ಹಿರಿಯರೇ ಹೀಗೇಕೆ ಮಾಡಿದಿರಿ?:
ಶತ್ರುವಿಲ್ಲದ ಸಮರ...!
ಶತ್ರುವಿಲ್ಲದ ಸಮರ...!
'ಶತ್ರುವಿಲ್ಲದ ಸಮರ'ದ ಪ್ರತಿ ಅಧ್ಯಾಯವೂ ಒಂದು ಹೊಸ ಲವಲವಿಕೆ. ಹೊಸ ಅನ್ವೇಷಣೆ, ಹೊಚ್ಚಹೊಸ ಆನಂದ, ಹೊಸ ಚಿಂತೆ, ಅಂದರೆ ಹೀಗೇ ನಾವು ಪ್ರಕೃತಿಯನ್ನು ದೋಚುತ್ತಿದ್ದರೆ ಮುಂದೇನಾಗುತ್ತದೋ! ಎಂಬ ಭಾರವಾದ ಚಿಂತೆಯೂ ಹನಿಹನಿಯಾಗಿ ಹೃದಯ ಸೇರುತ್ತದೆ. ನಿಜವಾಗಿಯೂ ನಾಗೇಶ ಹೆಗಡೆ ಅವರು ಒಬ್ಬ ವಿಜ್ಞಾನಿ ಆಗಬೇಕಾಗಿತ್ತು.
ಭಾರತೀಶ
ನೀರಿನ ತುಟಾಗ್ರತೆ ಹೆಚ್ಚುತ್ತ ಹೋದರೆ ಏನಾದೀತು ಎಂಬ ಬಗ್ಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ರೂಪಿಸಿದ್ದಾರೆಂದು ಹೇಳಲಾದ ಒಂದು ಹೃದಯಸ್ಪರ್ಶಿ ಕಾಲ್ಪನಿಕ ಕಥಾಚಿತ್ರ ಹೀಗಿದೆ.
ದೂರ ಭವಿಷ್ಯದ, ಅಂದರೆ ಕ್ರಿ.ಶ. 2070ರ ಹಿರಿಯ ನಾಗರಿಕನೊಬ್ಬ ಇಂದಿನ ಜನರಿಗಾಗಿ ಒಂದು ಪತ್ರವನ್ನು ಬರೆದಿದ್ದಾನೆ. ಪತ್ರದ ಜತೆ ಕೆಲವು ಫೋಟೋಗಳೂ ಇವೆ. 'ನೋಡಲು ಹಣ್ಣು ವೃದ್ಧನಂತೆ ಕಾಣುತ್ತಾನೆ, ನಾನು ಈ ಸಮಾದ್ದ ಅತ್ಯಂತ ಹಿರಿಯನೂ ಹೌದು; ಆದರೆ ನನಗೆ ಕೇವಲ 40 ವರ್ಷ ಅಷ್ಟೆ' ಎಂದು ಆತ ಅಂದಿನ ಘೋರ ಚಿತ್ರಣವನ್ನು ಬಿಚ್ಚುತ್ತ ಹೋಗುತ್ತಾನೆ. ಎಲ್ಲೆಲ್ಲೂ ನೀರಿನ ಅಭಾವ. ಯುವತಿಯರೂ ನುಣ್ಣಗೆ ತಲೆ ಬೋಳಿಸಿದ್ದಾರೆ. ಸ್ನಾನಕ್ಕೆ ನೀರಿಲ್ಲ. ಖನಿಜ ತೈಲದಿಂದ ಮೈ ಒರೆಸಿಕೊಳ್ಳಬೇಕು. ದಿನ ಬಳಕೆಗೆ ತಲಾ ವ್ಯಕ್ತಿಗೆ ಮೂರು ಗ್ಲಾಸ್ ನೀರು. ಊಟ ತಿಂಡಿಗೆ ಕೃತಕ ಆಹಾರ. ಎಲ್ಲೆಲ್ಲೂ ಭಣಭಣ ಮರುಭೂಮಿ.
ವರ್ಷಕ್ಕೆ ಮೂರು ನಾಲ್ಕು ದಿನ ಮಳೆ ಸುರಿದರೂ ಅದು ಆಸಿಡ್ ಮಳೆ. ಸಮುದ್ರದ ನೀರನ್ನು ಬಟ್ಟಿ ಇಳಿಸುವ ಕಾರ್ಖಾನೆ ಬಿಟ್ಟರೆ ಬೇರೆ ಯಾವ ಉದ್ಯಮವೂ ಇಲ್ಲ. ಬಿಸಿಲಲ್ಲಿ ಓಡಾಡಿ ಅತಿ ನೇರಳೆ ಕಿರಣಗಳಿಗೆ ಮೈ ಒಡ್ಡಿದ್ದರಿಂದ ಎಲ್ಲರ ತ್ವಚೆಯ ಮೇಲೂ ನೆರಿಗೆ, ವ್ರಣಗಳು, ಮಾನವ ವಂಶದ ಅಂಡಾಣು, ವೀರ್ಯಗಳೂ ವಿಕಾರ ಆಗಿವೆ. ಈಗೀಗ ಆಮ್ಲಜನಕವನ್ನೂ ಪಡಿತರ ರೂಪದಲ್ಲಿ ನೀಡುವ ವ್ಯವಸ್ಥೆ ಬಂದಿದ್ದು. ಅಲ್ಲಲ್ಲಿ ಶುದ್ಧ ಹವೆಯನ್ನು ಉತ್ಪಾದಿಸುವ ದೊಡ್ಡ ದೊಡ್ಡ ಗಾಳಿ ಗಿರಣಿ ತಲೆ ಎತ್ತುತ್ತಿವೆ. ಆಳ ಕಣಿವೆಗಳಲ್ಲಿ ಎಲ್ಲೋ ಒಂದೆರಡು ಕಡೆ ನೀರಿದ್ದ ಸ್ಥಳದಲ್ಲಿ ಸಶಸ್ತ್ರ ಯೋಧರ ಕಾವಲು ಇದೆ. ಪಡಿತರ ನೀರು ಪಡೆಯಲು ದಂಗೆ, ದರೋಡೆ.
'ನೀರನ್ನು ಪೋಲು ಮಾಡಬೇಡಿ ಎಂಬ ಮಾತನ್ನು ಹಿಂದಿನ ತಲೆಮಾರಿನ ಜನರು ಕೇಳಲಿಲ್ಲ. ಅದರಿಂದಾಗಿ ನಮಗೆ ಈ ಸ್ಥಿತಿ ಬಂದಿದೆ; ಹಿರಿಯರೇ ಹೀಗೇಕೆ ಮಾಡಿದಿರಿ?' ಎಂಬ ಆರ್ತನಾದದೊಂದಿಗೆ ಕಥಾನಕ ಮುಗಿಯುತ್ತದೆ.
* * ಕಾಡಿನ ನಿಸರ್ಗದಲ್ಲಿ ಹುಲಿ ರಕ್ಷಣೆ ಮಾಡುವುದರಿಂದ ಇಡೀ ಅರಣ್ಯಕ್ಕೇ ರಕ್ಷಣೆ ಸಿಗುತ್ತದೆ. ಹುಲಿಯೊಂದು ಕಾಡಿನಲ್ಲಿ ಬದುಕಿದೆ ಎಂದರೆ ಅಲ್ಲಿ ಜಿಂಕೆ, ಕಾಡೆಮ್ಮೆಗಳೂ ಬದುಕಿವೆ ಎಂದರ್ಥ; ಜಿಂಕೆ ಬದುಕಿದೆ ಎಂದರೆ ಅಲ್ಲಿ ಹುಲ್ಲು ಇದೆ, ನೀರು ಇದೆ ಎಂದರ್ಥ. ಹೀಗೆ, ಕಾಡಿನ ರಾಜನಿಗೆ ಕಾಡಿನಲ್ಲೇ ರಕ್ಷಣೆ ಸಿಕ್ಕರೆ, ಗಿಡಮರ, ಪಶು-ಪಕ್ಷಿ, ಜಲಚರ, ಗೆಡ್ಡೆಗೆಣಸು, ಔಷಧ ಮೂಲಿಕೆ, ಒಟ್ಟಾರೆ ಇಡೀ ಜೀವವೈವಿಧ್ಯದ ಖಜಾನೆ ಅಲ್ಲಿ ಜೀವಂತವಾಗಿರುತ್ತದೆ. ಅದರ ಬದಲು 'ಹುಲಿಯನ್ನು ಕೃತಕ ಪರಿಸರದಲ್ಲಿ ಸಂಗೋಪನೆ ಮಾಡಿದರೆ ನೈಜ ಪರಿಸರ ಇನ್ನಷ್ಟು ಶೀಘ್ರವಾಗಿ ನಾಶವಾಗುತ್ತ ಹೋಗುತ್ತದೆ' ಎನ್ನುತ್ತಾರೆ ಬೆಂಗಳೂರಿನ ವನ್ಯ ಅಧ್ಯಯನ ಕೇಂದ್ರದ ಸಂಜಯ್ ಗುಬ್ಬಿ.
** ಹಿಂದೆ 19ನೇ ಶತಮಾನದಲ್ಲಿ ವಿಜ್ಞಾನದ ಉದ್ದೇಶ ಉದಾತ್ತವಾಗಿತ್ತು. ಅದು ಇಡೀ ಮನುಕುಲಕ್ಕೆ ಕಲ್ಯಾಣಕಾರಿ ಆಗಬೇಕೆಂಬ ಧೋರಣೆ ಇತ್ತು. 20ನೇ ಶತಮಾನದಲ್ಲಿ ವಿಜ್ಞಾನಕ್ಕೆ ಹೊಸ ಮುಖ ಬಂತು. ಅದರಿಂದ ದೇಶವನ್ನು ಮುನ್ನಡೆಸಬಹುದೆಂಬ ಆಶಯದಿಂದ ವಿಜ್ಞಾನ ಸರಕಾರಗಳ ಕೈಗೆ ಬಂತು. ಪ್ರಳಯಾಂತಕ ಬಾಂಬ್ಗಳ, ಬಾಂಬರ್ಗಳ ಸೃಷ್ಟಿಗೆ ಕಾರಣವಾಯಿತು. ಸರಕಾರವನ್ನು ಓಲೈಸುವ ಗುತ್ತಿಗೆದಾರರು, ಶಸ್ತ್ರಾಸ್ತ್ರ ದಲ್ಲಾಳಿಗಳು ಉದ್ಧಾರವಾದರು. ದೇಶದ 'ಮುನ್ನಡೆ' ಮತ್ತು 'ಅಭಿವೃದ್ಧಿ'ಯ ಅರ್ಥಗಳೆಲ್ಲ ಗೋಜಲಾದವು. ನಮ್ಮಲ್ಲಂತೂ ಪೋಖ್ರನ್ನಲ್ಲಿ ಬಾಂಬ್ ಸಿಡಿಸಿದ್ದೂ ದೇಶದ ಪ್ರಗತಿಯ ಲೆಕ್ಕಕ್ಕೇ ಜಮಾ ಆಯಿತು. ಈಗ 21ನೇ ಶತಮಾನದ ಹೊಸ್ತಿಲಲ್ಲಿ ಪೇಟೆಂಟ್ ಹಕ್ಕು ಕೈಗೆ ಬಂದಮೇಲೆ ವಿಜ್ಞಾನವೂ ಖಾಸಗಿ ವ್ಯಕ್ತಿಗಳ ಕೈವಶವಾಗಿ ಸರಕಾರಗಳೇ ಖಾಸಗಿ ಕಂಪನಿಗಳನ್ನು ಓಲೈಸುವ ಹಂತಕ್ಕೆ ಬಂದಿದೆ. ಈ ಹೊಸ ಸಮೀಕರಣ ಹೇಗಿರುತ್ತದೋ ಯಾರಿಗೆ ಗೊತ್ತು? 'ದೇವರಿಗೆ ಪ್ರತಿಸ್ಪರ್ಧಿ' ಹುಟ್ಟಿದ ಮೇಲಾದರೂ ದುಃಖ-ಸುಖ, ಶಕ್ತ-ಅಶಕ್ತರ ಈ ಅಸಮಾನ ಲೋಕ ಸರಿಯಾಗುತ್ತದೊ, ಯಾರಿಗೆ ಗೊತ್ತು?
ಆ ವಸುಂಧರೆಯೇ ಹೇಳಬೇಕು? ಏನು ಮಾಡುವುದು, ನಮಗೆ ಕೇಳುವುದಕ್ಕೂ ಬರುವುದಿಲ್ಲ. ಅವಳೇ ಕರುಣೆ ತೋರಬೇಕು.
** ಮೇಲಿನವುಗಳು ನಾಗೇಶ ಹೆಗಡೆಯವರ 'ಶತ್ರುವಿಲ್ಲದ ಸಮರ' ಕೃತಿಯ (ಪ್ರಜಾವಾಣಿಯ 2007ರ ಅಂಕಣ ಬರಹಗಳು) ಕೆಲವು ಜೀವ-ಜೀವನಕ್ಕೆ ಸಂಬಂಧಿಸಿದ ಕೆಲವು ಮಾರ್ಮಿಕ ಮುತ್ತುಗಳು.
'ಶತ್ರುವಿಲ್ಲದ ಸಮರ'ದ ಪ್ರತಿ ಅಧ್ಯಾಯವೂ ಒಂದು ಹೊಸ ಲವಲವಿಕೆ. ಹೊಸ ಅನ್ವೇಷಣೆ, ಹೊಚ್ಚಹೊಸ ಆನಂದ, ಹೊಸ ಚಿಂತೆ, ಅಂದರೆ ಹೀಗೇ ನಾವು ಪ್ರಕೃತಿಯನ್ನು ದೋಚುತ್ತಿದ್ದರೆ ಮುಂದೇನಾಗುತ್ತದೋ! ಎಂಬ ಭಾರವಾದ ಚಿಂತೆಯೂ ಹನಿಹನಿಯಾಗಿ ಹೃದಯಕ್ಕೆ ಸೇರಿಸುವ ರೀತಿ ಅನಿರ್ವಚನೀಯ. ಇಳಿದ ಹನಿಹನಿ ನಮ್ಮ ಪ್ರಾಣವನ್ನು ನಮ್ಮಿಂದ ಕೀಳುವುದಿಲ್ಲ. ಬದಲಾಗಿ ಕಾಳಜಿಗೆ ಆಹ್ವಾನಿಸುತ್ತದೆ ಎಂಬುದೇ ಇದರ ಗುಣ ಅಂದುಕೊಂಡಿದ್ದೇನೆ.
ಹಾಗೇ ಓದುತ್ತಾ ಒಂದು ಹಂತದಲ್ಲಿ ನಾಗೇಶ ಹೆಗಡೆಯವರು ದೊಡ್ಡ ವಿಜ್ಞಾನಿಯಾಗಬೇಕಿತ್ತು ಅಂದುಕೊಂಡಿದ್ದೇನೆ. ಆ ಕಲ್ಪನೆಯನ್ನು ಮೆಲುಕುತ್ತಾ ಬಹಳ ಹೊತ್ತು ಆನಂದಿಸಿದ್ದೇನೆ. ಅವರು ಪ್ರಕೃತಿಯನ್ನು ದೋಚಲು ಪ್ರೇರೇಪಿಸುವ ಚಿಂತಕನಲ್ಲ. ನಿಜವಾದ ಅಗತ್ಯಗಳನ್ನು ಗುರುತುಮಾಡಿಕೊಳ್ಳಿ ಮತ್ತು ಅದನ್ನು ಮಾತ್ರ ಪೂರೈಸಿಕೊಳ್ಳಿ ಎಂಬ ಒಟ್ಟಾರೆ ಕರೆಯನ್ನು ಕೊಡುತ್ತಿರುವುದು ಆದರ್ಶಪ್ರಾಯ. ವಿಜ್ಞಾನಿಗೆ ನಿಜವಾಗಿಯೂ ಇರಬೇಕಾದ ಚಿಂತನೆಯ ಹಾದಿ ಇದು.
ಅನ್ವೇಷಣೆ ಮಾತ್ರ ಅವನ ಕೆಲಸವಲ್ಲ. ಅನ್ವೇಷಣೆಯ ಫಲವನ್ನು ಯಾರ ಕೈಯ್ಯಲ್ಲಿ, ಯಾತಕ್ಕೋಸ್ಕರ ಇಡಬೇಕು ಎಂಬ ವಿವೇಚನೆಯೂ ಅವನಿಗೆ ಬೇಕು.
ಒಟ್ಟಿನಲ್ಲಿ ಪುಸ್ತಕ ಖರೀದಿ ಸಾರ್ಥಕವಾಯಿತು. ಅದನ್ನು ನನ್ನ ಇನ್ನೊಬ್ಬ ಆಪ್ತರಿಗೆ ಓದಿರೆಂದು ಕಳಿಸಿದ್ದೇನೆ. ಓದುಗ ಮತ್ತೊಬ್ಬನಿಗೆ ಆ ಪುಸ್ತಕವನ್ನೊಮ್ಮೆ ಓದಿ ಎಂದು ಒಂದು ಆಪ್ತಭಾವದಿಂದ ಸೂಚಿಸಿದರೆ ಆ ಪುಸ್ತಕ, ಕೃತಿ ಸಾರ್ಥಕವಾಯಿತು ಎಂದುಕೊಂಡಿದ್ಧೇನೆ.
No comments:
Post a Comment