Saturday, August 2, 2008

ಇಂದಿನ ಇತಿಹಾಸ History Today ಆಗಸ್ಟ್ 2

ಇಂದಿನ ಇತಿಹಾಸ

ಆಗಸ್ಟ್ 2

ನವದೆಹಲಿಯ ಗುತ್ತಿಗೆದಾರರೊಬ್ಬರಿಂದ ರೂ 5 ಕೋಟಿಗಳನ್ನು ಬಲವಂತವಾಗಿ ವಸೂಲಿ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಭೂಗತ ದೊರೆ ಅಬು ಸಲೇಂನನ್ನು ಈ ಹಿಂದೆ ಹಾಜರುಪಡಿಸಲು ವಿಫಲವಾಗಿರುವ ಮುಂಬೈ ಪೊಲೀಸರಿಗೆ ಈಗ ಆತನನ್ನು ತನ್ನ ಮುಂದೆ ಹಾಜರುಪಡಿಸುವಂತೆ ಸ್ಥಳೀಯ ನ್ಯಾಯಾಲಯವೊಂದು ವಾರಂಟ್ ಹೊರಡಿಸಿತು.

2007: ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಸ್ಟ್ 30ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿತು. ಚುನಾವಣೆ ನಡೆಯಬೇಕಿದ್ದ 208 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 163 ನಗರ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಈಗ ಚುನಾವಣೆ ನಡೆಯಲಿದೆ ಎಂದು ಆಯೋಗದ ಮುಖ್ಯ ಆಯುಕ್ತ ಎಂ.ಆರ್. ಹೆಗಡೆ ಹಾಗೂ ಅಧೀನ ಕಾರ್ಯದರ್ಶಿ ಎಚ್. ಎಸ್. ಉದಯಶಂಕರ್ ಈದಿನ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ನವದೆಹಲಿಯ ಗುತ್ತಿಗೆದಾರರೊಬ್ಬರಿಂದ ರೂ 5 ಕೋಟಿಗಳನ್ನು ಬಲವಂತವಾಗಿ ವಸೂಲಿ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಭೂಗತ ದೊರೆ ಅಬು ಸಲೇಂನನ್ನು ಈ ಹಿಂದೆ ಹಾಜರುಪಡಿಸಲು ವಿಫಲವಾಗಿರುವ ಮುಂಬೈ ಪೊಲೀಸರಿಗೆ ಈಗ ಆತನನ್ನು ತನ್ನ ಮುಂದೆ ಹಾಜರುಪಡಿಸುವಂತೆ ಸ್ಥಳೀಯ ನ್ಯಾಯಾಲಯವೊಂದು ವಾರಂಟ್ ಹೊರಡಿಸಿತು. ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಕೌರ್ ಅವರು ಆಗಸ್ಟ್ 21ರಂದು ಅಬು ಸಲೇಂನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳುವಂತೆ ಮುಂಬೈನ ಅರ್ಥರ್ ಕಾರಾಗೃಹ ಆಡಳಿತಕ್ಕೆ ನಿರ್ದೇಶನ ನೀಡಿದರು. ದಕ್ಷಿಣ ದೆಹಲಿಯ ಗುತ್ತಿಗೆದಾರ ಅಶೋಕ್ ಗುಪ್ತ ಎಂಬವರಿಗೆ ಸಲೇಂ ಮತ್ತು ಆತನ ಸಹಚರರು 2002ರಲ್ಲಿ ಬೆದರಿಕೆ ಹಾಕಿರುವ ಆರೋಪವಿತ್ತು.

2007: ಅಮೆರಿಕದ ಮಿನ್ನಿಯಾಪೊಲೀಸ್ ಹೆದ್ದಾರಿಯಲ್ಲಿ ಮಿಸಿಸಿಪ್ಪಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕುಸಿದು ಐವರು ಮೃತಪಟ್ಟು 20 ಜನರು ನಾಪತ್ತೆಯಾದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು ಎಂದು ಅಮೆರಿಕದ ಪೊಲೀಸ್ ಇಲಾಖೆ ಖಚಿತಪಡಿಸಿತು.

2007: ಪತ್ನಿ ಶಕೀರಾ ಅವರನ್ನು ಕೊಲೆ ಮಾಡಿದ ಸ್ವಾಮಿ ಶ್ರದ್ಧಾನಂದ ಅವರಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಪ್ರಕರಣದ ವಿಚಾರಣಾ ಪೀಠದಲ್ಲಿ ಕುಳಿತುಕೊಳ್ಳಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕರ್ನಾಟಕ ಮೂಲದ ಆರ್.ವಿ. ರವೀಂದ್ರನ್ ನಿರಾಕರಿಸಿದರು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಹಾಗೂ ದಲ್ವೀರ್ ಭಂಡಾರಿ ಅವರನ್ನೊಳಗೊಂಡ ಮೂವರು ಸದಸ್ಯರ ಪೀಠದ ಮುಂದೆ ಪ್ರಕರಣ ಬಂದಾಗ, ರವೀಂದ್ರನ್ ಅವರು ತಮ್ಮನ್ನು ವಿಚಾರಣಾ ಪೀಠದಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡರು. ಈ ಬೆಳವಣಿಗೆಯಿಂದಾಗಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳಿರುವ ಮತ್ತೊಂದು ಪೀಠಕ್ಕೆ ವರ್ಗಾಯಿಸಿದರು. ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಬೇಗಂ ಶಕೀರಾ ಅವರ ಅಪಾರ ಪ್ರಮಾಣದ ಆಸ್ತಿ ಲಪಟಾಯಿಸಲು ಶ್ರದ್ಧಾನಂದ 1986ರಲ್ಲಿ ಮದುವೆಯಾಗಿದ್ದರು. ನಂತರ 1991ರಲ್ಲಿ ಶಕೀರಾ ಅವರನ್ನು ಜೀವಂತವಾಗಿ ಬೆಂಗಳೂರಿನಲ್ಲಿರುವ ತಮ್ಮ ಬಂಗ್ಲೆಯ ಆವರಣದಲ್ಲಿಯೇ ಹೂತುಹಾಕಿದ್ದರು. ಸ್ವಯಂ ಘೋಷಿತ ಸ್ವಾಮಿ ಶ್ರದ್ಧಾನಂದ ಅವರು ತಮ್ಮ ಪತ್ನಿಯನ್ನು ಹತ್ಯೆ ಮಾಡಿದರು ಎಂದು ವಿಚಾರಣಾ ನ್ಯಾಯಾಲಯ ತೀರ್ಪುನೀಡಿ, ಮರಣ ದಂಡನೆ ವಿಧಿಸಿತು. ಈ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿಯಿತು. 2005ರಲ್ಲಿ ಹೈಕೋರ್ಟ್ ತೀರ್ಪನ್ನು ಶ್ರದ್ಧಾನಂದ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದರು. 2007ರ ಮೇ 19ರಂದು ಶ್ರದ್ಧಾನಂದ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದ ದ್ವಿಸದಸ್ಯ ನ್ಯಾಯಪೀಠ, ಶಿಕ್ಷೆ ಪ್ರಮಾಣ ಪ್ರಕಟಿಸುವಲ್ಲಿ ವಿಭಿನ್ನ ಅಭಿಪ್ರಾಯ ತಾಳಿತು. ನ್ಯಾಯಮೂರ್ತಿ ಎಸ್.ಬಿ. ಸಿನ್ಹಾ ಅವರು ಜೀವಾವಧಿ ಶಿಕ್ಷೆ ನೀಡಿದರೆ, ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಮರಣ ದಂಡನೆಯನ್ನು ಎತ್ತಿ ಹಿಡಿದಿದ್ದರು. ಇದರಿಂದಾಗಿ ಶಿಕ್ಷೆಯ ಪ್ರಮಾಣವನ್ನು ಸ್ಪಷ್ಟಗೊಳಿಸಲು ಉನ್ನತ ಪೀಠಕ್ಕೆ ಪ್ರಕರಣವನ್ನು ರವಾನಿಸಲಾಗಿತ್ತು.

2007: ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರವು, ಕೇರಳದಲ್ಲಿರುವ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರವನ್ನು (ಆರ್ಜಿಸಿಬಿ) ತನ್ನ ವಶಕ್ಕೆ ತೆಗೆದುಕೊಂಡು ಅದಕ್ಕೆ ಸ್ವಾಯತ್ತತೆ ನೀಡುವ ನಿರ್ಧಾರ ಕೈಗೊಂಡಿತು. ಆರ್ಜಿಸಿಬಿ ವಶಕ್ಕೆ ತೆಗೆದುಕೊಳ್ಳುವುದರಿಂದ ರಾಜ್ಯ ಹಾಗೂ ಆ ಪ್ರದೇಶದಲ್ಲಿ ಜೈವಿಕ ತಂತ್ರಜ್ಞಾನದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ವಾರ್ತಾ ಹಾಗೂ ಪ್ರಸಾರ ಸಚಿವ ಪಿ.ಆರ್. ದಾಸ್ ಮುನ್ಷಿ ಸಂಪುಟ ಸಭೆಯ ನಂತರ ಪ್ರಕಟಿಸಿದರು.

2007: ರಷ್ಯದ ಎರಡು ಮಿನಿ ಜಲಾಂತರ್ಗಾಮಿಗಳು 27 ನಿಮಿಷಗಳ ಅಂತರದಲ್ಲಿ ಉತ್ತರ ಧ್ರುವದಲ್ಲಿರುವ ಆರ್ಕ್ಟಿಕ್ ಸಮುದ್ರದ ತಳವನ್ನು ಯಶಸ್ವಿಯಾಗಿ ಮುಟ್ಟಿದವು. ಮೀರ್- 1 ಮತ್ತು ಮೀರ್- 2 ಹೆಸರಿನ ಈ ಜಲಾಂತರ್ಗಾಮಿಗಳಲ್ಲಿ ಸಾಹಸಿ ನಾವಿಕರು 4,300 ಮೀಟರ್ ಆಳಕ್ಕೆ ತೆರಳಿ ತಮ್ಮ ಪಾರಮ್ಯ ಪ್ರದರ್ಶಿಸಿದರು. ಈ ಸಮುದ್ರ ಪ್ರದೇಶ ತನಗೆ ಸೇರಿದ್ದೆಂದು ರಷ್ಯ ಹೇಳುತ್ತ ಬಂದಿದ್ದು, ಕೆಲವು ರಾಷ್ಟ್ರಗಳು ಇದನ್ನು ವಿರೋಧಿಸಿದ್ದವು. ಜಲಾಂತರ್ಗಾಮಿಗಳ ಸಾಹಸದಿಂದಾಗಿ ರಷ್ಯ ಮೊದಲ ಬಾರಿಗೆ ಆರ್ಕ್ಟಿಕ್ ಸಮುದ್ರದ ಮೇಲೆ ತನ್ನ ಹಿಡಿತ ಸಾಧಿಸಿದಂತಾಯಿತು. ಅದರ ನಾವಿಕರು ಸಮುದ್ರದ ಗರ್ಭದೊಳಗೆ ಲೋಹದ ಧ್ವಜ ನೆಟ್ಟು ಬಂದರು. ಆರ್ಕ್ಟಿಕ್ ಸಮುದ್ರದಲ್ಲಿ ವಿಶ್ವದ ಶೇಕಡ 25ರಷ್ಟು ತೈಲ ನಿಕ್ಷೇಪ ಇದೆ ಎಂದು ತಜ್ಞರು ಹೇಳಿದ್ದು ಈ ಪ್ರದೇಶದ ಹಿಡಿತಕ್ಕೆ ಸ್ಪರ್ಧೆ ಆರಂಭಕ್ಕೆ ಕಾರಣವಾಯಿತು.

2007: 2007ರ ಸಾಲಿನ `ಜಿ.ಆರ್. ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ'ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಗೋವರ್ಧನ್ ಮೆಹ್ತಾ ಆಯ್ಕೆಯಾದರು. ಎಸ್ ಐ ಆರ್ ಭಟ್ನಾಗರ್ ಫೆಲೋ ಆಗಿರುವ ಅವರು, ಸಾವಯವ ಸಮನ್ವಯ ಸಿದ್ಧಾಂತದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು. ಈ ನೂತನ ಪರಿಕಲ್ಪನೆ ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.

2006: ಮೂರು ವರ್ಷಗಳ ಹಿಂದೆ ತಂಪು ಪಾನೀಯಗಳಲ್ಲಿ ಕೀಟನಾಶಕಗಳು ಪತ್ತೆಯಾಗಿ ಎದ್ದಿದ್ದ ಭಾರಿ ವಿವಾದ ತಣ್ಣಗಾಗುವ ಮೊದಲೇ ಕೋಕಾ ಕೋಲಾ ಮತ್ತು ಪೆಪ್ಸಿಯ 11 ಜನಪ್ರಿಯ ಬಾಂಡುಗಳಲ್ಲಿ ಅಪಾಯಕಾರಿ ಮಟ್ಟದ ಕೀಟ ನಾಶಕಗಳ ಅಂಶ ಪತ್ತೆಯಾಗಿರುವುದಾಗಿ ದೆಹಲಿಯ ಸರ್ಕಾರೇತರ ಸಂಸ್ಥೆ (ಎನ್ಜಿಓ) ವಿಜ್ಞಾನ ಮತ್ತು ಪರಿಸರ ಕೇಂದ್ರವು ನವದೆಹಲಿಯಲ್ಲಿ ಪ್ರಕಟಿಸಿತು. ಕೇಂದ್ರವು 25 ಉತ್ಪಾದನಾ ಕೇಂದ್ರಗಳಿಂದ ಸಂಗ್ರಹಿಸಿದ 11 ತಂಪು ಪಾನೀಯಗಳ 57 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 3ರಿಂದ 5 ವಿವಿಧ ಕೀಟನಾಶಕಗಳ ಅಂಶಗಳು ಪತ್ತೆಯಾದವು ಎಂದು ಕೇಂದ್ರದ ನಿರ್ದೇಶಕಿ ಸುನೀತಾ ನಾರಾಯಣ್ ಪ್ರಕಟಿಸಿದರು.

2006: ಚೆನ್ನೈಯ ಎಂಜಿನಿಯರಿಂಗ್ ಪದವೀಧರ ಅಭಿಷೇಕ್ ಕುಮಾರ (22) ಅವರು ಮೈಕ್ರೋಸಾಫ್ಟ್ ಕಂಪೆನಿಯ ರೆಡ್ಮೊಂಡ್ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಮುಖ್ಯ ಶಿಲ್ಪಿ ಬಿಲ್ ಗೇಟ್ಸ್ ಜೊತೆಗೆ ಕೆಲಸ ಮಾಡುವ ಅಪರೂಪದ ಗೌರವ ಪಡೆದರು.

2001: ಕೊಲಂಬೋದಲ್ಲಿ ನಡೆದ ಕೊಕಾ-ಕೋಲಾ ಟ್ರೋಫಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 100 ರನ್ನುಗಳನ್ನು ಗಳಿಸುವ ಮೂಲಕ ವೀರೇಂದ್ರ ಸೆಹ್ ವಾಗ್ ಅವರು ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಎರಡನೇ `ವೇಗದ ಶತಕ' (69 ಬಾಲ್ ಗಳಿಗೆ) ಬಾರಿಸಿದ ಭಾರತೀಯ ಎನಿಸಿದರು.

2006: ಮಾಜಿ ಒಲಿಂಪಿಯನ್, ಫುಟ್ ಬಾಲ್ ಆಟಗಾರ ಬಲರಾಂ ಪರಬ್ ಮುಂಬೈಯಲ್ಲಿ ನಿಧನರಾದರು.

2006: ಸಮಾಜ ಶಾಸ್ತ್ರಜ್ಞೆ, ಮಾನವ ಹಕ್ಕುಗಳ ಹೋರಾಟಗಾರ್ತಿ ನಾಡೋಜ ಪ್ರೊ. ಸಿ. ಪಾರ್ವತಮ್ಮ (40) ಮೈಸೂರಿನಲ್ಲಿ ನಿಧನರಾದರು.

1990: ಸದ್ದಾಂ ಹುಸೇನ್ ಕುವೈಟ್ ಮೇಲೆ ದಾಳಿ ನಡೆಸಿದರು.

1990: ಕ್ಯೂಬಾದ ಹೆವಿವೇಯ್ಟ್ ಬಾಕ್ಸರ್ ಟಿಯೋಫಿಲೋ ಸ್ಟೀವನ್ ಸನ್ (ಲೊರೆಂಝೊ) ಅವರು ಒಂದೇ ವಿಭಾಗದಲ್ಲಿ ಸತತವಾಗಿ ಮೂರು ಬಾರಿ ಒಲಿಂಪಿಕ್ ಸ್ವರ್ಣ ಗ್ದೆದ ಪ್ರಥಮ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾದರು. ಈ ಮೊದಲು ಅವರು 1972ರಲ್ಲಿ ಮ್ಯೂನಿಚ್ ಮತ್ತು 1976ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಹೆವಿ ವೇಯ್ಟ್ ಬಾಕ್ಸಿಂಗ್ ಸ್ವರ್ಣ ಗೆದ್ದಿದ್ದರು.

1938: ಡಾ. ಸಿ. ಅಶ್ವತ್ಥ ಜನನ.

1925: ಮನೋಹರ ಬಾಲಚಂದ್ರ ಘಾಣೇಕರ್ ಜನನ.

1923: ಅಮೆರಿಕದ 29ನೇ ಅಧ್ಯಕ್ಷ ವಾರನ್ ಜಿ ಹರ್ಡಿಂಗ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಮೃತರಾದರು.

1899: ಡಿ.ಸಿ. ಪಾವಟೆ ಜನನ.

1887: ಹದಿನೆಂಟನೇ ಶತಮಾನದ ಖ್ಯಾತ ಇಂಗ್ಲಿಷ್ ಚಿತ್ರ ಕಲಾವಿದ ಥಾಮಸ್ ಗೇಯಿನ್ಸ್ ಬೊರೊ ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.

1876: `ವೈಲ್ಡ್ಬಿಲ್' ಎಂದೇ ಹೆಸರಾಗಿದ್ದ ಹಿಕ್ ಕಾಕ್ ಅವರು ದಕ್ಷಿಣ ಡಕೋಟಾದ ಡೆಡ್ ವುಡ್ ನ ಸಲೂನ್ ನಲ್ಲಿ ಫೋಕರ್ ಆಡುತ್ತಿದ್ದಾಗ ಗುಂಡೇಟಿನಿಂದ ಸಾವನ್ನಪ್ಪಿದರು.

1858: ಬ್ರಿಟಿಷ್ ಸಂಸತಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಆಡಳಿತವನ್ನು ಹಸ್ತಾಂತರಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ತೀರ್ಮಾನದ ಬಳಿಕ ಭಾರತದ ಆಡಳಿತ ನಿರ್ವಹಣೆಗೆ ವೈಸ್ ರಾಯ್ ಅವರನ್ನು ನೇಮಕ ಮಾಡಲಾಯಿತು.

1852: ಹೊಸಗನ್ನಡದ ಭಾಷಾ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ವಾಸುದೇವಯ್ಯ (2-8-1852ರಿಂದ 26-12-1943) ಅವರು ಚನ್ನಪಟ್ಟಣದಲ್ಲಿ ಜನಿಸಿದರು.

No comments:

Advertisement