Tuesday, January 12, 2010

ಇಂದಿನ ಇತಿಹಾಸ History Today ಡಿಸೆಂಬರ್ 11

ಇಂದಿನ ಇತಿಹಾಸ

ಡಿಸೆಂಬರ್ 11

ದಶಕಗಳ ತರುವಾಯ ಮಿಜೋರಾಂನಲ್ಲಿ, ಲಾಲ್ತನ್ ಹವ್ಲಾ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಐಜ್ವಾಲಿನಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಎಂ.ಎಂ ಲಖೇರಾ ಅವರು ಪ್ರಮಾಣ ವಚನ ಬೋಧಿಸಿದರು.

2008: ಭಾರತ ಮತ್ತು ಅಮೆರಿಕದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಾಕಿಸ್ಥಾನ ಮೂಲದ ಉಗ್ರಗಾಮಿ ಸಂಘಟನೆ ಜಮಾತ್- ಉದ್-ದವಾ (ಜೆಯುಡಿ) ಮೇಲೆ ಕೊನೆಗೂ ನಿಷೇಧ ಹೇರಿತು. ಮುಂಬೈ ಮೇಲಿನ ದಾಳಿಯ ರೂವಾರಿ ಜಕೀರ್ ರೆಹಮಾನ್ ಲಖ್ವಿ ಸಹಿತ ನಾಲ್ವರನ್ನು ಭಯೋತ್ಪಾದಕರು ಎಂದೂ ಅದು ಘೋಷಿಸಿತು.

2008: ದಶಕಗಳ ತರುವಾಯ ಮಿಜೋರಾಂನಲ್ಲಿ, ಲಾಲ್ತನ್ ಹವ್ಲಾ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಐಜ್ವಾಲಿನಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಎಂ.ಎಂ ಲಖೇರಾ ಅವರು ಪ್ರಮಾಣ ವಚನ ಬೋಧಿಸಿದರು.

2007: ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಆತನ ಸಹಪಾಠಿಗಳು ಶಾಲಾ ಅವರಣದಲ್ಲೇ ಗುಂಡಿಟ್ಟು ಕೊಲೆ ಮಾಡಿದ ಆಘಾತಕಾರಿ ಘಟನೆ ಹರಿಯಾಣದ ಗುಡಗಾಂವಿನ ಯೂರೊ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ನಡೆಯಿತು. ರಾಜೇಂದ್ರ ತ್ಯಾಗಿ ಎಂಬವರ ಪುತ್ರ ಅಭಿಷೇಕ್ ತ್ಯಾಗಿ (14) ಎಂಬಾತ ಕೊಲೆಯಾದ ವಿದ್ಯಾರ್ತಿ. ರಿಯಲ್ ಎಸ್ಟೇಟ್ ಉದ್ಯಮಿಗಳ ಮಕ್ಕಳಿಬ್ಬರು ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಜತೆ ಜಗಳವಾಡಿದ್ದರು. ಜಗಳ ವಿಕೋಪಕ್ಕೆ ತಿರುಗಿದಾಗ ಲೈಸನ್ಸ್ ಹೊಂದಿದ ಪಿಸ್ತೂಲ್ ಬಳಸಿ ಅತಿ ಹತ್ತಿರದಿಂದ ಐದು ಬಾರಿ ಗುಂಡು ಹಾರಿಸಿದರು. ಇದರಿಂದಾಗಿ ಅಭಿಷೇಕ್ ಸ್ಥಳದಲ್ಲೇ ಕುಸಿದು ಬಿದ್ದ. ನಂತರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದ. ಘಟನೆಗೆ ಕಾರಣರಾದ ಇಬ್ಬರೂ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.

2007: ಎಲ್.ಕೆ.ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಭಾರತೀಯ ಜನತಾ ಪಕ್ಷವು ಘೋಷಿಸಿರುವುದಕ್ಕೆ ನಮಗೇನೂ ಅಭ್ಯಂತರವಿಲ್ಲ ಎಂದು ಸಂಯುಕ್ತ ಜನತಾದಳ ಅಧ್ಯಕ್ಷ ಶರದ್ ಯಾದವ್ ನವದೆಹಲಿಯಲ್ಲಿ ಹೇಳಿದರು.

2007: ನೀತಿ ಸಂಹಿತೆ ಉಲ್ಲಂಘನೆಗಾಗಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರವಾಗಿ ಕಾಂಗ್ರೆಸ್ ಸುದೀರ್ಘವಾದ ವಿವರಣೆಯನ್ನು ಆಯೋಗಕ್ಕೆ ಸಲ್ಲಿಸಿತು. ಗುಜರಾತಿನ ನವಸಾರಿ ಎಂಬಲ್ಲಿ ಚುನಾವಣೆ ಪ್ರಚಾರದ ವೇಳೆ ಸೋನಿಯಾ ಗಾಂಧಿ ಅವರು ನೀಡಿದ `ಸಾವಿನ ವ್ಯಾಪಾರಿಗಳು' ಹೇಳಿಕೆಗಾಗಿ ಚುನಾವಣೆ ಆಯೋಗ ಈ ನೋಟಿಸ್ ಜಾರಿ ಮಾಡಿತ್ತು.

2007: ಭಾರತೀಯ ಸಂಜಾತರ ಜಾಗತಿಕ ಸಂಸ್ಥೆಯ ಅಧ್ಯಕ್ಷ ಥಾಮಸ್ ಅಬ್ರಹಾಂ ಅವರಿಗೆ `ಭಾರತವಂಶಿ ಗೌರವ್' ಪ್ರಶಸ್ತಿಯನ್ನು ಘೋಷಿಸಲಾಯಿತು.

2007: ಕನ್ನಡ ವೃತ್ತಿ ರಂಗಭೂಮಿಯ ದಿಗ್ಗಜರಲ್ಲಿ ಒಬ್ಬರಾಗಿದ್ದ ಗರೂಡ ಸದಾಶಿವರಾಯರ ಪುತ್ರ, ಖ್ಯಾತ ನಾಟಕಕಾರ ಶ್ರೀಪಾದರಾವ್ ಗರೂಡ (86) ಈದಿನ ಧಾರವಾಡದಲ್ಲಿ ನಿಧನರಾದರು. ಶ್ರೀಪಾದರಾವ್ ಗರೂಡ ಅವರು ಏಳು ನಾಟಕಗಳನ್ನು ಬರೆದು, ನಿರ್ದೇಶಿಸಿದ್ದರು. ನಾಟ್ಯಗೀತೆಗಳನ್ನು ರಚಿಸಿ ಬಾನುಲಿಯಿಂದ ಪ್ರಸಾರ ಮಾಡಿದ್ದರು. 1985ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಕೇಂದ್ರದ ಸಂಸ್ಕೃತಿ ಇಲಾಖೆಯಿಂದ ಎರಡು ವರ್ಷ ಫೆಲೋಶಿಪ್, ರಂಗತೋರಣದಿಂದ ನಾಟ್ಯ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅವರ ಅಂತ್ಯಕ್ರಿಯೆ ಹೊಸಯಲ್ಲಾಪುರದ ರುದ್ರಭೂವಿಯಲ್ಲಿ ನಡೆಯಿತು.

2007: ಅಕ್ರಮ ಕಟ್ಟಡ ಹಾಗೂ ನಿವೇಶನಗಳ ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕರ್ನಾಟಕ ರಾಜ್ಯ ಸರ್ಕಾರವು 2008 ಮಾರ್ಚ್ 31ರವರೆಗೆ ವಿಸ್ತರಿಸಿತು. ಈ ಯೋಜನೆಯನ್ನು ಸದ್ಯಕ್ಕೆ ಅಮಾನತಿನಲ್ಲಿ ಇಡಲು, ರಾಜ್ಯ ಹೈಕೋರ್ಟ್ ಈದಿನ ಮಧ್ಯಾಹ್ನ ಆದೇಶಿಸಿತು. ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದಲ್ಲಿ ಸರ್ಕಾರದ ಕಾರ್ಯಕಾರಿ ಸಮಿತಿ (ಸಂಪುಟ)ಯ ತುರ್ತುಸಭೆ ನಡೆದು, ಯೋಜನೆಯಡಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಯಿತು.

2007: ಕ್ರಿಕೆಟ್ ಮೋಸದಾಟದಲ್ಲಿ ಭಾಗಿಯಾದ ಆರೋಪ ಎದುರಿಸಿದ್ದ ದಕ್ಷಿಣ ಅಫ್ರಿಕಾದ ಕ್ರಿಕೆಟಿಗ ನಿಕಿ ಬೋಯೆ ನವದೆಹಲಿಯಲ್ಲಿ ವಿಚಾರಣೆಗೆ ಒಳಗಾದರು. ದೆಹಲಿ ಪೊಲೀಸರು 80 ನಿಮಿಷ ಬೋಯೆ ಅವರನ್ನು ಪ್ರಶ್ನಿಸಿ, ವಿವರಣೆ ಪಡೆದರು. ಈ ಸಂದರ್ಭದಲ್ಲಿ ನಿಕಿ ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋಪಗಳನ್ನು ನಿರಾಕರಿಸಿದರು. ಬುಕ್ಕಿಗಳಾದ ಸಂಜೀವ್ ಚಾವ್ಲಾ, ರಾಜೇಶ್ ಕಾರ್ಲಾ, ಕಿಷನ್ ಕುಮಾರ್ ಹಾಗೂ ಸುನಿಲ್ ಧಾರಾ ಜೊತೆಗೆ ತಾವು ಸಂಪರ್ಕ ಹೊಂದಿರಲಿಲ್ಲ ಎಂದು ಕೂಡ ಅವರು ತಿಳಿಸಿದರು. ದಕ್ಷಿಣ ಆಫ್ರಿಕಾ ತಂಡದ ಆಗಿನ ನಾಯಕ ಹ್ಯಾನ್ಸಿ ಕ್ರೋನಿ ಹಾಗೂ ಚಾವ್ಲಾ ನಡುವಣ ದೂರವಾಣಿ ಮಾತುಕತೆಯಲ್ಲಿ ಬೋಯೆ ಹೆಸರು ಪ್ರಸ್ತಾಪವಾಗಿತ್ತು.

2007: ಮಂಗಳ ಗ್ರಹದ ಒಳಪ್ರದೇಶದಲ್ಲಿ ಹಿಂದೆ ಜೀವಿಗಳು ವಾಸಿಸುತ್ತಿದ್ದವು ಎಂಬುದಕ್ಕೆ ಅಲ್ಲಿಗೆ ಅಮೆರಿಕದ ನಾಸಾ ಕಳುಹಿಸಿದ `ಸ್ಪಿರಿಟ್' ಗಗನನೌಕೆ ಪುರಾವೆಗಳನ್ನು ಒದಗಿಸಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದರು. ಮಂಗಳ ಗ್ರಹದಲ್ಲಿ ಅಪ್ಪಟ ಸಿಲಿಕಾ ಅಂಶಗಳು ಪತ್ತೆಯಾಗಿವೆ. `ಭೂಮಿಯಲ್ಲೂ ಏಕಾಣು ಸೂಕ್ಷ್ಮ ಜೀವಿಗಳ ಕಾಲಕ್ಕೆ ಸೇರಿದ ಸ್ಥಳಗಳಲ್ಲಿ ಇದೇ ಮಾದರಿಯ ಸಿಲಿಕಾ ಪತ್ತೆಯಾಗಿತ್ತು' ಎಂದು ನಾಸಾ ವಿಜ್ಞಾನಿಗಳು ಹೇಳಿದರು.

2007: ಅಲ್ಜೀರಿಯಾದ ರಾಜಧಾನಿ ಅಲ್ಜೀರ್ಸಿನಲ್ಲಿ ಸಂಭವಿಸಿದ ಎರಡು ಶಕ್ತಿಶಾಲಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 52 ಜನರು ಮೃತರಾದರು. ಸುಪ್ರೀಂ ಕೋರ್ಟ್ ಎದುರಿನಲ್ಲಿ ಶಾಲಾ ಬಸ್ಸಿನ ಮೇಲೆ ಹಾಗೂ ಹೈಡಾ ಪ್ರದೇಶದ ವಸತಿ ಪ್ರದೇಶದಲ್ಲಿ ಸ್ಫೋಟಗಳು ಸಂಭವಿಸಿವೆ.

2007: ಬೆಂಗಳೂರಿನ ಸೆಪ್ಪಿಂಗ್ ರಸ್ತೆಯ ನೆಹರೂಪುರದಲ್ಲಿನ ಪಾಲಿಕೆಯ ಪೌರ ಕಾರ್ಮಿಕರ ವಸತಿ ಸಮುಚ್ಚಯದ ಎರಡನೇ ಮಹಡಿಯ ಬಾಲ್ಕನಿ ಕುಸಿದ ಪರಿಣಾಮವಾಗಿ ಎರಡು ವರ್ಷದ ಮಗು, ಒಬ್ಬ ಮಹಿಳೆ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದರು. ಮಗಳ ಮದುವೆಯ ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿದ್ದ ಹರೂನ್ ಅವರ ಕುಟುಂಬಕ್ಕೆ ಬರ ಸಿಡಿಲಿನಂತೆ ಬಂದೆರಗಿದ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ದೇಶದ ಸಂಪನ್ಮೂಲ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಮರಿಗೆ `ಪ್ರಥಮ ಹಕ್ಕು' ಇರಬೇಕು ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಡಿಸೆಂಬರ್ 9ರಂದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಲ್ಲಿ ನೀಡಿರುವ ಹೇಳಿಕೆ ಸಂಸತ್ತಿನ ಉಭಯ ಸದನಗಳಲ್ಲೂ ಭಾರಿ ಕೋಲಾಹಲಕ್ಕೆ ಕಾರಣವಾಗಿ ಎರಡೂ ಸದನಗಳ ಕಲಾಪಗಳು ಸ್ಥಗಿತಗೊಂಡವು. ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಮತ್ತು ಶಿವಸೇನೆ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆರಂಭದಿಂದಲೇ ಘೋಷಣೆಗಳನ್ನು ಕೂಗುತ್ತಾ ಪ್ರಧಾನಿಯ ಕ್ಷಮೆಯಾಚನೆಗೆ ಪಟ್ಟು ಹಿಡಿದ ಪರಿಣಾಮವಾಗಿ ಊಟದ ವಿರಾಮಕ್ಕೆ ಮುನ್ನ ಮೂರುಬಾರಿ ಮುಂದೂಡಿಕೆಯಾದ ಸದನಗಳು, ಕೊನೆಗೆ ಯಾವುದೇ ಕಲಾಪವನ್ನೂ ನಡೆಸಲಾಗದೆ ದಿನದ ಮಟ್ಟಿಗೆ ಮುಂದೂಡಿಕೆಯಾದವು.

2006: ಒರಿಸ್ಸಾದ ಬಾಲಸೋರಿನಿಂದ 15 ಕಿ.ಮೀ. ದೂರದ ಚಂಡೀಪುರಕ್ಕೆ ಸಮೀಪ ಬಂಗಾಳ ಕೊಲ್ಲಿಯರ್ ಚಾಲಕ ರಹಿತ ವಿಮಾನ `ಲಕ್ಷ್ಯ'ದ ಪರೀಕ್ಷಾ ಹಾರಾಟ ಮತ್ತು ಭಾರತೀಯ ವಾಯು ಪಡೆಯ ಜಾಗ್ವಾರ್ ಹಾಗೂ ಮಿರಾಜ್ 2000 ಯುದ್ಧ ವಿಮಾನಗಳ ಪೈಲಟ್ ಗಳ ನಿಖರ ಗುರಿ ಪರೀಕ್ಷೆಯನ್ನು ನಡೆಸಲಾಯಿತು. ನಿಖರ ಗುರಿ ಸಾಧನೆ ಕವಾಯತಿನಲ್ಲಿ ಗುರಿಗಾಗಿ ಚಾಲಕ ರಹಿತ ವಿಮಾನ ಲಕ್ಷ್ಯವನ್ನು ಬಳಸಲಾಗುತ್ತದೆ. `ಲಕ್ಷ್ಯ' ಚಾಲಕ ರಹಿತ ವಿಮಾನವನ್ನು 2000ದಲ್ಲೇ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದ್ದು, ಇದು ಮರುಬಳಕೆ ಮಾಡಬಹುದಾದಂತಹ ಸಬ್ ಸಾನಿಕ್ ವಿಮಾನವಾಗಿದೆ. ಭೂಮಿಯಂದಲೇ ದೂರ ನಿಯಂತ್ರಣ ಮೂಲಕ ಇದನ್ನು ನಿಯಂತ್ರಿಸಬಹುದು.

2006: ಆರು ವರ್ಷಗಳ ಹಿಂದೆ ಫಿಜಿಯಲ್ಲಿ ರಕ್ತಪಾತದ ವಿಫಲ ದಂಗೆಗೆ ಕಾರಣರಾಗಿದ್ದ ಆರೋಪದಿಂದ ಮಾಜಿ ಪ್ರಧಾನಿ ರಬುಕಾ ಅವರನ್ನು ಖುಲಾಸೆಗೊಳಿಸಲಾಯಿತು. 2000ದಲ್ಲಿ ಫಿಜಿಯಲ್ಲಿ ಮೊದಲು ನಡೆದ ದಂಗೆ ವಿಫಲಗೊಂಡು, ಆರು ತಿಂಗಳ ನಂತರ ಕ್ಷಿಪ್ರ ಕ್ರಾಂತಿ ನಡೆದಿತ್ತು.

2005: ಭಾರತದ ಅಮೃತಸರದಿಂದ ಪಾಕಿಸ್ಥಾನದ ಲಾಹೋರಿಗೆ ಸಂಪರ್ಕ ಕಲ್ಪಿಸುವ ಪ್ರಥಮ ಬಸ್ಸು ಅಮೃತಸರದ ಯೂತ್ ಹಾಸ್ಟೆಲ್ ಬಳಿಯಿಂದ ಬೆಳಗ್ಗೆ 9 ಗಂಟೆಗೆ ಪ್ರಯಾಣ ಹೊರಟು, 10.40ರ ವೇಳೆಗೆ ವಾಘಾ ಗಡಿಯ ಮೂಲಕ ಪಾಕಿಸ್ಥಾನ ಪ್ರವೇಶಿಸಿತು.

2005: ಲಂಡನ್ನಿನ ಲೂಟನ್ ವಿಮಾನ ನಿಲ್ದಾಣ ಸಮೀಪದ ತೈಲ ಸಂಗ್ರಹಾಗಾರದಲ್ಲಿ ಸಂಭವಿಸಿದ ಪ್ರಬಲ ಸರಣಿ ಸ್ಫೋಟಗಳಲ್ಲಿ ತೈಲಾಗಾರ ಬೆಂಕಿಗೆ ಆಹುತಿಯಾಗಿದ್ದು, ಕನಿಷ್ಠ 50 ಜನ ಗಾಯಗೊಂಡರು.

2004: ಖ್ಯಾತ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ(1916-2004) ಅವರು ಈ ದಿನ ನಿಧನರಾದರು. 1916ರ ಸೆಪ್ಟೆಂಬರ್ 16ರಂದು ಜನಿಸಿ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಸುಬ್ಬುಲಕ್ಷ್ಮಿ ಅವರು ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ.

1988: ಹೇಗ್ ನಲ್ಲಿ ಇರುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ನ ಅಧ್ಯಕ್ಷರಾದ ಮೊದಲ ಭಾರತೀಯ ಡಾ. ನಾಗೇಂದ್ರ ಸಿಂಗ್ (1914-1988) ಅವರು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

1969: ಭಾರತೀಯ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಹುಟ್ಟಿದ ದಿನ. ಚೆಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಗೆ ಭಾಜನರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದು.

1958: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಗ್ರ್ಯಾಂಡ್ ಹೋಟಲಿನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಚಂದ್ರ ಹಿರ್ಜೀ ಅವರನ್ನು ಸೋಲಿಸುವ ಮೂಲಕ ವಿಲ್ಸನ್ ಜೋನ್ಸ್ ಅವರು ಜಾಗತಿಕ ಹವ್ಯಾಸಿ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗಳಿಸಿದರು. ಇದರೊಂದಿಗೆ ಯಾವುದೇ ಕ್ರೀಡೆಯಲ್ಲಿ ಮೊತ್ತ ಮೊದಲ ವೈಯಕ್ತಿಕ ಜಾಗತಿಕ ಚಾಂಪಿಯನ್ ಎನಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

1953: ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನದಲ್ಲಿ ಪ್ರಮುಖರೆನ್ನಿಸಿರುವ ಪದ್ಮಾ ಶೇಖರ್ ಅವರು ವೆಂಕಟಪ್ಪ ನಾಯ್ಡು- ಜಯಲಕ್ಷ್ಮಿ ದಂಪತಿಯ ಮಗಳಾಗಿ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ಜನಿಸಿದರು.

1946: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತುನಿಧಿ (ಯುನಿಸೆಫ್) ಸ್ಥಾಪನೆಗೊಂಡಿತು.

1944: ಎ. ಶ್ರೀಶದೇಪ ಪೂಜಿತ್ತಾಯ ಜನನ.

1942: ಸಾಹಿತಿ ಶಾಂತಲಾ ಯೋಗೀಶ ಯಡ್ರಾವಿ ಜನನ.

1936: ಅಮೆರಿಕದ ವಾಲ್ಲೀಸ್ ವಾರ್ ಫೀಲ್ಡ್ ಸಿಂಪ್ಸನ್ ಅವರನ್ನು ಮದುವೆಯಾಗುವ ಸಲುವಾಗಿ ಎಂಟನೇ ಎಡ್ವರ್ಡ್ ಇಂಗ್ಲೆಂಡಿನ ಸಿಂಹಾಸನ ತ್ಯಾಗ ಮಾಡಿದರು. ಸ್ವ ಇಚ್ಛೆಯಿಂದ ಈ ರೀತಿ ಸಿಂಹಾಸನ ತ್ಯಜಿಸಿದ ಏಕೈಕ ಬ್ರಿಟಿಷ್ ಸಾರ್ವಭೌಮ ದೊರೆ ಇವರು. `ನಾನು ಪ್ರೀತಿಸುವ ಮಹಿಳೆಯ ಬೆಂಬಲ ಹಾಗೂ ನೆರವಿಲ್ಲದೆೆ ರಾಜನಾಗಿ ನನ್ನ ಹೊಣೆಗಾರಿಕೆ ನಿಭಾಯಿಸುವುದು ನನಗೆ ಅಸಾಧ್ಯ' ಎಂದು ಈ ಸಂದರ್ಭದಲ್ಲಿ ಎಡ್ವರ್ಡ್ ಹೇಳಿಕೆ ನೀಡಿದರು.

1935: ಸಾಹಿತಿ ಶಾಂತಕ್ಕ ಮಠದ ಜನನ.

1922: ಭಾರತೀಯ ಚಿತ್ರನಟ ದಿಲೀಪ್ ಕುಮಾರ್ ಹುಟ್ಟಿದ ದಿನ.

1882: ಭಾರತೀಯ ಕವಿ, ಬರಹಗಾರ ಸುಬ್ರಹ್ಮಣ್ಯ ಸಿ. ಭಾರತೀ (1882-1921) ಹುಟ್ಟಿದ ದಿನ. ಆಧುನಿಕ ತಮಿಳು ಸಾಹಿತ್ಯ ಶೈಲಿಯ ಜನಕ ಎಂದೇ ಇವರು ಖ್ಯಾತಿ ಪಡೆದಿದ್ದಾರೆ.

1882: ನ್ಯೂಯಾರ್ಕ್ ನಗರದ ಮಾಜಿ ಮೇಯರ್ ಫಿಯೊರೆಲ್ಲೋ ಎಚ್. ಲಾ ಗೌರ್ ಡಿಯಾ (1882-1947) ಹುಟ್ಟಿದ ದಿನ. ಮೂರು ಅವಧಿಗೆ ಸತತವಾಗಿ ನ್ಯೂಯಾರ್ಕ್ ನಗರದ ಮೇಯರ್ ಆದ ಇವರ ಹೆಸರನ್ನೇ ನ್ಯೂಯಾರ್ಕ್ ನಗರದ ವಿಮಾನ ನಿಲ್ದಾಣಕ್ಕೆ ಇರಿಸಲಾಗಿದೆ.

1858: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಹಾಗೂ ಜದುನಾಥ್ ಬೋಸ್ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಬ್ಯಾಚ್ಲರ್ ಆಫ್ ಆರ್ಟ್ಸ್ ಪದವಿ ಪಡೆದ ಮೊದಲ ಇಬ್ಬರು ಭಾರತೀಯರು ಎನಿಸಿಕೊಂಡರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement