ಇಂದಿನ ಇತಿಹಾಸ
ಅಕ್ಟೋಬರ್ 22
ಚಂದ್ರನ ಕಡೆಗೆ ತನ್ನ ಚೊಚ್ಚಲ ಯಾನ (ಚಂದ್ರಯಾನ-1) ಆರಂಭಿಸುವ ಮೂಲಕ ಚಂದ್ರನತ್ತ ಪಯಣಿಸಿದ ಜಗತ್ತಿನ ಆರನೇ ರಾಷ್ಟ್ರವೆನಿಸಿದ ಭಾರತ ವಿಶ್ವದ ಅತ್ಯಂತ ಅಗ್ಗದ `ಬಾಹ್ಯಾಕಾಶ ಯಾನ' ನಡೆಸಿದ ಮೊತ್ತ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಇದರೊಂದಿಗೆ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವು ಜಾಗತಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಿತು.
ಇದರೊಂದಿಗೆ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವು ಜಾಗತಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಿತು.
2014: ಒಟ್ಟಾವ: ಕೆನಡಾದ ರಾಜಧಾನಿ ನಗರ ಒಟ್ಟಾವದಲ್ಲಿರುವ ಸಂಸತ್ತು ಈದಿನ ಭಯೋತ್ಪಾದಕ ದಾಳಿಗೆ ಗುರಿಯಾಯಿತು. ಯುದ್ಧ ಸ್ಮಾರಕವನ್ನು ಕಾಯುತ್ತಿದ್ದ ಸೈನಿಕನನ್ನು ಗುಂಡಿಟ್ಟುಕೊಂಡ ಕೆಲವೇ ಕ್ಷಣಗಳಲ್ಲಿ ಈ ದಾಳಿ ನಡೆದಿದ್ದು, ಸಂಸತ್ತಿನ ಒಳಗೆ 40-50 ಗುಂಡುಗಳು ಹಾರಿದ ಸದ್ದುಗಳು ಕೇಳಿಬಂದವು. ಸಂಸತ್ತಿನ ಒಳಗಿದ್ದ ಶಸ್ತ್ರಧಾರಿ ಸಾರ್ಜೆಂಟ್ಗಳು ದಾಳಿಕೋರನನ್ನು ಕೊಂದು ಹಾಕಿದರು ಎಂದು ಸಿಬಿಸಿ ವರದಿ ಮಾಡಿತು. ಈ ಘಟನೆಗಳಿಗೆ ಸಂಸತ್ ಸದಸ್ಯರು ಮತ್ತು ಇತರರು ಪ್ರತ್ಯಕ್ಷ ಸಾಕ್ಷಿಗಳಾದರು ಎಂದು ವರದಿ ತಿಳಿಸಿತು. ಇರಾಕ್ ಮತ್ತು ಸಿರಿಯಾದ ಐಎಸ್ ಭಯೋತ್ಪಾದಕ ಗುಂಪಿನ ದಮನ ಯತ್ನವನ್ನು ಬೆಂಬಲಿಸಲು ಸಿಎಫ್ ಹಾರ್ನೆಟ್ ಯೋಧರನ್ನು ಒಳಗೊಂಡ ತನ್ನ ಪಡೆಗಳನ್ನು ಕೆನಡಾ ಕಳುಹಿಸಿಕೊಟ್ಟ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಇಡೀ ದೇಶ ದಿಗ್ಭ್ರಮೆಗೊಂಡಿತು. ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಕೆನಡಾ ಮಾತ್ರವಲ್ಲ ಅಮೆರಿಕದಲ್ಲೂ ಕಟ್ಟೆಚ್ಚರ ವಹಿಸಲಾಯಿತು. ಈ ಹೊತ್ತಿನಲ್ಲಿ ಒಟ್ಟಾವ ಮೇಯರ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಕೆನಡಾ ಸಂಸತ್ತಿನಲ್ಲಿ ನಡೆದ ದಾಳಿಯನ್ನು ಕಳವಳಕಾರಿ ಎಂದು ಬಣ್ಣಿಸಿ, ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುವೆ ಎಂದು ಟ್ವೀಟ್ ಮಾಡಿದರು. ಯುದ್ಧ ಸ್ಮಾರಕ ಕಾಯುತ್ತಿದ್ದ ಸೈನಿಕನನ್ನು ಭಯೋತ್ಪಾದಕ ಕಗ್ಗೊಲೆಗೈದಿದ್ದಾನೆ ಎಂದು ಕೆನಡಾದ ಪ್ರಧಾನಿ ಸ್ಟೆಫನ್ ಹಾರ್ಪರ್ ಹೇಳಿದರೆ, 'ಬಹುಶಃ ಗುಂಡು ಹಾರಿಸಿದ್ದು ಒಬ್ಬನೇ ವ್ಯಕ್ತಿ. ಆತನೀಗ ಸತ್ತಿದ್ದಾನೆ' ಎಂದು ಒಟ್ಟಾವ ಮೇಯರ್ ಜಿಮ್ವಾಟ್ಸನ್ ಸಿಎನ್ಎನ್ಗೆ ತಿಳಿಸಿದರು. '’ನಗರಕ್ಕೆ ಮಾತ್ರವೇ ಅಲ್ಲ, ರಾಷ್ಟ್ರಕ್ಕೇ ಇದೊಂದು ಆಘಾತಕಾರಿ, ಮನಕ್ಷೋಭೆ ಉಂಟು ಮಾಡಿದ ಘಟನೆ' ಎಂದು ಅವರು ಹೇಳಿದರು. 'ರಾಜಧಾನಿ ಒಟ್ಟಾವದಲ್ಲಿ ಮೊದಲು ಯುದ್ಧ ಸ್ಮಾರಕವನ್ನು ಕಾಯುತ್ತಿದ್ದ ಸೈನಿಕನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಕೆಲವೇ ಕ್ಷಣಗಳಲ್ಲಿ ರಾಷ್ಟ್ರದ ಸಂಸತ್ತಿನಲ್ಲಿ ಗುಂಡಿನ ಸದ್ದುಗಳು ಕೇಳಿಬಂದವು'. ಕೆನಡಾದ ರಾಜಧಾನಿ ಒಟ್ಟಾವದಲ್ಲಿ ಬುಧವಾರ ಸಂಭವಿಸಿದ ಈ ಎರಡು ಗುಂಡುಹಾರಾಟದ ಪ್ರಕರಣಗಳು ಸಂಭವಿಸುತ್ತಿದ್ದಂತೆಯೇ ಕೆನಡಾ ಸಂಸತ್ತಿಗೆ ಪೊಲೀಸ್ ಸರ್ಪಗಾವಲು ಬಿತ್ತು. ನಗರದ ಬಹುತೇಕ ಭಾಗಗಳಲ್ಲಿ ಲಾಕ್ಡೌನ್ ಘೋಷಿಸಿದ ಪೊಲೀಸರು ಹಲವಾರು ತಾಸು ಕಾಲ ಶಂಕಿತರಿಗಾಗಿ ಹುಡುಕಾಟ ನಡೆಸಿದರು. ಇಡೀ ನಗರದ ಜನಜೀವನ ಸ್ಥಗಿತಗೊಂಡಿತು. ರಾತ್ರಿವೇಳೆಗೆ 'ಲಾಕ್ಡೌನ್' ತೆರವುಗೊಳಿಸಲಾಗಿದೆ ಎಂದು ತಿಳಿಸಿದ ಒಟ್ಟಾವ ಪೊಲೀಸರು ಸಾರ್ವಜನಿಕರಿಗೆ ಈಗ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದರು. ಆದರೆ ಗುಂಡು ಹಾರಿಸಿದವರು ಯಾರು? ಗುಂಡು ಹಾರಿಸಿದ್ದು ಏಕೆ ಎಂಬ ಪ್ರಶ್ನೆ ನಿಗೂಢವಾಗಿ ಉಳಿದಿದೆ ಎಂದು ಸಿಎನ್ಎನ್ ವರದಿ ಮಾಡಿತು.
2008: ಚಂದ್ರನ ಕಡೆಗೆ ತನ್ನ ಚೊಚ್ಚಲ ಯಾನ (ಚಂದ್ರಯಾನ-1) ಆರಂಭಿಸುವ ಮೂಲಕ ಚಂದ್ರನತ್ತ ಪಯಣಿಸಿದ ಜಗತ್ತಿನ ಆರನೇ ರಾಷ್ಟ್ರವೆನಿಸಿದ ಭಾರತ ವಿಶ್ವದ ಅತ್ಯಂತ ಅಗ್ಗದ `ಬಾಹ್ಯಾಕಾಶ ಯಾನ' ನಡೆಸಿದ ಮೊತ್ತ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಇದರೊಂದಿಗೆ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವು ಜಾಗತಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಿತು. ಚಂದ್ರಯಾನ -1 ಗಗನನೌಕೆಯು ಏರಿದ ಎತ್ತರದ ಕಥೆಯು ಬಂಗಾರದ ಅಕ್ಷರಗಳೊಂದಿಗೆ ವಿಜ್ಞಾನದ ನವಯುಗಕ್ಕೆ ಮುನ್ನುಡಿ ಬರೆಯಿತು. ಆಂಧ್ರದ ನೆಲಕ್ಕೆ ತಾಗಿದಂತಿರುವ ಬಂಗಾಳಕೊಲ್ಲಿಯ ಶ್ರೀಹರಿಕೋಟಾ ಪುಟ್ಟ `ದ್ವೀಪ'ದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಭಾರತೀಯ ಕಾಲಮಾನ ಬೆಳಗ್ಗೆ 6.22ಕ್ಕೆ ಸರಿಯಾಗಿ ಚಂದ್ರಯಾನ-1 ಗಗನನೌಕೆಯನ್ನು ಹೊತ್ತ ಪಿಎಸ್ಸೆಲ್ವಿ (ಪಿ ಎಸ್ ಎಲ್ ವಿ) -ಸಿ 11 ಉಡಾವಣಾ ವಾಹಕ ಬೆಂಕಿ ಉಗುಳುತ್ತಾ ಶರವೇಗದಲ್ಲಿ ಬಾನಿಗೆ ಏರಿ, ಕ್ಷಣಾರ್ಧದಲ್ಲಿ ಆಕಾಶದಲ್ಲಿ ಮಾಯವಾಯಿತು. 386 ಕೋಟಿ ರೂಪಾಯಿ ವೆಚ್ಚದ ಭಾರತದ ಈ `ಚಂದ್ರಯಾನ-1' ಯೋಜನೆ ವಿಶ್ವದಲ್ಲೇ ಅತ್ಯಂತ ಅಗ್ಗದ್ದು ಎಂದು ಪರಿಗಣಿತವಾಗಿದ್ದು, ಭೂಮಿಯ ಏಕೈಕ ಉಪಗ್ರಹದ ಚೊಚ್ಚಲ ಸಮಗ್ರ ನಕ್ಷೆ ರೂಪಿಸಲು ಸಹಕರಸುವಲ್ಲಿ ಮಹತ್ವದ ಪಾತ್ರ ವಹಿಸುವುದು. 'ಭಾರತದ ಪಾಲಿಗೆ ಇದು ಚರಿತ್ರಾರ್ಹ ಕ್ಷಣ. ನಾವು ಚಂದ್ರನೆಡೆಗೆ ನಮ್ಮ ಯಾನದ ಮೊದಲ ಹಂತವನ್ನು ಆರಂಭಿಸಿದ್ದು ಇದು ಯಶಸ್ವಿಯಾಗಿದೆ' ಎಂದು ಹರ್ಷಭರಿತರಾಗಿದ್ದ ಇಸ್ರೋ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ಭಾರತದ ದೇಶೀ ನಿರ್ಮಿತ ರಾಕೆಟ್ ಪಿಎಸ್ಸೆಲ್ವಿ ಸಿ-11 ಇಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ನಂತರ ಹೇಳಿದರು.
2008: ರಾಜ್ಯದ ವಿವಿಧೆಡೆ 13 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಗಳ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 15 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದರು. ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಡಿ ವೈ ಎಸ್ ಪಿ ಕೆ. ಸುರೇಂದ್ರ ರಾವ್, ಬೆಂಗಳೂರು ಉತ್ತರ ಉಪ ತಹಶೀಲ್ದಾರ್ ಕೃಷ್ಣ ನಾಯಕ್, ಮಾಲೂರು ಸಬ್ ರಿಜಿಸ್ಟ್ರಾರ್ ಲಕ್ಷ್ಮಣಪ್ರಸಾದ್, ಪೊಲೀಸ್ ಇನ್ಸ್ ಪೆಕ್ಟರುಗಳಾದ ಕೋನಪ್ಪರೆಡ್ಡಿ (ಕನಕಪುರ), ಓಬಳೇಶ್ (ಯಲಹಂಕ), ನಾರಾಯಣ ವಿ. ಭರಮನಿ (ಸವದತ್ತಿ), ಗುಲ್ಬರ್ಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ ಎಚ್. ಭೀಮಕ್ಕನವರ್, ಬಾಗಲಕೋಟೆ ಜಿ.ಪಂ. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹೇಶ್ ಕೃಷ್ಣಪ್ಪ ಕಕ್ಕಾರೆಡ್ಡಿ, ವಿಜಾಪುರ ಮೋಟಾರು ವಾಹನ ನಿರೀಕ್ಷಕ ಶಿವಪ್ರಸಾದ್, ನಗರದ ಥಣಿಸಂದ್ರ ಗ್ರಾ.ಪಂ. ಕಾರ್ಯದರ್ಶಿ ಆರ್. ನಾಗರಾಜ, ದೇವನಹಳ್ಳಿಯ ಗ್ರಾಮ ಲೆಕ್ಕಿಗ ವಾಲಿಜಾನ್, ಬಿಬಿಎಂಪಿ ಕಾಮಗಾರಿ ನಿರೀಕ್ಷಕ ರಂಗಸ್ವಾಮಯ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯವಸ್ಥಾಪಕ (ರಾಜಾಜಿನಗರ) ವೆಂಕಟರಮಣಸ್ವಾಮಿ ದಾಳಿಗೆ ಒಳಗಾದ ಅಧಿಕಾರಿಗಳು.
2008: ಕರ್ನಾಟಕದ ಯುವ ಚಿತ್ರ ಕಲಾವಿದೆ ರಂಜನಿ ಶೆಟ್ಟರ್ ಅವರು ಪ್ರತಿಷ್ಠಿತ ಸಂಸ್ಕೃತಿ ಪ್ರತಿಷ್ಠಾನದ 2008ನೇ ಸಾಲಿನ ಸಂಸ್ಕೃತಿ ಪ್ರಶಸ್ತಿಗೆ ಪಾತ್ರರಾದರು. ಬೆಂಗಳೂರಿನಲ್ಲಿ ನೆಲೆಸಿದ ರಂಜನಿ, ದೇಶ-ವಿದೇಶಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಲಾಪ್ರದರ್ಶನ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದವರು. ಜೈವಿಕ ವಸ್ತುಗಳನ್ನು ಬಳಸಿಕೊಂಡು ನಿರ್ಮಿಸಿದ ಕಲಾಕೃತಿಗಳು ಅವರ ಇತ್ತೀಚಿನ ಪ್ರಯೋಗ. ಬೆಂಗಳೂರಿನ ಚಿತ್ರಕಲಾ ಪರಿಷತಿನಲ್ಲಿ ಶಿಲ್ಪಕಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ರಂಜನಿ 2003ರಲ್ಲಿ ಹೆಬ್ಬಾರ್ ಪ್ರತಿಷ್ಠಾನದ ಪ್ರಶಸ್ತಿ ಪಡೆದಿದ್ದರು. ಅಶೋಕ್ ವಾಜಪೇಯಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ವರ್ಷದ ಕಲಾ ಕ್ಷೇತ್ರದ ಪ್ರಶಸ್ತಿಗೆ ರಂಜನಿ ಅವರನ್ನು ಆಯ್ಕೆ ಮಾಡಿತು.
2008: ಬಿಹಾರಿನ ಖಗರಿಯಾ ಸಮೀಪ ಅಧಿಕ ಜನರಿಂದ ಕೂಡಿದ ದೋಣಿ ಮಗುಚಿದ ಪರಿಣಾಮ 24 ಜನ ಮೃತರಾದರು. ದುಢೇಲಾ ಗ್ರಾಮದಲ್ಲಿ ಹುಲ್ಲು ಕತ್ತರಿಸಲು ಮಹಿಳೆಯರನ್ನು ಸಾಗಿಸುತ್ತಿದ್ದ ದೋಣಿ ಮಗುಚಿ ಈ ದುರಂತ ಸಂಭವಿಸಿತು.
2007: ಭಾರತದಲ್ಲಿ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ನೀಡಿದ ಮಹತ್ವದ ಕೊಡುಗೆಗಾಗಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಲಂಡನ್ನಿನ ರಾಯಲ್ ಸೊಸೈಟಿಯಲ್ಲಿ `ಕಿಂಗ್ ಚಾರ್ಲ್ಸ್-2' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಯಲ್ ಸೊಸೈಟಿಯ ಅಧ್ಯಕ್ಷ ಲಾರ್ಡ್ ಮಾರ್ಟಿನ್ ರೀಸ್ ಅವರು ಕಲಾಂ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. 1997ರಲ್ಲಿ ಆರಂಭವಾದ ಪ್ರಶಸ್ತಿಯನ್ನು ಪಡೆದ ಎರಡನೇ ವ್ಯಕ್ತಿ ಎಂಬ ಹಿರಿಮೆಗೂ ಕಲಾಂ ಪಾತ್ರರಾದರು. ಈ ಹಿಂದೆ 1998ರಲ್ಲಿ ಜಪಾನಿನ ಸಾಮ್ರಾಟ ಅಖಿಹಿಟೋ ಅವರಿಗೆ ಈ ಗೌರವ ನೀಡಲಾಗಿತ್ತು. ಅನಿವಾಸಿ ಭಾರತೀಯ ಉದ್ಯಮಿ ಸ್ವರಾಜ್ ಪಾಲ್, ಇಂಗ್ಲೆಂಡಿನಲ್ಲಿರುವ ಭಾರತದ ಹಂಗಾಮಿ ಹೈ ಕಮಿಷನರ್ ಅಶೋಕ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
2007: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಾಲಿವುಡ್ ನಟ ಸಂಜಯ್ ದತ್ ಈದಿನ ತೀರ್ಪಿನ ಪ್ರತಿ ಪಡೆದು ಮುಂಬೈ ಟಾಡಾ ನ್ಯಾಯಾಲಯಕ್ಕೆ ಶರಣಾದರು. ನಂತರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪುಣೆಯ ಯೆರವಾಡ ಜೈಲಿಗೆ ಕರೆದೊಯ್ದರು. ಸಂಜಯ್ ದತ್ ಅವರಿಗೆ ನೀಡಲಾಗಿರುವ 4340 ಪುಟಗಳ ತೀರ್ಪಿನ ಒಟ್ಟು ಭಾರ 25 ಕಿಲೊ. ತೀರ್ಪಿನ ಪ್ರತಿ ಸಿಕ್ಕ ಕೂಡಲೆ ಟಾಡಾ ಕೋರ್ಟಿಗೆ ಶರಣಾಗಬೇಕು ಎಂದು ಈ ಮುನ್ನ ಅವರಿಗೆ ತಾತ್ಕಾಲಿಕ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಪ್ರತಿ ಸಿಕ್ಕ ನಂತರ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿತ್ತು.
2007: ಚಿತ್ರದುರ್ಗ ಮುರುಘಾಮಠದ ಪ್ರತಿಷ್ಠಿತ `ಬಸವಶ್ರೀ ಪ್ರಶಸ್ತಿ'ಯನ್ನು ಸರ್ವಧರ್ಮ ಸಂಸತ್ತಿನ ಸಂಸ್ಥಾಪಕ ಸ್ವಾಮಿ ಅಗ್ನಿವೇಶ್ ಅವರಿಗೆ ಈದಿನ ಚಿತ್ರದುರ್ಗದ ಭರಮಣ್ಣ ನಾಯಕನ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು. ಶರಣ ಸಂಸ್ಕೃತಿ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
2007: ಹಣಕ್ಕಾಗಿ 27 ಕೊಲೆ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಸುಪಾರಿ ಹಂತಕ ಶ್ಯಾಮ್ ಉರುಫ್ ಕಿಲ್ಲರ್ ಶ್ಯಾಮ್ ನನ್ನು ಬೆಂಗಳೂರಿನ ವಿಶೇಷ ಪೊಲೀಸ್ ತಂಡ ಬಂಧಿಸಿತು. ಏಳು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶ್ಯಾಮ್ ಕಳೆದ ಆಗಸ್ಟಿನಲ್ಲಿ ಕೋಲಾರ ಜೈಲಿನಿಂದ ಪರಾರಿಯಾಗಿದ್ದ. ಈತನ ಜೊತೆಗೆ ಶಬನಮ್ ಡೆವಲಪರ್ಸ್ ಉದ್ಯೋಗಿಗಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್ (30) ಹಾಗೂ ಹೊಸಕೋಟೆಯ ವಿಜಿ (29), ಆನಂದ (23), ಮಾರತ್ಹಳ್ಳಿಯ ಪ್ರಕಾಶ್ (34) ಎಂಬುವರು ಸಹ ಪೊಲೀಸರ ಬಲೆಗೆ ಬಿದ್ದರು. ಹೆದ್ದಾರಿಗಳಲ್ಲಿ ಲಾರಿ, ಕಾರನ್ನು ತಡೆದು ಚಾಲಕ ಪ್ರಯಾಣಿಕರನ್ನು ಕೊಲೆ ಮಾಡಿ ಹಣ ದೋಚುತ್ತಿದ್ದ ಶ್ಯಾಮ್ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮೈಸೂರು, ತುಮಕೂರು ಮತ್ತು ತಮಿಳುನಾಡಿನಲ್ಲಿ ಒಟ್ಟು 27 ಕೊಲೆ ಮತ್ತು ಅಷ್ಟೇ ಸಂಖ್ಯೆಯ ದರೋಡೆಗಳನ್ನು ಮಾಡಿದ ಆರೋಪವಿತ್ತು. ಇದರಲ್ಲಿ ಏಳು ಕೊಲೆ ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಒಂದು ಪ್ರಕರಣದಲ್ಲಿ 10 ವರ್ಷ ಸಜೆ, ಎರಡು ಪ್ರಕರಣದಲ್ಲಿ ಏಳು ವರ್ಷ ಮತ್ತು ಒಂದು ಪ್ರಕರಣದಲ್ಲಿ ಆರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ.
2007: ಹು ಜಿಂಟಾವೊ ಅವರು ಮತ್ತು ಐದು ವರ್ಷಗಳ ಅವಧಿಗೆ ಚೀನಾ ಅಧ್ಯಕ್ಷರಾಗಿ ಪುನರಾಯ್ಕೆಯಾದರು.
2007: ಪರಿಸರಸ್ನೇಹಿ ಮತ್ತು ಅತಿ ಶೀಘ್ರವಾಗಿ ಅಡುಗೆ ಮಾಡುವ ಒಲೆಯನ್ನು ಪ್ರಚಾರ ಮಾಡಿದ ಹಾವೇರಿಯ ಮಂಜುನಾಥ ಪಂಚಾನನ ಮೈಸೂರಿನಲ್ಲಿ ಹೈಟೆಕ್ ಯಜ್ಞಕುಂಡವೊಂದನ್ನು ಸಿದ್ಧಪಡಿಸಿ ಆಸ್ತಿಕರ ಮನಗೆದ್ದರು. ಮೈಸೂರಿನ ಜೆಎಸ್ಸೆಸ್ಸ್ ಅರ್ಬನ್ ಹಾತಿನಲ್ಲಿ ಈ ಹೈಟೆಕ್ ಹೋಮಕುಂಡ ಜನರ ಗಮನ ಸೆಳೆಯಿತು. ಜೇಡಿ ಮಣ್ಣಿನಿಂದ ತಯಾರಿಸಿದ ಹೂಮ ಕುಂಡಕ್ಕೆ ವಿದ್ಯುತ್ ಒಲೆಯನ್ನು ಸೇರಿಸಲಾಗಿದ್ದು, ಸ್ಪೀಕರ್ ಜೋಡಿಸಲಾಗಿದೆ. ಒಲೆಯ ಕೆಳಗೇ ಟೇಪ್ ಹಾಕುವ ಸೌಲಭ್ಯವೂ ಇದ್ದು ಹೋಮದ ಮಂತ್ರವನ್ನೂ ಕೇಳಬಹುದು. ಜೊತೆಗೆ ನೀವು ಲೋಬಾನ ಅಥವಾ ಪಂಚಾನನ ಅವರೇ ತಯಾರಿಸಿದ ಧೂಪವನ್ನು ಬಳಸಬಹುದು. ನಿಮ್ಮ ಮನೆಯಲ್ಲಿ ಗಣ ಹೋಮ ಮಾಡಬೇಕಾದರೆ ಗಣಹೋಮದ ಮಂತ್ರ, ಮೃತ್ಯುಂಜಯ ಹೋಮ ಮಾಡಿಸಬೇಕು ಎಂದರೆ ಮೃತ್ಯುಂಜಯ ಹೋಮದ ಮಂತ್ರದ ಕ್ಯಾಸೆಟ್ ಹಾಕಬಹುದು. ಜೊತೆಗೆ ಐದು ಮಂತ್ರಗಳು ಇರುವ ಕ್ಯಾಸೆಟ್ಟನ್ನೂ ಮಂಜುನಾಥ ಹಾಕಿಕೊಡುತ್ತಾರೆ. ಧೂಪವನ್ನು ಹಾಕಿದಾಗ ಒಲೆಯಿಂದ ಹೊಗೆ ಬರುತ್ತದೆ. ಆದರೆ ಪಂಚಾನನ ಅವರು ಸಿದ್ಧಪಡಿಸಿದ ವಿವಿಧ ಮರಗಳ ಪುಡಿಯನ್ನು ಹಾಕಿದಾಗ ಮಾತ್ರ ಈ ಒಲೆಯಲ್ಲಿ ಸುವಾಸನೆ ಬರುತ್ತದೆ. ನೀವೇ ಬೇರೆ ಸುವಾಸನೆ ಪುಡಿಯನ್ನು ಹಾಕಿದರೆ ಹೊಗೆ ಮಾತ್ರ ಬರುತ್ತದೆ. ಸುವಾಸನೆ ಬರುವುದಿಲ್ಲ. ಪಂಚಾನನ ಅವರು ಹಾವೇರಿಯ ಪುರೋಹಿತರ ಸಲಹೆ ಪಡೆದು ಈ ಹೋಮಕುಂಡವನ್ನು ಸೃಷ್ಟಿಸಿದ್ದಾರೆ. ಅವರ ಸಲಹೆ ಮೇರೆಗೇ ಸುವಾಸನೆ ಬರುವಂತಹ ಮರಗಳ ಪುಡಿಯ ಮಿಶ್ರಣ ಸಿದ್ಧ ಪಡಿಸಿದ್ದಾರೆ. ಈ ಹೋಮಕುಂಡವನ್ನು ಬಳಸಿ ಬೆಳಿಗ್ಗೆ ಮತ್ತು ಸಂಜೆ ಹೊಗೆ ಹಾಕಿದರೆ ಮನೆಯಲ್ಲಿ ಆರೋಗ್ಯ ನೆಲೆಸುತ್ತದೆ. ಮುಖ್ಯವಾಗಿ ಸೊಳ್ಳೆ ಮತ್ತು ಇತರ ಕೀಟಗಳು ಬರುವುದಿಲ್ಲ ಎಂಬುದು ಪಂಚಾನನ ಅವರ ಪ್ರತಿಪಾದನೆ. ಮೂಲತಃ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನವರಾದ ಮಂಜುನಾಥ ಪಂಚಾನನ ಕೇವಲ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದವರು. ಉದ್ಯೋಗ ಹುಡುಕಿಕೊಂಡು ಹಾವೇರಿಗೆ ಬಂದ ಅವರು ಮರಗೆಲಸವನ್ನು ಮಾಡುತ್ತಾ ಎಲೆಕ್ಟ್ರಿಕಲ್ ಎಂಜಿನಿಯರಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಹಲವಾರು ಯಂತ್ರಗಳನ್ನು ಸಿದ್ಧಪಡಿಸಿದರು. ಪರಿಸರ ಸ್ನೇಹಿ ಒಲೆ, ಕಾಲಿಂಗ್ ಬೆಲ್, ತಾರಾಲಯ, ಇಸ್ತ್ರಿ ಪೆಟ್ಟಿಗೆ ಮುಂತಾದವುಗಳನ್ನು ಹೊಸ ಮಾದರಿಯಲ್ಲಿ ರೂಪಿಸಿದರು. ಇವರ ವಿನೂತನ ಎಲೆಕ್ಟ್ರಿಕಲ್ ಹೋಮ ಕುಂಡವನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು. (ಮಂಜುನಾಥ ಪಂಚಾನನ ದೂರವಾಣಿ 9900437066)
2007: ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಟ, ಮೂಲತಃ ವಿಜಾಪುರ ಜಿಲ್ಲೆಯವರಾದ ಅಶೋಕ ಬಾದರದಿನ್ನಿ ಅವರನ್ನು ಸಾಣೇಹಳ್ಳಿಯ ಶಿವಕುಮಾರ ಕಲಾಸಂಘವು ಕೊಡಮಾಡುವ 2007ರ ಶಿವಕುಮಾರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಬಾದರದಿನ್ನಿ ಅವರ ನಾಟಕಗಳು ಹೊಸ ವ್ಯಾಖ್ಯೆಗೆ, ನವೀನ ಸಂಯೋಜನೆಗೆ, ಹದವಾದ ಸಂಗೀತ ಬಳಕೆಗೆ, ಅನನುಭವಿ ಕಲಾವಿದರ ಪ್ರತಿಭಾ ಪೋಷಣೆಗೆ, ಸಂಘಟನೆಯ ಸಂದರ್ಭದಲ್ಲಿ ಮಿತವಾದ ವೆಚ್ಚಕ್ಕೆ, ಪ್ರೇಕ್ಷಕರ ಮನ್ನಣೆಗೆ ಪಾತ್ರವಾಗಿವೆ. ಬೆಂಗಳೂರೇತರ ರಂಗಭೂಮಿಯ ಚಾಂಪಿಯನ್ ಎಂದೇ ಹೆಸರಾದ ಇವರ ನಾಟಕಗಳು ಕೇರಳ, ಮುಂಬೈ, ನವದೆಹಲಿಯಲ್ಲೂ ಪ್ರದರ್ಶನ ಕಂಡಿವೆ. `ಅಭಿಜ್ಞಾನ ಶಾಕುಂತಲಾ, ಮೃಚ್ಛ ಕಟಿಕ, ಮ್ಯಾಕಬೆತ್, ಕಿಂಗ್ ಲಿಯರ್, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್, ಈಡಿಪಸ್, ಸಂಕ್ರಾಂತಿ, ತುಘಲಕ್, ಸಿಂಗಾರೆವ್ವ ಮತ್ತು ಅರಮನೆ, ವಿಶ್ವಬಂಧು ಮರುಳಸಿದ್ಧ, ಮರಣವೇ ಮಹಾನವಮಿ, ಶರಣಸತಿ, ಲಿಂಗಪತಿ, ಉದ್ಭವ' ಇವು ಬಾದರ ದಿನ್ನಿ ನಿರ್ದೇಶಿಸಿದ್ದ ಪ್ರಮುಖ ನಾಟಕಗಳು.
2007: ಪವರ್ ಲಿಫ್ಟರ್ ವೀರೇಶ್ ರಾವ್ (33) ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 2007ರ ಸಾಲಿನ ದಸರಾ ಕ್ರೀಡಾಕೂಟದ ಪವರ್ ಲಿಫ್ಟಿಂಗ್ ಸ್ಪರ್ಧೆ 125 ಕೆ.ಜಿ. ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ದ್ವಿತೀಯ ಸ್ಥಾನ ಹಾಗೂ ಬೆಳ್ಳಿ ಪದಕ ಪಡೆದಿದ್ದರು. ರಾಜ್ಯ ಮಾತ್ರವಲ್ಲ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಹಲವು ಬಾರಿ ಭಾಗವಹಿಸಿದ್ದ ವೀರೇಶ್ ರಾವ್ ಅನೇಕ ಬಹುಮಾನಗಳನ್ನು ಪಡೆದು ಉತ್ತಮ ಪವರ್ ಲಿಫ್ಟರ್ ಎನಿಸಿದ್ದರು.
2006: ಗುಜರಾತಿನ ಕಛ್ ಜಿಲ್ಲೆಯ ಲುನಾ ಗ್ರಾಮದ ರಾಣಾದಲ್ಲಿ ಭೂಮಿಯ ಆಚಿನ ಕಾಯವೊಂದು ಅಪ್ಪಳಿಸಿ ಉಂಟಾಗಿರಬಹುದಾದ ವೃತ್ತಾಕಾರದ ಕುಳಿಯೊಂದನ್ನು ಪತ್ತೆ ಹಚ್ಚಿರುವುದಾಗಿ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರಜ್ಞರಾದ ಆರ್. ವಿ. ಕಾರಂತ್ ಮತ್ತು ಎಂ.ಎಸ್. ಗಾಧವಿ ಅವರು `ಕರೆಂಟ್ ಸೈನ್ಸ್' ಪತ್ರಿಕೆಗೆ ಬರೆದ ಲೇಖನದಲ್ಲಿ ಪ್ರಕಟಿಸಿದರು. ವೇದಗಳ ಕಾಲದಲ್ಲಿ ಭೂಮಿಯ ಹೊರಗಿನ ಕಾಯವೊಂದು ಈ ಪ್ರದೇಶಕ್ಕೆ ಅಪ್ಪಳಿಸಿ ಈ ಕುಳಿಯ ರಚನೆಯಾಗಿರಬಹುದು ಎನ್ನಲಾಗಿದೆ. ಕುಳಿ ಪತ್ತೆಯಾದ ನಿವೇಶನವು ಪ್ರಾಚೀನ ಹರಪ್ಪ ನಾಗರಿಕತೆಗೆ ಸಂಬಂಧಿಸಿದ ಕುರುಹುಗಳಿರುವ ನಿವೇಶನಕ್ಕೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲೂ ಸುಮಾರು 4000-5000 ವರ್ಷಗಳ ಹಿಂದೆ ಉರಿಯುತ್ತಿರುವ ಅನ್ಯ ಕಾಯವೊಂದು ಪಶ್ಚಿಮ ಭಾರತದ ಪ್ರದೇಶವೊಂದಕ್ಕೆ ಅಪ್ಪಳಿಸಿತ್ತು ಎಂಬ ಬಗೆಗೆ ಮಾಹಿತಿಗಳು ಲಭ್ಯವಿವೆ. ಮಹಾರಾಷ್ಟ್ರದ ಲೊನಾರ್ ಹಾಗೂ ರಾಜಸ್ಥಾನದ ರಾಮಗಢ ಎಂಬಲ್ಲಿ ಇದೇ ತರಹದ ರಚನೆಗಳು ಪತ್ತೆಯಾಗಿದ್ದು, ಲುನಾದಲ್ಲಿ ಪತ್ತೆಯಾದ ಈ `ಕುಳಿ' ದೇಶದಲ್ಲಿ ಪತ್ತೆಯಾದ ಮೂರನೇ ಕುಳಿಯಾಗಿದೆ.
1938: ಚೆಸ್ಟರ್ ಎಫ್. ಕಾರ್ಲ್ ಸನ್ ತನ್ನ ಸಹಾಯಕನೊಬ್ಬನ ನೆರವಿನೊಂದಿಗೆ `ಜೆರೋಗ್ರಫಿ'ಯನ್ನು ಪ್ರದರ್ಶಿಸಿದ. ಇಂದು ಇದು ಫೊಟೋ ಕಾಪಿಯಿಂಗ್ ಅಥವಾ ಜೆರಾಕ್ಸಿಂಗ್ ಎಂದೇ ಖ್ಯಾತಿ ಪಡೆದಿದೆ. ಹತ್ತು ವರ್ಷಗಳ ಬಳಿಕ 1948 ರಲ್ಲಿ ಹಾಲೋಯಿಡ್ ಕಂಪೆನಿಯು (ಮುಂದೆ ಇದೇ ಜೆರಾಕ್ಸ್ ಕಂಪೆನಿ ಎಂದೇ ಖ್ಯಾತಿ ಪಡೆಯಿತು) ಜೆರಾಗ್ರಫಿ ಕುರಿತು ಸಾರ್ವಜನಿಕವಾಗಿ ಪ್ರಕಟಿಸಿತು. 1950ರಿಂದ ಜೆರಾಕ್ಸ್ ಪ್ರತಿಗಳು ಲಭಿಸಲಾರಂಭವಾದವು. ಜೆರಾಕ್ಸ್ ಎಂಬುದು ಜೆರಾಗ್ರಫಿ ಪದದಿಂದ ಬಂದಿದ್ದು, ಗ್ರೀಕಿನಲ್ಲಿ `ಒಣಬರಹ' (ಕನ್ನಡದಲ್ಲಿ `ನೆರಳಚ್ಚು') ಎಂಬ ಅರ್ಥವಿದೆ. ಈಗ ಅದು ಕಂಪೆನಿಯ `ಟ್ರೇಡ್ ಮಾರ್ಕ್' ಆಗಿದೆ.
1873: ಸ್ವಾಮೀ ರಾಮತೀರ್ಥರ (1873-1906) ಜನನ. ವೇದವಿದ್ವಾಂಸರಾದ ಇವರು ಆಧ್ಯಾತ್ಮಿಕವಾದಿಯಾಗಿದ್ದು, ವೈಯಕ್ತಿಕ ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕರಾಗಿದ್ದರು.
1797: ಆಂಡ್ರೆ ಜಾಕಿಸ್ ಗಾರ್ನೆರಿನ್ ಅವರು ಮೊತ್ತ ಮೊದಲ ಬಾರಿಗೆ ಯಶಸ್ವಿಯಾಗಿ ಪ್ಯಾರಾಶೂಟ್ ಮೂಲಕ ಕೆಳಗಿಳಿದರು. ಪ್ಯಾರಿಸ್ಸಿನಲ್ಲಿ ಅವರು 2,200 ಮೀಟರ್ ಬಲೂನಿನಿಂದ ಪ್ಯಾರಾಶೂಟ್ ಮೂಲಕ ಕೆಳಕ್ಕೆ ಹಾರಿದರು. ಇವರು ಪ್ಯಾರಾಶೂಟಿನ ಸಂಶೋಧಕರಲ್ಲ. ಆದರೆ ಹೆಚ್ಚು ಎತ್ತರದಿಂದ ನೆಗೆಯಲು ಅನುಕೂಲವಾಗುವಂತೆ ಈ ಸಾಧನವನ್ನು ಸುಧಾರಿಸಿದರು. ಇವರ ಪ್ಯಾರಾಶೂಟನ್ನು ಬಿಳಿ ಕ್ಯಾನ್ವಾಸಿನಿಂದ ಮಾಡಲಾಗಿತ್ತು. ಅದರ ವ್ಯಾಸ 23 ಅಡಿಗಳಾಗಿದ್ದವು.
1764: ಹೆಕ್ಟರ್ ಮುನ್ರೋ ನೇತೃತ್ವದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯು ಪಟ್ನಾದಿಂದ 120 ಕಿ.ಮೀ. ಪಶ್ಚಿಮಕ್ಕಿರುವ ಬಕ್ಸಾರ್ ಕದನದಲ್ಲಿ ಮೀರ್ ಕಾಸಿಮನನ್ನು ಪರಾಭವಗೊಳಿಸಿತು. ಮೀರ್ ಕಾಸಿಮ್ ಪಲಾಯನ ಮಾಡಿ, 1777 ರಲ್ಲಿ ಸಾಮಾನ್ಯನಂತೆ ಮೃತನಾದ.
1746: ಕಾಲೇಜ್ ಆಫ್ ನ್ಯೂಜೆರ್ಸಿ ಸ್ಥಾಪನೆಗೊಂಡಿತು. 1896 ರಲ್ಲಿ ಇದನ್ನು ಪ್ರಿನ್ಸ್ ಟನ್ ಯುನಿವರ್ಸಿಟಿಯಾಗಿ ಮಾರ್ಪಡಿಸಲಾಯಿತು.
No comments:
Post a Comment