ಇಂದಿನ ಇತಿಹಾಸ
ಅಕ್ಟೋಬರ್ 06
2014: ಸ್ವೀಡನ್: ಮೆದುಳಿನ 'ಜಿಪಿಎಸ್ ವ್ಯವಸ್ಥೆ'ಯನ್ನು ಕಂಡು ಹಿಡಿದ ಮೂವರು ವಿಜ್ಞಾನಿಗಳಿಗೆ 2014ರ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿತು. ಇಂಗ್ಲೆಂಡ್ ಮೂಲದ ಪ್ರೊಫೆಸರ್ ಜಾನ್ ಒ'ಕೀಫ್ ಅವರು ಪ್ರಶಸ್ತಿಯ ಅರ್ಧಭಾಗವನ್ನು ಮತ್ತು ಮೇ-ಬ್ರಿಟ್ಟ್ ಮೋಸೆರ್ಹಾಗೂ ಎಡ್ವರ್ಡ್ ಮೋಸೆರ್ ಅವರು ಪ್ರಶಸ್ತಿ ಉಳಿದರ್ಧ ಭಾಗವನ್ನು ಸಮವಾಗಿ ಹಂಚಿಕೊಂಡರು. ಈ ವಿಜ್ಞಾನಿಗಳು 'ನಾವು ಎಲ್ಲಿದ್ದೇವೆ ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಸಮರ್ಥರಾಗುವುದು ಹೇಗೆ' ಎಂಬುದನ್ನು ಪತ್ತೆಹಚ್ಚಿದ್ದಾರೆ. ಮರೆಗುಳಿ (ಅಲ್ಜಿಮೀರ್ಸ್) ರೋಗಿಗಳು ತಮ್ಮ ಸುತ್ತಮುತ್ತಣ ಪ್ರದೇಶವನ್ನು ಏಕೆ ಗುರುತಿಸಲಾರರು ಎಂಬುದನ್ನು ತಿಳಿಯಲು ಈ ವಿಜ್ಞಾನಿಗಳ ಸಂಶೋಧನೆ ನೆರವಾಗಬಲ್ಲುದು. ಲಂಡನ್ನ ಯುನಿರ್ವಸಿಟಿ ಕಾಲೇಜಿನ ಪ್ರೊ.ಓ'ಕೀಫ್ ಅವರು 1971ರಲ್ಲಿ ಮೆದುಳಿನ ಆಂತರಿಕ ವ್ಯವಸ್ಥೆಯ ಮೊದಲ ಭಾಗವನ್ನು ಪತ್ತೆ ಹಚ್ಚಿದ್ದರು. ಕೊಠಡಿಯೊಂದರಲ್ಲಿ ಒಂದೇ ಸ್ಥಳದಲ್ಲಿ ಇದ್ದ ಇಲಿಯ ಕೆಲವು ನಿರ್ದಿಷ್ಟ ನರಕೋಶಗಳು ಸಕ್ರಿಯವಾಗುತ್ತಿದ್ದವು ಎಂದು ಅವರು ತೋರಿಸಿಕೊಟ್ಟಿದ್ದರು. ಸುಮಾರು ಮೂರು ದಶಕಗಳ ಬಳಿಕ 2005ರಲ್ಲಿ ಮೇ-ಬ್ರಿಟ್ಟ್ ಮತ್ತು ಎಡ್ವರ್ಡ್ ಮೋಸೆರ್ ಅವರು ಮೆದುಳಿನ ಇನ್ನೊಂದು ಭಾಗದ ಕಾರ್ಯ ನಿರ್ವಹಣೆಯನ್ನು ಪತ್ತೆ ಹಚ್ಚಿದರು. 'ಗ್ರಿಡ್ ಸೆಲ್ಸ್' ಎಂದು ಕರೆಯಲಾದ ಇನ್ನೊಂದು ಬಗೆಯ ನರಕೋಶಗಳನ್ನು ಅವರು ಕಂಡು ಹಿಡಿದರು. ಇದು ವ್ಯವಸ್ಥೆಯನ್ನು ಸಮನ್ವಯಗೊಳಿಸಿ, ಇರುವ ಸ್ಥಳ ಗುರುತಿಸಿ ಮತ್ತು ಹೋಗುವ ದಾರಿ ಹುಡುಕುವ ಕೆಲಸ ಮಾಡುತ್ತದೆ ಎಂಬುದನ್ನು ಅವರು ಪತ್ತೆ ಹಚ್ಚಿದರು. ಈ ಮೂರು ಸಂಶೋಧನೆಗಳು ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳನ್ನು ಶತಮಾನಗಳಿಂದ ಕಾಡುತ್ತಾ ಬಂದ ಸಮಸ್ಯೆಯನ್ನು ಬಗೆಹರಿಸಿವೆ ಎಂದು ನೊಬೆಲ್ ಅಸೆಂಬ್ಲಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿತು..
2014: ಜಮ್ಮು: ಜಮ್ಮು ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಜನವಸತಿ ಬಸ್ತಿಗಳು ಮತ್ತು ಸೇನಾ ಹೊರಠಾಣೆಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ಪಡೆಗಳು ನಡೆಸಿದ ಭಾರಿ ಫಿರಂಗಿದಾಳಿಯಲ್ಲಿ ಐವರು ಗ್ರಾಮಸ್ಥರು ಮೃತರಾಗಿ 29 ಮಂದಿ ಗಾಯಗೊಂಡರು. ಪಾಕಿಸ್ತಾನದಿಂದ ನಡೆದಿರುವ ಕದನವಿರಾಮ ಉಲ್ಲಂಘನೆಗಳಲ್ಲಿ ಇದು ಪರಮನೀಚ ಉಲ್ಲಂಘನೆಯೆನಿಸಿತು. 'ಪಾಕಿಸ್ತಾನಿ ಸೈನಿಕರು ಜಮ್ಮು ಜಿಲ್ಲೆಯ ಅರ್ನಿಯಾದಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ 10 ಗಡಿ ಹೊರಠಾಣೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ಹಿಂದಿನ ರಾತ್ರಿ 10 ಗಂಟೆಯ ಬಳಿಕ ಭಾರಿ ಫಿರಂಗಿ ದಾಳಿ ನಡೆಸಿದ್ದಾರೆ' ಎಂದು ಬಿಎಸ್ಎಫ್ ವಕ್ತಾರರೊಬ್ಬರು ಈದಿನ ತಿಳಿಸಿದರು. ಪಾಕ್ ಸೈನಿಕರು ಸಣ್ಣ ಸ್ವಯಂಚಾಲಿತ ಆಯುಧಗಳು ಮತ್ತು ಸಣ್ಣ ಫಿರಂಗಿಗಳನ್ನು ಬಳಸಿ ಗಡಿಯಲ್ಲಿನ ಜನವಸತಿ ಪ್ರದೇಶಗಳು ಮತ್ತು ಹೊರಠಾಣೆಗಳ ಮೇಲೆ ದಾಳಿ ನಡೆಸಿದರು. ಗಡಿ ಕಾಯುತ್ತಿರುವ ಬಿಎಸ್ಎಫ್ ಪಡೆಗಳು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ' ಎಂದು ವಕ್ತಾರರು ನುಡಿದರು. 'ಪ್ರದೇಶದಲ್ಲಿ ಗುಂಡಿನ ವಿನಿಮಯ ಈದಿನವೂ ಮುಂದುವರೆಯಿತು ಎಂದೂ ಅವರು ತಿಳಿಸಿದರು. ಪಾಕ್ ಗುಂಡಿನ ದಾಳಿಗೆ ಐವರು ಗ್ರಾಮಸ್ಥರು ಬಲಿಯಾಗಿದ್ದಾರೆ. ಮತ್ತು ವಿವಿಧ ವಸತಿ ಪ್ರದೇಶಗಳ 29 ಜನ ಗಾಯಗೊಂಡಿದ್ದಾರೆ ಎಂದು ಆರ್.ಎಸ್. ಪುರ ತಹಸಿಲ್ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ದೇವೇಂದರ್ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದರು. 25 ಮಂದಿ ಗಾಯಾಳುಗಳನ್ನು ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ನುಡಿದರು.
2014: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಕನಿಷ್ಠ ಮೂವರು ಗೆರಿಲ್ಲಾಗಳನ್ನು ಕೊಲ್ಲಲಾಗಿದೆ ಎಂದು ಹಿರಿಯ ಶ್ರೀನಗರದಲ್ಲಿ ತಿಳಿಸಿದರು. ತಾಂಗ್ಧರ್ ವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಹಿಂದಿನ ದಿನ ನಡುರಾತ್ರಿಯ ಬಳಿಕ ಗೆರಿಲ್ಲಾಗಳು ಗಡಿಯಿಂದ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಅವರನ್ನು ಕೊಂದು ಹಾಕಲಾಯಿತು ಎಂದು ಕರ್ನಲ್ ಭೃಜೇಶ್ ಪಾಂಡೆ ಸುದ್ದಿ ಸಂಸ್ಥೆಗೆ ತಿಳಿಸಿದರು.
2014:) ನವದೆಹಲಿ: ಗಡಿಯಾಚೆಯಿಂದ ಪಾಕಿಸ್ತಾನಿ ಸೈನಿಕರು ಭಾರಿ ಫಿರಂಗಿದಾಳಿ ನಡೆಸಿ ಐವರು ಗ್ರಾಮಸ್ಥರನ್ನು ಬಲಿ ತೆಗೆದುಕೊಂಡು 29 ಮಂದಿಯನ್ನು ಗಾಯಗೊಳಿಸಿದ ಪರಮ ನೀಚ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಭಾರತವು ಕದನ ವಿರಾಮ ಉಲ್ಲಂಘನೆಗಳನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ. 'ಪಾಕಿಸ್ತಾನವು ಈಗ ಕದನವಿರಾಮ ಉಲ್ಲಂಘನೆಗಳನ್ನು ನಿಲ್ಲಿಸಬೇಕು. ಭಾರತದಲ್ಲಿ ಕಾಲ ಬದಲಾಗಿದೆ ಎಂಬ ವಾಸ್ತವವನ್ನು ಅದು ಅರ್ಥ ಮಾಡಿಕೊಳ್ಳಬೇಕು' ಎಂದು ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು. ಕೇಂದ್ರವು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನಿ ಗುಂಡಿನ ದಾಳಿಯಿಂದ ತೊಂದರೆಗೊಳಗಾದ ನಿವಾಸಿಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದೆ ಎಂದು ಅವರು ನುಡಿದರು.
2014: ನವದೆಹಲಿ: ಪಾಕಿಸ್ತಾನವು ಪದೇ ಪದೇ ನಡೆಸುತ್ತಿರುವ ಕದನವಿರಾಮ ಉಲ್ಲಂಘನೆಗಳನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಖಂಡಿಸಿದರು. 'ಗಡಿಯಾಚೆಗಿನ ಪ್ರತಿಯೊಂದು ಪ್ರಚೋದನೆಗಳಿಗೂ ಸೂಕ್ತವಾಗಿ ಪ್ರತಿಕ್ರಿಯಿಸಲು ಭಾರತದ ಸಶಸ್ತ್ರ ಪಡೆಗಳು ಸಂಪೂರ್ಣ ಸಜ್ಜಾಗಿವೆ ಎಂದು ಅವರು ನುಡಿದರು. ತಾನು ಸೃಷ್ಟಿಸುತ್ತಿರುವ ವಾತಾವರಣವು ಖಂಡಿತವಾಗಿ ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಮಾಮೂಲಿಗೊಳಿಸಲು ಖಂಡಿತವಾಗಿ ನೆರವಾಗುವುದಿಲ್ಲ ಎಂದು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಜೇಟ್ಲಿ ಹೇಳಿದರು. ನಿರಂತರ ಕದನವಿರಾಮ ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಗಳಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಪಾಕಿಸ್ತಾನದ ಈ ಯತ್ನದ ಫಲವಾಗಿ ಕದನ ವಿರಾಮದ ಉಲ್ಲಂಘನೆಯಾಗುತ್ತಿದೆ. ಇಂತಹ ಕೃತ್ಯದ ಪರಿಣಾಮವಾಗಿಯೇ ಮುಗ್ಧ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯೆ ತಾನು ಸೃಷ್ಟಿ ಮಾಡುತ್ತಿರುವ ವಾತಾವರಣವು ಖಂಡಿತವಾಗಿ ಬಾಂಧವ್ಯ ಸುಧಾರಣೆಗೆ ನೆರವಾಗುವುದಿಲ್ಲ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ತನ್ನ ಹೊಣೆಗಾರಿಕೆ ನಿಭಾಯಿಸುವಲ್ಲಿ ಪಾಕಿಸ್ತಾನ ವಿಫಲವಾಗುತ್ತಿದೆ ಎಂದು ಜೇಟ್ಲಿ ಹೇಳಿದರು.
2014: ಟೋಕಿಯೊ: ಹವಾಯಿ ದ್ವೀಪದಲ್ಲಿ ವಿಶ್ವದ ಅತ್ಯಂತ ದೊಡ್ಡ ದೂರದರ್ಶಕ (ಟೆಲಿಸ್ಕೋಪ್) ನಿರ್ವಿುಸುವ ಕಾರ್ಯವನ್ನು ಭಾರತವು ಇತರ ಐದು ರಾಷ್ಟ್ರಗಳ ಜೊತೆಗೆ ಅಕ್ಟೋಬರ್ 7ರಂದು ಆರಂಭಿಸಲಿದೆ ಎಂದು ಟೋಕಿಯೋದ ಮಾಧ್ಯಮ 'ಜಪಾನ್ ಟೈಮ್ಸ್ ' ವರದಿ ಮಾಡಿತು. ಟಿಎಂಟಿ ಎಂದೂ ಪರಿಚಿತವಾದ 30 ಮೀಟರ್ ದೂರದರ್ಶಕವನ್ನು ಹವಾಯಿ ದ್ವೀಪದ ಮೌನ ಕಿಯ ಜ್ವಾಲಾಮುಖಿಯ ಶೃಂಗದ ಸಮೀಪ ನಿರ್ವಿುಸಲಾಗುತ್ತಿದೆ. 2022ರ ವೇಳೆಗೆ ದೂರದರ್ಶಕದ ನಿರ್ವಣ ಪೂರ್ಣಗೊಳ್ಳಲಿದೆ ಎಂದು ಮಾಧ್ಯಮದ ವರದಿ ಹೇಳಿತು.. ಭಾರತದ ಜೊತೆಗೆ ಜಪಾನ್, ಅಮೆರಿಕ, ಚೀನಾ ಮತ್ತು ಕೆನಡಾ ಈ ರಾಷ್ಟ್ರಗಳು ಈ ಕಾರ್ಯದಲ್ಲಿ ಸಹಯೋಗ ನೀಡುತ್ತಿವೆ. ಯೋಜನೆಯ ಅಂದಾಜು ವೆಚ್ಚ 147ಕೋಟಿ ಡಾಲರ್ಗಳಾಗಲಿದ್ದು ಜಪಾನ್ ಈ ವೆಚ್ಚದ ಕಾಲು ಭಾಗವನ್ನು ಭರಿಸುತ್ತದೆ ಎಂದು ವರದಿ ತಿಳಿಸಿತು. ವಿಶ್ವದ ಈ ಬೃಹತ್ ದೂರದರ್ಶಕ ನಿರ್ಮಾಣ ಕಾರ್ಯದ ಉದ್ಘಾಟನಾ ಸಮಾರಂಭದಲ್ಲಿ ಈ ರಾಷ್ಟ್ರಗಳ ಸುಮಾರು 100 ಮಂದಿ ಬಾಹ್ಯಾಕಾಶ ತಜ್ಞರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು.
2014: ಶಿಲ್ಲಾಂಗ್: ಮೇಘಾಲಯದ ರಿ-ಭೊಯಿ ಜಿಲ್ಲೆಯಲ್ಲಿ ಭಾರಿ ಭೂಕುಸಿತದ ಪರಿಣಾಮವಾಗಿ ಮಣ್ಣಿನ ಮಡಿಯಲ್ಲಿ ಕಾರೊಂದು ಸಿಕ್ಕಿಹಾಕಿಕೊಂಡು ಅದರೊಳಗಿದ್ದ ವ್ಯಕ್ತಿ ಜೀವಂತ ಸಮಾಧಿಯಾದ ಘಟನೆ ಘಟಿಸಿತು. ಈ ಭೂಕುಸಿತದ ಪರಿಣಾಮವಾಗಿ ಸಹಸ್ರಾರು ಮಂದಿ ಹಲವು ಗಂಟೆಗಳ ಕಾಲ ದಿಗ್ಬಂಧಿತರಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು ಎಂದು ಪೊಲೀಸರು ತಿಳಿಸಿದರು. ಹಿಂದಿನ ದಿನ ಸಂಜೆ 6 ಗಂಟೆ ಸುಮಾರಿಗೆ ಉಮ್ಲಿಂಗ್ನಲ್ಲಿ ಗುವಾಹಟಿ-ಶಿಲ್ಲಾಂಗ್ ಚತುಷ್ಪಥ ರಸ್ತೆಯಲ್ಲಿ ಮಣ್ಣು ಕುಸಿದು ಬೀಳುವುದರ ಜೊತೆಗೆ ಬಂಡೆಗಳೂ ಉರುಳಿಬಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಪೈಕಿ ಒಂದು ಕಾರು ಮಣ್ಣಿನ ಅಡಿಯಲ್ಲಿ ಸಿಲುಕಿ ಅದರೊಳಗಿದ್ದ ನಾಗಾಲ್ಯಾಂಡಿನ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದರು.
2012:: ಖ್ಯಾತ ರಂಗಭೂಮಿ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಆರ್. ನಾಗರತ್ನಮ್ಮ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ಈದಿನ (6/10/2012) ಬೆಂಗಳೂರಿನ ರಾಜಾಜಿನಗರದಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಪುರುಷರಿಗೆ ಸರಿಸಮಾನರಾಗಿ ನಾಟಕಸಂಸ್ಥೆ ಕಟ್ಟಿ ಮಹಿಳೆಯರಿಂದಲೇ ನಾಟಕ ಮಾಡಿಸಿ ಪುರುಷ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದ ನಾಗರತ್ನಮ್ಮ ಅವರು `ಭೀಮನ ಪಾತ್ರಧಾರಿ ನಾಗರತ್ನಮ್ಮ' ಎಂದೇ ಹೆಸರುವಾಸಿಯಾಗಿದ್ದರು. ಪ್ರಸ್ತುತ ವರ್ಷಲೇ ಏಪ್ರಿಲ್ ನಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ `ಪದ್ಮಶ್ರೀ' ಪ್ರಶಸ್ತಿಯನ್ನು ಸ್ವೀಕರಿಸಿದ್ದ ನಾಗರತ್ನಮ್ಮ ಅವರು ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ನಾಟಕ ಅಕಾಡೆಮಿ ಪ್ರಶಸ್ತಿ, ರವೀಂದ್ರ ರತ್ನ ನಾಟಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಬಗಲಿಗೆ ಏರಿಸಿಕೊಂಡಿದ್ದರು. ನಾಗರತ್ಮಮ್ಮ ಅವರು 1958ರಲ್ಲಿ ಕಟ್ಟಿದ್ದ ಶ್ರೀ ಸ್ತ್ರೀನಾಟಕ ಮಂಡಳಿಯು ಎಲ್ಲೇ ಹೋದರೂ 50 ರಿಂದ 100 ಪ್ರದರ್ಶನಗಳನ್ನು ಕಾಣುತ್ತಿದ್ದುದು ವಿಶೇಷ. ಅವರ ತಂಡದಲ್ಲಿ ಮಹಿಳೆಯರೇ ಪುರುಷ ಪಾತ್ರಗಳನ್ನು ನಿರ್ವಹಿಸುತ್ತಿದ್ದುದು ಒಂದು ಐತಿಹಾಸಿಕ ದಾಖಲೆ. ಇವರ ನಾಟಕಗಳನ್ನು ಜನ ಮಳೆ ಸುರಿದರೂ ಕೊಡೆ ಹಿಡಿದುಕೊಂಡು ವೀಕ್ಷಿಸುತ್ತಿದ್ದರು. ಮೈಸೂರಿನಲ್ಲಿ 1926ರಲ್ಲಿ (21-6-1926) ಕೃಷ್ಣಭಟ್ಟ- ರುಕ್ಮಿಣಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ನಾಗರತ್ನಮ್ಮ ಅವರು ಕಲಾಸೇವಾ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ವರನಟ ರಾಜಕುಮಾರ್ ಅವರಂತಹ ಹಿರಿಯ ನಟರೊಂದಿಗೆ ಅಭಿನಯಿಸಿದ ಇವರು ಮಂಜುನಾಥ ಕೃಪಾಪೋಷಿತ ನಾಟಕ ಸಂಸ್ಥೆ, ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರಮಂಡಳಿ, ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಕಂಪೆನಿ ಇತ್ಯಾದಿ ಹಲವಾರು ಕಂಪೆನಿಗಳ ಮೂಲಕ ರಾಜ್ಯಾದ್ಯಂತ ತಿರುಗಾಡಿ ಅಸಂಖ್ಯಾತ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ಕೃಷ್ಣಲೀಲಾ ನಾಟಕದಲ್ಲಿ ಕೃಷ್ಣನ ಪಾತ್ರ, ಕೃಷ್ಣ ಗಾರುಡಿಯಲ್ಲಿ ಭೀಮ, ಸುಭದ್ರಾ ಪರಿಣಯದಲ್ಲಿ ಬಲರಾಮ, ಬೇಡರ ಕಣ್ಣಪ್ಪದಲ್ಲಿ ಕಣ್ಣಪ್ಪ, ಸದಾರಮೆಯಲ್ಲಿ ಕಳ್ಳ, ಸಂಸಾರ ನೌಕೆಯಲ್ಲಿ ಸುಂದರನಂತಹ ಪುರುಷ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದುದು ಇವರನ್ನು ರಂಗಭೂಮಿ ಕ್ಷೇತ್ರದ ಧ್ರುವತಾರೆಯನ್ನಾಗಿ ಮಾಡಿತು. ಮಾಸ್ಟರ್ ಹಿರಿಯಣ್ಣಯ್ಯ ಅವರು ನಾಗರತ್ನಮ್ಮ ಅವರನ್ನು `ರಂಗಭೂಮಿಯ ಸಿಂಹಿಣಿ' ಎಂದೇ ಕರೆಯುತ್ತಿದ್ದರು. ನಾಗರತ್ನಮ್ಮ ಅವರ ಪತಿ ಪಾರ್ಥಸಾರಥಿ ಕೆಲ ಸಮಯದ ಹಿಂದೆ ತೀರಿಕೊಂಡಿದ್ದರು. ಅವರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಅಪಾರ ಸಂಖ್ಯೆಯ ಬಂಧುಗಳು, ಅಭಿಮಾನಿಗಳನ್ನು ಅಗಲಿದರು.
2008: ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಿಸಿಗೆ ಕರಗಿದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು, ಈದಿನ ವಹಿವಾಟಿನಲ್ಲಿ 725 ಅಂಶಗಳಷ್ಟು ಭಾರಿ ಕುಸಿತ ದಾಖಲಿಸಿತು. ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 12 ಸಾವಿರ ಅಂಶಗಳ ಗಡಿಗಿಂತ ಕೆಳಗೆ ಇಳಿಯಿತು.. ವಿದೇಶಿ ನಿಧಿಗಳು ಸುರಕ್ಷಿತ ಹೂಡಿಕೆ ತಾಣ ಕಂಡುಕೊಳ್ಳಲು ಸಾಮೂಹಿಕವಾಗಿ ವಹಿವಾಟಿನಿಂದ ದೂರ ಸರಿದದ್ದರಿಂದ ಈ ದಾಖಲೆ ಪ್ರಮಾಣದ ಕುಸಿತ ಸಂಭವಿಸಿತು..
2008: ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಿಸಿಗೆ ಕರಗಿದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು, ಈದಿನ ವಹಿವಾಟಿನಲ್ಲಿ 725 ಅಂಶಗಳಷ್ಟು ಭಾರಿ ಕುಸಿತ ದಾಖಲಿಸಿತು. ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 12 ಸಾವಿರ ಅಂಶಗಳ ಗಡಿಗಿಂತ ಕೆಳಗೆ ಇಳಿಯಿತು.. ವಿದೇಶಿ ನಿಧಿಗಳು ಸುರಕ್ಷಿತ ಹೂಡಿಕೆ ತಾಣ ಕಂಡುಕೊಳ್ಳಲು ಸಾಮೂಹಿಕವಾಗಿ ವಹಿವಾಟಿನಿಂದ ದೂರ ಸರಿದದ್ದರಿಂದ ಈ ದಾಖಲೆ ಪ್ರಮಾಣದ ಕುಸಿತ ಸಂಭವಿಸಿತು..
2008: ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಛೋಟ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾದ ನಾಲ್ವರು ಸಾಫ್ಟ್ ವೇರ್ ಎಂಜಿನಿಯರುಗಳು ಸೇರಿದಂತೆ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ 20 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿದವು. ದೆಹಲಿ ಮತ್ತು ಅಹಮದಾಬಾದ್ ಬಾಂಬ್ ಸ್ಛೋಟಕ್ಕೆ ಮುನ್ನ ಮಾಧ್ಯಮಗಳಿಗೆ ಇ-ಮೇಲ್ ಸಂದೇಶ ಕಳುಹಿಸಿದ ನಾಲ್ವರು ಸಾಫ್ಟ್ ವೇರ್ ಎಂಜನಿಯರುಗಳ ಬಂಧನ ಸಹಿತವಾಗಿ ಈ ಎಲ್ಲ ಬಂಧನದ ಕಾರ್ಯಾಚರಣೆ ಕಳೆದ ಹತ್ತು ದಿನಗಳಲ್ಲಿ ನಡೆಯಿತು ಎಂದು ಪೊಲೀಸ್ ಕಮಿಷನರ್ ಹಸನ್ ಗಫೂರ್ ಪ್ರಕಟಿಸಿದರು.. ಬಂಧಿತ ಸಾಫ್ಟ್ ವೇರ್ ಎಂಜಿನಿಯರ್ ಮೊಹಮದ್ ಮನ್ಸೂರ್ ಅಸ್ಗರ್ ಪೀರ್ಬಿ (31) ಬಹು ರಾಷ್ಟ್ರೀಯ ಕಂಪೆನಿಯೊಂದರಲ್ಲಿ ಪ್ರಿನ್ಸಿಪಲ್ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದು, ಆತನ ವಾರ್ಷಿಕ ಸಂಬಳ 19 ಲಕ್ಷ ರೂಪಾಯಿಗಳು. ಬಂಧಿತ ಇತರ ಎಂಜಿನಿಯರುಗಳು: ಐಟಿ ಕಂಪೆನಿಯೊಂದರ ಸೀನಿಯರ್ ಟಿಕ್ನಿಕಲ್ ಅಡ್ವೈಸರ್ ಮೊಬಿನ್ ಖಾದಿರ್ ಶೇಖ್ (24), ಮೆಕ್ಯಾನಿಕಲ್ ಎಂಜಿನಿಯರ್ ಅಸಿಫ್ ಬದ್ರುದ್ದೀನ್ (22). ಇ-ಮೇಲ್ ಸಂದೇಶಗಳನ್ನು ನವಿ ಮುಂಬೈನ ಸನ್ ಪಡಾ ಉಪನಗರ, ಮಾತುಂಗಾದ ಕೈಲಾಸ್ ಕಾಲೇಜ್ ಮತ್ತು ಚೆಂಬೂರಿನ ಖಾಸಗಿ ಕಂಪೆನಿಯಿಂದ ಕಳುಹಿಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಯಿತು. 2005ರಿಂದೀಚೆಗೆ ದೇಶದ ನಾನಾ ಭಾಗಗಳಲ್ಲಿ ಸಂಭವಿಸಿದ ಬಾಂಬ್ ಸ್ಛೋಟಗಳಲ್ಲಿ ಎಲ್ಲಾ ಬಂಧಿತರೂ ಪಾಲ್ಗೊಂಡಿದ್ದರು ಹಾಗೂ 20ರಿಂದ 35 ವರ್ಷದೊಳಗಿನ ಇವರೆಲ್ಲರೂ ಉನ್ನತ ಶಿಕ್ಷಣ ಪಡೆದವರು.
2008: ಗರ್ಭಕೋಶದ ಕ್ಯಾನ್ಸರಿಗೆ ಕಾರಣವಾದ ಹ್ಯೂಮನ್ ಪಪಿಲೋಮಾ ವೈರಸ್ (ಎಚ್ ಪಿ ವಿ) ಕಂಡುಹಿಡಿದ ಜರ್ಮನಿಯ ಹೆರಾಲ್ಡ್ ಝರ್ ಹೌಸೆನ್ (72) ಹಾಗೂ ಏಡ್ಸಿಗೆ ಕಾರಣವಾಗುವ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್ ಐ ವಿ) ಕಂಡು ಹಿಡಿದ ಫ್ರಾನ್ಸಿನ ಸಂಶೋಧಕರಾದ ಫ್ರಾಕೋಸ್ ಬರ್ರೆ-ಸಿನೋಸಿ (61) ಮತ್ತು ಲುಕ್ ಮೊಂಟಾಗ್ನೈರ್ (76) 2008ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಜಂಟಿಯಾಗಿ ಪಾತ್ರರಾದರು. 10 ದಶಲಕ್ಷ ಕ್ರೋನರ್ (1.4 ದಶಲಕ್ಷ ಡಾಲರ್, ಅಂದಾಜು 56 ಲಕ್ಷ ರೂಪಾಯಿ) ಪ್ರಶಸ್ತಿ ಮೊತ್ತದ ಪೈಕಿ ಅರ್ಧದಷ್ಟನ್ನು ಜರ್ಮನಿಯ ವಿಜ್ಞಾನಿ ಪಡೆದರೆ, ಇನ್ನುಳಿದ ಅರ್ಧ ಪ್ರಶಸ್ತಿ ಮೊತ್ತವನ್ನು ಫ್ರಾನ್ಸಿನ ಸಂಶೋಧಕರು ಹಂಚಿಕೊಂಡರು. ಏಡ್ಸಿನ ಜೈವಿಕ ಲಕ್ಷಣ ತಿಳಿದುಕೊಳ್ಳಲು ಬರ್ರೆ-ಸಿನೋಸಿ ಮತ್ತು ಮಾಂಟೆಗ್ನೈರ್ ಅವರು ಸಂಶೋಧಿಸಿದ ಎಚ್ ಐ ವಿ ಯ ಪರೀಕ್ಷೆ ಅಗತ್ಯ. 1980ರ ದಶಕದಲ್ಲಿ ಈ ಇಬ್ಬರು ನಡೆಸಿದ ಈ ಸಂಶೋಧನೆಯಿಂದ ಎಚ್ ಐ ವಿ ಸೋಂಕು ಪೀಡಿತ ರೋಗಿಗಳ ಮತ್ತು ಅವರ ರಕ್ತದ ಪರೀಕ್ಷೆಗೆ ಅನುಕೂಲವಾಯಿತು ಹಾಗೂ ಏಡ್ಸ್ ನಿಯಂತ್ರಣಕ್ಕೆ ವ್ಯವಸ್ಥಿತ ಕ್ರಮ ಕೈಗೊಳ್ಳುವುದು ಸಾಧ್ಯವಾಯಿತು. ಎಂದು ಸನ್ಮಾನ ಪತ್ರ ಹೇಳಿತು. ಗರ್ಭಕೋಶ ಕ್ಯಾನ್ಸರ್ ಮಹಿಳೆಯರಲ್ಲಿ ಕಾಣಿಸುವ ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಕಾಯಿಲೆ. ಝರ್ ಹುಸೆನ್ ಅವರು ಹ್ಯೂಮನ್ ಪಪಿಲೋಮಾ ವೈರಸ್ (ಎಚ್ಪಿವಿ) ಕಂಡು ಹಿಡಿದ ಕಾರಣ ಈ ಕ್ಯಾನ್ಸರಿಗೆ ಸೂಕ್ತ ಔಷಧ ಸಿದ್ಧಪಡಿಸುವುದು ಸಾಧ್ಯವಾಯಿತು ಎಂದೂ ಸನ್ಮಾನ ಪತ್ರ ಉಲ್ಲೇಖಿಸಿತು.
2008: ಚೀನಾದ ಗಡಿ ಭಾಗ ಕಿರ್ಗಿಸ್ಥಾನ ಪರ್ವತ ಪ್ರದೇಶದಲ್ಲಿ ಮತ್ತು ಟಿಬೆಟಿನ ಲ್ಹಾಸಾ ಸುತ್ತಮುತ್ತ ಸಂಭವಿಸಿದ ಪ್ರಬಲ ಭೂಕಂಪನದಿಂದ ಒಟ್ಟು 102ಕ್ಕೂ ಹೆಚ್ಚು ಜನರು ಮೃತರಾಗಿ ಇತರ ನೂರಾರು ಮಂದಿ ಗಾಯಗೊಂಡರು. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.6ರಷ್ಟಿತ್ತು. ಅಂತಾರಾಷ್ಟ್ರೀಯ ಕಾಲಮಾನ ಸುಮಾರು 2 ಗಂಟೆಗೆ ಈ ದುರಂತ ಸಂಭವಿಸಿತು. ಭುಕಂಪದಿಂದಾಗಿ ಅಲೈಸ್ಕಿ ಜಿಲ್ಲೆಯ ತಿಯಾನ್ ಶಾನ್ ಪರ್ವತ ಪ್ರದೇಶದ ನೂರಾ ಗ್ರಾಮದಲ್ಲಿ ಮನೆಗಳು ಸಂಪೂರ್ಣ ನೆಲಸಮವಾದವು.
2008: ಶ್ರೀಲಂಕೆಯ ಅನೂರಾಧಪುರ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಮಾನವ ಬಾಂಬ್ ದಾಳಿಯಲ್ಲಿ ಮಾಜಿ ಮುಖ್ಯ ಸೇನಾ ದಂಡನಾಯಕ ಹಾಗೂ ಉತ್ತರ- ಕೇಂದ್ರ ಪ್ರಾಂತೀಯ ಮಂಡಳಿಯ ಹಾಲಿ ವಿರೋಧ ಪಕ್ಷದ ನಾಯಕ ಜನಕ ಪೆರೇರಾ, ಅವರ ಪತ್ನಿ ಮತ್ತು ಹಲವಾರು ಮಂದಿ ಪ್ರಾಂತೀಯ ರಾಜಕಾರಣಿಗಳು ಸೇರಿದಂತೆ 27 ಮಂದಿ ಮೃತರಾಗಿ, ಇತರ 80ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಯುನೈಟೆಡ್ ನ್ಯಾಷನಲ್ ಪಾರ್ಟಿಯ ಹೊಸ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಂಕಿತ ತಮಿಳು ಉಗ್ರಗಾಮಿಯೊಬ್ಬ ತಾನು ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟಿಸಿದಾಗ ಈ ದುರಂತ ಸಂಭವಿಸಿತು.
2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಶಿಫಾರಸಿನಂತೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಬಿಜೆಪಿಯ 17 ಸಚಿವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದರು. ಪಕ್ಷದ ಮುಖಂಡರಿಗೆ ರಾಜೀನಾಮೆ ಸಲ್ಲಿಸಿದ್ದ ಪ್ರವಾಸೋದ್ಯಮ ಸಚಿವ ಬಿ. ಶ್ರೀರಾಮುಲು ಅವರನ್ನೂ ಮುಖ್ಯಮಂತ್ರಿ ಶಿಫಾರಸಿನಂತೆ ಸಂಪುಟದಿಂದ ಕೈ ಬಿಡಲಾಯಿತು. 2006 ಫೆಬ್ರುವರಿ 3ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಇಬ್ಬರೂ ಪರಸ್ಪರ ತಬ್ಬಿಕೊಂಡು ಜನತೆಯತ್ತ ಕೈಬೀಸಿ ಸಾರಿದ್ದ ಮೈತ್ರಿಯ ಸಂದೇಶ 20 ತಿಂಗಳುಗಳಲ್ಲೇ ಖತಂಗೊಂಡಿತು.
2007: ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಅವರು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಸಿಂಗಪುರದ ಪೀಟರ್ ಗಿಲ್ ಕ್ರಿಸ್ಟ್ ಅವರು ನ್ಯೂಜಿಲೆಂಡ್ ಓಪನ್ ಟೂರ್ನಿಯಲ್ಲಿ ಗರಿಷ್ಠ ಪಾಯಿಂಟ್ ಸಂಗ್ರಹಿಸುವ ಮೂಲಕ ಮುರಿದರು. 1992ರಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಗೀತ್ ಸೇಥಿ 1276 ಪಾಯಿಂಟುಗಳನ್ನು ಗಳಿಸಿದ್ದು ದಾಖಲೆಯಾಗಿತ್ತು. ಹ್ಯಾಮಿಲ್ಟನ್ ಕಾಸ್ಮೋಪಾಲಿಟನ್ ಕ್ಲಬ್ಬಿನಲ್ಲಿ ಈದಿನ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡಿನ ರೋಸ್ ಎಲಿಕ್ಸಿ ವಿರುದ್ಧ ಆಡಿದ ಗಿಲ್ ಕ್ರಿಸ್ಟ್ ಒಟ್ಟು 1346 ಪಾಯಿಂಟುಗಳನ್ನು ಸಂಗ್ರಹಿಸಿದರು.
2007: ಉದ್ದೀಪನ ಮದ್ದು ಸೇವಿಸಿದ್ದು ನಿಜವಾಗಿದ್ದರೂ ಅದನ್ನು ದೀರ್ಘ ಕಾಲದವರೆಗೆ ಮುಚ್ಚಿಟ್ಟಿದ್ದ ಅಮೆರಿಕದ ಖ್ಯಾತ ಅಥ್ಲೆಟ್ ಮೇರಿಯನ್ ಜೋನ್ಸ್ ನ್ಯೂಯಾರ್ಕಿನಲ್ಲಿ ಈದಿನ ಕ್ಷಮೆ ಕೋರಿದರು. ನ್ಯಾಯಾಲಯದಿಂದ ಹೊರಬಂದ ಬಳಿಕ ಅವರು 'ನಿಮ್ಮ ನಂಬಿಕೆಗೆ ದ್ರೋಹಬಗೆದೆ' ಎಂದು ಹೇಳಿದರು.
2007: ಪಾಕಿಸ್ಥಾನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪರ್ವೇಜ್ ಮುಷರಫ್ ಅವರು ಚಲಾಯಿಸಲಾದ 257 ಮತಗಳ ಪೈಕಿ 252 ಮತಗಳನ್ನು ಪಡೆದು ಭಾರಿ ಗೆಲುವು ಸಾಧಿಸಿದರು. ಆದರೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ ಮುಷರಫ್ ಸ್ಪರ್ಧೆಯ ಸಂವಿಧಾನಾತ್ಮಕ ಅಂಶಗಳ ವಿವಾದದ ಬಗ್ಗೆ ಅಂತಿಮ ತೀರ್ಪು ನೀಡುವವರೆಗೆ ಫಲಿತಾಂಶವನ್ನು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿರುವ ಕಾರಣ ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಲಿಲ್ಲ. ಎಂಟು ವರ್ಷಗಳ ಹಿಂದೆ ರಕ್ತರಹಿತ ಕ್ರಾಂತಿಯ ಮೂಲಕ ನವಾಜ್ ಷರೀಫ್ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರದ ಗದ್ದುಗೆ ಏರಿದ ಮುಷರಫ್ ಅವರನ್ನು ಹತ್ಯೆ ಮಾಡಲು ಮೂರು ಪ್ರಯತ್ನಗಳು ನಡೆದಿದ್ದವು. 18ನೇ ವರ್ಷ ವಯಸ್ಸಿನಲ್ಲಿ ಪಾಕಿಸ್ಥಾನದ ಸೇನೆಗೆ ಸೇರಿದ ಮುಷರಫ್, ವಿವಿಧ ಸೇನಾ ಅಕಾಡೆಮಿಗಳಲ್ಲಿ ತರಬೇತಿ ಪಡೆದು 1966ರಲ್ಲಿ ಕಮಾಂಡೋ ಆದರು. ಇಬ್ಬರು ಸೇನಾಧಿಕಾರಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ಷರೀಫ್ ಅವರು ಮುಷರಫ್ ಅವರನ್ನು ಸೇನಾ ದಂಡನಾಯಕನನ್ನಾಗಿ 1998ರಲ್ಲಿ ನೇಮಕ ಮಾಡಿದರು. ನಂತರ 1999ರ ಅಕ್ಟೋಬರ್ 12ರಂದು ಐಎಸ್ಐ ಮುಖ್ಯಸ್ಥ ಕ್ವಾಜಾ ಜಿಯಾವ್ದುದೀನ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡಲು ಷರೀಫ್ ಪ್ರಯತ್ನ ಮಾಡಿದ್ದೇ ಅವರಿಗೆ ಮುಳುವಾಯಿತು. ಶ್ರೀಲಂಕಾದಿಂದ ಕರಾಚಿಗೆ ವಿಮಾನದಲ್ಲಿ ಬರುತ್ತಿದ್ದ ಮುಷರಫ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡಬಾರದು ಎಂದು ಷರೀಫ್ ಆದೇಶಿಸಿದ್ದರು. ಆದರೆ ಮುಷರಫ್ ಅವರಿಗೆ ಇತರ ಸೇನಾ ಅಧಿಕಾರಿಗಳು ಬೆಂಬಲ ನೀಡಿದ್ದರಿಂದ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ನಂತರ ನಡೆದ ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ನವಾಜ್ ಷರೀಫ್ ಅಧಿಕಾರ ಕಳೆದುಕೊಂಡು ಜೈಲಿಗೆ ಹೋದರು. ಅಲ್ಲಿಂದ ಮುಷರಫ್ ಅವರ ಅಧಿಕಾರ ಚಲಾವಣೆಗೆ ಅಡ್ಡಿ ಇಲ್ಲದೆ ಎಂಟು ವರ್ಷಗಳ ಕಾಲ ದೇಶದ ಅಧ್ಯಕ್ಷರಾಗಿ ಹಾಗೂ ಸೇನಾ ಮುಖ್ಯಸ್ಥರಾಗಿ ಆಡಳಿತ ನಡೆಸುತ್ತ ಬಂದರು. ಈಗ ಮತ್ತೆ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಲು ಚುನಾವಣೆ ಎದುರಿಸಿದರು.
2006: ರೂಪದರ್ಶಿ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮನುಶರ್ಮಾನ ತಂದೆ ಹರಿಯಾಣದ ವಿದ್ಯುತ್ ಸಚಿವ ವಿನೋದ ಶರ್ಮಾ ರಾಜೀನಾಮೆ ನೀಡಿದರು.
2006: ಫಿಲಿಪ್ಪೀನ್ಸಿನ ಮರ್ಲಿನ್ ಎಸ್ಪೆರಾಟ್ ಎಂಬ ಪತ್ರಕರ್ತೆಯನ್ನು ಹತ್ಯೆಗೈದ ಅಪರಾಧಕ್ಕಾಗಿ ಮನಿಲಾ ನ್ಯಾಯಾಲಯ 3 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಮನಿಲಾದ ಸುಲ್ತಾನ್ ಕುದರತ್ ಪ್ರಾಂತದ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಈ ಮೂವರು ಬಾಡಿಗೆ ಹಂತಕರು ಆಕೆಯ ಕೋಣೆಯನ್ನು ಸುಟ್ಟು ಹಾಕಿ ಮಕ್ಕಳ ಎದುರೇ ಆಕೆಯನ್ನು ಗುಂಡಿಟ್ಟು ಕೊಂದಿದ್ದರು.
2006: ಪೂರ್ವ ಜಪಾನಿನ ಕಮಿಸು ಕಡಲತೀರದಲ್ಲಿ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಹಡಗು ಬೆಂಕಿ ತಗುಲಿ ಸಮುದ್ರದಲ್ಲಿ ಮುಳಗಿದ ಕಾರಣ ಒಬ್ಬ ಭಾರತೀಯ ನಾವಿಕ ಮೃತಪಟ್ಟು ಒಂಬತ್ತು ಮಂದಿ ಕಾಣೆಯಾದರು. ಹಡಗಿನಲ್ಲಿ ಇದ್ದ 25 ಮಂದಿ ಸಿಬ್ಬಂದಿ ಭಾರತೀಯರು. ಹಡಗಿಗೆ ಸಂಜೆ ವೇಳೆಗೆ ಬೆಂಕಿ ತಗುಲಿ ಅದರ ಎಂಜಿನ್ನುಗಳು ವಿಫಲಗೊಂಡವು. ಹಡಗು ಭಾರಿ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಎರಡು ಹೋಳಾಯಿತು.
1981: ಅರಬ್ ಇಸ್ರೇಲಿ ಯುದ್ಧದ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೈರೋದಲ್ಲಿ ಸೇನಾ ಪರೇಡ್ ನಡೆಯುತ್ತಿದ್ದಾಗ ಮುಸ್ಲಿಂ ಉಗ್ರಗಾಮಿಗಳು ಈಜಿಪ್ಟ್ ಅಧ್ಯಕ್ಷ ಸಾದತ್ ಅವರನ್ನು ಹತ್ಯೆಗೈದರು. 1973ರಲ್ಲಿ ಇದೇ ದಿನ ಯಹೂದ್ಯರ ಧಾರ್ಮಿಕ ರಜಾದಿನವಾದ `ಅಟೋನ್ ಮೆಂಟ್ ದಿನ'ದಂದು (ಯೊಮ್ ಕಿಪ್ಪರ್) ಈಜಿಪ್ಟ್ ಹಾಗೂ ಸಿರಿಯಾ ಮೇಲೆ ಇಸ್ರೇಲ್ ಹಠಾತ್ ದಾಳಿ ನಡೆಸಿತ್ತು.
1974: ಮಾಜಿ ರಕ್ಷಣಾ ಸಚಿವ ವೆಂಗಾಲಿಲ್ ಕೃಷ್ಣನನ್ ಕೃಷ್ಣಮೆನನ್ ನಿಧನ.
1963: ಸ್ವಾತಂತ್ರ್ಯ ಹೋರಾಟಗಾರ ಬಾಬಾ ಖರಕ್ಸಿಂಗ್ ನಿಧನ.
1954: ಸಾಹಿತಿ ಬಿ.ಜೆ. ಸುವರ್ಣ ಜನನ.
1946: ಬಾಲಿವುಡ್ ತಾರೆ ವಿನೋದ ಖನ್ನಾ ಜನನ.
1946: ಭಾರತೀಯ ಚಿತ್ರ ನಟ, ರಾಜಕಾರಣಿ ವಿನೋದ್ ಖನ್ನಾ ಜನ್ಮದಿನ.
1946: ಸಾಹಿತಿ ಲಲಿತಾ ವಿ. ಕೋಪರ್ಡೆ ಜನನ.
1940: ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್ ಅವರು ಶ್ರೀನಿವಾಸರಾವ್- ಸೀತಮ್ಮ ದಂಪತಿಯ ಮಗನಾಗಿ ಉಡುಪಿ ಜಿಲ್ಲೆಯ ತೆಂಕನಿಡಿಯೂರಿನಲ್ಲಿ ಜನಿಸಿದರು.
1927: ವಾರ್ನರ್ ಸಹೋದರರ ಪ್ರಪ್ರಥಮ ಯಶಸ್ವೀ ಟಾಕಿ ಚಲನಚಿತ್ರ `ದಿ ಜಾಝ್ ಸಿಂಗರ್' ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನಗೊಂಡಿತು. ಅಲ್ ಜೋಲ್ಸನ್ ಈ ಚಿತ್ರದಲ್ಲಿ ನಟಿಸಿದ್ದರು. ಟಾಕಿ ಚಿತ್ರಗಳ ನಿರ್ಮಾಣಕ್ಕೆ ಕಾರಣವಾದ `ವಿಟಾಫೋನ್' ಪ್ರಕ್ರಿಯೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೇಟೆಂಟ್ ಪಡೆದುಕೊಳ್ಳಲು ತಮ್ಮ ಸಹೋದರರನ್ನು ಮನವೊಲಿಸಿದ್ದ ಸ್ಯಾಮ್ ವಾರ್ನರ್ ಚಿತ್ರ ಬಿಡುಗಡೆಗೆ 24 ಗಂಟೆ ಮೊದಲು ಅಸು ನೀಗಿದ.
1893: ಭಾರತೀಯ ಖಭೌತ ತಜ್ಞ ಮೇಘನಾದ ಎನ್. ಸಹಾ (1893-1956) ಜನ್ಮದಿನ.
1892: ಖ್ಯಾತ ಇಂಗ್ಲಿಷ್ ಕವಿ ಅಲ್ ಫ್ರೆಡ್ ಲಾರ್ಡ್ ಟೆನ್ನಿಸನ್ (1809-1892) ತಮ್ಮ 83ನೇ ವಯಸ್ಸಿನಲ್ಲಿ ಸರ್ರೇಯಲ್ಲಿ ನಿಧನರಾದರು.
1887: ಸ್ವಿಸ್ ಶಿಲ್ಪಿ, ನಗರ ಯೋಜಕ ಚಾರ್ಲ್ಸ್ -ಎಡೋರ್ಡ್ ಜೀನ್ನರೆಟ್ (1887-1965) ಜನ್ಮದಿನ. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಈ ಸ್ವಿಸ್ ಶಿಲ್ಪಿ ಭಾರತದ ಚಂಡೀಗಢ ನಗರದ ವಿನ್ಯಾಸಕಾರರ ತಂಡದಲ್ಲಿ ಒಬ್ಬ.
1883: ಪ್ಯಾರಿಸ್ಸಿನಿಂದ ಕಾನ್ ಸ್ಟಾಂಟಿನೋಪಲ್ಲಿಗೆ (ಈಗಿನ ಇಸ್ತಾಂಬುಲ್) ತನ್ನ ಉದ್ಘಾಟನಾ ಪಯಣವನ್ನು ಓರಿಯಂಟ್ ಎಕ್ಸ್ಪ್ರೆಸ್ ಪೂರ್ಣಗೊಳಿಸಿತು. ಈ ಪಯಣಕ್ಕೆ ಅದು 78 ಗಂಟೆಗಳನ್ನು ತೆಗೆದುಕೊಂಡಿತು. ಈ ಲಕ್ಸುರಿ ರೈಲು ಪಯಣವು ಜಾರ್ಜ್ ನೆಗೆಲ್ ಮೇಕರನ ಮೆದುಳಿನ ಕೂಸು. ಪ್ಯಾರಿಸ್ನಿಂದ ಬಾಲ್ಟಿಕ್ ವಗಿನ ರಾಷ್ಟ್ರಗಳನ್ನು ಮತ್ತು ಗಡಿಗಳನ್ನು ಹಾದು ಅಂತಿಮವಾಗಿ ಬಲ್ಗೇರಿಯಾದ ವರ್ನಾದಿಂದ ಕಾನ್ ಸ್ಟಾಂಟಿನೋಪಲಿಗೆ ಸಮುದ್ರಯಾನದ ಮೂಲಕವಾಗಿ ತಲುಪುವಂತಹ ಪಯಣದ ಕಲ್ಪನೆ ಆತನದಾಗಿತ್ತು. ಈ ಪಯಣದ ಮಧ್ಯೆ ಸಂಭವಿಸಿದ ಘಟನಾವಳಿಗಳನ್ನೇ ಆಧರಿಸಿ ಈ ರೈಲಿನಲ್ಲಿ ಸತತ ಪ್ರಯಾಣಿಸುತ್ತಿದ್ದ ಅಗಾಥಾ ಕ್ರಿಸ್ತೀ ``ಮರ್ಡರ್ ಆನ್ ಓರಿಯಂಟ್ ಎಕ್ಸ್ಪ್ರೆಸ್'' ಕಾದಂಬರಿ ರಚಿಸಿದರು
No comments:
Post a Comment