Monday, February 1, 2010

ಇಂದಿನ ಇತಿಹಾಸ History Today ಜನವರಿ 02

ಇಂದಿನ ಇತಿಹಾಸ

ಜನವರಿ 02

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವ ವಿಶ್ವದ ಅತಿ ದೊಡ್ಡ ಆಹಾರ ಕಾರ್ಯಕ್ರಮ ಇಸ್ಕಾನಿನ 'ಅಕ್ಷಯ ಪಾತ್ರ' ಲಿಮ್ಕಾ ದಾಖಲೆಗೆ ಸೇರಿತು. ಇದು 'ಅಕ್ಷಯ ಪಾತ್ರ' ಪಾಲಿಗೆ ಇನ್ನೊಂದು ಹೆಮ್ಮೆಯ ಗರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದಾದ್ಯಂತ 5700 ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿ ಕೇಂದ್ರಗಳ 9.73 ಲಕ್ಷ ಮಕ್ಕಳಿಗೆ ನಿತ್ಯ ಮಧ್ಯಾಹ್ನದ ಊಟ ನೀಡುವ ಈ ಯೋಜನೆ ವಿಶ್ವದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಶಾಲಾ ಮಕ್ಕಳಿಗಾಗಿ ನಡೆಸುತ್ತಿರುವ ಅತಿ ದೊಡ್ಡ ಕಾರ್ಯಕ್ರಮ.

2009: ಆರ್ಥಿಕ ಹಿಂಜರಿತದ ಪರಿಣಾಮದ ಗತಿಯನ್ನು ಬದಲಾಯಿಸಲು ನಿರ್ಧರಿಸಿದ ಕೇಂದ್ರ ಸರ್ಕಾರ ಎರಡನೇ ಬಾರಿ ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜಿಸುವಂತಹ ಕ್ರಮ ಕೈಗೊಂಡು, ರಾಜ್ಯಗಳು ಮತ್ತು ಉದ್ಯಮ ವಲಯಕ್ಕೆ ಉತ್ತೇಜನ ನೀಡುವಂತಹ ಪ್ಯಾಕೇಜನ್ನು ವರ್ಷಾರಂಭದಲ್ಲೇ ಘೋಷಿಸಿತು. ಆರ್ಥಿಕ ಹಿಂಜರಿತದ ನೆರಳಿನಲ್ಲಿದ್ದು, ಹಿಮ್ಮುಖವಾಗಿದ್ದ ದೇಶದ ಆರ್ಥಿಕ ಪ್ರಗತಿ ಗತಿಯನ್ನು ಹಳಿಗೆ ಮರಳಿ ತರಲು ನೆರವಾಗುವಂತಹ ಸರ್ಕಾರದ ಪುನಶ್ಚೇತನ ಕ್ರಮಗಳನ್ನು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಆಹ್ಲುವಾಲಿಯಾ ಪ್ರಕಟಿಸಿದರು.

2009: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವ ವಿಶ್ವದ ಅತಿ ದೊಡ್ಡ ಆಹಾರ ಕಾರ್ಯಕ್ರಮ ಇಸ್ಕಾನಿನ 'ಅಕ್ಷಯ ಪಾತ್ರ' ಈಗ ಲಿಮ್ಕಾ ದಾಖಲೆಗೆ ಸೇರಿತು. ಇದು 'ಅಕ್ಷಯ ಪಾತ್ರ' ಪಾಲಿಗೆ ಇನ್ನೊಂದು ಹೆಮ್ಮೆಯ ಗರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದಾದ್ಯಂತ 5700 ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿ ಕೇಂದ್ರಗಳ 9.73 ಲಕ್ಷ ಮಕ್ಕಳಿಗೆ ನಿತ್ಯ ಮಧ್ಯಾಹ್ನದ ಊಟ ನೀಡುವ ಈ ಯೋಜನೆ ವಿಶ್ವದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಶಾಲಾ ಮಕ್ಕಳಿಗಾಗಿ ನಡೆಸುತ್ತಿರುವ ಅತಿ ದೊಡ್ಡ ಕಾರ್ಯಕ್ರಮ. 'ದೇಶದಲ್ಲಿರುವ ಯಾವುದೇ ಮಗು ಹಸಿವಿನಿಂದಾಗಿ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಗುರಿ ಹೊತ್ತಿರುವ ಈ ಯೋಜನೆ ನಿಜಕ್ಕೂ ಅನುಕರಣೀಯ' ಎಂದು ಲಿಮ್ಕಾ ವಿಶ್ವ ದಾಖಲೆಗಳ ಪುಸ್ತಕ ವರ್ಣಿಸಿತು.

2009: ಗಾಜಾ ವಲಯದ ಮೇಲಿನ ತನ್ನ ಎಡೆಬಿಡದ ವಾಯುದಾಳಿಯನ್ನು ಇಸ್ರೇಲ್ ಸತತ ಏಳನೇ ದಿನವೂ ಮುಂದುವರಿಸಿ ಇಸ್ಲಾಮ್ ತೀವ್ರಗಾಮಿ ಗುಂಪಿನ 20 ನೆಲೆಗಳ ಮೇಲೆ ದಾಳಿ ನಡೆಸಿತು. ಹಮಾಸ್ ಆಡಳಿತಗಾರರು ರಾಕೆಟ್ ಲಾಂಚರುಗಳನ್ನು ಅಡಗಿಸಿಟ್ಟಿದ್ದರು. ಅವರ ರಾಕೆಟ್ ತಯಾರಿಕಾ ಘಟಕಗಳು, ರಾಕೆಟ್ ದಾಸ್ತಾನು ತಾಣ, ಹಮಾಸ್ ಕಾರ್ಯಕರ್ತರ ನಿವಾಸಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಯಿತು. ಇದರೊಂದಿಗೆ 7 ದಿನಗಳಲ್ಲಿ 700 ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದಂತಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದರು.

2008: ಇನ್ನೂ 34 ಹೊಸ ವಿಶೇಷ ಆರ್ಥಿಕ ವಲಯಗಳ (ಎಸ್ ಇ ಜೆಡ್) ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. ಇದರೊಂದಿಗೆ ಇಂತಹ ತೆರಿಗೆ ಮುಕ್ತ ಆರ್ಥಿಕ ವಲಯಗಳ ಸಂಖ್ಯೆ 600ಕ್ಕೆ ತಲುಪಿತು. ಕೇಂದ್ರ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರ ಅಧ್ಯಕ್ಷತೆಯ ಅನುಮೋದನಾ ಸಮಿತಿಯು, ನಾಲ್ಕು ವಿಶೇಷ ಆರ್ಥಿಕ ವಲಯಗಳಿಗೆ ತಾತ್ವಿಕ ಒಪ್ಪಿಗೆ ನೀಡಿತು. ಇನ್ನುಳಿದ 30 ಎಸ್ ಇ ಜೆಡ್ ಗಳಿಗೂ ಇದೇ ವೇಳೆ, ಹಸಿರು ನಿಶಾನೆ ನೀಡಲಾಯಿತು. ಅಧಿಕೃತ ಅನುಮೋದನೆ ಪಡೆದ ಕಂಪೆನಿಗಳಲ್ಲಿ ತಮಿಳುನಾಡಿನ ಸೇಲಮ್ಮಿನಲ್ಲಿ ಇರುವ ಭಾರತೀಯ ಉಕ್ಕು ಪ್ರಾಧಿಕಾರ ಸಂಸ್ಥೆಯ (ಎಸ್ ಎ ಐ ಎಲ್) ಘಟಕವೂ ಒಂದು. `ಇಲ್ಲಿವರೆಗೆ ಅಧಿಕೃತ ಆದೇಶ ಪತ್ರ ಪಡೆದುಕೊಂಡ 187 ವಿಶೇಷ ಆರ್ಥಿಕ ವಲಯಗಳಿಗಾಗಿ ಒಟ್ಟು ರೂ 56000 ಕೋಟಿಗಳಷ್ಟು ಬಂಡವಾಳ ಹೂಡಿಕೆಯಾಗಿದೆ. 2008ನೇ ಸಾಲಿನಲ್ಲಿ ಅವುಗಳಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ' ಎಂಬುದು ಪಿಳ್ಳೈ ವಿವರಣೆ.

2008: ಮುಂಬೈಯಲ್ಲಿ ಜ.1ರ ನಸುಕಿನ ಸುಮಾರು 1.45ರ ವೇಳೆಯಲ್ಲಿ ಇಬ್ಬರು ಯುವತಿಯರು ತಮ್ಮ ಸ್ನೇಹಿತರೊಂದಿಗೆ ಜೆ. ಡಬ್ಲ್ಯೂ. ಮ್ಯಾರಿಯಟ್ ಹೋಟೆಲಿನಿಂದ ಜುಹು ಸಮುದ್ರ ತೀರದತ್ತ ಸಾಗುತ್ತಿದ್ದಾಗ ಸುಮಾರು 40 ಜನರ ಗುಂಪು ಅವರನ್ನು ಚುಡಾಯಿಸಿ, ಮಾನಭಂಗ ಮಾಡಲು ಯತ್ನಿಸಿತು. ಕೆಲವರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ, ಬಟ್ಟೆ ಹರಿದು ಹಾಕಿ ಅವರು ಕೆಳಕ್ಕೆ ಬಿದ್ದಾಗ ಅವರ ಮೇಲಕ್ಕೆ ಬಿದ್ದರು. ಇವೆಲ್ಲ ದೃಶ್ಯಗಳನ್ನು ಸೆರೆಹಿಡಿದ ಪತ್ರಿಕಾ ಛಾಯಾಗ್ರಾಹಕರೊಬ್ಬರು ಪೊಲೀಸರಿಗೆ ದೂರು ಸುದ್ದಿ ಮುಟ್ಟಿಸಿದರು. ಮರುದಿನ ಪತ್ರಿಕೆಯಲ್ಲಿ ಈ ಘಟನೆಯ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

2008: ಖರೀದಿ ಆಸಕ್ತಿ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ವಹಿವಾಟಿನಲ್ಲಿ ದಿನದ ಗರಿಷ್ಠ ಮಟ್ಟವಾದ 20,500 ಅಂಶಗಳಿಗೆ ಏರಿ ಹೊಸ ದಾಖಲೆ ಬರೆಯಿತು. ಆರಂಭದ ವಹಿವಾಟಿನಲ್ಲಿ ಸಾಕಷ್ಟು ಏರಿಳಿತ ಕಂಡರೂ ಅಂತ್ಯದಲ್ಲಿ ಕಂಡು ಬಂದ ಖರೀದಿ ಭರಾಟೆ ಫಲವಾಗಿ ದಿನದ ಅಂತ್ಯದಲ್ಲಿ 165 ಅಂಶಗಳಷ್ಟು ಏರಿಕೆ ದಾಖಲಿಸಿ 20,465 ಅಂಶಗಳೊಂದಿಗೆ ವಹಿವಾಟು ಕೊನೆಗೊಂಡಿತು.

2008: ಸಾಂಸ್ಥಿಕ ಹೂಡಿಕೆದಾರರೂ ತಮ್ಮ ಒಡೆತನಕ್ಕೆ ಸೇರದ ಷೇರುಗಳನ್ನು ಮಾರಾಟ ಮಾಡಲು (ಶಾರ್ಟ್ ಸೆಲ್ಲಿಂಗ್) ಷೇರುಪೇಟೆಯ ನಿಯಂತ್ರಣ ಮಂಡಳಿ (ಸೆಬಿ) ಅನುಮತಿ ನೀಡಿತು.

2008: ಪಾಕಿಸ್ಥಾನದಲ್ಲಿ ಜನವರಿ 8ಕ್ಕೆ ನಿಗದಿಯಾದ ಚುನಾವಣೆಯನ್ನು ಫೆಬ್ರುವರಿ 18ಕ್ಕೆ ಮುಂದೂಡಲು ಚುನಾವಣಾ ಆಯೋಗ ನಿರ್ಧರಿಸಿತು. ಬೆನಜೀರ್ ಹತ್ಯೆ ನಂತರದ ಪ್ರತಿಭಟನೆ ವೇಳೆ ಚುನಾವಣಾ ಆಯೋಗದ ಕಚೇರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ನಿರ್ಧಾರವನ್ನು ಆಯೋಗ ಕೈಗೊಂಡಿತು.

2008: ದಕ್ಷಿಣ ಚಿಲಿಯ ಅರೌಕ್ಯಾನಿಯಾ ಪ್ರದೇಶದ ಕಾಂಗ್ಯುಲಿಯೊ ರಾಷ್ಟ್ರೀಯ ಉದ್ಯಾನವನದಲ್ಲಿನ ಲೈಮಾ ಪರ್ವತದಲ್ಲಿ ಜ್ವಾಲಾಮುಖಿ ಚುರುಕುಗೊಂಡು, ಬೆಳಗ್ಗೆಯಿಂದಲೇ ಪರ್ವತದ ಶಿಖರದಲ್ಲಿ ಜ್ವಾಲೆಗಳು ಮೇಲಕ್ಕೆ ಚಿಮ್ಮಿದವು. ಸುತ್ತಲ ಪ್ರದೇಶದ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿತು.

2008: ಮುಂಬೈ ಚಿನಿವಾರ ಪೇಟೆಯಲ್ಲಿ ಶುದ್ಧ ಚಿನ್ನದ ಬೆಲೆಯು ತಲಾ 10 ಗ್ರಾಮುಗಳಿಗೆ ರೂ 10,815ಕ್ಕೆ ಏರಿ ಸಾರ್ವಕಾಲಿಕ ದಾಖಲೆ ನಿರ್ಮಾಣಗೊಂಡಿತು.

2008: ಎರಡು ತಿಂಗಳ ಹಿಂದೆ ಕಾಡಾನೆಯೊಂದರ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಕರ್ನಾಟಕ ರಾಜ್ಯ ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಿ.ಕೆ. ವಿಶ್ವನಾಥ್ (52) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ನವೆಂಬರ್ 10ರಂದು ಉದ್ಯಾನದ ಒಳಗೆ ಸಾಕಾನೆಯ ಜತೆಯಲ್ಲಿ ಕಾಡಾನೆಯೊಂದು ಸೇರಿಕೊಂಡಿರುವುದನ್ನು ಗಮನಿಸಿದ್ದ ವಿಶ್ವನಾಥ್, ಅದನ್ನು ಹೊರಕ್ಕೆ ಅಟ್ಟಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕುತ್ತಿಗೆಯ ಬಳಿ ತೀವ್ರವಾದ ಗಾಯವಾದ ಪರಿಣಾಮ ಅವರ ದೇಹ ಮತ್ತು ಬೆನ್ನುಹುರಿಯ ನಡುವಿನ ಸಂಪರ್ಕ ಕಡಿದು ಹೋಗಿತ್ತು. ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2008: ಸಮಾಜವಾದಿ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಉತ್ತರ ಪ್ರದೇಶದ ಬಲಿಯಾ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದರು. ಚಂದ್ರಶೇಖರ್ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಡಿಸೆಂಬರ್ 29ರಂದು ಉಪ ಚುನಾವಣೆ ನಡೆದಿತ್ತು. ಶೇ 38ರಷ್ಟು ಮತ ಚಲಾವಣೆ ಆಗಿತ್ತು. ನೀರಜ್ ಶೇಖರ್ ತಮ್ಮ ಪ್ರಬಲ ಎದುರಾಳಿ ಬಹುಜನ ಸಮಾಜವಾದಿ ಪಕ್ಷದ ವಿನಯ್ ಶಂಕರ್ ತಿವಾರಿ ಅವರನ್ನು 1.30 ಲಕ್ಷಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು.

2008: ಇಡೀ ಮಲೇಷ್ಯಾವನ್ನೇ ಬೆಚ್ಚಿಬೀಳಿಸಿದ್ದ ಆರೋಗ್ಯ ಸಚಿವ ಡಾ. ಚೌ ಸೋಯಿಲೆಕ್ ಅವರ ರಹಸ್ಯ ಕಾಮಕೇಳಿ ವೀಡಿಯೋ ಚಿತ್ರದ ಪ್ರಕರಣಕ್ಕೆ ಸಚಿವರ ರಾಜೀನಾಮೆಯಿಂದಾಗಿ ಕೊನೆಗೂ ತೆರೆ ಕಂಡಿತು. ಮಲೇಷ್ಯಾ ಚೈನೀಸ್ ಅಸೋಸಿಯೇಷನ್ನಿನ ಉಪಾಧ್ಯಕ್ಷರೂ ಆದ ಸಚಿವ ಡಾ.ಚೌ ಸೋಯಿ ಲೆಕ್ ಅವರನ್ನು ಆಡಳಿತಾರೂಢ ಬರಿಸನ್ ನ್ಯಾಷನಲ್ ಪಕ್ಷದ ಎಲ್ಲ ಹುದ್ದೆಗಳಿಂದಲೂ ಕಿತ್ತು ಹಾಕಲಾಯಿತು. ಲೆಕ್ ಅವರು ಸಚಿವ ಸ್ಥಾನದ ಜೊತೆಗೆ ತಮ್ಮ ಸಂಸತ್ ಸದಸ್ಯ ಸ್ಥಾನವನ್ನೂ ತೊರೆದರು. ಲೆಕ್ ಮಹಿಳೆಯೊಬ್ಬರ ಜೊತೆ ಕಾಮಕೇಳಿಯಲ್ಲಿ ತೊಡಗಿದ್ದ 60 ನಿಮಿಷಗಳ ವೀಡಿಯೋ ಚಿತ್ರೀಕರಣದ ಕ್ಯಾಸೆಟ್ ಇಡೀ ದೇಶಾದ್ಯಂತ ಹುಯಿಲೆಬ್ಬಿಸಿತ್ತು.

2008: ಬಾಗ್ದಾದಿನ ದಿಯಾಲಾ ಪ್ರಾಂತ್ಯದ ಬಕುದಾ ಗಡಿ ಭಾಗದಲ್ಲಿ ಕಾವಲು ಪಡೆಯ ಮೇಲೆ ಮಹಿಳೆಯೊಬ್ಬಳು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 10 ಜನ ಯೋಧರು ಬಲಿಯಾದರು.

2007: ದೇವಾಲಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಶ್ವ ಖ್ಯಾತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಡಿಸೆಂಬರ್ 23ರ ಬಳಿಕ ಕಳೆದ 10 ದಿನಗಳಲ್ಲಿ ಪ್ರತಿದಿನ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚಿನ `ಕಾಣಿಕೆ' ಸಂಗ್ರಹವಾಗುತ್ತಿದ್ದು, `ವೈಕುಂಠ ಏಕಾದಶಿ'ಯ ದಿನ 2.1 ಕೋಟಿ ರೂಪಾಯಿ ಹಾಗೂ ಹೊಸ ವರ್ಷದ ದಿನ 1.85 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಯಿತು. ಈ ಹತ್ತು ದಿನಗಳ ಅವಧಿಯಲ್ಲಿ ಸಂಗ್ರಹವಾದ ಒಟ್ಟು ಕಾಣಿಕೆಯ ಮೊತ್ತ 14 ಕೋಟಿ ರೂಪಾಯಿಗಳು. ವಾರ್ಷಿಕ ಬ್ರಹ್ಮೋತ್ಸವ ಕಾಲದಲ್ಲಿ ಆಗಿದ್ದ 7.84 ಕೋಟಿ ರೂಪಾಯಿಗಳ ಕಾಣಿಕೆ ಸಂಗ್ರಹದ ದಾಖಲೆಯನ್ನು ಇದು ಮುರಿಯಿತು.

2007: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರನ್ನು ಅಧಿಕೃತವಾಗಿ ನೇಮಿಸಲಾಯಿತು.

2007: ಬಕ್ರೀದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪಾಲ್ಗೊಳ್ಳದೇ ಇದ್ದ ಕಾರಣಕ್ಕ್ಕೆ ಮುನಿಸಿಕೊಂಡ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಗೆ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಪಾಲರಿಗೆ ಶಿಫಾರಸು ಮಾಡಿದರು.

2007: ಜನವರಿ 1ರಂದು ಜಾವಾ ದ್ವೀಪದಿಂದ ಸುಲವೇಸಿ ದ್ವೀಪಕ್ಕೆ ಪ್ರಯಾಣಿಸುತ್ತಿದ್ದಾಗ ಕಣ್ಮರೆಯಾದ ಇಂಡೋನೇಷ್ಯದ ಆಡಮ್ ಕಂಪೆನಿಗೆ ಸೇರಿದ ಬೋಯಿಂಗ್ 737 ವಿಮಾನ ಅಪಘಾತಕ್ಕೆ ಈಡಾಗಿ 106 ಪ್ರಯಾಣಿಕರು ಅಸು ನೀಗಿದರು. ಹವಾಮಾನ ವೈಪರೀತ್ಯದಿಂದ ವಿಮಾನ ಬಿರುಗಾಳಿಗೆ ಸಿಲುಕಿ ಪರ್ವತಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತು. 12 ಮಂದಿಯನ್ನು ರಕ್ಷಿಸಲಾಯಿತು.

2007: ಲೇಖಕಿ ಲಕ್ಷ್ಮೀದೇವಿ ಕಡಿದಾಳ್ ಅವರಿಗೆ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ರಾಜಭವನದಲ್ಲಿ ಮೈಸೂರು ವಿಶ್ವ ವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

2006: ಹೊಸ ವರ್ಷದ ಮೊದಲ ದಿನ ತಿರುಪತಿ ತಿಮ್ಮಪ್ಪನ ಹುಂಡಿಗೆ 2ಕೋಟಿ ರೂಪಾಯಿಗಳ ಕಾಣಿಕೆ ಬಂದಿದ್ದು ತಿಮ್ಮಪ್ಪನ ಆದಾಯ ಚಾರಿತ್ರಿಕ ದಾಖಲೆ ಸೃಷ್ಟಿಸಿತು. ದೇಗುಲದ ಈ ಆದಾಯ ಇತಿಹಾಸದಲ್ಲೇ ಒಂದು ದಾಖಲೆ ಎಂದು ತಿರುಮಲ ತಿರುಪತಿ ದೇವಸ್ವಂ ವಿಶೇಷಾಧಿಕಾರಿ ಎ.ವಿ. ಧರ್ಮರೆಡ್ಡಿ ತಿಳಿಸಿದರು.

2006: ಬಿಜೆಪಿಯ ನೂತನ ಅಧ್ಯಕ್ಷರಾಗಿ ರಾಜನಾಥ್ ಸಿಂಗ್ ಅಧಿಕಾರ ಸ್ವೀಕರಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪಕ್ಷದ ಮಾಜಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಹಾಜರಿದ್ದರು.

2006: ಗುಡಿಯಾ ಅಂದರೆ ಗೊಂಬೆ. ಆದರೆ ಸಮಯದ ಗೊಂಬೆಯಾಗಿ ವಿಚಿತ್ರ ಬದುಕು ನಡೆಸಬೇಕಾಗಿ ಬಂದ ಉತ್ತರ ಪ್ರದೇಶದ ಗುಡಿಯಾ ಮೀರತಿನಲ್ಲಿ ಮೃತಳಾದಳು. ಈಕೆ ಸೈನಿಕನೊಬ್ಬನನ್ನು ಮದುವೆಯಾಗಿದ್ದಳು. ಆತ ಯುದ್ಧದಲ್ಲಿಸೆರೆಸಿಕ್ಕಿ ವೈರಿಗಳ ಕೈವಶವಾದ. ಆತನಿಗಾಗಿ ವರ್ಷಗಟ್ಟಲೆ ಕಾದ ಗುಡಿಯಾ, ಕೊನೆಗೊಮ್ಮೆ ಬದುಕಿಗೆ ಆಸರೆಯ ಅನಿವಾರ್ಯತೆ ಮನಗಂಡು ಇನ್ನೊಬ್ಬನನ್ನು ಮದುವೆಯಾದಳು. ಮಗುವೂ ಹುಟ್ಟಿತು. 2004ರಲ್ಲಿ ಈಕೆಯ ಮೊದಲ ಗಂಡ ಸೆರೆಮನೆಯಿಂದ ಬಿಡುಗಡೆಯಾಗಿ ಬಂದ. ಧರ್ಮಸಂಕಟಕ್ಕೆ ಸಿಲುಕಿ ದ್ವಂದ್ವ ಅನುಭವಿಸಿದ ಗುಡಿಯಾ ಕಡೆಗೆ ಮೊದಲ ಪತಿಯತ್ತಲೇ ತೆರಳಿದಳು. ಮತ್ತೆ ಗರ್ಭವತಿಯೂ ಆದಳು. ಅಕ್ಟೋಬರಿನಲ್ಲಿ ಭ್ರೂಣಾವಸ್ಥೆಯಲ್ಲಿದ್ದ ಮಗುವಿಗೆ ಜನ್ಮನೀಡಿದಳು. ಆಗ ಸೇನಾ ಆಸ್ಪತ್ರೆಗೆ ಸೇರಬೇಕಾಗಿ ಬಂದ ಗುಡಿಯಾಳನ್ನು ಹೀಮೋಗ್ಲೋಬಿನ್ ಕೊರತೆಯ ತೊಂದರೆ ಕಾರಣ ದೆಹಲಿಯ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಆಕೆ ಈ ದಿನ ಅಸು ನೀಗಿದಳು.

2006: ಖ್ಯಾತ ಮಲೆಯಾಳಂ ಚಿತ್ರನಟಿ ಫಿಲೋಮಿನಾ (80) ಈದಿನ ರಾತ್ರಿ ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಅವರು 750ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು.

1975: ಸಮಷ್ಟಿಪುರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕೇಂದ್ರದ ರೈಲ್ವೇ ಸಂಪುಟ ಸಚಿವ ಲಲಿತ್ನಾರಾಯಣ್ ಮಿಶ್ರ ಹತರಾದರು. ಈ ರೀತಿ ಬಾಂಬ್ ಸ್ಫೋಟದಲ್ಲಿ ಹತರಾದ ಭಾರತದ ಮೊದಲ ಸಂಪುಟ ದರ್ಜೆ ಸಚಿವರು ಇವರು.

1968: ಅಮೆರಿಕನ್ ಚಿತ್ರನಟ ಕ್ಯೂಬಾ ಗುಡಿಂಗ್ ಜ್ಯೂನಿಯರ್ ಹುಟ್ಟಿದ ದಿನ.

1961: ಕಲಾವಿದೆ ರತ್ನಮಾಲಾ ಪುರಂದರ ಜನನ.

1959: ರಷ್ಯದ ಕೃತಕ ಉಪಗ್ರಹ ಲ್ಯೂನಾ 1 ಟೈರಾಟಮ್ನಿಂದ ಬಾಹ್ಯಾಕಾಶಕ್ಕೆ ಏರಿತು. ಇದು ಚಂದ್ರನ ಅತ್ಯಂತ ಸಮೀಪಕ್ಕೆ ತೆರಳಿದ ಮೊತ್ತ ಮೊದಲ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1959: ರಾಜಕಾರಣಿಯಾದ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿವರ್ಧನ್ ಭಗವತ್ ಝಾ ಆಜಾದ್ ಹುಟ್ಟಿದ ದಿನ.

1954: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಭಾರತ ರತ್ನ'ವನ್ನು ಸ್ಥಾಪಿಸಲಾಯಿತು. ಚಕ್ರವರ್ತಿ ರಾಜಗೋಪಾಲಾಚಾರಿ, ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಚಂದ್ರಶೇಖರ ವೆಂಕಟರಾಮನ್ (ಸಿ.ವಿ. ರಾಮನ್) ಅವರು ಈ ಪ್ರಶಸ್ತಿ ಪಡೆದ ಮೊದಲಿಗರಾದರು.

1928: ಪಾನ್ ಅಮೆರಿಕನ್ ಏರ್ ಲೈನ್ಸ್ `ಪುರುಷ ಸೇವಕ'ರನ್ನು ನೇಮಿಸಿದ ಪ್ರಥಮ ಏರ್ಲೈನ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1928: ಖ್ಯಾತ ಕಲಾವಿದ ಅರ್ಜುನ ಸಾ ನಾಕೋಡ್ (2-1-1928ರಿಂದ 4-1-2006) ಅವರು ವೆಂಕೂಸಾ- ನಾಗೂಭಾಯಿ ದಂಪತಿಯ ಮಗನಾಗಿ ಬೆಟಗೇರಿಯಲ್ಲಿ ಜನಿಸಿದರು. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯತ್ವದೊಂದಿಗೆ ಗಾಯಕರಾಗಿ ಅನೇಕ ರಾಗಗಳನ್ನು ಸಾಕ್ಷಾತ್ಕರಿಸಿಕೊಂಡ ಅವರು ಪಂಚಾಕ್ಷರಿ ಗವಾಯಿಗಳು ಪ್ರಾರಂಬಿಸಿದ್ದ `ಶ್ರೀ ಕುಮಾರೇಶ್ವರ ನಾಟ್ಯ ಸಂಘ'ದಲ್ಲಿ ಕಲಾವಿದರಾಗಿ ಖ್ಯಾತಿ ಗಳಿಸಿದ್ದರು.

1925: ಕಲಾವಿದ ಎಲ್. ಆರ್ ಹೆಗಡೆ ಜನನ.

1916: ಕಲಾವಿದ ಗೋಪಾಲದಾಸ ಜನನ.

1839: ಫ್ರಾನ್ಸಿನ ಲೂಯಿ ಡಾಗ್ಯುಯೆರೆ ಚಂದ್ರನ ಫೋಟೋವನ್ನು ಮೊತ್ತ ಮೊದಲ ಬಾರಿಗೆ ಸೆರೆಹಿಡಿದ.

1757: ರಾಬರ್ಟ್ ಕ್ಲೈವ್ ಕಲ್ಕತ್ತಾವನ್ನು (ಈಗಿನ ಕೋಲ್ಕತ) ಮರುವಶ ಮಾಡಿಕೊಂಡ. 1756ರ ಜೂನ್ 20ರಂದು ಸಂಭವಿಸಿದ ಬ್ಲ್ಯಾಕ್ ಹೋಲ್ ಆಫ್ ಕಲ್ಕತ್ತಾ ಘಟನೆಗೆ ಪ್ರತೀಕಾರವಾಗಿ ಕ್ಲೈವ್ ಈ ಕ್ರಮ ಕೈಗೊಂಡ ಎಂದು ನಂಬಲಾಗಿದೆ.

No comments:

Advertisement