ್ದರೆ ನಮಗೊಂದು 'ರಿಂಗ್' ಕೊಡಿ, ನಿಮ್ಮ ಭತ್ತದ ತಳಿ ನಿಮ್ಮ ಹೆಸರಿನಲ್ಲೇ ಉಳಿಯುತ್ತದೆ ಎನ್ನುತ್ತಿದ್ದಾರೆ.. ಸ್ವಲ್ಪ ಇತ್ತ ಗಮನಿಸುತ್ತೀರಾ?
ನೆತ್ರಕೆರೆ ಉದಯಶಂಕರ
ಉತ್ತರ ಕನ್ನಡದ ಬನವಾಸಿಯಲ್ಲಿ ಜೂನ್ 7 ಮತ್ತು 8ರಂದು ಭತ್ತ ಉತ್ಸವ ನಡೆಯುತ್ತಿದೆ. ಸಹಜ ಸಮೃದ್ಧ ಸಂಸ್ಥೆಯು ಇತರ ಸಂಸ್ಥೆಗಳ ಜೊತೆಗೂಡಿ ಭತ್ತದ ಪರಂಪರಾಗತ ವೈವಿಧ್ಯಮಯ ತಳಿಗಳ ಉಳಿವಿಗಾಗಿ ಈ ಭತ್ತ ಉತ್ಸವವನ್ನು ಸಂಘಟಿಸಿದೆ (ವಿವರ: 'ಪರ್ಯಾಯ'ದ 'ಮಾಸದ ರಾಶಿ'ಯಲ್ಲಿ ಅಗ್ರಿಕಲ್ಚರ್ ವಿಭಾಗ ಗಮನಿಸಿ).
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಅಗ್ರಗಣ್ಯ 'ಅಡಿಕೆ ಪತ್ರಿಕೆ'ಯಲ್ಲಿ ಪ್ರಕಟವಾದ ಕೃಷಿ ವಿಜ್ಞಾನಿಯೊಬ್ಬರ ಪತ್ರ ನನ್ನ ಗಮನ ಸೆಳೆಯಿತು.
ಈ ವಿಜ್ಞಾನಿಯ ಹೆಸರು: ಡಾ. ಮೋಹನ ತಲಕಾಲುಕೊಪ್ಪ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಭತ್ತ ತಳಿ ವಿಜ್ಞಾನಿ.
'ಭತ್ತದ ತಳಿ ಉಳಿಸಲು ಕೈಜೋಡಿಸಿ' ಎಂಬ ಮನವಿಯೊಂದಿಗೆ ಇವರು ಅಡಿಕೆ ಪತ್ರಿಕೆಗೆ ಬರೆದಿದ್ದ ಪತ್ರವನ್ನು ಪತ್ರಿಕೆ ಯಥಾವತ್ ಪ್ರಕಟಿಸಿದೆ. ಭತ್ತ ಉತ್ಸವದ ಸಂದರ್ಭದಲ್ಲಿ ಓದುಗರಿಗೆ ಅವರ ಕಳಕಳಿಯ ಪರಿಚಯ ಆಗುವುದು ಮೇಲು ಎಂಬ ಉದ್ದೇಶದಿಂದ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಈ ಮಾಹಿತಿಯನ್ನು 'ಪರ್ಯಾಯ' ಇಲ್ಲಿ ಪ್ರಕಟಿಸುತ್ತಿದೆ.
'ಸುಧಾರಿತ ತಳಿಗಳ ಭರಾಟೆಯಲ್ಲಿ ಹಳೆ ತಳಿಗಳು ಕಣ್ಮರೆಯಾಗಿವೆ. ಬೀಜ ಇಟ್ಟುಕೊಳ್ಳಬೇಕಾದ ರೈತರೇ ಹಳೆ ತಳಿ ಕೇಳಿಕೊಂಡು ಗಿರಣಿಗೆ ಬರುವುದಿದೆ. ಆದರೆ ಅವು ನಮ್ಮಲ್ಲೆಲ್ಲಿ ಸಿಗಬೇಕು?' ಎಂಬುದಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಕಿ ಗಿರಣಿ ಮಾಲೀಕರೊಬ್ಬರು ಕೇಳಿದ ಕಳಕಳಿಯ ಪ್ರಶ್ನೆಯೊಂದಿಗೆ ಡಾ. ಮೋಹನ ತಮ್ಮ ಈ ಪತ್ರವನ್ನು ಆರಂಭಿಸಿದ್ದಾರೆ.
ಹೌದು, ಇದು ಇಂದು ಜ್ವಲಂತ ಪ್ರಶ್ನೆಯೇ. ಪಶ್ಚಿಮ ಘಟ್ಟದ ಜೀವ ವೈವಿಧ್ಯ ಉಳಿಸುವ, ಬೆಳೆಸುವ, ಸುಸ್ಥಿರವಾಗಿ ಬಳಸುವ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು, ವ್ಯಕ್ತಿಗಳು ಕಾರ್ಯ ನಿರತರಾಗಿದ್ದಾರೆ. ಆದರೆ ಈ ಎಲ್ಲ ಯತ್ನಗಳ ಮಧ್ಯೆ ಅತ್ಯಮೂಲ್ಯವಾದ ಕೃಷಿ ವೈವಿಧ್ಯವನ್ನೇ ಮರೆಯುತ್ತಿರುವ ದುರಂತದ ಸ್ಥಿತಿ ನಮ್ಮದು.
ಪಶ್ಚಿಮ ಘಟ್ಟದ ಮುಖ್ಯ ಬೆಳೆ ಭತ್ತ. ಸಹಸ್ರಾರು ವರ್ಷಗಳಿಂದ ಇಲ್ಲಿನ ರೈತರು ಹಲವಾರು ತಳಿಗಳನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ನೀರಾವರಿ ಪ್ರದೇಶಗಳಲ್ಲಿ ಬರುವಷ್ಟು ಇಳುವರಿಯನ್ನು ಈ ತಳಿಗಳು ನೀಡದೇ ಇದ್ದರೂ ರೋಗ/ ಕೀಟ ನಿರೋಧಕತೆ, ರುಚಿ, ವಿಶಿಷ್ಟ ಗುಣ ಹಾಗೂ ಸಾಂಸ್ಕೃತಿಕ ಕಾರಣಗಳಿಗಾಗಿ ಈ ರೈತ ಅನ್ವೇಷಿತ ತಳಿಗಳು ಇನ್ನೂ ಅಲ್ಪ ಸ್ವಲ್ಪ ಉಳಿದಿವೆ. ಇಲ್ಲಿ ಇರುವಷ್ಟು ತಳಿ ವೈವಿಧ್ಯ ರಾಜ್ಯದಲ್ಲಿ ಬೇರೆಲ್ಲೂ ಇಲ್ಲ ಎಂಬುದು ಗಮನಿಸಬೇಕಾದ ಅಂಶ. ಜಾಗತಿಕ ಮಟ್ಟದಲ್ಲೂ ಇದು ಈ ಪ್ರದೇಶದ ಅನನ್ಯ ಕೊಡುಗೆ ಎಂದರೆ ತಪ್ಪೇನಲ್ಲ.
ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಭತ್ತದ ಕೃಷಿ ಸೋತಿದೆ. ಭತ್ತದ ತನ್ನ ಜಾಗವನ್ನು ಬಾಳೆ, ತೆಂಗು, ಕಾಫಿ, ಶುಂಠಿ ಇತ್ಯಾದಿಗಳಿಗೆ ಬಿಟ್ಟುಕೊಟ್ಟಿದೆ. ಭತ್ತ ಬೆಳೆಯಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಹೈಬ್ರಿಡ್/ ಸುಧಾರಿತ ತಳಿಗಳ ಆಗಮನವಾಗಿದೆ. ಇದರಿಂದಾಗಿ ಈಗಾಗಲೇ ಹಲವಾರು ಹಳೆ ತಳಿಗಳು ಶಾಶ್ವತವಾಗಿ ಇಲ್ಲವಾಗಿವೆ. ಅಕ್ಕಿಯ ಬೆಲೆ ಏರಿದೆ. ನಮ್ಮ ಆಹಾರ ಸುರಕ್ಷತೆಗೆ ಸಂಚಕಾರ ಬಂದಿದೆ.
ಹಾಗಾದರೆ ಇದಕ್ಕೆ ಪರಿಹಾರ ಏನು?
ತಳಿ ವೈವಿಧ್ಯ ಉಳಿಸುವುದೊಂದೇ ಇದಕ್ಕೆ ಪರಿಹಾರ. ಪಶ್ಚಿಮ ಘಟ್ಟದ ಕೆಲವೆಡೆಗಳಲ್ಲಿ ಈ ವೈವಿಧ್ಯ ಸಂರಕ್ಷಿಸುವ ಕಾರ್ಯ ನಡೆದಿದೆ. ಅಲ್ಲಲ್ಲಿ ಬೀಜ ಬ್ಯಾಂಕುಗಳೂ ತಲೆ ಎತ್ತಿವೆ.
ಇಂತಹ ಪ್ರಯತ್ನ ಪಶ್ಚಿಮ ಘಟ್ಟ ಪ್ರದೇಶದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಬೆಳಗಾವಿ ಈ ಎಂಟು ಜಿಲ್ಲೆಗಳ 21 ತಾಲ್ಲೂಕುಗಳ ಇತರ ಹಳ್ಳಿಗಳಲ್ಲೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಕೃಷಿ ಸಂಶೋಧನಾ ಕೇಂದ್ರ ಕಾರ್ಯ ನಿರತವಾಗಿದೆ ಎಂದು ಹೇಳುತ್ತಾರೆ ಡಾ. ಮೋಹನ ತಲಕಾಲುಕೊಪ್ಪ.
ಕೇಂದ್ರವು ಮೊದಲ ಹಂತದಲ್ಲಿ ಮಲೆನಾಡಿನ ಎಲ್ಲ 21 ತಾಲ್ಲೂಕುಗಳಿಂದ ಭತ್ತ ತಳಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಗೊಂಡಿದೆ. ಎರಡನೇ ಹಂತದಲ್ಲಿ ಸಮಾನ ಮನಸ್ಕ ಸಂಸ್ಥೆ/ ವ್ಯಕ್ತಿಗಳೊಡನೆ ಸೇರಿ ಎಲ್ಲೆಡೆ, ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆಯ ಕಾರ್ಯಕ್ಕೆ ಕೈಹಾಕಿದೆ.
ಬೆಳೆಯ ಬಯಸುವ ರೈತರಿಗೆ ಹಳೆ ತಳಿ ಸಿಗದಂತಹ ಪರಿಸ್ಥಿತಿ ಉಂಟಾಗಬಾರದು ಎಂಬುದು ಕೇಂದ್ರದ ಆಶಯ ಎನ್ನುತ್ತಾರೆ ತಲಕಾಲುಕೊಪ್ಪ.
ಈ ದೃಷ್ಟಿಯಿಂದ ಎಲ್ಲ ಕೃಷಿಕರು, ಕೃಷಿ ಅಧಿಕಾರಿಗಳು, ಕೃಷಿ ಪತ್ರಕರ್ತರು, ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಜೀವ ವೈವಿಧ್ಯದಲ್ಲಿ ಆಸಕ್ತಿ ಇರುವ ಎಲ್ಲರನ್ನೂ ಸಂಪರ್ಕಿಸುವ ಯತ್ನವನ್ನು ಕೇಂದ್ರ ಮಾಡುತ್ತಿದೆ.
'ನಿಮ್ಮಲ್ಲಿ ಇರುವ ಭತ್ತ ತಳಿಗಳ ಬಗ್ಗೆ ಮಾಹಿತಿ ನೀಡಿ. ಕರಾವಳಿ/ ರಾಜ್ಯದ ಇತರ ಒಣ ಪ್ರದೇಶದವರಾಗಿದ್ದರೂ ಸರಿ ನಿಮ್ಮಲ್ಲಿರುವ ಮಾಹಿತಿ ನೀಡಬಹುದು. ನಾವು ಅದನ್ನು ಸಂಗ್ರಹಿಸಿ ಬಹುಕಾಲದವರೆಗೆ ಕಾಪಿಡುವ ಕೆಲವ ಮಾಡುತ್ತೇವೆ' ಎಂಬುದು ಡಾ. ಮೋಹನ ಅವರ ಮನವಿ.
ಈಗಾಗಲೇ ಕೇಂದ್ರವು ಸುಮಾರು 200 ರೈತ ತಳಿಗಳನ್ನು ಸಂಗ್ರಹಿಸಿ ಇಟ್ಟಿದೆ. ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲು ಇದು ಅನುಕೂಲವಾಗಲಿದೆ. ರೈತರು ಯಾವುದೇ ಬೀಜದ ತಳಿ ಬೇಕೆನಿಸಿದಾಗ ಇಲ್ಲಿ ಅದನ್ನು ಪೂರೈಸುವ ವ್ಯವಸ್ಥೆ ಇದೆ ಎಂದು ಮೋಹನ್ ವಿವರಿಸುತ್ತಾರೆ.
ಈ ರೀತಿ ಸಂಗ್ರಹಿಸಿದಾಗ ವಿದೇಶೀಯರು ಇಲ್ಲವೇ ಬೀಜ ಕಂಪೆನಿಗಳು ದುರುಪಯೋಗ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಕೆಲವರ ಮನಸ್ಸಿನಲ್ಲಾದರೂ ಮೂಡದೇ ಇರದು.
'ನಾವು ವಿಶಿಷ್ಟ ತಳಿಗಳನ್ನು ಪೂರ್ಣ ಮಾಹಿತಿಯೊಂದಿಗೆ ಬೆಳೆದ ರೈತರ ಹೆಸರಿನಲ್ಲಿಯೇ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಣಾ ಸಂಸ್ಥೆಯಲ್ಲಿ (ಪ್ಲಾಂಟ್ ವೆರೈಟಿ ಪ್ರೊಟೆಕ್ಷನ್ ಅಥಾರಿಟಿ, ನವದೆಹಲಿ) ನೋಂದಾಯಿಸುತ್ತೇವೆ. ಇದರಿಂದ ಯಾವ ವಿದೇಶೀಯರಾಗಲೀ, ಬೀಜ ಕಂಪೆನಿಗಳಾಗಲೂ ಇದನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ' ಎಂದು ಡಾ. ಮೋಹನ್ ಸ್ಪಷ್ಟ ಪಡಿಸುತ್ತಾರೆ.
ತಮ್ಮಲ್ಲಿರುವ ವಿಶಿಷ್ಟ ಭತ್ತದ ತಳಿಯನ್ನು ತಮ್ಮ ಹೆಸರಿನಲ್ಲೇ ಸಂರಕ್ಷಿಸಬಯಸುವ ರೈತರು 99022 73468 ಈ ನಂಬರಿಗೆ ಕರೆ ಕೊಡಿ, ಇಲ್ಲವೇ ಮಿಸ್ಡ್ ಕಾಲ್ ಕೊಡಿ ಸಾಕು. ನಾವು ಅವರನ್ನು ಸಂಪರ್ಕಿಸುತ್ತೇವೆ ಎನ್ನುತ್ತಾರೆ ಅವರು.
ಡಾ. ಮೋಹನ ಅವರನ್ನು ಸಂಪರ್ಕಿಸಬಯಸುವವರು ಅವರನ್ನು 'ಡಾ. ಮೋಹನ ತಲಕಾಲುಕೊಪ್ಪ, ಭತ್ತ ತಳಿ ವಿಜ್ಞಾನಿ, ಕೃಷಿ ಸಂಶೋಧನಾ ಕೇಂದ್ರ, ಪೊನ್ನಂಪೇಟೆ, ದಕ್ಷಿಣ ಕೊಡಗು- 571 216 (ದೂರವಾಣಿ: 99022 73468 ಇಲ್ಲವೇ 99862 23568 ವಿಳಾಸದಲ್ಲಿ ಸಂಪರ್ಕಿಸಬಹುದು.
ಅವರ ಮಿಂಚಂಚೆ (ಇ-ಮೇಲ್) ವಿಳಾಸ ಹೀಗಿದೆ: mohangudde@rediffmail.com
No comments:
Post a Comment