Thursday, December 17, 2009

ಇಂದಿನ ಇತಿಹಾಸ History Today ನವೆಂಬರ್ 25

ಇಂದಿನ ಇತಿಹಾಸ

ನವೆಂಬರ್ 25

ಸ್ಪೇನಿನ  ಮ್ಯಾಡ್ರಿಡಿನಲ್ಲಿ ನಡೆದ ಮಕ್ಕಳ ಹಾಗೂ ಯುವಕರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2008ರಲ್ಲಿ ಮಾ. ಕಿಶನ್ ನಿರ್ದೇಶನದ 'ಕೇರಾಫ್ ಫುಟ್‌ಪಾತ್' ಚಿತ್ರ 'ಅತ್ಯುತ್ತಮ ಮಕ್ಕಳ ತೀರ್ಪುಗಾರರ ಪ್ರಶಸ್ತಿ' ಹಾಗೂ ಚಿತ್ರದಲ್ಲಿನ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆಯಿತು.

2008:  ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ  ಒಬಾಮ ಅವರಿಗೆ ನೆರವು ನೀಡುವ ತಂಡದಲ್ಲಿ ಭಾರತೀಯ ಮೂಲದ ಹಲವರನ್ನು ಸೇರಿಸಿಕೊಳ್ಳ      ಲಾಯಿತು. ಈ ತಂಡಕ್ಕೆ ಸೇರಿಕೊಂಡವರೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಒಬಾಮ ಅವರ ಹಳೆಯ ಸ್ನೇಹಿತರೇ.  ಭಾರತೀಯ ಮೂಲದ ನಿಕ್ ರಾಥೋಡ್ ಅವರನ್ನು ಅಂತರ್- ಸರ್ಕಾರ ವ್ಯವಹಾರಗಳ ನಿರ್ದೇಶಕರಾಗಿ ನೇಮಿಸಲಾಯಿತು. ನಿಕ್ ರಾಥೋಡ್ ಪ್ರಸ್ತುತ ದಕ್ಷಿಣಾ ಏಷ್ಯಾ ಜನರ ನೆರವಿಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ಸಂಸ್ಥೆಯೊಂದರ ನಿರ್ದೇಶಕರು. 'ಅಂತರ್- ಸರ್ಕಾರ ವ್ಯವಹಾರಗಳ ಉಪ ನಿರ್ದೇಶಕರಾಗಿ ಪರಾಗ್ ಮೆಹ್ತಾ ಅವರನ್ನು ನೇಮಿಸಲಾಯಿತು. ಮೆಹ್ತಾ ಏಷ್ಯಾ ಮೂಲದವರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ಹಲವು ಅಲ್ಪಸಂಖ್ಯಾತ ಗುಂಪುಗಳ ಸಮನ್ವಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುವರು. ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಒಬಾಮ ಅವರ ಸಹಪಾಠಿಯಾಗಿದ್ದ, ಡ್ಯುಕ್ ವಿವಿ ಅಧ್ಯಾಪಕಿ ಆರತಿ ರೈ ಅವರನ್ನು ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಮಾನವಿಕ ವಿಭಾಗದ ಪರಿಶೀಲನಾ ಸಂಸ್ಥೆಯ ಸದಸ್ಯೆಯಾಗಿ ನೇಮಿಸಲಾಯಿತು.

2008: ಎಂಡೆವರ್ ನೌಕೆಯಲ್ಲಿ ತೆರಳಿದ ಅಮೆರಿಕದ ಇಬ್ಬರು ಗಗನಯಾತ್ರಿಗಳು ನಾಲ್ಕನೇಯ ಹಾಗೂ ಅಂತಿಮ ಬಾಹ್ಯಾಕಾಶ  ನಡಿಗೆಯನ್ನು ಪೂರ್ಣಗೊಳಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಿದ್ಯುತ್ ಒದಗಿಸುವ ಸೌರ ಫಲಕಗಳನ್ನು ಜೋಡಿಸುವ ಕಾರ್ಯವನ್ನು ಈ ಜೋಡಿ ಪೂರ್ಣಗೊಳಿಸಿತು. ಸ್ಟೆವ್ ಬೊವೆನ್ ಹಾಗೂ ಶೇನ್ ಕಿಂಬ್ರೋಗ್ ಎರಡೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸಿ ತಮಗೆ ವಹಿಸಿದ್ದ ಕೆಲಸಗಳನ್ನು ಪೂರ್ಣಗೊಳಿಸಿದರು. ಜಪಾನಿನ ಕಿಬೊ ಪ್ರಯೋಗಾಲಯದ ಮೇಲಿರುವ ಉಷ್ಣನಿಯಂತ್ರಕ ಕವಚವನ್ನು ಈ ಜೋಡಿ ತೆಗೆದುಹಾಕಿತು. ಬೊವೆನ್ ಪ್ರಯೋಗಾಲಯದ ಮೇಲೆ ಜಿಪಿಎಸ್ ಆಂಟೆನಾವನ್ನು ಅಳವಡಿಸಿದರು. ಈ ಎಂಡೆವರ್ ಯಾತ್ರೆ 16 ದಿನಗಳ ಅವಧಿಯದ್ದು.

2008: 437 ಕೋಟಿ ರೂಪಾಯಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಸುವರ್ಣ ಸಹಕಾರಿ ಬ್ಯಾಂಕಿನ ಸಂಸ್ಥಾಪಕ- ಮಾಜಿ ಅಧ್ಯಕ್ಷ  ಸೇರಿದಂತೆ 14 ಮಂದಿಯನ್ನು  ಪುಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಪೊಲೀಸ್ ವಶದಲ್ಲೇ ಮುಂದುವರಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು. ಪುಣೆ ಆರ್ಥಿಕ ಅಪರಾಧಗಳ ಘಟಕದ ಪೊಲೀಸರು ನವೆಂಬರ್ 22ರಂದು ಇವರನ್ನು ಬಂಧಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಾಮವಳಿಗಳನ್ನು ಉಲ್ಲಂಘಿಸಿ  ಸರಿಯಾದ ದಾಖಲೆಗಳು ಇಲ್ಲದಿದ್ದರೂ ಇವರು ದೊಡ್ಡ ಮೊತ್ತದ ಸಾಲ ನೀಡುತ್ತಿದ್ದರೆಂದು ಈ 14 ಮಂದಿ ಮೇಲೆ ಆರೋಪ ಹೊರಿಸಲಾಯಿತು. ಈ ಪ್ರಕರಣ 2006 ರಲ್ಲಿ ಬೆಳಕಿಗೆ ಬಂದಾಗ ಬ್ಯಾಂಕಿನಲ್ಲಿ ಠೇವಣಿ ಇರಿಸಿದವರು ಕಂಗಾಲಾಗಿದ್ದರು.

2008: ಸ್ವಾತಂತ್ರ್ಯ ಯೋಧ ಹಾಗೂ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜಿನಲ್ಲಿ ಸೈನಿಕರಾಗಿ ಹೋರಾಡಿದ್ದ ಗೋಪಾಲ ಶೆಟ್ಟಿ (90) ಅವರು ಈದಿನ ಮಂಗಳೂರಿನ ಪಡೀಲಿನಲ್ಲಿನ ಪೇರ್ಲ ವಠಾರದಲ್ಲಿ ನಿಧನರಾದರು. ಶೆಟ್ಟಿ ಅವರು 1941ರಲ್ಲಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಿ ಲಿಬಿಯಾದಲ್ಲಿ ಜರ್ಮನಿಯ ಸೈನಿಕ ಕೈದಿಯಾಗಿ ಬಂಧಿತರಾಗಿ ಇಟಲಿ ಹಾಗೂ ಜರ್ಮನಿಯ ಕ್ಯಾಂಪಿನಲ್ಲಿದ್ದರು. ಬೋಸ್‌ ಅವರು ಜರ್ಮನಿಯಲ್ಲಿ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ್ದಾಗ ಬಂಧನದಲ್ಲಿದ್ದ ಇತರ ಭಾರತೀಯ ಸೈನಿಕರೊಂದಿಗೆ ಅವರು ಈ ಪಡೆಗೆ ಸೇರಿದ್ದರು. ಸ್ವಾತಂತ್ರ್ಯಾನಂತರ ಭಾರತೀಯ ಸೇನೆಗೆ ಸೇರಿದ್ದರು. ಸೈನ್ಯದಿಂದ ನಿವೃತ್ತರಾದ ಮೇಲೆ ಮಂಗಳೂರಿನ ಎನ್‌ಸಿಸಿ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದರು.

2008: ಸ್ಪೇನಿನ  ಮ್ಯಾಡ್ರಿಡಿನಲ್ಲಿ ನಡೆದ ಮಕ್ಕಳ ಹಾಗೂ ಯುವಕರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2008ರಲ್ಲಿ ಮಾ. ಕಿಶನ್ ನಿರ್ದೇಶನದ 'ಕೇರಾಫ್ ಫುಟ್‌ಪಾತ್' ಚಿತ್ರ 'ಅತ್ಯುತ್ತಮ ಮಕ್ಕಳ ತೀರ್ಪುಗಾರರ ಪ್ರಶಸ್ತಿ' ಹಾಗೂ ಚಿತ್ರದಲ್ಲಿನ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆಯಿತು. ನವೆಂಬರ್ 17-22ರವರೆಗೆ ನಡೆದ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾಸ್ಟರ್ ಕಿಶನ್ ಹಾಗೂ ಚಿತ್ರದ ನಿರ್ಮಾಪಕಿ ಶೈಲಜಾ ಶ್ರೀಕಾಂತ್ ಭಾಗವಹಿಸಿದ್ದರು. ಈ ಚಲನ ಚಿತ್ರೋತ್ಸವದಲ್ಲಿ ಇದು ಭಾರತದಿಂದ ಪ್ರದರ್ಶನಗೊಂಡ ಏಕೈಕ ಚಲನ ಚಿತ್ರವಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಕಿಶನ್ 'ಈ ಪ್ರಶಸ್ತಿ ನನಗೆ ಮಾತ್ರವಲ್ಲ, ಇಡೀ ಚಿತ್ರ ತಂಡಕ್ಕೆ ಸಂದ ಪ್ರಶಸ್ತಿ' ಎಂದು ತಿಳಿಸಿದರು.

2008: ಖ್ಯಾತ ಮಾಜಿ ಫುಟ್‌ಬಾಲ್ ತಾರೆ ಪೀಟರ್ ತಂಗರಾಜ್ (72) ಅವರು ರಾಂಚಿಯಲ್ಲಿ ಹೃದಯಾಘಾತದಿಂದ ನಿಧನರಾದರು. ದೀರ್ಘ ಕಾಲ ಅನಾರೋಗ್ಯದಿಂದ ಬಳಲಿದ್ದ ಅವರನ್ನು ಈದಿನ ಬೆಳಿಗ್ಗೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿದವು. 1962ರಲ್ಲಿ ಜಕಾರ್ತಾ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವು ಫುಟ್‌ಬಾಲ್‌ನಲ್ಲಿ ಸ್ವರ್ಣ ಪದಕ ಗೆದ್ದ ಸಂದರ್ಭದಲ್ಲಿ ತಂಗರಾಜ್  ಗೋಲ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದರು. 1958ರಲ್ಲಿ ಏಷ್ಯಾದ ಅತ್ಯಂತ ಶ್ರೇಷ್ಠ ಗೋಲ್ ಕೀಪರ್ ಎನ್ನುವ ಶ್ರೇಯವನ್ನೂ ಪಡೆದಿದ್ದರು. 1954ರಿಂದ 1968ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿ ಅನೇಕ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದರು. 1954, 1958,  1962  ಹಾಗೂ 1966ರ ಏಷ್ಯಾ ಕ್ರೀಡಾಕೂಟಗಳಲ್ಲಿ ಕೂಡಾ ಪಾಲ್ಗೊಂಡ್ದಿದರು. 1968ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ಅವರು 1960ರಲ್ಲಿ ಏಷ್ಯಾದ ಆಲ್‌ ಸ್ಟಾರ್ ತಂಡದಲ್ಲಿಯೂ ಪಾಲ್ಗೊಂಡಿದ್ದರು.. ಮೆಲ್ಬೋರ್ನ್ (1956) ಹಾಗೂ ರೋಮ್ (1960) ಒಲಿಂಪಿಕ್ ಕೂಟಗಳಲ್ಲಿ ಪಾಲ್ಗೊಂಡ ಭಾರತ ತಂಡದ ಸದಸ್ಯರಾಗಿದ್ದರು.

2007: ಭಾರತ ತಂಡದ ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಅವರು ಟೆಸ್ಟ್  ಕ್ರಿಕೆಟಿನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗುವ ಮೂಲಕ ಮತ್ತೊಂದು ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನ ವಿರುದ್ಧ ನವದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ 11183 ರನ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ 24ನೇ ರನ್ ಗಳಿಸುವುದರೊಂದಿಗೆ ಅವರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ನು ಗಳಿಸಿದ ವಿಶ್ವದಾಖಲೆ (11,183) ಅವರದಾಯಿತು. ಅಂತಾರಾಷ್ಟ್ರೀಯ ಟೆಸ್ಟ್  ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ನರಲ್ಲಿ ಎರನೆಯವರೆಂಬ ಹೆಗ್ಗಳಿಕೆ ಭಾರತದ ತೆಂಡೂಲ್ಕರ್ ಅವರಿಗೆ ಪ್ರಾಪ್ತಿಯಾಯಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು 11174 ರನ್ ಪೇರಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ದಾಖಲೆಯನ್ನು ಅಳಿಸಿಹಾಕಿದರು. ಈ ಪಂದ್ಯದಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದ ತೆಂಡೂಲ್ಕರ್ ಅವರಿಗೆ ಇದು 141ನೇ ಟೆಸ್ಟ್ ಹಾಗೂ 228ನೇ ಇನಿಂಗ್ಸ್. ಅವರು ಈಗ 54.79 ಸರಾಸರಿಯಲ್ಲಿ 11183 ರನ್ ಕಲೆಹಾಕಿದರು. ವೆಸ್ಟ್ ಇಂಡೀಸಿನ ಮಾಜಿ ಆಟಗಾರ ಬ್ರಯನ್ ಲಾರಾ (11953 ರನ್) ಮೊದಲ ಸ್ಥಾನದಲ್ಲಿದ್ದಾರೆ.

2007: ಮೊಘಲ್ ಹಾಗೂ ಬಹಮನಿ ಆಡಳಿತ ಕಾಲಕ್ಕೆ ಸೇರಿರುವ ಐತಿಹಾಸಿಕ ಮೌಲ್ಯದ 640 ಬೆಳ್ಳಿ ನಾಣ್ಯಗಳು ಗುಲ್ಬರ್ಗದಲ್ಲಿ ಪತ್ತೆಯಾದವು. ಸುಮಾರು 7143 ಗ್ರಾಂ ತೂಕದ ಈ ನಾಣ್ಯಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು. ಪ್ರಾಚ್ಯವಸ್ತು ತಜ್ಞರ ಪ್ರಕಾರ ಈ ನಾಣ್ಯಗಳು 1269-1299ರ ಕಾಲಕ್ಕೆ ಸೇರಿದವು ಎಂದು ಖಚಿತಪಡಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಎನ್. ನಾಗರಾಜ ಪ್ರಕಟಿಸಿದರು. ಗುಲ್ಬರ್ಗದ ಬ್ರಹ್ಮಪೂರ ಬಡಾವಣೆಯ ಕುಂಬಾರಗಲ್ಲಿಯ ಗುಂಡಪ್ಪ ಹಡಗಿಲ್ ಎಂಬುವರ ಬಿದ್ದುಹೋದ ಮನೆಯಲ್ಲಿ ಈ ನಾಣ್ಯಗಳು ದೊರಕಿದವು. ಇದೇ ಬಡಾವಣೆಯ ಪ್ರಕಾಶ ಪಾಟೀಲ್ ಎಂಬುವರ ಬಳಿ ಕೆಲಸಕ್ಕೆ ಇದ್ದ ಹಣಮಂತಪ್ಪ ಹರಗೆನೂರ ಹೂವಿನ ಕುಂಡಗಳಿಗೆ ಹಾಕಲು ಮಣ್ಣು ತರಲು ಹೋದಾಗ ಅವರಿಗೆ ನವೆಂಬರ್ 22ರಂದು ಈ ನಾಣ್ಯಗಳು ದೊರಕಿದವು. ಈ ನಾಣ್ಯಗಳ ಹಾಲಿ ಬೆಲೆ ಅಂದಾಜು 1.40 ಲಕ್ಷ ರೂಪಾಯಿಗಳು. ಐತಿಹಾಸಿಕ ಮೌಲ್ಯದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ನಾಣ್ಯಗಳ ಮೌಲ್ಯ ಸುಮಾರು 15-20 ಲಕ್ಷ ರೂ.ಗಳು ಎಂದು ಅಂದಾಜು. ಹರಗೇನೂರ ಕುಟುಂಬ ಸದಸ್ಯರು ಈ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಿದರು.

2007: ಗಡಿಪಾರಾದ ಸುಮಾರು 7 ವರ್ಷಗಳ ಬಳಿಕ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಈದಿನ ಲಾಹೋರಿಗೆ ಆಗಮಿಸಿದರು. ಪಾಕಿಸ್ಥಾನದ ಮುಸ್ಲಿಂ ಲೀಗ್ (ಪಿಎಂಎಲ್ -ಎನ್) ಮುಖಂಡ ಶರೀಫ್ ಅವರು ಕಳೆದ ಸೆಪ್ಟೆಂಬರಿನಲ್ಲಿ ಮೊದಲ ಬಾರಿ ಪಾಕಿಸ್ಥಾನಕ್ಕೆ ಆಗಮಿಸಿದಾಗ ಅವರನ್ನು ಬಂಧಿಸಲಾಗಿತ್ತು.

2007: ಪಶ್ಚಿಮ ಇಂಡೋನೇಷ್ಯದಲ್ಲಿ ಈದಿನ  ಬೆಳಗ್ಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.2 ರಷ್ಟಿತ್ತು. ಕರಾವಳಿ ಪ್ರದೇಶ ಸುಮಾತ್ರ  ದ್ವೀಪದ ಬೇಕ್ ಕುಲಾ ನಗರದ 28 ಕಿ.ಮೀ ದೂರದಲ್ಲಿ ಈ  ಕಂಪನದ ಕೇಂದ್ರಬಿಂದು ಇತ್ತು.  2004ರಲ್ಲಿ ಸಮುದ್ರದಲ್ಲಿ ಸಂಭವಿಸಿದ  ಭೂಕಂಪದಿಂದ ಉಂಟಾದ ಸುನಾಮಿಗೆ ಸುಮಾರು 1.70 ಲಕ್ಷ ಜನ ಬಲಿಯಾಗಿದ್ದರು.

2007: ತಮ್ಮ ಹೊಸ ಚಿತ್ರಕ್ಕಾಗಿ ಚೀನಾದ ಖ್ಯಾತ ಚಿತ್ರನಟ ಜೆಟ್ ಲೀ 100 ದಶಲಕ್ಷ ಯೂನ್ (13 ದಶಲಕ್ಷ ಡಾಲರುಗಳು)ಸಂಭಾವನೆ ಪಡೆದು ದಾಖಲೆ ನಿರ್ಮಿಸಿದರು. ಚೀನಾ ಭಾಷೆಯ ಚಿತ್ರಗಳಲ್ಲಿ ಇದುವರೆಗೆ ಯಾರೂ ಇಷ್ಟು  ದೊಡ್ಡ ಪ್ರಮಾಣದ ಸಂಭಾವನೆ ಪಡೆದಿರಲಿಲ್ಲ. ಜೆಟ್ ಲೀ ನಟಿಸಿದ `ದಿ ವಾರ್ ಲಾರ್ಡ್ಸ್' ಚಿತ್ರದ ಒಟ್ಟಾರೆ ಬಜೆಟ್ 40 ದಶಲಕ್ಷ ಡಾಲರುಗಳು.

2006: ಹಿರಿಯ ಕವಿ ಡಾ. ಕಯ್ಯಾರ ಕಿಂಞಣ್ಣರೈ, ಡಾ. ಎಂ. ಸರೋಜಿನಿ ಮಹಿಷಿ, ಜಾನಪದ ವಿದ್ವಾಂಸ ಮುದೇನೂರು ಸಂಗಣ್ಣ, ಸಾಹಿತಿ ಸಂಶೋಧಕ ಡಾ. ಹಂಪ ನಾಗರಾಜಯ್ಯ ಹಾಗೂ ಜನಪದ ಗಾಯಕಿ ಬುರ್ರಕಥಾ ಈರಮ್ಮ ಅವರಿಗೆ 2006ನೇ ಸಾಲಿನ `ನಾಡೋಜ' ಗೌರವವನ್ನು ಕನ್ನಡ ವಿಶ್ವವಿದ್ಯಾಲಯವು ಘೋಷಿಸಿತು.

2006: ರಾಷ್ಟ್ರದ ಮೊತ್ತ ಮೊದಲ `ಚಿಟ್ಟೆ ಉದ್ಯಾನ'ವನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆವರಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಕಪಿಲ್ ಸಿಬಲ್ ರಾಷ್ಟ್ರಕ್ಕೆ ಅರ್ಪಿಸಿದರು. 10,490 ಚದರಡಿ ವ್ಯಾಪ್ತಿಯಲ್ಲಿ ನಿರ್ಮಿತವಾದ `ಚಿಟ್ಟೆ ಉದ್ಯಾನ' ಜಗತ್ತಿನ ಇಂತಹ ವಿಶಾಲ ಉದ್ಯಾನಗಳ ಸಾಲಿನಲ್ಲಿ ಒಂದಾಗಲಿದೆ. ನಗರ ಮತ್ತು ಸುತ್ತಮುತ್ತಣ ಸುಮಾರು 42 ಜಾತಿಯ ಚಿಟ್ಟೆಗಳಿಗೆ ಆವಾಸ ಸ್ಥಾನವಾಗಲಿರುವ ಈ ಉದ್ಯಾನದಲ್ಲಿ 2ನೇ ಹಂತದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಚಿಟ್ಟೆಗಳನ್ನೂ ಸಾಕಲಾಗುವುದು. ಉದ್ಯಾನದ ನಿಮರ್ಾಣ ವೆಚ್ಚ 4.9 ಕೋಟಿ ರೂಪಾಯಿಗಳು.       

2005: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಹಾಗೂ ನಾಥೂರಾಂ ಗೋಡ್ಸೆ ಕಿರಿಯ ಸಹೋದರ ಗೋಪಾಲ್ ವಿನಾಯಕ ಗೋಡ್ಸೆ (86) ಈ ದಿನ ರಾತ್ರಿ ನಿಧನರಾದರು. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಗೋಪಾಲ್ ಗೋಡ್ಸೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸಿದ್ದರು.

2005: ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರು ಲೋಕಸಭಾ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಸಭಾಧ್ಯಕ್ಷ ಸೋಮನಾಥ ಚಟರ್ಜಿ ಅಂಗೀಕರಿಸಿದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತೃಣಮೂಲ ಕಾಂಗ್ರೆಸ್ಸಿನಿಂದ ಮೇಘಾಲಯದ ತುರಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ತಿಂಗಳ ಹಿಂದೆ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2005: ಬಹು ವಿವಾದಿತ ಅರ್ಕಾವತಿ ಬಡಾವಣೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿತು. ಇದರೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಜಮೀನು ಮಾಲೀಕರ ನಡುವಣ ಕಾನೂನು ಸಮರಕ್ಕೆ ತೆರೆಬಿತ್ತು. ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಮೂಲ ಮಾಲೀಕರಿಗೆ ವರ್ಗಾಯಿಸುವಂತೆ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್. ಕೆ. ಸೋಧಿ ಹಾಗೂ ನ್ಯಾಯಮೂರ್ತಿ ಎನ್. ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ರದ್ದುಪಡಿಸಿತು.

2005: ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರಿಂದ ಹತ್ಯೆಗೀಡಾದ ಮಣಿಯಪ್ಪನ್ ಕುಟ್ಟಿಯ ಶವವನ್ನು ಹುಟ್ಟೂರಾದ ಅಳಪ್ಪುಳ ಗ್ರಾಮಕ್ಕೆ ತಂದು ಸೇನಾಪಡೆ ಗೌರವದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

2002: ನ್ಯೂಕ್ಯಾಸಲ್ನ ಜಾನ್ ಹಂಟರ್ ಆಸ್ಪತ್ರೆಂಯಲ್ಲಿ ಹಾನಿಗೀಡಾದ ತನ್ನ ಹೃದಯವನ್ನು ದುರಸ್ತಿಪಡಿಸಲು ಆಸ್ಟ್ರೇಲಿಯಾದ ಜಿಮ್ ನಿಕೊಲ್ ವಿಶಿಷ್ಟ ಶಸ್ತ್ರಚಿಕಿತ್ಸೆಗೆ ಒಳಗಾದರು. `ಅಡಲ್ಟ್ ಸ್ಟೆಮ್ ಸೆಲ್ಸ್' (ಮೂಲಕೋಶ) ಬಳಸಿ ನಡೆಸಲಾದ ಜಗತ್ತಿನ ಮೊತ್ತ ಮೊದಲ ರಿಪೇರಿ ಕೆಲಸ ಇದು.

2001: ಜಗತ್ತಿನಲ್ಲಿ ಮೊತ್ತ ಮೊದಲಬಾರಿಗೆ ತಾನು ಮಾನವ ಭ್ರೂಣದ ತದ್ರೂಪು (ಕ್ಲೋನಿಂಗ್) ಸೃಷ್ಟಿ ಮಾಡಿರುವುದಾಗಿ ಮೆಸಾಚ್ಯುಸೆಟ್ಸಿನ ಎಸಿಟಿ ಕಂಪೆನಿ ಈ ದಿನ ಪ್ರಕಟಿಸಿತು. ತನಗೆ ಮಾನವ ಸೃಷ್ಟಿಯ ಉದ್ದೇಶವಿಲ್ಲ. ಆದರೆ ರೋಗಗಳಿಗೆ ಚಿಕಿತ್ಸೆ ನೀಡುವ ಮೂಲಕೋಶಗಳಿಗಾಗಿ ಭ್ರೂಣವನ್ನು ಬಳಸುವ ಉದ್ದೇಶವಿದೆ ಎಂದು ಅದು ಹೇಳಿತು. ಮನುಕುಲವನ್ನು ಕಾಡುವ ವ್ಯಾಪಕ ಕಾಯಿಲೆಗಳಿಂದ ಪ್ರಾಣ ಉಳಿಸುವ ಚಿಕಿತ್ಸಾ ವಿಧಾನ ರೂಪಿಸುವ ಉದ್ದೇಶ ತಮ್ಮದು ಎಂದು ಅದು ಹೇಳಿತು. ಭ್ರೂಣದಿಂದ ಪಡೆದ ಭ್ರೂಣ ಮೂಲಕೋಶವನ್ನು ದೇಹದ ಯಾವುದೇ ಅಂಗವಾಗಿ ಬೆಳೆಸಬಹುದು.

1981: ಭಾರತದಲ್ಲಿ ನಡೆದ ಮೊತ್ತ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಅಹಮದಾಬಾದಿನ ಸರ್ದಾರ್ ಪಟೇಲ್ ಸ್ಟೇಡಿಯಂ ಪಾತ್ರವಾಯಿತು. ಪಂದ್ಯದಲ್ಲಿ ಭಾರತವನ್ನು ಇಂಗ್ಲೆಂಡ್ ಐದು ವಿಕೆಟ್ ಅಂತರದಲ್ಲಿ ಸೋಲಿಸಿತು.

1952: ಅಗಾಥಾ ಕ್ರಿಸ್ಟೀ ಅವರ ನಾಟಕ `ದಿ ಮೌಸ್ ಟ್ರ್ಯಾಪ್'ನ ಮೊತ್ತ ಮೊದಲ ಪ್ರದರ್ಶನ ಲಂಡನ್ನಿನ ಅಂಬಾಸಡರ್ ಥಿಯೇಟರಿನಲ್ಲಿ ನಡೆಯಿತು.

1948: ನ್ಯಾಷನಲ್ ಕೆಡೆಟ್ ಕೋರ್ (ಎನ್ ಸಿ ಸಿ) ಎನ್ ಸಿ ಸಿ ಕಾಯ್ದೆಗೆ ಅನುಗುಣವಾಗಿ ಈ ದಿನ ಅಸ್ತಿತ್ವಕ್ಕೆ ಬಂತು. ಭಾರತೀಯ ವಿದ್ಯಾರ್ಥಿಗಳ ಕಲ್ಯಾಣದ ದೃಷ್ಟಿಯಿಂದ ಇದನ್ನು ರೂಪಿಸಲಾಗಿದ್ದು `ಏಕತೆ ಮತ್ತು ಶಿಸ್ತು' ಇದರ ಪ್ರಮುಖ ಗುರಿ.

1945: ನಾಜಿ ನಾಯಕರ ವಿಚಾರಣೆಯನ್ನು ಅಂತಾರಾಷ್ಟ್ರೀಯ ಮಿಲಿಟರಿ ಟ್ರಿಬ್ಯೂನಲ್ ಈದಿನ ನ್ಯೂರೆಂಬರ್ಗಿನ ನ್ಯಾಯ ಅರಮನೆಯಲ್ಲಿ (ಪ್ಯಾಲೇಸ್ ಆಫ್ ಜಸ್ಟೀಸ್) ಆರಂಭಿಸಿತು. `ನ್ಯೂರೆಂಬರ್ಗ್ ಟ್ರಯಲ್' (ನ್ಯೂರೆಂಬರ್ಗ್ ವಿಚಾರಣೆ) ಎಂದೇ ಖ್ಯಾತಿ ಪಡೆದ ಈ ವಿಚಾರಣೆ 1946ರ ಸೆಪ್ಟೆಂಬರ್ 30ರಂದು ಕೊನೆಗೊಂಡಿತು. ಅಕ್ಟೋಬರ್ 1ರಂದು ತೀರ್ಪು ಪ್ರಕಟಿಸಲಾಯಿತು. ಒಳಸಂಚು, ಶಾಂತಿ ವಿರೋಧಿ ಅಪರಾಧಗಳು, ಯುದ್ಧ ಅಪರಾಧಗಳು ಹಾಗೂ ಮಾನವತೆ ವಿರುದ್ಧ ಎಸಗಿದ ಅಪರಾಧಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಯಿತು.10 ಮಂದಿಗೆ ಮರಣದಂಡನೆ, 7 ಮಂದಿಗೆ ಸೆರೆವಾಸದ ಶಿಕ್ಷೆ ವಿಧಿಸಿದರೆ, ಮೂವರನ್ನು ಖುಲಾಸೆ ಮಾಡಲಾಯಿತು.

1916: ಕನ್ನಡಕ್ಕಿಂತ ಇಂಗ್ಲಿಷಿನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ  ಸಾಹಿತಿ ಹೇಮಂತ ಕುಲಕರ್ಣಿ (21-11-1916ರಿಂದ 22-7-1994) ಅವರು ಬಿಜಾಪುರದಲ್ಲಿ ಜನಿಸಿದರು.

1916: ಸಾಹಿತಿ ರಾಮಕೃಷ್ಣ ಉಡುಪ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement