ಇಂದಿನ ಇತಿಹಾಸ
ಅಕ್ಟೋಬರ್ 0 7
2014: ಸ್ವೀಡನ್: ನೀಲ ಬೆಳಕು ಹೊರಸೂಸುವ ಡಿಯೋಡ್ (ಬ್ಲೂ ಲೈಟ್ ಎಮಿಟಿಂಗ್
ಡಿಯೋಡ್ - ಬ್ಲೂ ಲೆಡ್) ಸಂಶೋಧನೆ ಮಾಡಿದ್ದಕ್ಕಾಗಿ ಜಪಾನಿನ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರಕ್ಕೆ
ನೀಡಲಾಗುವ 2014ರ ನೊಬೆಲ್ ಬಹುಮಾನವನ್ನು ಘೋಷಿಸಲಾಯಿತು. ಫ್ರೊಫೆಸರ್ ಇಸಾಮು ಅಕಸಾಕಿ, ಹಿರೋಶಿ ಅಮಾನೊ
ಮತ್ತು ಶುಜಿ ನಕಮುರ ಅವರು ನಿರ್ವಿುಸಿದ ಬ್ಲೂಲೆಡ್ಗಳಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ ಎಂದು ಸ್ವೀಡನ್ನಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು. 8 ದಶಲಕ್ಷ ಕ್ರೋನರ್ (0.7ಮಿಲಿಯನ್ ಪೌಂಡ್) ಬಹುಮಾನವನ್ನು
ಈ ಮೂವರು ವಿಜ್ಞಾನಿಗಳು ಹಂಚಿಕೊಳ್ಳುವರು. 1901ರಿಂದ ಈವರೆಗೆ 196 ಮಂದಿ ಇತರ ಭೌತ ವಿಜ್ಞಾನಿಗಳಿಗೆ
ಭೌತಶಾಸ್ತ್ರಕ್ಕೆ ನೀಡಲಾಗುವ ಪ್ರಶಸ್ತಿಯನ್ನು ನೀಡಲಾಗಿತ್ತು. 'ನನ್ನನ್ನು ನಿದ್ದೆಯಿಂದ ಎಬ್ಬಿಸಿ
ನೊಬೆಲ್ಪ್ರಶಸ್ತಿ ಬಂದದ್ದನ್ನು ತಿಳಿಸಲಾಯಿತು . ಇದು ನಂಬಲಸಾಧ್ಯ' ಎಂದು ನೊಬೆಲ್ ಪ್ರಶಸ್ತಿ ವಿಜೇತ
ಜಪಾನಿನ ವಿಜ್ಞಾನಿ ಪ್ರೊ.ನಕಮುರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬ್ಲೂ ಲೆಡ್ಗಳಿಂದ ಆಗಿರುವ ಉಪಯುಕ್ತತೆಯನ್ನು
ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ನೊಬೆಲ್ ಪ್ರತಿಷ್ಠಾನದ ಪ್ರತಿನಿಧಿಗಳು, ಮನುಕುಲದ ಅನುಕೂಲಕ್ಕಾಗಿ
ನಡೆಯುವ ಸಂಶೋಧನೆಗಳನ್ನು ಗುರುತಿಸುವುದಕ್ಕಾಗಿಯೇ ನೊಬೆಲ್ ಪ್ರತಿಷ್ಠಾನ ಇದೆ ಎಂದು ಹೇಳಿದರು.
2014 ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ
ಸೆರೆವಾಸದ ಶಿಕ್ಷೆಗೆ ಒಳಗಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಜಾಮೀನು
ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು. ಇದಕ್ಕೆ ಮುನ್ನ ಜಯಲಲಿತಾ ಅವರಿಗೆ ಹೈಕೋರ್ಟ್ ಜಾಮೀನು
ನೀಡಿರುವುದಾಗಿ ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿದ್ದವು. ಬೆಳಗ್ಗೆಯಿಂದ ಮಧ್ಯಾಹ್ನ 3.30ರವರೆಗೆ
ಜಯಲಲಿತಾ ಅವರ ಜಾಮೀನು ಕೋರಿಕೆ ಅರ್ಜಿ ಮೇಲೆ ನಡೆದ ವಿಚಾರಣೆಯಲ್ಲಿ ಜಯಲಲಿತಾ ಪರ ವಕೀಲ ರಾಮ್ಜೇಠ್ಮಲಾನಿ
ಹಾಗೂ ಸರ್ಕಾರಿ ಅಭಿಯೋಜಕ ಭವಾನಿ ಸಿಂಗ್ ಅವರ ಅಹವಾಲುಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಎ.ವಿ.
ಚಂದ್ರಶೇಖರ್ ಅವರು ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಜಯಲಲಿತಾ ಅವರ ಮೇಲ್ಮನವಿಯನ್ನು
ಬಾಕಿ ಇರಿಸಿಕೊಂಡು ಜಯಲಲಿತಾ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಬೇಕು ಎಂದು ಅದಕ್ಕೆ ಮುನ್ನ ಹಿರಿಯ
ವಕೀಲ ರಾಮ್ಜೇಠ್ಮಲಾನಿ ವಾದಿಸಿದ್ದರು. ಜಯಲಲಿತಾ ಅವರು ಪ್ರಕರಣದ ವಿಚಾರಣೆಯಲ್ಲಿ ಯಾವುದೇ ಪ್ರಭಾವ
ಬೀರಿಲ್ಲ. ಸನ್ನಡತೆಯಿಂದ ವರ್ತಿಸಿದ್ದರು. ಅವರ ಪರವಾಗಿ ಸಾಕಷ್ಟು ಸಾಕ್ಷಿಗಳು ಸಾಕ್ಷ್ಯಹೇಳಿದ್ದರು.
ಅವಾವುದನ್ನೂ ಪರಿಗಣಿಸದೆಯೇ ಜಯಲಲಿತಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಜೇಠ್ಮಲಾನಿ ನ್ಯಾಯಾಲಯಕ್ಕೆ
ತಿಳಿಸಿದ್ದರು. ಮೇಲ್ಮನವಿಯನ್ನು ಬಾಕಿ ಇರಿಸಿ ಜಾಮೀನು ನೀಡಿ ಬಿಡುಗಡೆ ಮಾಡಲು ಅವಕಾಶ ಇರುವುದನ್ನು
ಹಲವಾರು ಸುಪ್ರೀಂಕೋರ್ಟ್ ತೀರ್ಪಗಳು ದೃಢಪಡಿಸಿವೆ ಎಂದೂ ಜೇಠ್ಮಲಾನಿ ಹೇಳಿದ್ದರು. ಷರತ್ತು ರಹಿತವಾಗಿ
ಜಾಮೀನು ನೀಡಲು ಆಕ್ಷೇಪ ವ್ಯಕ್ತ ಪಡಿಸಿದ ಸರ್ಕಾರಿ ಅಭಿಯೋಜಕ ಭವಾನಿ ಸಿಂಗ್ ಅವರು ಷರತ್ತು ಬದ್ಧ ಜಾಮೀನು
ನೀಡಲು ಆಕ್ಷೇಪ ಇಲ್ಲ ಎಂದು ಹೇಳಿದ್ದರು. ಆ ಬಳಿಕ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಜಯಲಲಿತಾ ಅವರ
ಜಾಮೀನು ಕೋರಿಕೆ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದರು. ಜಯಲಲಿತಾ ಸೇರಿದಂತೆ ನಾಲ್ಕೂ ಮಂದಿ ಅಪರಾಧಿಗಳು
ಮಾಡಿರುವ ಅಪರಾಧ ಜಾಮೀನು ನೀಡಲಾಗದಂತಹುದು ಎಂದು ಹೈಕೋಟ್
ಹೇಳಿತು. ಹೈಕೋರ್ಟ್ ತೀರ್ಪಿನಿಂದಾಗಿ ಕಳೆದ 11 ದಿನಗಳಿಂದ ಪರಪ್ಪನ ಅಗ್ರಹಾರದ ಕೇಂದ್ರೀಯ
ಸೆರೆಮನೆಯಲ್ಲಿ ಇದ್ದ ಜಯಲಲಿತಾ ಅವರು ಮುಂದೆಯೂ ಜೈಲಿನಲ್ಲೇ ಇರಬೇಕಾಗಿ ಬಂದಿತು. ಭ್ರಷ್ಟಾಚಾರ ಪ್ರಕರಣಕ್ಕೆ
ಸಂಬಂಧಿಸಿದಂತೆ 18 ವರ್ಷಗಳ ವಿಚಾರಣೆ ಬಳಿಕ ವಿಶೇಷ ನ್ಯಾಯಾಲಯವು ಜಯಲಲಿತಾ ಅವರಿಗೆ 4 ವರ್ಷಗಳ ಸಾದಾ
ಸಜೆ ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿತ್ತು. ತತ್ಕ್ಷಣದಿಂದಲೇ ಅವರನ್ನು ಹುದ್ದೆಯಿಂದಲೂ ಅನರ್ಹಗೊಳಿಸಿತ್ತು.
ಹೀಗಾಗಿ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದರು. ಜಾಮೀನು ಮಂಜೂರಾಗಿದೆಯ
ಎಂಬ ಸುದ್ದಿ ಈದಿನ ಟಿವಿ ವಾಹಿನಿಗಳಲ್ಲಿ ಬರುತ್ತಿದ್ದಂತೆಯೇ ಹೈಕೋರ್ಟ್ ಆವರಣದಲ್ಲಿ ಸೇರಿದ್ದ ಜಯಲಲಿತಾ
ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು.
2014: ಜಮ್ಮು:
ಪಾಕಿಸ್ತಾನಿ ಸೇನೆ ಭಾರತೀಯ ನೆಲೆಗಳತ್ತ ಈದಿನ ಗುಂಡಿನ ದಾಳಿ ನಡೆಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ಮಧ್ಯೆ ಘರ್ಷಣೆ ನಡೆಯಿತು ಎಂದು ಸೇನೆ ತಿಳಿಸಿತು. ಪಾಕಿಸ್ತಾನಿ ಸೇನೆ ಪೂಂಚ್ ಜಿಲ್ಲೆಯ ಬಲ್ನೋಯಿ ವಿಭಾಗದಲ್ಲಿ ಕದನವಿರಾಮ ಉಲ್ಲಂಘಿಸಿದೆ ಎಂದು ರಕ್ಷಣಾ ವಕ್ತಾರ ಕರ್ನಲ್ ಮನಿಷ್ ಮೆಹ್ತಾ ಸುದ್ದಿ ಸಂಸ್ಥೆಗೆ ತಿಳಿಸಿದರು. ಪಾಕಿಸ್ತಾನಿಗಳು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ. ಮಧ್ಯಾಹ್ನ 2.20ಕ್ಕೆ ಗುಂಡಿನ ದಾಳಿ ಆರಂಭವಾಯಿತು. ಈಗಲೂ ಗುಂಡಿನ ವಿನಿಮಯ ನಡೆಯುತ್ತಿದೆ. ನಮ್ಮ ಪಡೆಗಳು ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡಿವೆ ಎಂದು ಅವರು ಸಂಜೆ ನುಡಿದರು. ಭಾರತದ ಕಡೆಯಲ್ಲಿ ಯಾವುದೇ ಸಾವು ನೋವುಗಳಾಗಿರುವ ಬಗ್ಗೆ ತತ್ಕ್ಷಣಕ್ಕೆ ಯಾವುದೇ ವರದಿ ಬಂದಿಲ್ಲ. ಹಿಂದಿನ ಎರಡು ದಿನಗಳಿಂದ ಪಾಕಿಸ್ತಾನಿ ಸೇನೆ ಭಾರತೀಯ ಗಡಿ ಭದ್ರತಾ ಪಡೆಗಳ ಹೊರಠಾಣೆಗಳು ಮತ್ತು ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದ ಬೆನ್ನಲ್ಲೇ ಈದಿನದ ಘರ್ಷಣೆ ನಡೆಯಿತು.ಹಿಂದಿನ ಎರಡು ದಿನಗಳ ದಾಳಿಗಳಲ್ಲಿ ಭಾರತದ ಐವರು ನಾಗರೀಕರು ಮೃತರಾಗಿ 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದಕ್ಕೂ ಮುನ್ನ ಹಿಂದಿನ ದಿನವೂ ರಾತ್ರಿ ಕಾಟ ಮುಂದುವರೆಸಿದ ಪಾಕ್ ಸೈನಿಕರು
40 ಗಡಿ ಹೊರಠಾಣೆಗಳು ಮತ್ತು 25 ಗಡಿ ವಸತಿ ಪ್ರದೇಶಗಳಲ್ಲಿ ಗುರಿಯಾಗಿಟ್ಟುಕೊಂಡು ಭಾರಿ ಫಿರಂಗಿ ದಾಳಿ
ನಡೆಸಿದ್ದರು. ದಾಳಿಯಲ್ಲಿ ಮೂವರು ಗಾಯಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಜಮ್ಮು ಹಾಗೂ ಸಾಂಬಾ
ಜಿಲ್ಲೆಗಳಲ್ಲಿ ಈ ದಾಳಿ ನಡೆದಿತ್ತು. ಭಾರತದ ಗಡಿ ಭದ್ರತಾ ಪಡೆಗಳು ಪಾಕಿಸ್ತಾನದಿಂದ 4 ಕಡೆಗಳಲ್ಲಿ
ನಡೆದಿರುವ ಈ ಕದನವಿರಾಮ ಉಲ್ಲಂಘನೆ ಹಾಗೂ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಿದವು. ರಾತ್ರಿ 9 ಗಂಟೆಯ
ಬಳಿಕ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಬಿಎಸ್ಎಫ್ ಠಾಣೆಗಳ ಮೇಲೆ ಪಾಕ್ ಸೈನಿಕರು ಅಪ್ರಚೋದಿತ ಫಿರಂಗಿದಾಳಿ
ನಡೆಸಿದರು ಎಂದು ಬಿಎಸ್ಎಫ್ ವಕ್ತಾರ ವಿನೋದ್ ಯಾದವ್ ಈದಿನ ಬೆಳಗ್ಗೆ ನುಡಿದರು. ಪಾಕಿಸ್ತಾನದ ಕಡೆಯಿಂದ
ನಡೆದ ಈ ದಾಳಿಯಲ್ಲಿ ಸುಮಾರು 40 ಬಿಎಸ್ಎಫ್ ಹೊರಠಾಣೆಗಳು ಹಾನಿಗೊಂಡಿವೆ. ಅರ್ನಿಯಾ, ಆರ್.ಎಸ್.ಪುರ,
ಕಂಚಕ್ ಮತ್ತು ಪರಗ್ವಾಲ್ ಉಪವಿಭಾಗಗಳು ಹಾಗೂ ಜಮ್ಮುವಿನ ಐಬಿ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಈ ದಾಳಿಗಳು
ನಡೆದವು ಎಂದು ಅವರು ವಿವರಿಸಿದರು. ಕನಚಕ್ ಮತ್ತು ಪರಗ್ವಾಲ್ನಲ್ಲಿ ಬಹುತೇಕ ಎಲ್ಲಾ ಹೊರ ಠಾಣೆಗಳನ್ನೂ
ಪಾಕ್ ಸೈನಿಕರು ಗುರಿಯಾಗಿ ಇಟ್ಟುಕೊಂಡಿದ್ದರು ಎಂದು ಅವರು ನುಡಿದರು. ಅರ್ನಿಯಾ, ಆರ್.ಎಸ್.ಪುರ,
ಕನಚಕ್ ಮತ್ತು ಪರಗ್ವಾಲ್ ಮತ್ತು ಗಂಜಾನ್ಸೂವಿನಲ್ಲಿ ಸುಮಾರು 20ರಿಂದ 25 ಜನವಸತಿ ಬಸ್ತಿಗಳ ಮೇಲೆ
ಪಾಕ್ ಗುಂಡಿನ ದಾಳಿ ಕಳೆದ ರಾತ್ರಿಯೂ ನಡೆಯಿತು ಎಂದು ಅವರು ಹೇಳಿದರು.
2014: 2011ರ ವಿದೇಶೀ ವಿನಿಮಯ ಉಲ್ಲಂಘನೆ ಆಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ
ತನ್ನ ಮುಂದೆ ಖುದ್ದು ಹಾಜರಾಗಬೇಕು ಎಂದು ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರಿಗೆ ಜಾರಿ
ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿತು. ವಿದೇಶೀ ವಿನಿಮಯ ನಿರ್ವಹಣೆ ಕಾಯ್ದೆ ಅಡಿಯಲ್ಲಿ ಗಾಯಕ ಮತ್ತು
ಅವರ ಸಹಚರರ ವಿರುದ್ಧ ನಿರ್ದೇಶನಾಲಯವು ತನಿಖೆ ಆರಂಭಿಸಿದ್ದು, ಇದೀಗ ದೆಹಲಿಯ ವಲಯ ಕಚೇರಿಯಲ್ಲಿ ವಿಚಾರಣೆಗೆ
ಹಾಜರಾಗುವಂತೆ ಸೂಚನೆ ನೀಡಿ ಸಮನ್ಸ್ ಜಾರಿ ಮಾಡಿತು. ಪಾಕಿಸ್ತಾನಿ ರಾಯಭಾರಿ ಕಚೇರಿ ಮೂಲಕ ಸಮನ್ಸ್
ಕಳುಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ತಿಳಿಸಿದವು.
2014: ಮಚಲೀಪಟ್ಟಣ (ಆಂಧ್ರಪ್ರದೇಶ): ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ
ಬಳಿ ಖಾಸಗಿ ಬಸ್ಸೊಂದು ನಸುಕಿನ ವೇಳೆಯಲ್ಲಿ ನದಿಗೆ ಉರುಳಿದ ಪರಿಣಾಮವಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ
ಆಂಧ್ರಪ್ರದೇಶದ 8 ಮಂದಿ ಯಾತ್ರಾರ್ಥಿಗಳು ಮೃತರಾಗಿ ಇತರ 20 ಮಂದಿ ಗಾಯಗೊಂಡರು. ಆಂಧ್ರಪ್ರದೇಶದ ಕೃಷ್ಣಾ
ಜಿಲ್ಲೆಯ ಮಚಲೀಪಟ್ಟಣಕ್ಕೆ ಸೇರಿದ ಈ ನತದೃಷ್ಟರು ಶಿರ್ಡಿ ಕ್ಷೇತ್ರ ದರ್ಶನ ಮಾಡಿಕೊಂಡು ಮಹಾರಾಷ್ಟ್ರದ
ಪಂಡರೀಪುರಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು ಎಂದು ಕೃಷ್ಣಾ ಜಿಲ್ಲಾಧಿಕಾರಿ ರಘುನಂದರಾವ್
ಹೇಳಿದರು. 50 ಮಂದಿ ಇದ್ದ ಬಸ್ಸು ಚಲಾಯಿಸುತ್ತಿದ್ದ ಚಾಲಕ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡ ಪರಿಣಾಮ
ಬಸ್ಸು ನದಿಗೆ ಉರುಳಿತು ಎಂದು ಅವರು ನುಡಿದರು.
ನದಿಯಿಂದ ಶವಗಳನ್ನು ಮೇಲೆತ್ತಲು ಸೋಲಾಪುರದಿಂದ ಗನ್ನಾವರಂ ವಿಮಾನನಿಲ್ದಾಣಕ್ಕೆ
ಸಂಜೆವೇಳೆೆಗೆ ವಿಶೇಷ ವಿಮಾನವನ್ನು ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಗಾಯಾಳುಗಳನ್ನು ಸನಿಹದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಮೃತರೆಲ್ಲರೂ ಮಚಲೀಪಟ್ಟಣದ ಚಿಲಕಲಪುಡಿಯವರಾಗಿದ್ದು
ಅವರನ್ನು ಸಿಚ್.ಪಾಂಡುರಂಗರಾವ್ (60), ಎಂ. ಜಗನ್ವೋಹನ ರಾವ್ (57), ಲಕ್ಷಿಮೕ (45), ಪಿ. ಲಕ್ಷಿ
(55), ಎನ್. ಲಕ್ಷಿಮೕಕುಮಾರಿ (50), ಸಿಎಚ್ ಶೇಷುಮಣಿ (45), ಜಿ.ವೆಂಕಟೇಶ್ವರಮ್ಮ (45) ಮತ್ತು ರೇಷ್ಮಾ
(20) ಎಂದು ಗುರುತಿಸಲಾಗಿದೆ.
2008: ಟಾಟಾ ಮೋಟಾರ್ಸ್ ಕಂಪೆನಿಯ ವಿಶ್ವದ ಅತಿ ಅಗ್ಗದ ಸಣ್ಣ ಕಾರು `ನ್ಯಾನೊ' ಗುಜರಾತಿನಲ್ಲಿ ತಯಾರಾಗಲಿದೆ ಎಂದು ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಗಾಂಧಿನಗರದಲ್ಲಿ ಪ್ರಕಟಿಸಿದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಏಳು ವರ್ಷ ಪೂರೈಸಿದ ದಿನದಂದೇ ಈ ಪ್ರಕಟಣೆ ಮಾಡಲಾಯಿತು. ಒಂದು ಲಕ್ಷ ರೂಪಾಯಿಯ ನ್ಯಾನೊ ಕಾರು ಕಾರ್ಖಾನೆಗೆ ಆಯ್ಕೆ ಆಗಿರುವ ಸ್ಥಳ ಸಾನಂದ್. ರಾಜ್ಯದ ವಾಣಿಜ್ಯ ರಾಜಧಾನಿ ಅಹಮದಾಬಾದಿನಿಂದ 30 ಕಿಮೀ ದೂರದಲ್ಲಿರುವ ಈ ಸ್ಥಳದ 1,100 ಎಕರೆ ಪ್ರದೇಶದಲ್ಲಿ ನ್ಯಾನೊ ತಯಾರಿಕಾ ಕಾರ್ಖಾನೆ ತಲೆ ಎತ್ತುವುದು. ಈ ಸಂಬಂಧದಲ್ಲಿ ಟಾಟಾ ಮೋಟಾರ್ಸ್ ಹಾಗೂ ಗುಜರಾತ್ ಸರ್ಕಾರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದವು. ಈ ಒಪ್ಪಂದಕ್ಕೆ ಸಹಿ ಹಾಕಲಾದ ವೇದಿಕೆಯ ಪೀಠದ ಹಿಂಭಾಗದಲ್ಲಿ `ವೆಲ್ ಕಮ್ ನ್ಯಾನೊ' ಎಂಬ ಭಿತ್ತಿಪತ್ರ ರಾರಾಜಿಸುತ್ತಿತ್ತು. ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್ ಹಾಗೂ ಕೈಗಾರಿಕಾ ಕಾರ್ಯದರ್ಶಿ ಗೌರಿ ಕುಮಾರ್ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರು. `ಗುಜರಾತಿನಲ್ಲಿ ಇದೊಂದು ಹಣ ಹೂಡಿಕೆ ಎಂದಷ್ಟೇ ನ್ಯಾನೊ ಪ್ರವೇಶ ಕುರಿತು ನಾನು ಭಾವಿಸವುದಿಲ್ಲ. ನಮ್ಮ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ಹಾಗೂ ಚಾಲನೆ ನೀಡವಂತಹ ಸಹಭಾಗಿತ್ವ ಎಂದು ಭಾವಿಸುತ್ತೇನೆ' ಎಂದು ಗುಜರಾತ್ ಮುಖ್ಯಮಂತ್ರಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.
2008: `ಮಾದೇಶ' ಚಿತ್ರದ ನಿರ್ಮಾಪಕ ಗೋವರ್ಧನಮೂರ್ತಿ ಅದೇ ಚಿತ್ರದ ಸಹ ನಟ ವಿನೋದ ಕುಮಾರ್ (32) ಎಂಬಾತನನ್ನು ಗುಂಡು ಹಾರಿಸಿ ಕೊಂದ ಘಟನೆ ಈದಿನ ನಸುಕಿನಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿನಡೆಯಿತು.. ಗೋವರ್ಧನಮೂರ್ತಿ ಮತ್ತು ವಿನೋದ ಕುಮಾರ್ ಇಬ್ಬರೂ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು ರಾಜಧಾನಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ಎಗ್ಗ್ಲಿಲದೆ ನಡೆಯುತ್ತಿರುವ ಬೆನ್ನಲ್ಲೇ ಈ ಹತ್ಯೆ ನಡೆಯಿತು.
2008: ಜಾತ್ಯತೀತ ಜನತಾ ದಳದ ರಾಜ್ಯಾಧ್ಯಕ್ಷ, ಮಾಜಿ ಸಚಿವ ಮೆರಾಜುದ್ದೀನ್ ಎನ್. ಪಟೇಲ್ (50) ಅವರು ತೀವ್ರ ಹೃದಯಾಘಾತಕ್ಕೀಡಾಗಿ ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗುಲ್ಬರ್ಗ ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಕಾರ್ಯಕ್ರಮ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು. ಜೆಡಿಎಸ್ ಅಧ್ಯಕ್ಷರಾಗಿದ್ದ ಹಿರಿಯ ಜನಪ್ರತಿನಿಧಿ ಮಾಜಿ ಸಚಿವ ಮೆರಾಜುದದೀನ್ ನಿಜಾಮ್ದುದೀನ್ ಪಟೇಲ್ (51) ಬೀದರ ತಾಲ್ಲೂಕಿನ ಉಚಕನಹಳ್ಳಿ ಗ್ರಾಮದವರು. ರೇಕುಳಗಿ ಗ್ರಾಮ ಪಂಚಾಯತ್ ಸದಸ್ಯರಾಗಿ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. ನಂತರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು 1994ರಲ್ಲಿ ಮೊದಲ ಬಾರಿಗೆ ಹುಮನಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದರು. ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಜೈಲು ಮತ್ತು ಹೋಮ್ ಗಾರ್ಡ್ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅವರು ನಂತರ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ನಗರಾಡಳಿತ ಸಚಿವರಾಗಿದ್ದರು. ಸತತವಾಗಿ ನಾಲ್ಕೂವರೆ ವರ್ಷ ಕಾಲ ಸಚಿವರಾಗಿ ಕೆಲಸ ಮಾಡಿದ ಬೀದರ್ ಜಿಲ್ಲೆಯ ಏಕೈಕ ಸಚಿವರಾಗಿದ್ದರು.
2008: ಹದಿನಾರು ವರ್ಷಗಳಿಂದ ಭಾರತೀಯ ಕ್ರಿಕೆಟಿನ ಅವಿಭಾಜ್ಯ ಅಂಗ ಎನಿಸಿದ್ದ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ವಿರಮಿಸುವ ನಿರ್ಧಾರವನ್ನು ಬೆಂಗಳೂರಿನಲ್ಲಿ ಪ್ರಕಟಿಸಿದರು. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯುವ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯ ಬಳಿಕ ಕ್ರಿಕೆಟಿನಿಂದ ದೂರ ಸರಿಯುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.. `ಇದು ನನ್ನ ಕೊನೆಯ ಟೆಸ್ಟ್ ಸರಣಿ. ಅ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ವಿರಮಿಸಲಿದ್ದೇನೆ ಎಂದು ಗಂಗೂಲಿ ನುಡಿದರು
2007: ಜನತಾದಳಕ್ಕೆ (ಎಸ್) ನೀಡಿದ್ದ ಬೆಂಬಲವನ್ನು ಬಿಜೆಪಿ ಈದಿನ ಮಧ್ಯಾಹ್ನ ಅಧಿಕೃತವಾಗಿ ವಾಪಸ್ ತೆಗೆದುಕೊಳ್ಳುವುದರೊದಿಗೆ ಇಪ್ಪತ್ತು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಆದರೆ 'ರಾಜೀನಾಮೆ ಕೊಡುವುದಿಲ್ಲ' ಎಂದು ಹೇಳಿದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, `ಬಹುಮತ ಸಾಬೀತು ಪಡಿಸಲು ರಾಜ್ಯಪಾಲರನ್ನು ಕೋರುವೆ' ಎಂದು ತಿಳಿಸಿದರು. ಈ ಮಧ್ಯೆ ಕಾಂಗ್ರೆಸ್ ಮುಖಂಡರ ನಿಯೋಗ ಕೂಡ ರಾಜಭವನಕ್ಕೆ ತೆರಳಿ `ಹೊಸ ಪರ್ಯಾಯ ಸರ್ಕಾರ ರಚನೆ ಸಂದರ್ಭದಲ್ಲಿ ತಮ್ಮ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು' ಎಂದು ರಾಜ್ಯಪಾಲರಿಗೆ ಮನವಿ ಮಾಡಿತು.
2007: ಮೈಸೂರಿಗೆ ಸಮೀಪದ ಗೊಮ್ಮಟಗಿರಿಯಲ್ಲಿ ಬಾಹುಬಲಿಯ 18 ಅಡಿ ಎತ್ತರದ ಭವ್ಯಮೂರ್ತಿಗೆ 58ನೇ ವಾರ್ಷಿಕ ಮಹಾಮಸ್ತಕಾಭಿಷೇಕ ಮಾಡಲಾಯಿತು. ಹಾಲು, ಗಂಧ, ಪುಷ್ಪ ಹಾಗೂ ಜಲಾಭಿಷೇಕದಿಂದ ಬಾಹುಬಲಿಗೆ ಅಭಿಷೇಕ ಮಾಡಿದ ಭಕ್ತರು ಭವ್ಯಮೂರ್ತಿಯ ದಿವ್ಯರೂಪ ಕಂಡು ಪುಳಕಿತರಾದರು. ಚೆಂಗಾಳ್ವ ಅರಸರು ಸ್ಥಾಪಿಸಿದ್ದು ಎನ್ನಲಾದ ಈ ಬಾಹುಬಲಿ ಮೂರ್ತಿ ಸುಮಾರು 900 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಕಳೆದ 57 ವರ್ಷಗಳಿಂದ ಈ ಮೂರ್ತಿಗೆ ಪ್ರತಿವರ್ಷವೂ ಮಹಾಮಜ್ಜನ ಮಾಡಲಾಗುತ್ತಿದೆ. ಪ್ರಥಮ ಮಹಾಮಜ್ಜನಕ್ಕೆ ಅಂದಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಆಗಮಿಸಿದ್ದರು. ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಸ್ತಕಾಭಿಷೇಕದ ಸಾನಿಧ್ಯ ವಹಿಸಿದ್ದರು.
2007: ರಸ್ತೆ ದಾಟುತ್ತಿದ್ದ ಜನರ ಮೇಲೆ ಬ್ಲೂಲೈನ್ ಬಸ್ ಹರಿದು ಐವರು ಮಹಿಳೆಯರು ಸೇರಿದಂತೆ 7 ಜನರು ಸಾವನ್ನಪ್ಪಿದ ಘಟನೆ ದಕ್ಷಿಣ ದೆಹಲಿಯ ಆಲಿ ಗ್ರಾಮದ ರೈಲ್ವೆ ಸೇತುವೆ ಬಳಿ ನಡೆಯಿತು.
2007: ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಮೂಲದ ಅವೆಸ್ತಾಜೆನ್ ಗ್ರೇನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಹೈಬ್ರಿಡ್ ಬೀಜ ಅಭಿವೃದ್ಧಿಗಾಗಿ ಆಸ್ಟ್ರೇಲಿಯಾ ಪೇಟೆಂಟ್ ಕಂಪೆನಿಯಿಂದ ಪೇಟೆಂಟ್ ಪಡೆದಿರುವುದಾಗಿ ಪ್ರಕಟಿಸಿತು. ಅವೆಸ್ತಾಜೆನ್ ಹಲವಾರು ಸಂಶೋಧನೆಗಳನ್ನು ಕೈಗೊಂಡಿದ್ದು, ಒಟ್ಟು 137 ಪೇಟೆಂಟ್ಗಳನ್ನು ಹೊಂದಿದೆ. ಈಗ ಅಭಿವೃದ್ಧಿಪಡಿಸಲಾದ ಹೊಸ ಹೈಬ್ರಿಡ್ ಬೀಜದಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ ಎಂದು ಕಂಪೆನಿ ತಿಳಿಸಿತು.
2006: ಹೈದರಾಬಾದಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ರೊಬೋಟ್ ಸಹಾಯದಿಂದ `ಹೃದಯ ಕವಾಟ ಶಸ್ತ್ರಚಿಕಿತ್ಸೆ'ಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆಸ್ಪತ್ರೆಯ ವೈದ್ಯ ಡಾ. ರವಿ ಕುಮಾರ್ ಪ್ರಕಾರ ರೊಬೋಟ್ ತಂತ್ರಜ್ಞಾನದಲ್ಲಿ ಭಾರಿ ಪ್ರಗತಿಯಾಗಿದ್ದು ಸ್ಪಷ್ಟ ಮತ್ತು ಅತ್ಯುತ್ತಮ ನಿಖರತೆ ಪಡೆಯುವುದು ಈ ತಂತ್ರಜ್ಞಾನದಿಂದ ಸಾಧ್ಯವಾಯಿತು.
2006: ಕ್ಯಾನ್ ಬೆರಾದ ಪಪುವಾ ನ್ಯೂಗಿನಿಯಲ್ಲಿ ರಾಬೌಲ್ ನಗರದ ಹೊರವಲಯದಲ್ಲಿ ಇರುವ ಮೌಂಟ್ ತವುರ್ವರ್ ಜ್ವಾಲಾಮುಖಿ ಭಾರತೀಯ ಕಾಲಮಾನ ನಸುಕಿನ 4.15ರ ವೇಳೆಗೆ ಸ್ಫೋಟಗೊಂಡು ದಟ್ಟವಾದ ಬೂದಿ ಚಿಮ್ಮಿತು. ಸ್ಫೋಟದ ತೀವ್ರತೆಗೆ 12 ಕಿ.ಮೀ. ದೂರದ ಮನೆಗಳ ಕಿಟಕಿಗಳೂ ಅಲುಗಾಡಿದವು. ಆತಂಕಗೊಂಡ ನಿವಾಸಿಗಳು ಮನೆಗಳಿಂದ ಹೊರಗೆ ಓಡಿದರು. 1994ರಲ್ಲಿ ಇದೇ ಜ್ವಾಲಾಮುಖಿ ಸಿಡಿದು ರಾಬೌಲ್ ನಗರದ ಅರ್ಧದಷ್ಟು ನಾಶವಾಗಿತ್ತು. ಇಡೀ ನಗರವೇ ಬೂದಿಯಲ್ಲಿ ಮುಳುಗಿದ್ದಲ್ಲದೇ ವಿಮಾನ ನಿಲ್ದಾಣವೂ ಸಂಪೂರ್ಣವಾಗಿ ನಾಶವಾಗಿತ್ತು. ಇದರಿಂದಾಗಿ ಬಹುತೇಕ ಹೊಸ ನಗರವನ್ನೇ ನಿರ್ಮಿಸಬೇಕಾಗಿ ಬಂದಿತ್ತು.
2006: ಒಂದು ವರ್ಷದ ಹಿಂದೆ ಭೂಕಂಪದಿಂದ ಭಾರಿ ಹಾನಿಗೊಳಗಾಗಿದ್ದ ಪಾಕಿಸ್ಥಾನದ ಬಾಲಕೋಟ್ ಪಟ್ಟಣದಲ್ಲಿ ಮತ್ತೆ ಲಘು ಭೂಕಂಪ ಸಂಭವಿಸಿತು. ಯಾವುದೇ ಸಾವು ನೋವು ಸಂಭವಿಸಲಿಲ್ಲ. ಪಾಕಿಸ್ಥಾನದ ಆಕ್ರಮಿತ ಕಾಶ್ಮೀರ ಮತ್ತು ವಾಯವ್ಯ ಗಡಿ ಪ್ರಾಂತದಲ್ಲಿ ರಿಕ್ಟರ್ ಮಾಪಕದಲ್ಲಿ 7.6 ಪ್ರಮಾಣದ ಭೂಕಂಪ ಸಂಭವಿಸಿ 73,000 ಮಂದಿ ಮೃತಪಟ್ಟು ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡ ಘಟನೆಯ ವಾರ್ಷಿಕೋತ್ಸವದ ಎರಡು ದಿನ ಮುಂಚೆ ಈ ರಿಕ್ಟರ್ ಮಾಪಕದಲ್ಲಿ 4.0 ಪ್ರಮಾಣದ ಈ ಭೂಕಂಪ ಸಂಭವಿಸಿತು.
2006: ಕೋಪೆನ್ಹೇಗನ್ನಿನ ಮುಸ್ಲಿಂ ವಲಸೆ-ವಿರೋಧಿ ಡ್ಯಾನಿಷ್ ಜನರು ಪ್ರವಾದಿ ಮಹಮ್ಮದರ ವಿವಿಧ ವ್ಯಂಗ್ಯಚಿತ್ರ ರಚನೆ ಸ್ಪರ್ಧೆ ನಡೆಸುತ್ತಿರುವ ವಿಡಿಯೋ ಚಿತ್ರೀಕರಣವನ್ನು ಡ್ಯಾನಿಷ್ ಟಿವಿಯೊಂದು ಪ್ರಸಾರ ಮಾಡಿತು. ಕಳೆದ ವರ್ಷವಷ್ಟೆ ಡ್ಯಾನಿಷ್ ಪತ್ರಿಕೆಯೊಂದು ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿವಿಶ್ವದಾದ್ಯಂತ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಟಿ.ವಿ.ಯಲ್ಲಿ ಪ್ರಸಾರ ಮಾಡಲಾದ ಚಿತ್ರಗಳಲ್ಲಿ ಮುಸ್ಲಿಂ ವಲಸೆ ವಿರೋಧಿ ಡಿಪಿಪಿ ಪಕ್ಷದ ಸದಸ್ಯರು ಪ್ರವಾದಿ ಮಹಮ್ಮದರ ವಿವಿಧ ನಮೂನೆಗಳ ವ್ಯಂಗ್ಯ ಚಿತ್ರ ಬರೆಯುತ್ತಿರುವ ದೃಶ್ಯಗಳನ್ನು ತೋರಿಸಲಾಯಿತು. ಈ ವ್ಯಂಗ್ಯ ಚಿತ್ರ ಸರ್ಧೆ ಕಳೆದ ಆಗಸ್ಟಿನಲ್ಲೇ ನಡೆದಿತ್ತು ಎಂದು ಡ್ಯಾನಿಷ್ ಟಿವಿ ತಿಳಿಸಿತು.
2006: ಥಾಯ್ಲೆಂಡಿನ ಉರಗಪ್ರೇಮಿ ಖುನ್ ಚಾಯಿಬುಡ್ಡಿ (45) ವಿಶ್ವದಾಖಲೆ ಸ್ಥಾಪಿಸುವ ಸಲುವಾಗಿ ಪಟ್ಟಾಯದಲ್ಲಿ ಒಂದರ ನಂತರ ಒಂದರಂತೆ ಅತ್ಯಂತ ವಿಷಕಾರಿಗಳಾದ 19 ಸರ್ಪಗಳನ್ನು ಚುಂಬಿಸಿದರು.
1982: ನ್ಯೂಯಾರ್ಕ್ ನಗರದಲ್ಲಿ `ಆಂಡ್ರ್ಯೂ ಲಾಯ್ಡ್ ವೆಬ್ಬರ್- ಟಿಮ್ ರೈಸ್ ಮ್ಯೂಸಿಕಲ್ ಕ್ಯಾಟ್ಸ್' ಆರಂಭಗೊಂಡಿತು. ಅಲ್ಲಿ ಅದು 7485 ಪ್ರದರ್ಶನಗಳ ಬಳಿಕ 2000ರಲ್ಲಿ ಮುಚ್ಚಿತು. ಲಂಡನ್ನಿನಲ್ಲಿ ಅದು 9000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಡೆಸಿ ಬಾಕ್ಸ್ ಆಫೀಸಿನಲ್ಲಿ 13.60 ಕೋಟಿ ಪೌಂಡುಗಳನ್ನು ಗಳಿಸಿತು.
1978: ಭಾರತೀಯ ಕ್ರಿಕೆಟ್ ಆಟಗಾರ ಝಾಹಿರ್ ಖಾನ್ ಜನ್ಮದಿನ.
1963: ಸಾಹಿತಿ ಮೋಹನ ನಾಗಮ್ಮನವರ ಜನನ.
1953: ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಪಂಜಾಬಿನ ನೂತನ ರಾಜಧಾನಿ ಚಂಡೀಗಢ ನಗರವನ್ನು ಉದ್ಘಾಟಿಸಿದರು.
1950: ಮದರ್ ತೆರೇಸಾ ಅವರು ಕಲ್ಕತ್ತದಲ್ಲಿ (ಈಗಿನ ಕೋಲ್ಕತ್ತಾ) `ಮಿಷನರೀಸ್ ಆಫ್ ಚಾರಿಟಿ' ಸಂಸ್ಥೆಯನ್ನು ಸ್ಥಾಪಿಸಿದರು.
1940: ಸಾಹಿತಿ ಟಿ. ಆರ್. ರಾಧಾಕೃಷ್ಣ ಜನನ.
1936: ಸಾಹಿತಿ, ವಾಗ್ಮಿ, ಗ್ರಂಥ ಸಂಪಾದಕ , ಭಾಷಾ ವಿಜ್ಞಾನಿ `ಹಂಪನಾ' ಖ್ಯಾತಿಯ ಹಂಪ ನಾಗರಾಜಯ್ಯ ಅವರು ಪದ್ಮನಾಭಯ್ಯ- ಪದ್ಮಾವತಮ್ಮ ದಂಪತಿಯ ಮಗನಾಗಿ ಗೌರಿ ಬಿದನೂರು ತಾಲ್ಲೂಕು ಹಂಪಸಂದ್ರದಲ್ಲಿ ಜನಿಸಿದರು.
1935: ಸಾಹಿತಿ ಬಿ.ವಿ. ವೀರಭದ್ರಪ್ಪ ಜನನ.
1931: ಸಾಹಿತಿ ಟಿ.ಕೆ. ರಾಮರಾವ್ ಜನನ.
1931: ದಕ್ಷಿಣ ಆಫ್ರಿಕಾದ ಕರಿಯ ಆಂಗ್ಲಿಕನ್ ಪಾದ್ರಿ ಡೆಸ್ಮಂಡ್ ಡಿ. ಟುಟು ಜನ್ಮದಿನ. ದಕ್ಷಿಣ ಆಫ್ರಿಕದಲ್ಲಿ ವರ್ಣಭೇದ ನೀತಿ ವಿರುದ್ಧ ಪ್ರತಿಭಟನಾ ಚಳವಳಿಯಲ್ಲಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ 1984ರಲ್ಲಿ ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು.
1806: ಮೊದಲ ಕಾರ್ಬನ್ ಪೇಪರ್ ಸಂಶೋಧಕ ರಾಲ್ಫ್ ವೆಜ್ ವುಡ್ `ಬರಹಗಳ ಬಹುಪ್ರತಿ ಮಾಡುವುದಕ್ಕೆ' ಪೇಟೆಂಟ್ ಪಡೆದ.
1708: ಸಿಕ್ಖರ 10ನೆಯ ಹಾಗೂ ಕೊನೆಯ ಗುರುಗಳಾದ ಗುರು ಗೋಬಿಂದ್ ಸಿಂಗ್ (1666-1708) ತಮ್ಮ 42ನೇ ವಯಸಿನಲ್ಲಿ ನಾಂದೇಡ್ ನಲ್ಲಿ ನಿಧನರಾದರು. ಖಾಲ್ಸಾ ಸ್ಥಾಪಕರಾಗಿ ಖ್ಯಾತಿ ಪಡೆದಿರುವ ಅವರು ತಮ್ಮ ಸಾವಿಗೆ ಮುನ್ನ `ಗ್ರಂಥ ಸಾಹಿಬ್'ನ್ನೇ ತಮ್ಮ ನಂತರ ಗುರುವಾಗಿ ಪರಿಗಣಿಸುವಂತೆ ತಮ್ಮ ಅನುಯಾಯಿಗಳಿಗೆ ನಿರ್ದೇಶಿಸಿದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment