Sunday, January 25, 2009

ಇಂದಿನ ಇತಿಹಾಸ History Today ಜನವರಿ 22

ಇಂದಿನ ಇತಿಹಾಸ

ಜನವರಿ 22

ಜಗತ್ತಿನೆಲ್ಲೆಡೆ ಸಂಸ್ಕೃತಿ ತಿಳಿವಳಿಕೆಯನ್ನು ಸಮರ್ಥವಾಗಿ ಬೆಂಬಿಸುತ್ತಿರುವುದಕ್ಕಾಗಿ ಅಮೆರಿಕದ ನಾಗರಿಕ ರಾಜತಾಂತ್ರಿಕ  ಕೇಂದ್ರವು ಪ್ರಕಟಿಸಿದ `ಸಿಟಿಜನ್ ಡಿಪ್ಲೊಮೆಸಿ' ಪ್ರಶಸ್ತಿಗೆ ಭಾರತೀಯ ಮೂಲದ ಅಂಜಲಿ ಭಾಟಿಯಾ (19) ಅವರೂ ಪಾತ್ರರಾದರು. ಒಟ್ಟು ಆರು ಮಂದಿ ಈ ಪ್ರಶಸ್ತಿ ಪಡೆದರು.

2008: ವಿಶ್ವದ ಅತ್ಯುನ್ನತ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದ ಸಾಹಸಿ ಸರ್ ಎಡ್ಮಂಡ್ ಹಿಲೆರಿ ಅವರ ಪಾರ್ಥಿವ ಶರೀರಕ್ಕೆ ಈದಿನ ಆಕ್ಲೆಂಡಿನ ಸೈಂಟ್ ಮೇರಿ 
ಇಗರ್ಜಿಯಲ್ಲಿ (ಚರ್ಚ್) ಸಾವಿರಾರು ಜನರ ಗೌರವಾರ್ಪಣೆಯ ಮಧ್ಯೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಶವಪೆಟ್ಟಿಗೆಯ ಮೆರವಣಿಗೆ ನಡೆದಂತೆಯೇ ಸಾವಿರಾರು ಮಂದಿ ತಮ್ಮ ಅಂತಿಮ ನಮನ ಸಲ್ಲಿಸಿದರು. ಪ್ರಧಾನಿ ಹೆಲೆನ್  ಕ್ಲರ್ಕ್ ಅವರೂ ಸಹ ಇದರಲ್ಲಿ ಸೇರಿದ್ದರು. ಜಗತ್ತಿನ ನಾನಾ ಭಾಗಗಳಲ್ಲಿ ಟಿವಿ ನೇರ ಪ್ರಸಾರದ ಮೂಲಕ   ಅಂತಿಮ ಸಂಸ್ಕಾರವನ್ನು ತೋರಿಸಲಾಯಿತು. ಆದರೆ ಪ್ರಸಾರ ಸಮಯದಲ್ಲಿನ ವ್ಯತ್ಯಾಸದಿಂದಾಗಿ ನೇಪಾಳದಲ್ಲಿ ಮಾತ್ರ ಜನರು ಈ ಮಹಾನ್ ಸಾಹಸಿಯ ಅಂತಿಮ ಯಾತ್ರೆಯನ್ನು ನೋಡಲು ಸಾಧ್ಯವಾಗಲಿಲ್ಲ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಶೆರ್ಪಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪರ್ವತಾರೋಹಣದ ಸಂಕೇತವನ್ನು ಗೌರವ ಸೂಚಕವಾಗಿ ತೋರಿಸಲಾಯಿತು. ಭಾರತ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಐರ್ಲೆಂಡ್, ಅಮೆರಿಕ ಸಹಿತ ಹಲವು ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 2008ರ ಜನವರಿ 11ರಂದು ತಮ್ಮ 88ರ ಹರೆಯದಲ್ಲಿ ಕೊನೆಯುಸಿರೆಳೆದ ಹಿಲೆರಿ ಅವರಿಗೆ ನ್ಯೂಜಿಲೆಂಡ್ ಅತ್ಯಂತ ಉನ್ನತ ನಾಗರಿಕ ಸ್ಥಾನಮಾನ ನೀಡಿತ್ತು. ಆ ರಾಷ್ಟ್ರದ ಕರೆನ್ಸಿಯಲ್ಲಿ ಜೀವಿತ ವ್ಯಕ್ತಿಯೊಬ್ಬರ ಚಿತ್ರ ಅಚ್ಚು ಹಾಕಿಸಿದ ಏಕೈಕ ವ್ಯಕ್ತಿ ಎಂಬ ಗೌರವಕ್ಕೆ ಹಿಲೆರಿ ಪಾತ್ರರಾಗಿದ್ದರು.

2008: ಹಳೆಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯ ಮಾಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಾಣಿಜ್ಯ ಉದ್ದೇಶದ ವಾಹನಗಳ ಸಂಘಟನೆಗಳು ಎರಡು ದಿನಗಳಿಂದ ರಾಜ್ಯದಾದ್ಯಂತ ನಡೆಸಿದ ಮುಷ್ಕರ ಈದಿನ ರಾತ್ರಿ ಅಂತ್ಯಗೊಂಡಿತು. ಲಾರಿ, ಖಾಸಗಿ, ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬುಗಳುಗಳು ರಾತ್ರಿಯಿಂದಲೇ ಸಂಚಾರ ಆರಂಭಿಸಿದವು.

2008: ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಮುಂದಿನ ಚುನಾವಣೆಯನ್ನು ಬಿಜೆಪಿಯ ಧುರೀಣ ಎಲ್. ಕೆ. ಅಡ್ವಾಣಿ ಅವರ ನಾಯಕತ್ವದಲ್ಲಿ ಎದುರಿಸಲು  ಎನ್ ಡಿ ಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿರಂಗ) ನಿರ್ಧರಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎನ್ ಡಿ ಎ ಯ ಅಧ್ಯಕ್ಷರಾಗಿ ಮುಂದುವರಿಯುವರು. ಅಡ್ವಾಣಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಎನ್ ಡಿ ಎ ಸಂಚಾಲಕ ಜಾರ್ಜ್ ಫರ್ನಾಂಡಿಸ್ ಮೊದಲು ಗೊತ್ತುವಳಿ ಮಂಡಿಸಿದರು. ಎನ್ ಡಿ ಎ ಯ ಅಂಗಪಕ್ಷಗಳು ಈ ಗೊತ್ತುವಳಿಯನ್ನು ಒಕ್ಕೊರಲಿನಿಂದ ಅನುಮೋದಿಸಿದವು.

2008: ಮುಂಬೈ ಷೇರುಪೇಟೆ ವಹಿವಾಟು ಕುಸಿತವು ಈದಿನವೂ ಮುಂದುವರಿದು ತೀವ್ರ ಸ್ವರೂಪದ ಆತಂಕ ಸೃಷ್ಟಿಸಿತು. ಸಂವೇದಿ ಸೂಚ್ಯಂಕವು ದಿನವೊಂದರ ಅತಿ ಗರಿಷ್ಠ ಮಟ್ಟವಾದ 2,274 ಅಂಶಗಳಿಗೆ ಕುಸಿಯಿತು. ಷೇರು ವಹಿವಾಟುದಾರರ ಪಾಲಿಗೆ ಇನ್ನೊಂದು `ಕರಾಳ ಮಂಗಳವಾರ'ವು  ಮಾರುಕಟ್ಟೆಯ ಇತಿಹಾಸದಲ್ಲಿ ದಾಖಲಾಯಿತು. ಸೂಚ್ಯಂಕವು ಹಿಂದಿನ ದಿನವಷ್ಟೇ ದಿನದ ಅತಿ ಹೆಚ್ಚು ದಾಖಲೆ (2,050 ಅಂಶಗಳಷ್ಟು) ಕುಸಿತ ಕಂಡಿತ್ತು.

2008: ಮುಂಬೈಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿದವು. ಬೆಳ್ಳಿ ಪ್ರತಿ ಕೆಜಿಗೆ ರೂ 320 ರಷ್ಟು ಮತ್ತು ಚಿನ್ನ ಪ್ರತಿ 10 ಗ್ರಾಂಗಳಿಗೆ ರೂ 135 ರಷ್ಟು ಇಳಿಕೆ ದಾಖಲಿಸಿದವು. ಖರೀದಿ ಬೆಂಬಲ ಅಭಾವದಿಂದಾಗಿ ಈ ಬೆಲೆ ಇಳಿಕೆ ದಾಖಲಾಯಿತು.

2008: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ನೇತಾಜಿ ಸಾವಿನ ಕುರಿತಂತೆ ಸರ್ಕಾರ ಸಂಗ್ರಹಿಸಿದ ಸಮಗ್ರ ದಾಖಲೆಗಳ ಅನುಸಾರ ಕೇಂದ್ರ ಗೃಹ ಸಚಿವಾಲಯ ನಿರ್ಧಾರಕ್ಕೆ ಬಂದಿರುವುಗಾಗಿ ಮಿಷನ್ ನೇತಾಜಿ ಸಂಸ್ಥೆಗೆ ನೀಡಲಾದ ಮಾಹಿತಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿತು. ದೆಹಲಿ ಮೂಲದ ಮಿಷನ್ ನೇತಾಜಿ ಸಂಘಟನೆಯು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯಕ್ಕೆ ನೇತಾಜಿ ಮರಣದ ಕುರಿತಂತೆ ವಿವರ ಕೇಳಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಉತ್ತರಿಸಿದ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿತು. ನೇತಾಜಿಯವರ ಸಮೀಪವರ್ತಿ ಹಾಗೂ ಅವರೊಟ್ಟಿಗೆ ಅಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಬೀಬ್ ಉರ್ ರಹಮಾನ್ ಅವರ ಹೇಳಿಕೆ ಅನುಸಾರ, ಅಂದು ತೈವಾನಿ ತೈಪೆಯಿಂದ ನೇತಾಜಿಯವರನ್ನು ಹೊತ್ತು ಮೇಲಕ್ಕೆ ಹಾರಿದ ಕೆ-21 ಯುದ್ಧ ವಿಮಾನ ಎತ್ತರಕ್ಕೆ ಹಾರಲೇ ಇಲ್ಲ. ಅದು ಕೆಲವೇ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿತು. ವಿಮಾನ ಟೇಕ್ ಆಫ್ ತೆಗೆದುಕೊಂಡ ನಂತರ ಅದು ತನ್ನ ನಿಯಂತ್ರಣ ಕಳೆದುಕೊಂಡಿತು ಮತ್ತು ಜ್ವಾಲೆಗಳನ್ನು ಹೊರಸೂಸಲು ಆರಂಭಿಸಿತು ಎಂದು ರಹಮಾನ್ ನಂತರದಲ್ಲಿ ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದೆ. ನೇತಾಜಿ ಕುಳಿತಿದ್ದ ಸೀಟಿನ ಪಕ್ಕದಲ್ಲೇ ಪೆಟ್ರೋಲ್ ಟ್ಯಾಂಕ್ ಇತ್ತು. ದುರಂತದಲ್ಲಿ ಅದು ಸ್ಫೋಟಗೊಂಡಿತು. ಅದರಿಂದ ಹೊರಬಂದ ಬೆಂಕಿಯ ಕಿಡಿಗಳು ಬೋಸ್ ಅವರ ಬಟ್ಟೆಗೆ ತಾಗಿ ಅದು ಹೊತ್ತಿಕೊಂಡಿತು ಎಂದು ಗುಪ್ತದಳ ಪೊಲೀಸರು ನೀಡಿರುವ ಹೇಳಿಕೆಯನ್ನೂ ನೇತಾಜಿ ಸಾವಿನ  ಕುರಿತ ಪ್ರಮುಖ ದಾಖಲೆಯನ್ನಾಗಿ ಗೃಹ ಖಾತೆ ಪರಿಗಣಿಸಿದೆ. ಈ ದಾಖಲೆಗಳ ಅನುಸಾರ ನೇತಾಜಿಯವರ ಸಾವು ವಿಮಾನ ಅಪಘಾತದಲ್ಲೇ ಸಂಭವಿಸಿದೆ ಎಂದು ಈಗ ಸರ್ಕಾರ ದಾಖಲಿಸಿದೆ. ನೇತಾಜಿ ಅವರ  ಸಾವಿನ ಕುರಿತಂತೆ ಒಟ್ಟು 91 ಪ್ರಮುಖ  ದಾಖಲೆಗಳನ್ನು ಪರಿಗಣಿಸಲಾಗಿದೆ ಎಂದು ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿತು.

2008: ಮೋಸದಾಟ ಆಡಲು ತಮಗೆ ಆಮಿಷ ಒಡ್ಡಲಾಗಿತ್ತೆಂದು ಮಹೇಶ್ ಭೂಪತಿ ನೀಡಿದ ಹೇಳಿಕೆಯ ಸತ್ಯಾಸತ್ಯತೆ ಅರಿಯಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ನಿರ್ಧರಿಸಿತು. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ತಮಗೆ ಪಂದ್ಯವನ್ನು ಸೋಲುವಂತೆ ದೂರವಾಣಿಯ ಮೂಲಕ ಕೇಳಿಕೊಳ್ಳಲಾಗಿತ್ತು ಎಂದು ಮಹೇಶ್ ಸಂದರ್ಶನವೊಂದೊರಲ್ಲಿ ಹೇಳಿದ್ದರು.

2008: ಜಗತ್ತಿನೆಲ್ಲೆಡೆ ಸಂಸ್ಕೃತಿ ತಿಳಿವಳಿಕೆಯನ್ನು ಸಮರ್ಥವಾಗಿ ಬೆಂಬಿಸುತ್ತಿರುವುದಕ್ಕಾಗಿ ಅಮೆರಿಕದ ನಾಗರಿಕ ರಾಜತಾಂತ್ರಿಕ  ಕೇಂದ್ರವು ಪ್ರಕಟಿಸಿದ `ಸಿಟಿಜನ್ ಡಿಪ್ಲೊಮೆಸಿ' ಪ್ರಶಸ್ತಿಗೆ ಭಾರತೀಯ ಮೂಲದ ಅಂಜಲಿ ಭಾಟಿಯಾ (19) ಅವರೂ ಪಾತ್ರರಾದರು. ಒಟ್ಟು ಆರು ಮಂದಿ ಈ ಪ್ರಶಸ್ತಿ ಪಡೆದರು. ನ್ಯೂಜೆರ್ಸಿಯ ಕಿನ್ನೆಲೊನಿನಲ್ಲಿ ಇರುವ ಅಂಜಲಿ ತನ್ನ 16ನೇ ವಯಸ್ಸಿಗೇ `ಜಗತ್ತಿನ ಆವಿಷ್ಕಾರ' ಎಂಬ ಸಂಘಟನೆ ಸ್ಥಾಪಿಸಿದ್ದರು. ಅಮೆರಿಕ ಮತ್ತು ರುವಾಂಡಾ ನಡುವಿನ ಸಂಸ್ಕೃತಿ ಸಂಬಂಧ ಸುಧಾರಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿತ್ತು. 

2008: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕೊಡುವ ಪ್ರಸಕ್ತ ಸಾಲಿನ `ಸಂದೇಶ' ಪ್ರಶಸ್ತಿಗೆ ಸುಳ್ಯದ ಸುಬ್ರಾಯ ಚೊಕ್ಕಾಡಿ (ಕನ್ನಡ ಸಾಹಿತ್ಯ), ಮಂಗಳೂರಿನ ಡೊಲ್ಫಿ ಲೋಬೊ ಕಾಸ್ಸಿಯಾ (ಕೊಂಕಣಿ ಸಾಹಿತ್ಯ), ಅಮ್ಮೆಂಬಳದ ಪ್ರೊ. ಎ.ವಿ.ನಾವಡ (ತುಳು ಸಾಹಿತ್ಯ), ಬೆಂಗಳೂರಿನ ಅರುಂಧತಿ ನಾಗ್ (ಕಲಾ), `ಪ್ರಜಾವಾಣಿ'ಯ ಲಕ್ಷ್ಮಣ ಕೊಡಸೆ (ಪತ್ರಿಕೋದ್ಯಮ), ಚಿತ್ರದುರ್ಗದ ಶಿವಸಂಚಾರ ನಾಟಕ ತಂಡ (ಮಾಧ್ಯಮ ಶಿಕ್ಷಣ), ಮೂಲ್ಕಿಯ ಫ್ರಾನ್ಸಿಸ್ ಡಿ'ಕುನ್ಹಾ (ಶಿಕ್ಷಣ) ಮತ್ತು ವಿಶೇಷ ಪ್ರಶಸ್ತಿಗೆ ಬಿಜೈಯ ಹ್ಯಾರಿ ಡಿ'ಸೋಜ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷ, ಸಾಹಿತಿ ನಾ. ಡಿಸೋಜ ಮಂಗಳೂರಿನಲ್ಲಿ ಪ್ರಕಟಿಸಿದರು.

2007:  ಗಗನಕ್ಕೇರಿಸಿದ್ದ `ಎಸ್ ಆರ್ ಇ-1 ಮರುಬಳಕೆ ಉಪಗ್ರಹ'ವನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ಸು ಕರೆಸಿಕೊಳ್ಳುವಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿಯಾದರು. ಇದರೊಂದಿಗೆ ಭಾರತ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇನ್ನೊಂದು ಗರಿ ಮೂಡಿಸಿಕೊಂಡದ್ದಲ್ಲದೆ ಈ ಸಾಧನೆ ಗೈದ ಜಗತ್ತಿನ ನಾಲ್ಕನೇ ರಾಷ್ಟ್ರ ಎನಿಸಿಕೊಂಡಿತು. ಇಂಥ ಮರುಬಳಕೆ ಉಪಗ್ರಹವನ್ನು ಕಕ್ಷೆಗೆ ಅಮೆರಿಕ, ಚೀನಾ ಹಾಗೂ ರಷ್ಯಾದೇಶಗಳು ಮಾತ್ರ ಈ ಹಿಂದೆ ಗಗನಕ್ಕೆ ಏರಿಸಿ ವಾಪಸ್ ಕರೆಸಿಕೊಂಡಿದ್ದವು.
550 ಕೆಜಿ ತೂಕವಿರುವ ಮರುಬಳಕೆ ಉಪಗ್ರಹ, ಬಾಹ್ಯಾಕಾಶದಲ್ಲಿ ಹನ್ನೆರಡು ದಿನಗಳ ಕಾಲ  ಹಾರಾಟ ನಡೆಸಿ, ಈದಿನ  ಬೆಳಗ್ಗೆ 9.46ಕ್ಕೆ ಬಂಗಾಳ ಕೊಲ್ಲಿಗೆ ಬಂದು ಇಳಿಯಿತು. ಪೂರ್ವ ನಿರ್ಧರಿತ ಯೋಜನೆಯಂತೆ ಎಸ್ ಆರ್ ಇ ಉಪಗ್ರಹವನ್ನು ಭೂಮಿಗೆ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯವನ್ನು ಭಾರತೀಯ ನೌಕಾಪಡೆಯ ಕರಾವಳಿ ರಕ್ಷಕ ಪಡೆಗೆ ವಹಿಸಲಾಗಿತ್ತು. ಈ ದಳದವರು ಉಪಗ್ರಹವನ್ನು ಇಳಿಸಿಕೊಳ್ಳಲು ಶ್ರೀಹರಿಕೋಟಾದ ಪಶ್ಚಿಮ ಭಾಗದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಉಪಗ್ರಹವು 140 ಕಿಮೀ ವೇಗದಲ್ಲಿ ಬಂದು ಬಂಗಾಳ ಕೊಲ್ಲಿಗೆ ಅಪ್ಪಳಿಸಿತು. ಇಳಿಯುವ ಮುನ್ನ ಉಪಗ್ರಹದ ವೇಗ ತಗ್ಗಿಸಲು ನಾಲ್ಕು ಚಿಕ್ಕ ರಾಕೆಟ್, ಪ್ಯಾರಾಚೂಟ್ಗಳನ್ನು ಜೋಡಿಸಲಾಗಿತ್ತು. ಇವೆಲ್ಲದರ ನೆರವಿನಿಂದ ಉಪಗ್ರಹ ತನ್ನ ವೇಗವನ್ನು ತಗ್ಗಿಸಿಕೊಂಡು ಭೂ ಪರಿಸರ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಬಂಗಾಳ ಉಪಸಾಗರದಲ್ಲಿ ತೇಲುತ್ತಿರುವ ಉಪಗ್ರಹವನ್ನು ರಾತ್ರಿ `ಸಾರಂಗ' ಹಡಗಿನಲ್ಲಿ  ಶ್ರೀಹರಿಕೋಟಾ ಮುಖಾಂತರ ಎನ್ನೋರ್ ಬಂದರಿಗೆ ತರಲಾಯಿತು. ಜನವರಿ 10ರಂದು ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನದ (ಪಿಎಸ್ಎಲ್ವಿ-ಸಿ7) ಮೂಲಕ ಭಾರತೀಯ ದೂರ ಸಂವೇದಿ ಉಪಗ್ರಹ `ಕಾರ್ಟೊಸ್ಯಾಟ್-2' ಜೊತೆಗೆ ಈ 550 ಕೆ.ಜಿ. ತೂಕದ ಮರು ಬಳಸಬಹುದಾದ ಉಪಗ್ರಹವನ್ನು ಶ್ರೀ ಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ  ಕಕ್ಷೆಗೆ ಹಾರಿಬಿಡಲಾಗಿತ್ತು. ಭಾರತದ ಈ ಪ್ರಯತ್ನವನ್ನು `ಎರಡನೆಯ ಸ್ಪೇಸ್ ರೇಸ್ ಆರಂಭ' ಎಂದು ಪಾಶ್ಚಾತ್ಯ ವಿಶ್ಲೇಷಕರು ಬಣ್ಣಿಸಿದ್ದರು. ಅವರ ವಿಶ್ಲೇಷಣೆಯಂತೆ ನಾಲ್ಕೂ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದವು. 

2007: ಎಡಪಕ್ಷಗಳ ಆಳ್ವಿಕೆಯ ರಾಜ್ಯಗಳ ವಿರೋಧದ ಹೊರತಾಗಿಯೂ ಎನ್ ಡಿ ಎ ಆಡಳಿತ ಇರುವ ರಾಜ್ಯಗಳು ಸೇರಿದಂತೆ 19 ಇತರ ರಾಜ್ಯಗಳು ನೀಡಿದ ಬೆಂಬಲವನ್ನು ಅನುಸರಿಸಿ ಹೊಸ ಪಿಂಚಣಿ ಯೋಜನೆ ನಿಧಿಯನ್ನು ಷೇರು ಮಾರುಕಟೆಯಲ್ಲಿ ತೊಡಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಪಿಂಚಣಿ ಸುಧಾರಣೆಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕೇಂದ್ರದ ಪ್ರಸ್ತಾವನೆಗೆ 19 ರಾಜ್ಯಗಳು ಬೆಂಬಲ ವ್ಯಕ್ತಪಡಿಸಿದವು. `ಹೊಸ ಪದ್ಧತಿಯ ಪ್ರಕಾರ ಪಿಂಚಣಿಯ ಶೇ 5ರಷ್ಟನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಅಥವಾ ಪೂರ್ತಿ ನಿಧಿಯನ್ನು  ಸರ್ಕಾರಿ ಬಾಂಡುಗಳಲ್ಲಿ ತೊಡಗಿಸಲು ಅವಕಾಶ ಇರುತ್ತದೆ' ಎಂದು ಸಭೆಯ ಬಳಿಕ ಹಣಕಾಸು ಸಚಿವ ಪಿ. ಚಿದಂಬರಂ ತಿಳಿಸಿದರು. 

2007: ಅಂತಾರಾಷ್ಟ್ರೀಯ ಖ್ಯಾತಿಯ ಗುಜರಾತಿನ ಗೀತ್ ಸೇಥಿ ಎಂಟು ವರ್ಷಗಳ ನಂತರ  ಮತ್ತೊಮ್ಮೆ ಬಿಲಿಯರ್ಡಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದರು. ಕರ್ನಾಟಕದ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ಆವರಣದಲ್ಲಿ ನಡೆದ ಫೈನಲ್ ಸುತ್ತಿನ ಮುಖಾಮುಖಿಯಲ್ಲಿ ಸೇಥಿ ಅವರು ಕರ್ನಾಟಕದ ಪಂಕಜ್ ಅಡ್ವಾಣಿ ಅವರನ್ನು ಸೋಲಿಸಿದರು.

2007: ಬಾಗ್ದಾದಿನ ಕೇಂದ್ರ ಭಾಗದಲ್ಲಿ ಶಿಯಾ ಮುಸ್ಲಿಮರು ಅಧಿಕವಿದ್ದ ವಾಣಿಜ್ಯ ಪ್ರದೇಶದಲ್ಲಿ ಎರಡು ಶಕ್ತಿಶಾಲಿ ಬಾಂಬುಗಳು ಸ್ಫೋಟಗೊಂಡು 72 ಮಂದಿ ಮೃತರಾಗಿ ಇತರ 113 ಮಂದಿ ಗಾಯಗೊಂಡರು.

2006: ಹಿರಿಯ ಹಿಂದಿ ಭಾಷಾ ವಿದ್ವಾಂಸ ಡಾ. ಮಂಡಗದ್ದೆ ಕಟ್ಟೆ ಭಾರತಿ ರಮಣಾರ್ಯ (86) ಅವರು ನಿಧನರಾದರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾಗಿದ್ದರು. ಹಿಂದಿಯ ತುಳಸಿ ರಾಮಾಯಣವನ್ನು ಮಕರಂದ ವ್ಯಾಖ್ಯೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು. ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪಕ ಕಾರ್ಯದರ್ಶಿಯಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

2006: ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ  ನಡೆಯುವ ಇತಿಹಾಸ ಪ್ರಸಿದ್ಧ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಚಾಲನೆ ನೀಡಿದರು.

2006: ಟೊರಾಂಟೋದ ಬಾಟಾ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ, ಕ್ರಿ.ಶ. 1790ರಲ್ಲಿ ಹೈದರಾಬಾದಿನ ನಿಜಾಮ ಧರಿಸುತ್ತಿದ್ದ ಮುತ್ತು ರತ್ನ ಖಚಿತ ಪಾದರಕ್ಷೆಗಳ ಜೊತೆ ಕಳವಾಯಿತು. ಈ ಪಾದರಕ್ಷೆಗಳ ಮೌಲ್ಯ 1,40,000 ಅಮೆರಿಕನ್ ಡಾಲರುಗಳು. ವಸ್ತು ಸಂಗ್ರಹಾಲಯದಲ್ಲಿ ಕ್ರಿ.ಶ. 1500ರಷ್ಟು ಹಳೆಯ ಕಾಲದ 10,000 ಪಾದರಕ್ಷೆಗಳನ್ನು ಇಲ್ಲಿ ಪ್ರದರ್ಶನಕ್ಕೆ  ಇಡಲಾಗಿತ್ತು. ಸಂಜೆ ವಸ್ತುಸಂಗ್ರಹಾಲಯ ಮುಚ್ಚುವ ವೇಳೆಗೆ ಹೈದರಾಬಾದ್ ನಿಜಾಮನ ಪಾದರಕ್ಷೆಗಳು ಕಳುವಾದದ್ದು ಬೆಳಕಿಗೆ ಬಂತು.  

2001: `ಐ ಎನ್ ಎಸ್ ಮುಂಬೈ' ಮತ್ತು `ಐ ಎನ್ ಎಸ್ ಕಿರ್ಕ್' ಸಮರನೌಕೆಗಳು ಏಕಕಾಲಕ್ಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡವು.

1995: ಜಾನ್ ಎಫ್. ಕೆನಡಿ ಅವರ ತಾಯಿ ರೋಸ್ ಫಿಟ್ಜೆರಾಲ್ಡ್ ಕೆನಡಿ ಅವರು ಮೆಸ್ಸಾಚ್ಯುಸೆಟ್ಸಿನ ಹಯಾನಿಸ್ ಬಂದರಿನಲ್ಲಿ ತಮ್ಮ 104ನೇ ವಯಸ್ಸಿನಲ್ಲಿ ಮೃತರಾದರು.

1909: ಈದಿನ ಜನಿಸಿದ ಉ-ಥಾಂಟ್ (1909-1974) ಅವರು ಮ್ಯಾನ್ಮಾರಿನ (ಆಗಿನ ಬರ್ಮಾ) ಅಧಿಕಾರಿಯಾಗಿ ನಂತರ, ವಿಶ್ವಸಂಸ್ಥೆಯ ಮೂರನೇ ಸೆಕ್ರೆಟರಿ ಜನರಲ್ ಆದರು. 1962ರಿಂದ 1971ರವರೆಗೆ ಅವರು ವಿಶ್ವಸಂಸ್ಥೆಯ ಈ ಹುದ್ದೆಯಲ್ಲಿ ಇದ್ದರು.

1905: ರಷ್ಯಾದ ಸೇಂಟ್ ಪೀಟರ್ಸ್ ಬರ್ಗಿನಲ್ಲಿ ಶಾಂತಿಯುತ ಪ್ರದರ್ಶನಕಾರರ ಹತ್ಯಾಕಾಂಡ ನಡೆಯಿತು. `ರಕ್ತಪಾತದ ರವಿವಾರ' (ಬ್ಲಡಿ ಸಂಡೆ) ಎಂದೇ ಹೆಸರಾದ ಈ ಘಟನೆ 1905ರ ರಷ್ಯಾ ಕ್ರಾಂತಿಯ ಹಿಂಸಾತ್ಮಕ ಸ್ವರೂಪಕ್ಕೆ ನಾಂದಿ ಹಾಡಿತು. ಫಾದರ್ ಗ್ಯಾಪನ್ ಎಂಬಾತನ ನೇತೃತ್ವದಲ್ಲಿ ಕಾರ್ಮಿಕರ ಗುಂಪೊಂದು ಗುಂಡು ಹಾರಿಸಿ 100ಕ್ಕೂ ಹೆಚ್ಚು ಜನರನ್ನು ಕೊಂದು ಹಲವರನ್ನು ಗಾಯಗೊಳಿಸಿತು. ಸರಣಿ ಮುಷ್ಕರಗಳು ಹಾಗೂ ರೈತ ಬಂಡಾಯಗಳು ತ್ಸಾರ್ ಆಡಳಿತಕ್ಕೆ ಗಂಭೀರ ಬೆದರಿಕೆ ಒಡ್ಡಿದವು. ಈ ಘಟನೆ 1905ರ ಕ್ರಾಂತಿ ಎಂದೇ ಹೆಸರು ಪಡೆಯಿತು.

1896: ಈದಿನ ಹುಟ್ಟಿದ ಸೂರ್ಯಕಾಂತ ತ್ರಿಪಾಠಿ (1896-1961) ಅವರು ಹಿಂದಿ ಕವಿ, ಕಾದಂಬರಿಕಾರ, ಪ್ರಬಂಧಕಾರರಾಗಿ  `ನಿರಾಲಾ' ಹೆಸರಿನಲ್ಲಿ ಖ್ಯಾತರಾದರು. 

1901: ಅರವತ್ತನಾಲ್ಕು ವರ್ಷಗಳ ಸುದೀರ್ಘ ಆಳ್ವಿಕೆಯ ಬಳಿಕ ರಾಣಿ ವಿಕ್ಟೋರಿಯಾ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1760: ವಾಂಡಿವಾಶ್ ಕದನದಲ್ಲಿ ಬ್ರಿಟಿಷರು ಫ್ರೆಂಚರನ್ನು ಸೋಲಿಸಿದರು. ಇದರಿಂದಾಗಿ ಬ್ರಿಟಿಷರು ದಕ್ಷಿಣ ಭಾರತದ ವಿವಾದ ರಹಿತ  ಆಡಳಿತಗಾರರೆನಿಸಿಕೊಂಡರು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement