Saturday, June 7, 2008

ಇಂದಿನ ಇತಿಹಾಸ History Today ಜೂನ್ 7

ಇಂದಿನ ಇತಿಹಾಸ

ಜೂನ್ 7

ಭಾರತೀಯ ಟೆನಿಸ್ ಆಟಗಾರ ಮಹೇಶ ಭೂಪತಿ ಜನ್ಮದಿನ. ಜಪಾನಿನ ರಿಕಾ ಹಿರಾಕಿ ಜೊತೆ 1999ರಲ್ಲಿ ನಡೆದ ಪಂದ್ಯದಲ್ಲಿ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ ಕ್ರೌನ್ ಗೆದ್ದುಕೊಳ್ಳುವ ಮೂಲಕ ಗ್ರ್ಯಾಂಡ್ ಸ್ಲಾಮ್ ಟೈಟಲನ್ನು ಪಡೆದ ಪ್ರಪ್ರಥಮ ಭಾರತೀಯ ಟೆನಿಸ್ ಆಟಗಾರ ಇವರು.

2007: ಕೊಲ್ಲಿ ರಾಷ್ಟ್ರಗಳಲ್ಲಿ ಅಪರೂಪವಾದ ಚಂಡಮಾರುತ ಓಮನ್ ಮೇಲೆ ಅಪ್ಪಳಿಸಿದ ಪರಿಣಾಮವಾಗಿ ಮೈಸೂರು ಜಿಲ್ಲೆ ಬಿಸಲವಾಡಿ ಗ್ರಾಮದ ರಂಗಸ್ವಾಮಿ ಅಲಿಯಾಸ್ ಪ್ರಕಾಶನ್ (26) ಸೇರಿ 15 ಜನ ಮೃತರಾಗಿ 8 ಭಾರತೀಯರು ಕಣ್ಮರೆಯಾದರು.

2007: ರಾಜಕೀಯ ಪ್ರಭಾವ ಹೊಂದಿದ ಕೆಲವು ವ್ಯಕ್ತಿಗಳು ಬೆಂಗಳೂರಿನ ಅನೇಕ ಕಡೆ 795 ಕೋಟಿ ರೂಪಾಯಿ ಮೌಲ್ಯದ 54.32 ಎಕರೆ ಸರ್ಕಾರಿ ಭೂಮಿ ಕಬಳಿಸಿರುವುದನ್ನು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿ ಒತ್ತುವರಿ ಕುರಿತು ತನಿಖೆ ನಡೆಸಿದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು.

2007: ಹಿಂದಿನ ರಾಣೆ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿದ್ದ ದಿಗಂಬರ ಕಾಮತ್ ಅವರನ್ನು ಗೋವಾದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಆಯ್ಕೆಯ ಕಸರತ್ತು ಈದಿನ ನಡುರಾತ್ರಿ ಕೊನೆಗೊಂಡಿತು.

2007: ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಾದ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗಳಲ್ಲಿ ಸರ್ಚ್ ಎಂಜಿನ್ ಸೇವಾ ಸೌಲಭ್ಯ ಹೊಂದಿರುವ ದೇಶದ ಪ್ರತಿಷ್ಠಿತ ಗುರೂಜಿ ಡಾಟ್ ಕಾಮ್ ಸಂಸ್ಥೆಯು ಕನ್ನಡ ಭಾಷೆಗೂ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿತು.

2007: ಅಸ್ಥಿಮಚ್ಚೆಯ ಕಸಿಗಿಂತ ಹೊಕ್ಕಳಬಳ್ಳಿ ಕಸಿಯಿಂದ ರಕ್ತದ ಕ್ಯಾನ್ಸರ್ ರೋಗಿಗಳು ಬದುಕಿ ಉಳಿಯುವ ಸಾಧ್ಯತೆಗಳು ಹೆಚ್ಚು ಎಂದು ಹ್ಯೂಸ್ಟನ್ ರಕ್ತ ಮತ್ತು ಅಸ್ಥಿ ಮಚ್ಚೆ (ಎಲುವಿನ ಕೊಬ್ಬು) ಕಸಿ ಸಂಶೋಧನಾ ಕೇಂದ್ರದ ಸಂಶೋಧನೆ ಬಹಿರಂಗಪಡಿಸಿತು.

2007: ಅಮೆರಿಕದ ವಿಜ್ಞಾನಿಗಳು ಮಹಿಳೆಯೊಬ್ಬರ ದೇಹದಲ್ಲಿ ಬರ್ಟೊನೆಲ್ಲಾ ರೊಚೆನಿಮೆ ಎಂಬ ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ ಮಾಡಿದರು. ವೈದ್ಯ ವಿಜ್ಞಾನದಲ್ಲಿ ಈ ಬಗೆಯ ಸೂಕ್ಷ್ಮಜೀವಿ ಪತ್ತೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.

2007: ಜಗತ್ತಿನ ಶ್ರೀಮಂತ ರಾಷ್ಟ್ರಗಳು 2050ರ ಹೊತ್ತಿಗೆ ಹಸಿರು ಮನೆಗೆ ಹಾನಿ ಉಂಟು ಮಾಡುವ ಅನಿಲಗಳ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಲು ಬರ್ಲಿನ್ನಿನಲ್ಲಿ ನಡೆದ ಜಿ-8 ರಾಷ್ಟ್ರಗಳ ಸಭೆಯಲ್ಲಿ ನಿರ್ಧರಿಸಿದವು.

2006: ಸುಪ್ರೀಂಕೋರ್ಟಿನಲ್ಲಿ ಮುಖಭಂಗ ಉಂಟು ಮಾಡಿರುವ ನೈಸ್ ಕಂಪೆನಿಗೆ `ಕರ್ನಾಟಕ ಮೂಲ ಸೌಲಭ್ಯ ಅಭಿವೃದ್ಧಿ ವಿಧೇಯಕ' ಮೂಲಕ ತಿರುಗೇಟು ನೀಡಲು ಮತ್ತು ಮಸೂದೆಯನ್ನು ಜೂನ್ 19ರಂದು ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟದ ತುರ್ತು ಸಭೆ ಒಪ್ಪಿಗೆ ನೀಡಿತು.

2006: ರಾಯ್ ಬರೇಲಿ ಕ್ಷೇತ್ರದಿಂದ, ಲೋಕಸಭೆಗೆ ಸೋನಿಯಾ ಗಾಂಧಿ ಆಯ್ಕೆಯನ್ನು ಪ್ರಶ್ನಿಸಿ ಸಂತೋಷಕುಮಾರ್ ಶ್ರೀವಾತ್ಸವ ನೇತೃತ್ವದಲ್ಲಿ ವಾರಣಾಸಿಯ ಹತ್ತು ಜನ ವಕೀಲರು ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದರು. ಸಂವಿಧಾನದ 102 (1) (ಡಿ) ಕಲಂ ಪ್ರಕಾರ ಯಾವುದೇ ವ್ಯಕ್ತಿಯು ವಿದೇಶದೊಂದಿಗೆ ಸಂಬಂಧ ಹೊಂದಿದ್ದರೆ ಅಥವಾ ವಿದೇಶಕ್ಕೆ ನಿಷ್ಠರಾಗಿದ್ದರೆ ಅಂಥವರು ಸಂಸತ್ತಿನ ಯಾವುದೇ ಸದನದ ಸದಸ್ಯರಾಗಿ ಆಯ್ಕೆಯಾಗಲು ಅರ್ಹರಲ್ಲ; ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಕೆಯ ಸಂದರ್ಭ ಇಟಲಿಯಲ್ಲಿ ತಮ್ಮ ಪೂರ್ವಜರ ಮನೆಯೊಂದು ತಮ್ಮ ಹೆಸರಿನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರಿನ್ನೂ ಆ ದೇಶಕ್ಕೆ ಅಂಟಿಕೊಂಡವರು. ಹೀಗಾಗಿ ಅವರ ಆಯ್ಕೆಯನ್ನು ಅನೂರ್ಜಿತ ಗೊಳಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡರು.

1998: ನಲ್ವತ್ತನಾಲ್ಕು ದಶಲಕ್ಷ ಡಾಲರ್ ಸಾಲದೊಂದಿಗೆ ಭಾರತ ವಿಶ್ವಬ್ಯಾಂಕಿನ ಅತಿ ಹೆಚ್ಚು ಸಾಲ ಪಡೆದ ರಾಷ್ಟ್ರಗಳ ಪಟ್ಟಿಗೆ ಸೇರಿತು.

1997: ತಂಜಾವೂರಿನ ದೇವಾಲಯದ ಯಾಗಶಾಲೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 37 ಜನ ಮೃತರಾದರು.

1982: ದಕ್ಷಿಣ ಲೆಬನಾನಿನಲ್ಲಿ ಇರುವ ಪ್ಯಾಲೆಸ್ಟೈನಿನ ಭದ್ರಕೋಟೆ ಬಿವೋಪೋರ್ಟ್ ಕ್ಯಾಸೆಲ್ ನೆಲೆಯನ್ನು ಇಸ್ರೇಲಿ ಪಡೆಗಳು ತಮ್ಮ ಕೈವಶ ಪಡಿಸಿಕೊಂಡವು.

1974: ಭಾರತೀಯ ಟೆನಿಸ್ ಆಟಗಾರ ಮಹೇಶ ಭೂಪತಿ ಜನ್ಮದಿನ. ಜಪಾನಿನ ರಿಕಾ ಹಿರಾಕಿ ಜೊತೆ 1999ರಲ್ಲಿ ನಡೆದ ಪಂದ್ಯದಲ್ಲಿ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ ಕ್ರೌನ್ ಗೆದ್ದುಕೊಳ್ಳುವ ಮೂಲಕ ಗ್ರ್ಯಾಂಡ್ ಸ್ಲಾಮ್ ಟೈಟಲನ್ನು ಪಡೆದ ಪ್ರಪ್ರಥಮ ಭಾರತೀಯ ಟೆನಿಸ್ ಆಟಗಾರ ಇವರು.

1956: ಸಾಹಿತಿ ಬೊಳುವಾರು ಐ.ಕೆ. ಜನನ.

1940: ಪ್ರಾಣಿ, ಪಕ್ಷಿ, ಮರಗಿಡ, ಮಣ್ಣು- ಮುಗಿಲು ಮುಂತಾದ ಪ್ರಕೃತಿಯ ನೈಸರ್ಗಿಕ ದೃಶ್ಯಗಳನ್ನು ತಮ್ಮ ಕಲೆಯ ಮೂಲಕ ಅಭಿವ್ಯಕ್ತಿ ಪಡಿಸಿದ ಚಿತ್ರ ಕಲಾವಿದ ವಿಜಯ ಸಿಂಧೂರ ಅವರು ಗಂಗಪ್ಪ- ಬಸಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬನಹಟ್ಟಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.

1929: ರೋಮ್ ನಲ್ಲಿ ಲ್ಯಾಟರನ್ ಒಪ್ಪಂದದ ಪ್ರತಿಗಳ ವಿನಿಮಯದೊಂದಿಗೆ ಸಾರ್ವಭೌಮ ವ್ಯಾಟಿಕನ್ ಸಿಟಿ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತು. ಈ ಒಪ್ಪಂದಕ್ಕೆ ಬೆನಿಟೋ ಮುಸ್ಸೋಲಿನಿ ಇಟಲಿ ಸರ್ಕಾರದ ಪರವಾಗಿ ಮತ್ತು ಪೋಪ್ ಅವರ ಪರವಾಗಿ ಕಾರ್ಡಿನಲ್ಲಿ ಸೆಕ್ರೆಟರಿ ಪೀಟ್ರೋ ಗ್ಯಾಸ್ಪರ್ರಿ ಫೆಬ್ರುವರಿ 11ರಂದು ಸಹಿ ಹಾಕಿದ್ದರು.

1928: ಸಾಹಿತಿ ಕುಲಕರ್ಣಿ ಬಿಂದು ಮಾಧವ ಜನನ.

1921: ಲಘು ಸಂಗೀತ, ಭಾವಗೀತೆಗಳ ಹಾಡುಗಾರಿಕೆಯನ್ನು ಖ್ಯಾತಿಗೆ ತಂದ ದೇವಂಗಿ ಚಂದ್ರಶೇಖರ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿಯಲ್ಲಿ ಈದಿನ ಜನಿಸಿದರು.

1911: ಸಾಹಿತಿ ಕುಕ್ಕಿಲ ಕೃಷ್ಣಭಟ್ಟ ಜನನ.

1893: ದಕ್ಷಿಣ ಆಫ್ರಿಕದಲ್ಲಿ ಪ್ರಥಮ ದರ್ಜೆ ಬೋಗಿಯ ಟಿಕೆಟ್ ಪಡೆದುಕೊಂಡಿದ್ದ ಮಹಾತ್ಮ ಗಾಂಧಿಯವರನ್ನು (ಆಗ ಅವರು ಕೇವಲ ಮೋಹನದಾಸ ಕರಮಚಂದ ಗಾಂಧಿ) ರೈಲುಗಾಡಿಯಿಂದ ಹೊರತಳ್ಳಲಾಯಿತು. ಈ ಘಟನೆ ಅವರ ಬದುಕಿನ ಪ್ರಮುಖ ಘಟನೆಯಾಗಿ ಮಾರ್ಪಟ್ಟು `ಅಹಿಂಸಾತ್ಮಕ ಸತ್ಯಾಗ್ರಹ' ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು.

1868: ಚಾರ್ಲ್ಸ್ ರೆನ್ನೀ ಮೆಕಿಂತೋಶ್ (1868-1928) ಜನ್ಮದಿನ. ಸ್ಕಾಟ್ ಲ್ಯಾಂಡಿನ ಶಿಲ್ಪಿ ಹಾಗೂ ವಿನ್ಯಾಸಕಾರರಾದ ಇವರು ಗ್ರೇಟ್ ಬ್ರಿಟನ್ನಿನಲ್ಲಿ ಕಲೆ ಮತ್ತು ಕುಶಲ ಕಲೆಗಳ ಚಳವಳಿಯನ್ನು ಬೆಳೆಸಿದವರಲ್ಲಿ ಪ್ರಮುಖ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement