Tuesday, October 7, 2008

ಇಂದಿನ ಇತಿಹಾಸ History Today ಅಕ್ಟೋಬರ್ 07

ಇಂದಿನ ಇತಿಹಾಸ

ಅಕ್ಟೋಬರ್ 7

ಸಿಕ್ಖರ 10ನೆಯ ಹಾಗೂ ಕೊನೆಯ ಗುರುಗಳಾದ ಗುರು ಗೋಬಿಂದ್ ಸಿಂಗ್ (1666-1708) ತಮ್ಮ 42ನೇ ವಯಸಿನಲ್ಲಿ ನಾಂದೇಡ್ ನಲ್ಲಿ ನಿಧನರಾದರು. ಖಾಲ್ಸಾ ಸ್ಥಾಪಕರಾಗಿ ಖ್ಯಾತಿ ಪಡೆದಿರುವ ಅವರು ತಮ್ಮ ಸಾವಿಗೆ ಮುನ್ನ `ಗ್ರಂಥ ಸಾಹಿಬ್'ನ್ನೇ ತಮ್ಮ ನಂತರ ಗುರುವಾಗಿ ಪರಿಗಣಿಸುವಂತೆ ತಮ್ಮ ಅನುಯಾಯಿಗಳಿಗೆ ನಿರ್ದೇಶಿಸಿದರು. 

2007: ಜನತಾದಳಕ್ಕೆ (ಎಸ್) ನೀಡಿದ್ದ ಬೆಂಬಲವನ್ನು ಬಿಜೆಪಿ ಈದಿನ ಮಧ್ಯಾಹ್ನ ಅಧಿಕೃತವಾಗಿ ವಾಪಸ್ ತೆಗೆದುಕೊಳ್ಳುವುದರೊದಿಗೆ ಇಪ್ಪತ್ತು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಆದರೆ 'ರಾಜೀನಾಮೆ ಕೊಡುವುದಿಲ್ಲ' ಎಂದು ಹೇಳಿದ ಮುಖ್ಯಮಂತ್ರಿ  ಎಚ್. ಡಿ. ಕುಮಾರಸ್ವಾಮಿ, `ಬಹುಮತ ಸಾಬೀತು ಪಡಿಸಲು ರಾಜ್ಯಪಾಲರನ್ನು ಕೋರುವೆ' ಎಂದು ತಿಳಿಸಿದರು. ಈ ಮಧ್ಯೆ ಕಾಂಗ್ರೆಸ್ ಮುಖಂಡರ ನಿಯೋಗ ಕೂಡ ರಾಜಭವನಕ್ಕೆ ತೆರಳಿ `ಹೊಸ ಪರ್ಯಾಯ ಸರ್ಕಾರ ರಚನೆ ಸಂದರ್ಭದಲ್ಲಿ ತಮ್ಮ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು' ಎಂದು ರಾಜ್ಯಪಾಲರಿಗೆ ಮನವಿ ಮಾಡಿತು. 

2007: ಮೈಸೂರಿಗೆ ಸಮೀಪದ ಗೊಮ್ಮಟಗಿರಿಯಲ್ಲಿ ಬಾಹುಬಲಿಯ 18 ಅಡಿ ಎತ್ತರದ ಭವ್ಯಮೂರ್ತಿಗೆ 58ನೇ ವಾರ್ಷಿಕ ಮಹಾಮಸ್ತಕಾಭಿಷೇಕ ಮಾಡಲಾಯಿತು. ಹಾಲು, ಗಂಧ, ಪುಷ್ಪ ಹಾಗೂ ಜಲಾಭಿಷೇಕದಿಂದ ಬಾಹುಬಲಿಗೆ ಅಭಿಷೇಕ ಮಾಡಿದ ಭಕ್ತರು ಭವ್ಯಮೂರ್ತಿಯ ದಿವ್ಯರೂಪ ಕಂಡು ಪುಳಕಿತರಾದರು. ಚೆಂಗಾಳ್ವ ಅರಸರು ಸ್ಥಾಪಿಸಿದ್ದು ಎನ್ನಲಾದ ಈ ಬಾಹುಬಲಿ ಮೂರ್ತಿ ಸುಮಾರು 900 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಕಳೆದ 57 ವರ್ಷಗಳಿಂದ ಈ ಮೂರ್ತಿಗೆ ಪ್ರತಿವರ್ಷವೂ ಮಹಾಮಜ್ಜನ ಮಾಡಲಾಗುತ್ತಿದೆ. ಪ್ರಥಮ ಮಹಾಮಜ್ಜನಕ್ಕೆ ಅಂದಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಆಗಮಿಸಿದ್ದರು. ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಸ್ತಕಾಭಿಷೇಕದ ಸಾನಿಧ್ಯ ವಹಿಸಿದ್ದರು.

2007: ರಸ್ತೆ ದಾಟುತ್ತಿದ್ದ ಜನರ ಮೇಲೆ ಬ್ಲೂಲೈನ್ ಬಸ್ ಹರಿದು ಐವರು ಮಹಿಳೆಯರು ಸೇರಿದಂತೆ 7 ಜನರು ಸಾವನ್ನಪ್ಪಿದ ಘಟನೆ ದಕ್ಷಿಣ ದೆಹಲಿಯ ಆಲಿ ಗ್ರಾಮದ ರೈಲ್ವೆ ಸೇತುವೆ ಬಳಿ ನಡೆಯಿತು.

2007: ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಮೂಲದ ಅವೆಸ್ತಾಜೆನ್ ಗ್ರೇನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಹೈಬ್ರಿಡ್ ಬೀಜ ಅಭಿವೃದ್ಧಿಗಾಗಿ ಆಸ್ಟ್ರೇಲಿಯಾ ಪೇಟೆಂಟ್ ಕಂಪೆನಿಯಿಂದ ಪೇಟೆಂಟ್ ಪಡೆದಿರುವುದಾಗಿ ಪ್ರಕಟಿಸಿತು. ಅವೆಸ್ತಾಜೆನ್ ಹಲವಾರು ಸಂಶೋಧನೆಗಳನ್ನು ಕೈಗೊಂಡಿದ್ದು, ಒಟ್ಟು 137 ಪೇಟೆಂಟ್ಗಳನ್ನು ಹೊಂದಿದೆ. ಈಗ ಅಭಿವೃದ್ಧಿಪಡಿಸಲಾದ ಹೊಸ ಹೈಬ್ರಿಡ್ ಬೀಜದಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ ಎಂದು ಕಂಪೆನಿ ತಿಳಿಸಿತು.

2006: ಹೈದರಾಬಾದಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ರೊಬೋಟ್ ಸಹಾಯದಿಂದ `ಹೃದಯ ಕವಾಟ ಶಸ್ತ್ರಚಿಕಿತ್ಸೆ'ಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆಸ್ಪತ್ರೆಯ ವೈದ್ಯ ಡಾ. ರವಿ ಕುಮಾರ್ ಪ್ರಕಾರ ರೊಬೋಟ್ ತಂತ್ರಜ್ಞಾನದಲ್ಲಿ ಭಾರಿ ಪ್ರಗತಿಯಾಗಿದ್ದು ಸ್ಪಷ್ಟ ಮತ್ತು ಅತ್ಯುತ್ತಮ ನಿಖರತೆ ಪಡೆಯುವುದು ಈ ತಂತ್ರಜ್ಞಾನದಿಂದ ಸಾಧ್ಯವಾಯಿತು.

2006: ಕ್ಯಾನ್ ಬೆರಾದ ಪಪುವಾ ನ್ಯೂಗಿನಿಯಲ್ಲಿ ರಾಬೌಲ್ ನಗರದ ಹೊರವಲಯದಲ್ಲಿ ಇರುವ ಮೌಂಟ್ ತವುರ್ವರ್ ಜ್ವಾಲಾಮುಖಿ ಭಾರತೀಯ ಕಾಲಮಾನ ನಸುಕಿನ 4.15ರ ವೇಳೆಗೆ ಸ್ಫೋಟಗೊಂಡು ದಟ್ಟವಾದ ಬೂದಿ ಚಿಮ್ಮಿತು.  ಸ್ಫೋಟದ ತೀವ್ರತೆಗೆ 12 ಕಿ.ಮೀ. ದೂರದ ಮನೆಗಳ ಕಿಟಕಿಗಳೂ ಅಲುಗಾಡಿದವು. ಆತಂಕಗೊಂಡ ನಿವಾಸಿಗಳು ಮನೆಗಳಿಂದ ಹೊರಗೆ ಓಡಿದರು. 1994ರಲ್ಲಿ ಇದೇ ಜ್ವಾಲಾಮುಖಿ ಸಿಡಿದು ರಾಬೌಲ್ ನಗರದ ಅರ್ಧದಷ್ಟು ನಾಶವಾಗಿತ್ತು. ಇಡೀ ನಗರವೇ ಬೂದಿಯಲ್ಲಿ ಮುಳುಗಿದ್ದಲ್ಲದೇ ವಿಮಾನ ನಿಲ್ದಾಣವೂ ಸಂಪೂರ್ಣವಾಗಿ ನಾಶವಾಗಿತ್ತು. ಇದರಿಂದಾಗಿ ಬಹುತೇಕ ಹೊಸ ನಗರವನ್ನೇ ನಿರ್ಮಿಸಬೇಕಾಗಿ ಬಂದಿತ್ತು.

2006: ಒಂದು ವರ್ಷದ ಹಿಂದೆ ಭೂಕಂಪದಿಂದ ಭಾರಿ ಹಾನಿಗೊಳಗಾಗಿದ್ದ ಪಾಕಿಸ್ಥಾನದ ಬಾಲಕೋಟ್ ಪಟ್ಟಣದಲ್ಲಿ ಮತ್ತೆ  ಲಘು ಭೂಕಂಪ ಸಂಭವಿಸಿತು. ಯಾವುದೇ ಸಾವು ನೋವು ಸಂಭವಿಸಲಿಲ್ಲ. ಪಾಕಿಸ್ಥಾನದ ಆಕ್ರಮಿತ ಕಾಶ್ಮೀರ ಮತ್ತು ವಾಯವ್ಯ ಗಡಿ ಪ್ರಾಂತದಲ್ಲಿ ರಿಕ್ಟರ್ ಮಾಪಕದಲ್ಲಿ 7.6 ಪ್ರಮಾಣದ ಭೂಕಂಪ ಸಂಭವಿಸಿ 73,000 ಮಂದಿ ಮೃತಪಟ್ಟು ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡ ಘಟನೆಯ ವಾರ್ಷಿಕೋತ್ಸವದ ಎರಡು ದಿನ ಮುಂಚೆ ಈ ರಿಕ್ಟರ್ ಮಾಪಕದಲ್ಲಿ 4.0 ಪ್ರಮಾಣದ ಈ ಭೂಕಂಪ ಸಂಭವಿಸಿತು.

2006: ಕೋಪೆನ್ಹೇಗನ್ನಿನ ಮುಸ್ಲಿಂ ವಲಸೆ-ವಿರೋಧಿ ಡ್ಯಾನಿಷ್ ಜನರು ಪ್ರವಾದಿ ಮಹಮ್ಮದರ ವಿವಿಧ ವ್ಯಂಗ್ಯಚಿತ್ರ ರಚನೆ ಸ್ಪರ್ಧೆ ನಡೆಸುತ್ತಿರುವ ವಿಡಿಯೋ ಚಿತ್ರೀಕರಣವನ್ನು ಡ್ಯಾನಿಷ್ ಟಿವಿಯೊಂದು  ಪ್ರಸಾರ ಮಾಡಿತು. ಕಳೆದ ವರ್ಷವಷ್ಟೆ ಡ್ಯಾನಿಷ್ ಪತ್ರಿಕೆಯೊಂದು ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿವಿಶ್ವದಾದ್ಯಂತ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಟಿ.ವಿ.ಯಲ್ಲಿ ಪ್ರಸಾರ ಮಾಡಲಾದ ಚಿತ್ರಗಳಲ್ಲಿ ಮುಸ್ಲಿಂ ವಲಸೆ ವಿರೋಧಿ ಡಿಪಿಪಿ ಪಕ್ಷದ ಸದಸ್ಯರು ಪ್ರವಾದಿ ಮಹಮ್ಮದರ ವಿವಿಧ ನಮೂನೆಗಳ ವ್ಯಂಗ್ಯ ಚಿತ್ರ ಬರೆಯುತ್ತಿರುವ ದೃಶ್ಯಗಳನ್ನು ತೋರಿಸಲಾಯಿತು. ಈ ವ್ಯಂಗ್ಯ ಚಿತ್ರ ಸರ್ಧೆ ಕಳೆದ ಆಗಸ್ಟಿನಲ್ಲೇ ನಡೆದಿತ್ತು ಎಂದು ಡ್ಯಾನಿಷ್ ಟಿವಿ ತಿಳಿಸಿತು.

2006: ಥಾಯ್ಲೆಂಡಿನ ಉರಗಪ್ರೇಮಿ ಖುನ್ ಚಾಯಿಬುಡ್ಡಿ (45) ವಿಶ್ವದಾಖಲೆ ಸ್ಥಾಪಿಸುವ ಸಲುವಾಗಿ ಪಟ್ಟಾಯದಲ್ಲಿ ಒಂದರ ನಂತರ ಒಂದರಂತೆ ಅತ್ಯಂತ ವಿಷಕಾರಿಗಳಾದ 19 ಸರ್ಪಗಳನ್ನು ಚುಂಬಿಸಿದರು.

1982: ನ್ಯೂಯಾರ್ಕ್ ನಗರದಲ್ಲಿ `ಆಂಡ್ರ್ಯೂ ಲಾಯ್ಡ್ ವೆಬ್ಬರ್- ಟಿಮ್ ರೈಸ್ ಮ್ಯೂಸಿಕಲ್ ಕ್ಯಾಟ್ಸ್' ಆರಂಭಗೊಂಡಿತು. ಅಲ್ಲಿ ಅದು 7485 ಪ್ರದರ್ಶನಗಳ ಬಳಿಕ 2000ರಲ್ಲಿ ಮುಚ್ಚಿತು. ಲಂಡನ್ನಿನಲ್ಲಿ ಅದು 9000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಡೆಸಿ ಬಾಕ್ಸ್ ಆಫೀಸಿನಲ್ಲಿ 13.60 ಕೋಟಿ ಪೌಂಡುಗಳನ್ನು ಗಳಿಸಿತು.

1978: ಭಾರತೀಯ ಕ್ರಿಕೆಟ್ ಆಟಗಾರ ಝಾಹಿರ್ ಖಾನ್ ಜನ್ಮದಿನ.

1963: ಸಾಹಿತಿ ಮೋಹನ ನಾಗಮ್ಮನವರ ಜನನ.

1953: ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಪಂಜಾಬಿನ ನೂತನ ರಾಜಧಾನಿ ಚಂಡೀಗಢ ನಗರವನ್ನು ಉದ್ಘಾಟಿಸಿದರು.

1950: ಮದರ್ ತೆರೇಸಾ ಅವರು ಕಲ್ಕತ್ತದಲ್ಲಿ (ಈಗಿನ ಕೋಲ್ಕತ್ತಾ) `ಮಿಷನರೀಸ್ ಆಫ್ ಚಾರಿಟಿ' ಸಂಸ್ಥೆಯನ್ನು ಸ್ಥಾಪಿಸಿದರು.

1940: ಸಾಹಿತಿ ಟಿ. ಆರ್. ರಾಧಾಕೃಷ್ಣ ಜನನ.

1936: ಸಾಹಿತಿ, ವಾಗ್ಮಿ, ಗ್ರಂಥ ಸಂಪಾದಕ , ಭಾಷಾ ವಿಜ್ಞಾನಿ `ಹಂಪನಾ' ಖ್ಯಾತಿಯ ಹಂಪ ನಾಗರಾಜಯ್ಯ ಅವರು ಪದ್ಮನಾಭಯ್ಯ- ಪದ್ಮಾವತಮ್ಮ ದಂಪತಿಯ ಮಗನಾಗಿ ಗೌರಿ ಬಿದನೂರು ತಾಲ್ಲೂಕು ಹಂಪಸಂದ್ರದಲ್ಲಿ ಜನಿಸಿದರು.

1935: ಸಾಹಿತಿ ಬಿ.ವಿ. ವೀರಭದ್ರಪ್ಪ ಜನನ.

1931: ಸಾಹಿತಿ ಟಿ.ಕೆ. ರಾಮರಾವ್ ಜನನ.

1931: ದಕ್ಷಿಣ ಆಫ್ರಿಕಾದ ಕರಿಯ ಆಂಗ್ಲಿಕನ್ ಪಾದ್ರಿ ಡೆಸ್ಮಂಡ್ ಡಿ. ಟುಟು ಜನ್ಮದಿನ. ದಕ್ಷಿಣ ಆಫ್ರಿಕದಲ್ಲಿ ವರ್ಣಭೇದ ನೀತಿ ವಿರುದ್ಧ ಪ್ರತಿಭಟನಾ ಚಳವಳಿಯಲ್ಲಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ 1984ರಲ್ಲಿ ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು.

1806: ಮೊದಲ ಕಾರ್ಬನ್ ಪೇಪರ್ ಸಂಶೋಧಕ ರಾಲ್ಫ್ ವೆಜ್ ವುಡ್ `ಬರಹಗಳ ಬಹುಪ್ರತಿ ಮಾಡುವುದಕ್ಕೆ' ಪೇಟೆಂಟ್ ಪಡೆದ.

1708: ಸಿಕ್ಖರ 10ನೆಯ ಹಾಗೂ ಕೊನೆಯ ಗುರುಗಳಾದ ಗುರು ಗೋಬಿಂದ್ ಸಿಂಗ್ (1666-1708) ತಮ್ಮ 42ನೇ ವಯಸಿನಲ್ಲಿ ನಾಂದೇಡ್ ನಲ್ಲಿ ನಿಧನರಾದರು. ಖಾಲ್ಸಾ ಸ್ಥಾಪಕರಾಗಿ ಖ್ಯಾತಿ ಪಡೆದಿರುವ ಅವರು ತಮ್ಮ ಸಾವಿಗೆ ಮುನ್ನ `ಗ್ರಂಥ ಸಾಹಿಬ್'ನ್ನೇ ತಮ್ಮ ನಂತರ ಗುರುವಾಗಿ ಪರಿಗಣಿಸುವಂತೆ ತಮ್ಮ ಅನುಯಾಯಿಗಳಿಗೆ ನಿರ್ದೇಶಿಸಿದರು. 

No comments:

Advertisement