Thursday, March 11, 2010

ಇಂದಿನ ಇತಿಹಾಸ History Today ಫೆಬ್ರುವರಿ 05

ಇಂದಿನ ಇತಿಹಾಸ

ಫೆಬ್ರುವರಿ 05

ಒಲಿಂಪಿಕ್ ಪದಕ ವಿಜೇತ ಶ್ರೀಲಂಕಾದ ಮಹಿಳಾ ಆಥ್ಲೀಟ್ ಸುಶಾಂತಿಕಾ ಜಯಸಿಂಘೆ ಅವರು ವಿದಾಯ ಹೇಳಿದರು. ಶ್ರೀಲಂಕಾ ಅಧ್ಯಕ್ಷರಾದ ಮಹಿಂದಾ ರಾಜಪಕ್ಷೆ 33 ವರ್ಷ ವಯಸ್ಸಿನ ಅಥ್ಲೀಟ್ ಅನ್ನು ಸನ್ಮಾನಿಸಿದರು. 50 ಲಕ್ಷ ರೂ. ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು. 2000ರ ಸಿಡ್ನಿ ಒಲಿಂಪಿಕ್ ಕೂಟದಲ್ಲಿ 200 ಮೀ. ಓಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಪದಕ ಗೆದ್ದ ಮೊತ್ತ ಮೊದಲ ಲಂಕಾ ಮಹಿಳೆ ಎನಿಸಿದ್ದರು.

2009: ಕೊಲಂಬೊ: ಮಾಂತ್ರಿಕ ಸ್ಪಿನ್ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಪಾಕಿಸ್ಥಾನದ ಮಾಜಿ ವೇಗಿ ವಾಸೀಮ್ ಅಕ್ರಮ್ ಅವರ ವಿಶ್ವದಾಖಲೆಯನ್ನು ಮುರಿಯುವ ಮೂಲಕ ಮತ್ತೊಂದು ಮಹತ್ತರ ಸಾಧನೆ ಮಾಡಿದರು. ಕೊಲಂಬೋದಲ್ಲಿ ನಡೆದ ಭಾರತ ವಿರುದ್ಧದ ಸರಣಿಯ ನಾಲ್ಕನೇ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರು ಚೆಂಡನ್ನು ಕೆಣಕಿ, ವಿಕೆಟ್ ಕೀಪರ್ ಕುಮಾರ ಸಂಗಕ್ಕಾರಗೆ ಕ್ಯಾಚ್ ನೀಡುವಂತೆ ಮಾಡಿದರು. ಈ ಮೂಲಕ ವಿಶ್ವ ಖ್ಯಾತ ಆಫ್‌ಸ್ಪಿನ್ನರ್ ಮುರಳೀಧರನ್ (503 ವಿಕೆಟ್) ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಈ ಮೊದಲು ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು 502 ವಿಕೆಟ್ ಕಬಳಿಸಿದ್ದ ಅಕ್ರಮ್ ಹೊಂದಿದ್ದರು. ಮುರಳಿ ಅದನ್ನು ಮೀರಿ ಬೆಳೆದರು.

2009: ಒಲಿಂಪಿಕ್ ಪದಕ ವಿಜೇತ ಶ್ರೀಲಂಕಾದ ಮಹಿಳಾ ಆಥ್ಲೀಟ್ ಸುಶಾಂತಿಕಾ ಜಯಸಿಂಘೆ ಅವರು ವಿದಾಯ ಹೇಳಿದರು. ಶ್ರೀಲಂಕಾ ಅಧ್ಯಕ್ಷರಾದ ಮಹಿಂದಾ ರಾಜಪಕ್ಷೆ 33 ವರ್ಷ ವಯಸ್ಸಿನ ಅಥ್ಲೀಟ್ ಅನ್ನು ಸನ್ಮಾನಿಸಿದರು. 50 ಲಕ್ಷ ರೂ. ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು. 2000ರ ಸಿಡ್ನಿ ಒಲಿಂಪಿಕ್ ಕೂಟದಲ್ಲಿ 200 ಮೀ. ಓಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಪದಕ ಗೆದ್ದ ಮೊತ್ತ ಮೊದಲ ಲಂಕಾ ಮಹಿಳೆ ಎನಿಸಿದ್ದರು. ಅದಾದ ನಂತರ ಕೆಲವು ವರ್ಷಗಳಲ್ಲಿ ಸಿಡ್ನಿ ಒಲಿಂಪಿಕ್ ಸ್ವರ್ಣ ವಿಜೇತ ಅಮೆರಿಕಾದ ಮೇರಿಯನ್ ಜೋನ್ಸ್ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿದರು. ಆದ್ದರಿಂದ ಅವರ ಪದಕವನ್ನೂ ಕಿತ್ತುಕೊಳ್ಳಲಾಯಿತು.

2009: 'ಸಿ' ದರ್ಜೆ ನೌಕರರಾಗಿರುವ ದಂಪತಿಯ ವಾರ್ಷಿಕ ಆದಾಯ ಎರಡು ಲಕ್ಷ ರೂಪಾಯಿ ಮಿರಿದ್ದರೂ ಕೂಡ, ಅವರ ಮಕ್ಕಳು '3ಎ' ವರ್ಗದ ಮೀಸಲಾತಿ ಪಡೆದುಕೊಳ್ಳಬಹುದು ಎಂಬ ಸರ್ಕಾರದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿತು. 'ಇಂತಹ ಮಕ್ಕಳು ಕೂಡ ಕೆನೆ ಪದರ ವ್ಯಾಪ್ತಿಗೆ ಒಳಪಡುತ್ತಾರೆ. ಇವರನ್ನು ಕೆನೆ ಪದರದಿಂದ ಹೊರಕ್ಕೆ ಇಡುವುದು ಸರಿಯಲ್ಲ' ಎಂದು ನ್ಯಾಯಮೂರ್ತಿ ಅಜಿತ್ ಗುಂಜಾಳ್ ಮಹತ್ವದ ತೀರ್ಪು ನೀಡಿದರು. ಈ ರೀತಿ ಮೀಸಲಾತಿ ನೀಡುತ್ತಾ ಹೋದರೆ, ಮೀಸಲಾತಿ ಎಂಬ ಶಬ್ಧದ ಅರ್ಥಕ್ಕೇ ಮಾನ್ಯತೆಯೇ ಇಲ್ಲದಂತಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.

2009: ಪಂಡಿತ್ ರಾಜಶೇಖರ ಮನ್ಸೂರ್ (ಹಿಂದುಸ್ಥಾನಿ ಗಾಯನ) ಹಾಗೂ ಬೆಂಗಳೂರಿನ ಎಸ್. ಶಂಕರ್ (ಕರ್ನಾಟಕ ಸಂಗೀತ) ಅವರನ್ನು 2008-09ನೇ ಸಾಲಿನ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ 16 ಮಂದಿಯನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಕರ್ನಾಟಕ ಸಂಗೀತ: ವಸಂತ ಮಾಧವಿ, ಟಿ.ಆರ್. ರಂಗಸ್ವಾಮಿ, ಬೆಂಗಳೂರು (ಹಾಡುಗಾರಿಕೆ), ಎಚ್.ಟಿ.ನಾರಾಯಣಾಚಾರ್, ಚಿಕ್ಕಬಳ್ಳಾಪುರ (ಪಿಟೀಲು), ಉಷಾ ರಾಮಮೂರ್ತಿ, ಬೆಂಗಳೂರು (ಗೋಟುವಾದ್ಯ). ಹಿಂದುಸ್ಥಾನಿ ಸಂಗೀತ: ರಾಮರಾವ್ ಜಗರ್ಕಲ್, ಧಾರವಾಡ (ಗಾಯನ), ಶೋಭಾ ಹುಯಿಲಗೋಳ, ಗದಗ (ಗಾಯನ), ಸಂಜೀವ್ ಪೋತದಾರ್, ಶಿರಸಿ (ತಬಲಾ), ಶ್ರೀರಾಮುಲು ರಾಯಚೂರ್ಕರ್, ರಾಯಚೂರು (ಶಹನಾಯಿ). ಸುಗಮ ಸಂಗೀತ: ಡಾ. ಜಯಶ್ರೀ ಅರವಿಂದ್ (ಬೆಂಗಳೂರು), ಎನ್.ಎಸ್.ಪ್ರಸಾದ್, ಬೆಂಗಳೂರು (ಮ್ಯಾಂಡೋಲಿನ್). ನೃತ್ಯ: ಕೆ. ಹರಿದಾಸ (ಗದಗ), ಸುಂದರಿ ಸಂತಾನಂ ಮತ್ತು ಮಂಜು ಭಾರ್ಗವಿ (ಬೆಂಗಳೂರು). ಕಥಾ ಕೀರ್ತನ: ಭದ್ರಗಿರಿ ಸರ್ವೋತ್ತಮದಾಸ (ಬೆಂಗಳೂರು). ಗಮಕ: ವೆಂಕಟಾದ್ರಿ ಶರ್ಮ (ಬೆಂಗಳೂರು). ಹೊರರಾಜ್ಯದ ಕನ್ನಡ ಕಲಾವಿದರು: ಸರಯೂ ಸ್ವನ್ನಿ, ಬನಾರಸ್ (ಹಿಂದುಸ್ಥಾನಿ ಸಂಗೀತ- ಗಾಯನ)

2009: ಮುಂಬೈ ಮೇಲೆ ನಡೆದ 26/11ರ ದಾಳಿಗೆ ಸಂಬಂಧಿಸಿದಂತೆ ಜೀವಂತವಾಗಿ ಬಂಧಿಸಲಾದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಾಬ್, ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಡಿಎನ್‌ಎ ಅಂಶಗಳು ದೃಢಪಡಿಸಿದವು. ಉಗ್ರರು ದಾಳಿಗೂ ಮುನ್ನ ಬಳಸಿದ್ದ ಕುಬೇರ ದೋಣಿಯಲ್ಲಿ ದೊರೆತ ಮಾದರಿಗಳು ಕಸಾಬ್‌ನ ಡಿಎನ್‌ಎ ಜತೆ ಹೋಲಿಕೆಯಾಗಿವೆ ಎಂದು ಮಹಾರಾಷ್ಟ್ರ ಗೃಹಮಂತ್ರಿ ಜಯಂತ ಪಾಟೀಲ್ ತಿಳಿಸಿದರು.

2009: ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ನೀಡಿದ 'ಸ್ವರ್ಣ ಕಮಲ' ಪ್ರಶಸ್ತಿಯನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ರೇಣುಕಾ ಚೌಧರಿ ಇದ್ದರು.

2008: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಹಿರಿಯ ನಾಗರಿಕರಿಗಾಗಿ ಆರಂಭಿಸಿರುವ ಬಿಸಿಯೂಟ ಯೋಜನೆಗೆ ಪ್ರಕಾಶನಗರದಲ್ಲಿ ಚಾಲನೆ ನೀಡಲಾಯಿತು. ಪಾಲಿಕೆ ಮಾಜಿ ಸದಸ್ಯೆ ಪದ್ಮಾವತಿ ಹಾಗೂ ಪಾಲಿಕೆ ಸಿಬ್ಬಂದಿ ಆಹಾರ ವಿತರಿಸಿದರು.

2008: ಬೆಂಗಳೂರು ನಗರದ ಮಧ್ಯಭಾಗದಲ್ಲಿರುವ ಕಸಾಯಿಖಾನೆಗಳನ್ನು ಹೊರಭಾಗದ ಇಗಳೂರಿಗೆ ಸ್ಥಳಾಂತರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿತು. ಸ್ಥಳಾಂತರ ಮಾಡದಂತೆ ಪಾಲಿಕೆಗೆ ಆದೇಶಿಸಲು ಕೋರಿ `ಆನೇಕಲ್ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. ಇಲ್ಲಿಗೆ ಸ್ಥಳಾಂತರ ಮಾಡಿದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಸಮೀಪದಲ್ಲಿಯೇ ಶಾಲೆ, ಆಸ್ಪತ್ರೆಗಳು ಇದ್ದು ಇದರಿಂದ ತೊಂದರೆ ಉಂಟಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ಪೀಠ ಮಾನ್ಯ ಮಾಡಲಿಲ್ಲ. ಕೋರ್ಟ್ ಆದೇಶದ ಮೇರೆಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಈ ನಿರ್ಧಾರದ ಮಧ್ಯೆ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅದು ಸ್ಪಷ್ಟಪಡಿಸಿತು. ಯಾವ ಜಾಗಕ್ಕೆ ಸ್ಥಳಾಂತರ ಮಾಡಿದರೂ ಸ್ಥಳೀಯರಿಂದ ಪ್ರತಿರೋಧ ಬಂದೇ ಬರುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ಆಧುನಿಕ ಮಾದರಿಯ ಕಸಾಯಿ ಖಾನೆ ನಿರ್ಮಾಣ ಆಗಲಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಹೇಳಿ ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾ ಮಾಡಿದರು.

2008: ಅಮೆರಿಕದಲ್ಲಿ ಆರ್ಥಿಕ ಹಿಂಜರಿಕೆಯ ಭಯ ಎದುರಿಸುತ್ತಿರುವ ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಟಾಟಾ ಸಮೂಹದ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್) ತನ್ನ 500 ಮಂದಿ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿತು. `ಎರಡು ವರ್ಷಕ್ಕಿಂತ ಕಡಿಮೆ ಅನುಭವ ಇರುವ ಉದ್ಯೋಗಿಗಳಿಗೆ ಸಾಮರ್ಥ್ಯ ಪರೀಕ್ಷೆಯನ್ನು ಪ್ರತೀ ವರ್ಷ ನಡೆಸಲಾಗುತ್ತದೆ. ಇದರಲ್ಲಿ ಅನುತ್ತೀರ್ಣರಾದವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ' ಎಂದು ಟಿಸಿಎಸ್ ವಕ್ತಾರ ಪ್ರದೀಪ್ತ ಬಗಚಿ ಹೇಳಿದರು.

2008: `ಪ್ರಜಾವಾಣಿ'ಯ ವ್ಯಂಗಚಿತ್ರಕಾರ ಪಿ.ಮಹಮ್ಮದ್ ಅವರಿಗೆ 2007 ನೇ ಸಾಲಿನ ಮಾಧ್ಯಮ ಅಕಾಡೆಮಿಯು ವ್ಯಂಗ್ಯಚಿತ್ರಕ್ಕಾಗಿ ನೀಡುವ `ಶ್ರೀರಂಗ ಸ್ಮಾರಕ ಪ್ರಶಸ್ತಿ' ಲಭಿಸಿತು. `ಪ್ರಜಾವಾಣಿ'ಯಲ್ಲಿ ಪ್ರಕಟವಾದ ರಾಜಕೀಯ ವಿಡಂಬಣೆ ಕುರಿತ ವ್ಯಂಗ್ಯಚಿತ್ರಗಳಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿತು. `ಮೈಸೂರು ದಿಗಂತ' ಪ್ರಶಸ್ತಿ ಮಲ್ಲಿಕಾರ್ಜುನ ಸಿದ್ದಣ್ಣವರ (ಕನ್ನಡಪ್ರಭ), `ಅಭಿಮಾನಿ ಪ್ರಶಸ್ತಿ' ವೈ.ಗ.ಜಗದೀಶ (ಉದಯವಾಣಿ), `ಪ್ರಜಾಪ್ರಗತಿ ಪ್ರಶಸ್ತಿ' ಕುಂಡೇಕಲ್ ಸಂತೋಷ (ಮಡಿಕೇರಿ ಶಕ್ತಿ), `ದಿ.ಬಿ.ಎನ್.ಗುಪ್ತಾ ಸ್ಮಾರಕ ಪ್ರಶಸ್ತಿ' ಜಿ.ಪ್ರಕಾಶ್ (ವಿಜಯ ಕರ್ನಾಟಕ), `ಪುಟ ವಿನ್ಯಾಸ ಪ್ರಶಸ್ತಿ' (ಕನ್ನಡ ಪ್ರಭ), `ಸುದ್ದಿ ಚಿತ್ರ ಪ್ರಶಸ್ತಿ' ಕೆ.ಆರ್.ಪ್ರಕಾಶ್ (ಸಂಯುಕ್ತ ಕರ್ನಾಟಕ), `ಕ್ರೀಡಾ ವರದಿ ಪ್ರಶಸ್ತಿ' ವಿಕ್ರಂ ಕಾಂತಿಕೆರೆ (ಆಂದೋಲನ ಪತ್ರಿಕೆ) ಹಾಗೂ 'ಅತ್ಯುತ್ತಮ ರಾಜಕೀಯ ವಿಶ್ಲೇಷಣೆ ಪ್ರಶಸ್ತಿ' ಪಿ.ತ್ಯಾಗರಾಜ್ (ವಿಜಯ ಕರ್ನಾಟಕ) ಅವರಿಗೆ ನೀಡಲಾಯಿತು. ವಿದ್ಯುನ್ಮಾನ ವಿಭಾಗಕ್ಕೆ ನೀಡಲಾಗುವ ಅತ್ಯುತ್ತಮ ಸುದ್ದಿ ನಿರೂಪಣೆ ಪ್ರಶಸ್ತಿ -ಬಿ.ಸಮೀವುಲ್ಲಾ (ಉದಯ ಟಿವಿ), ಅತ್ಯುತ್ತಮ ಸುದ್ದಿವಾಚಕ-ಗೌರೀಶ್ ಎಸ್.ಅಕ್ಕಿ (ಟಿವಿ 9), ಅತ್ಯುತ್ತಮ ಸಾಮಾಜಿಕ ಕಳಕಳಿ ಸುದ್ದಿ ರೂಪಕ-ಡಾ.ಜೆ.ಎಂ.ಚಂದಣ್ಣನವರ (ಚಂದನ ವಾಹಿನಿ), ಅತ್ಯುತ್ತಮ ಅಪರಾಧ ಆಧಾರಿತ ಸುದ್ದಿರೂಪಕ-ಬಿಡುಗಡೆಯ ಬೇಡಿ (ಕಸ್ತೂರಿ) ಹಾಗೂ ಅತ್ಯುತ್ತಮ ರೂಪಕ ಪ್ರಶಸ್ತಿ- ಲೇಡಿಸ್ ಕ್ಲಬ್ (ಟಿವಿ 9) ಲಭಿಸಿತು.

2008: ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಕನ್ನಡ ಭಾಷೆಯಲ್ಲಿ ಕಂಪ್ಯೂಟರಿಗೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸುವ `ವಿಲೇಜ್ ಮಲ್ಟಿಮೀಡಿಯಾ' ಸಂಸ್ಥೆ ಸಿದ್ಧಪಡಿಸಿರುವ `ಅಂಗೈ' ಕನ್ನಡದಲ್ಲಿ ಇ ಜಗತ್ತು..! ಸಿ.ಡಿಯನ್ನು ಸಂಶೋಧಕ ಡಾ.ಶ್ರೀನಿವಾಸ ಹಾವನೂರ ಅವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಗೊಳಿಸಿದರು.

2008: ಕೇವಲ ರಾಮಸೇತು ನಾಶಕ್ಕೆ ಮಾತ್ರ ನಮ್ಮ ವಿರೋಧವಿದೆಯೇ ಹೊರತು ಸೇತು ಸಮುದ್ರಂ ನಾಲಾ ಯೋಜನೆಗೆ ನಮ್ಮ ವಿರೋಧವಿಲ್ಲ ಎಂದು ತಮಿಳುನಾಡು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕ ಸ್ಪಷ್ಟಪಡಿಸಿತು. ರಾಮಸೇತುವೆ ಉದ್ದಕ್ಕೆ ಹಾಗೂ ಬದುವಿನ ಗ್ರಾಮಗಳಲ್ಲಿನ ಮರಳಿನಲ್ಲಿ ವಿಕಿರಣಪಟು ಲೋಹಧಾತುವೆನಿಸಿದ ಥೋರಿಯಂ ಯಥೇಚ್ಛವಾಗಿದೆ. ಇದು ವಿಶ್ವದಲ್ಲಿನ ಥೋರಿಯಂ ಪ್ರಮಾಣದಲ್ಲಿ ಶೇ 30ರಷ್ಟಿದೆ. ಇದು ನಾಶವಾಗಬಾರದೆಂಬುದೇ ಪಕ್ಷದ ಬಯಕೆ ಎಂದು ಅದು ಹೇಳಿತು.

2008: ಬಿಹಾರದ ಯಾವುದೇ ಭಾಗದಲ್ಲಿ ಪಕ್ಷಿಜ್ವರ ಕಾಣಿಸಿಕೊಳ್ಳದೇ ಇದ್ದರೂ, ಪಶ್ಚಿಮ ಬಂಗಾಳದ ಗಡಿ ಭಾಗದಲ್ಲಿರುವ ಈ ರಾಜ್ಯದ ಪೂರ್ನಿಯಾ ಜಿಲ್ಲೆಯಲ್ಲಿ ಕೋಳಿಗಳ ಹತ್ಯೆ ಆರಂಭವಾಯಿತು. ಕೇಂದ್ರ ಸರ್ಕಾರದ ನಿರ್ದೇಶನದಂತೆ ಪೂರ್ನಿಯಾ, ಕತಿಹಾರ್ ಹಾಗೂ ಕಿಷನ್ ಗಂಜ್ ಜಿಲ್ಲೆಗಳಲ್ಲಿ ಕೋಳಿಗಳ ಹತ್ಯೆಗೆ ಕ್ರಮ ಕೈಗೊಳ್ಳಲಾಯಿತು.

2008: ಕಂದಹಾರ್ ವಿಮಾನ ಅಪಹರಣದ ಸಂಚಿನಲ್ಲಿ ಪಾಲ್ಗೊಂಡ ಮೂವರು ಅಪರಾಧಿಗಳಿಗೆ ಪಾಟಿಯಾಲದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಇಂದ್ರಜಿತ್ ಸಿಂಗ್ ವಾಲಿಯಾ ಅವರು ಆರೋಪಿಗಳಾದ ಅಬ್ದುಲ್ ಲತೀಫ್, ಯೂಸುಫ್ ನೇಪಾಲಿ ಮತ್ತು ದಿಲೀಪ್ ಕುಮಾರ್ ಅವರನ್ನು ಅಪರಾಧಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಘಟನೆ ನಡೆದು ಒಂಬತ್ತು ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷೆಯಾಯಿತು. 2001ರಲ್ಲಿ ಕಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್ಲೈನ್ಸ್ ಐಸಿ 814 ವಿಮಾನವನ್ನು ಪಾಕಿಸ್ಥಾನ ಮೂಲದ ಐವರು ಉಗ್ರರು ಅಪಹರಿಸಿ ಆಫ್ಘಾನಿಸ್ಥಾನದ ಕಂದಹಾರಕ್ಕೆ ಕೊಂಡೊಯ್ದಿದ್ದರು. ಎಂಟು ದಿನಗಳವರೆಗೆ ಉಗ್ರರು ವಿಮಾನವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಈ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ನಕಲಿ ಪಾಸ್ಪೋರ್ಟ್ ಒದಗಿಸಿದ ಆರೋಪ ಈ ಮೂವರು ಅಪರಾಧಿಗಳ ಮೇಲಿತ್ತು. ಆಫ್ಘಾನಿಸ್ಥಾನದಲ್ಲಿ ಆಗ ತಾಲಿಬಾನ್ ಆಡಳಿತವಿದ್ದದ್ದರಿಂದ ವಿಮಾನ ಅಪಹರಿಸಿದ ಉಗ್ರರನ್ನು ಬಂಧಿಸಲಾಗಿರಲಿಲ್ಲ.

2007: ಭಾರತ ಸಂಜಾತೆ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸುವ ಮೂಲಕ ಅತಿ ಹೆಚ್ಚು ಹೊತ್ತು ನಭದಲ್ಲಿ ನಡೆದಾಡಿದ ವಿಶ್ವದ ಪ್ರಥಮ ಮಹಿಳೆ ಎಂಬ ದಾಖಲೆ ಸೃಷ್ಟಿಸಿದರು. ಸುನೀತಾ ಮತ್ತು ಗಗನಯಾತ್ರೆಯ ಕಮಾಂಡರ್ ಮೈಕೆಲ್ ಲೋಪೆಜ್ ಅಲೆಗ್ರಿಯಾ ಅವರು ಏಳು ಗಂಟೆ 11 ನಿಮಿಷಗಳ ನಡಿಗೆಯ ಬಳಿಕ ಗಗನನೌಕೆಗೆ ವಾಪಸಾದರು. ಈ ನಡಿಗೆಯ ಅವಧಿಯಲ್ಲಿ ಇವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಶೀತಲೀಕರಣ ವ್ಯವಸ್ಥೆಯನ್ನು ದುರಸ್ತಿ ಮಾಡಿದರು. ಈದಿನ 7 ಗಂಟೆಗಳ ನಡಿಗೆಯೊಂದಿಗೆ ಸುನೀತಾ ಅವರು ಒಟ್ಟು 22 ಗಂಟೆ 27 ನಿಮಿಷಗಳವರೆಗೆ ಬಾಹ್ಯಾಕಾಶದಲ್ಲಿ ನಡೆದಾಡಿದ ದಾಖಲೆ ನಿರ್ಮಿಸಿದರು. ಈವರೆಗೆ ಈ ದಾಖಲೆ ಕ್ಯಾಥಿ ಥೋರ್ನ್ ಟನ್ ಅವರ ಹೆಸರಿನಲ್ಲಿತ್ತು.

2007: ತಮಿಳುನಾಡಿಗೆ 205 ಟಿಎಂಸಿ ಗೆ ಬದಲಾಗಿ 192 ಟಿಎಂಸಿ ನೀರನ್ನು ಕರ್ನಾಟಕವು ಬಿಡುಗಡೆ ಮಾಡಬೇಕು ಎಂದು ನ್ಯಾಯಮಂಡಳಿಯು ಅಂತಿಮ ಐತೀರ್ಪು ನೀಡಿತು. ತನ್ನ ಮಧ್ಯಂತರ ತೀರ್ಪಿನಲ್ಲಿ ಅದು 205 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಮಧ್ಯಂತರ ಆದೇಶದಲ್ಲಿ ಮೆಟ್ಟೂರು ಜಲಾಶಯಕ್ಕೆ ನೀರು ಹರಿಸುವಂತೆ ಹೇಳಿದ್ದ ನ್ಯಾಯಮಂಡಳಿ, ಅಂತಿಮ ಐತೀರ್ಪಿನಲ್ಲಿ ಬಿಳಿಗುಂಡ್ಲು ಜಲಮಾಪನ ಕೇಂದ್ರಕ್ಕೆ ನೀರು ಹರಿಸಲು ಆದೇಶ ನೀಡಿತು. ಒಟ್ಟು 740 ಟಿ ಎಂಸಿಯಲ್ಲಿ ಕರ್ನಾಟಕ 465 ಟಿಎಂಸಿ ನೀರು ಕೇಳಿತ್ತು. ಆದರೆ ಅದಕ್ಕೆ ಲಭಿಸಿದ್ದು 270 ಟಿಎಂಸಿ ಮಾತ್ರ. ತಮಿಳುನಾಡಿಗೆ ಕಾವೇರಿ ನೀರಿನಲ್ಲಿ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಹಾಗೂ ಪುದುಚೆರಿಗೆ 7 ಟಿಎಂಸಿಯನ್ನು ನ್ಯಾಯಮಂಡಳಿ ನಿಗದಿ ಪಡಿಸಿತು.

2007: ಭಾರತದ ಇಂದ್ರಾ ಕೆ ನೂಯಿ (51) ಅವರು ಆಹಾರ ಮತ್ತು ತಂಪು ಪಾನೀಯಗಳ ಬೃಹತ್ ಬಹುರಾಷ್ಟ್ರೀಯ ಸಂಸ್ಥೆ ಪೆಪ್ಸಿಕೊದ ಅಧ್ಯಕ್ಷೆಯಾಗಿ ಆಯ್ಕೆಯಾದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನೂಯಿ, ಹೊಸ ಹುದ್ದೆಯನ್ನು ಮೇ 2ರಂದು ನಿವೃತ್ತರಾಗುವ ಹಾಲಿ ಅಧ್ಯಕ್ಷ ಸ್ಟೀವನ್ ಎಸ್. ರೈನೆಮಂಡ್ ಅವರಿಂದ ವಹಿಸಿಕೊಳ್ಳುವರು ಎಂದು ಹೂಸ್ಟನ್ನಿನಲ್ಲಿ ಕಂಪೆನಿಯ ಪ್ರಕಟಣೆ ತಿಳಿಸಿತು.

2007: ಬಾಂಗ್ಲಾದೇಶದ ಚುನಾವಣಾ ಆಯೋಗದ ನೂತನ ಮುಖ್ಯ ಚುನಾವಣಾ ಕಮೀಷನರ್ (ಸಿಇಸಿ) ಆಗಿ ನೇಮಕಗೊಂಡಿರುವ ಎ.ಟಿ.ಎಂ. ಶಂಶುಲ್ ಹುದಾ ಮತ್ತು ಉಪ ಚುನಾವಣಾ ಕಮೀಷನರ್ ಸೋಹುಲ್ ಹುಸೇನ್ ಅವರು ಮುಖ್ಯನ್ಯಾಯಾಧೀಶ ಜೆ.ಆರ್. ಮುದಾಸ್ಸಿರ್ ಹುಸೇನ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

2007: ಮಧ್ಯಪ್ರದೇಶದ ಖತ್ನಿಗೆ ಸಮೀಪದ ಘೋರೇಶ್ವರ ಗ್ರಾಮದಲ್ಲಿ ಕೊಳವೆ ಬಾವಿಯ ಒಳಗೆ 56 ಅಡಿ ಆಳಕ್ಕೆ ಬಿದ್ದ 3 ವರ್ಷದ ಪುಟಾಣಿ ಅಮಿತ್ ಖುಷ್ವಾನನ್ನು ಬಾವಿಗೆ ಬಿದ್ದ 12 ಗಂಟೆಗಳ ಬಳಿಕ ಈದಿನ ತುರ್ತು ಕಾರ್ಯಾಚರಣೆ ನಡೆಸಿ ಜೀವಂತವಾಗಿ ಮೇಲೆತ್ತಲಾಯಿತು. ಕಳೆದ ವರ್ಷ ಪ್ರಿನ್ಸ್ ಎಂಬ ಬಾಲಕ ಹರಿಯಾಣದ ಕುರುಕ್ಷೇತ್ರದಲ್ಲಿ ಕೊರೆದು ಹಾಗೆಯೇ ಬಿಟ್ಟಿದ್ದ ಕೊಳವೆ ಬಾವಿಯೊಳಕ್ಕೆ ಬಿದ್ದು, ಇದೇ ರೀತಿ ಪವಾಡಸದೃಶವಾಗಿ ಬದುಕಿದ್ದ. ಕರ್ನಾಟಕದ ಬಾಗಲಕೋಟೆ ಬಳಿ ಇದೇ ರೀತಿ ಮಹಿಳೆಯೊಬ್ಬಳು ಕೊಳವೆ ಬಾವಿ ಪಾಲಾಗಿದ್ದಳು. ನಂತರ ಸುತ್ತಲಿನ ಜನರ ತುರ್ತು ಕಾರ್ಯಾಚರಣೆಯಿಂದಾಗಿ ಆಕೆಯೂ ಸಾವನ್ನು ಗೆದ್ದಿದ್ದಳು. ಘೋರೇಶ್ವರದಲ್ಲೂ ಕೊಳವೆ ಬಾವಿಗೆ ಸಮಾನಾಂತರವಾಗಿ ಬಾವಿ ಕೊರೆದು ಅಮಿತನನ್ನು ಮೇಲಕ್ಕೆ ಎತ್ತಲಾಯಿತು.

2007: ಸೈಪ್ರಸ್ಸಿನ ಮಾರ್ಕೊಸ್ ಬಗ್ಮಾಟಿಸ್ ಅವರು ಕ್ರೊಯೇಷಿಯಾದ ಜಗ್ರೆಬ್ನಲ್ಲಿ ನಡೆದ ಜಗ್ರೆಬ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

2007: ಚಂಡೀಗಢ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ವಿಜಾಪುರ ಜಿಲ್ಲೆ ಬಸವನಬಾಗೇವಾಡಿಯವರಾದ ಕನ್ನಡಿಗ ಡಾ. ಎಸ್.ಕೆ. ಕುಲಕರ್ಣಿ ನೇಮಕಗೊಂಡರು.

2006: ಅಂತರ್ಜಾಲ ತಾಣಗಳ ಹುಡುಕಾಟ ನಡೆಸುವ ಗೂಗಲ್ ವೆಬ್ ಸೈಟಿಗೆ ಪ್ರತಿಯಾಗಿ ಕೊಸಮಿಕ್ಸ್ ವೆಬ್ ಸೈಟನ್ನು ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ಮೂಲದ ತಂತ್ರಜ್ಞರಾದ ಆನಂದ ರಾಜಾರಾಮನ್ ಮತ್ತು ವೆಂಕಿ ಹರಿನಾರಾಯಣ ಪ್ರಕಟಿಸಿದರು. ಇವರಿಬ್ಬರೂ ಸ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಪ್ರಸ್ತುತ ಗೂಗಲ್ಸ್ ವೆಬ್ ಸೈಟ್ ನಿರ್ಮಿಸಿರುವ ಲಾರ್ರೆ ಪೆಜ್ ಮತ್ತು ಸೆರ್ಜ್ ಬಿನ್ ಅವರ ಸಹಪಾಠಿಗಳಾಗಿದ್ದವರು.

2006: ಹೊಸನಗರ ಧರ್ಮಚಕ್ರ್ರ ಟ್ರಸ್ಟ್ ವತಿಯಿಂದ ಕಾಸರಗೋಡು ಜಿಲ್ಲೆಯ ಮುಜುಂಗಾವಿನಲ್ಲಿ ಸ್ಥಾಪನೆಯಾದ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯಕ್ಕೆ ಅಡ್ಯನಡ್ಕ ಸಮೀಪದ ಮುಳಿಯಾಲದ ಈಶ್ವರ ಭಟ್ ಅವರು ಕಣ್ಣು ದಾನ ಮಾಡುವ ಮೂಲಕ ಇಲ್ಲಿನ ಪ್ರಥಮ ನೇತ್ರದಾನಿ ಎನಿಸಿಕೊಂಡರು. 84ನೇ ವಯಸ್ಸಿನಲ್ಲಿ ನಿಧನರಾದ ಅವರು ಈ ಮೂಲಕ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಗೆ ನೀಡಿದ ವಾಗ್ದಾನ ಈಡೇರಿತು.

1953: ವಾಲ್ಟ್ ಡಿಸ್ನಿ ಅವರ ಪೀಟರ್ ಪಾನ್ ಚಿತ್ರದ ಪ್ರದರ್ಶನ ನ್ಯೂಯಾರ್ಕಿನ ರೋಕ್ಸಿ ಥಿಯೇಟರಿನಲ್ಲಿ ಆರಂಭವಾಯಿತು.

1943: ರಂಗಕರ್ಮಿ, ಆದರ್ಶ ಶಿಕ್ಷಕ, ನೈತಿಕ ಮೌಲ್ಯಗಳ ಬೋಧಕ ಆರ್. ಎನ್. ಈಶ್ವರಪ್ಪ ಅವರು ಮರುಳಪ್ಪ- ಸಿದ್ದಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆ ರಾಗಿ ಹೊಸಹಳ್ಳಿಯಲ್ಲಿ ಜನಿಸಿದರು.

1937: ಚಾರ್ಲಿ ಚಾಪ್ಲಿನ್ ಅವರ ಮೊತ್ತ ಮೊದಲ ಟಾಕಿ ಚಿತ್ರ `ಮಾಡರ್ನ್ ಟೈಮ್ಸ್' ಬಿಡುಗಡೆಗೊಂಡಿತು.

1936: ನಿತ್ಯೋತ್ಸವ ಖ್ಯಾತಿಯ ಹಿರಿಯ ಕವಿ ನಿಸಾರ್ ಅಹಮದ್ ಹುಟ್ಟಿದ ದಿನ. ಬೆಂಗಳೂರು ಜಿಲ್ಲೆಯ ದೇವನಹಳಿಯಲ್ಲಿ ಷೇಕ್ ಹೈದರ್- ಹಮೀದಾ ಬೇಗಂ ದಂಪತಿಯ ಪುತ್ರನಾಗಿ ಜನಿಸಿದ ನಿಸಾರ್ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡ ಅವರಿಗೆ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇತ್ತೀಚೆಗಿನ ಗೌರವ.

1930: ಕಲಾವಿದ ಎಚ್. ಎಸ್. ರಂಗನಾಥದಾಸ್ ಜನನ.

1922: ಖಿಲಾಫತ್ ಚಳವಳಿ ಮತ್ತು ಕಾಂಗ್ರೆಸ್ಸಿನ ಸದಸ್ಯರು ಉತ್ತರ ಪ್ರದೇಶದ ಗೋರಖ್ ಪುರದ ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 22 ಮಂದಿ ಪೊಲೀಸರನ್ನು ಸುಟ್ಟು ಹಾಕಿದರು. ಮಹಾತ್ಮಾ ಗಾಂಧಿಯವರು ಇದೇ ಕಾರಣಕ್ಕಾಗಿ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು.

1922: ಡೆ ವಿಟ್ ವ್ಯಾಲೇಸ್ ಅವರು ಜನರಿಗೆ ಮನರಂಜನೆ, ಮಾಹಿತಿ ಹಾಗೂ ಸ್ಫೂರ್ತಿ ನೀಡಲು `ರೀಡರ್ಸ್ ಡೈಜೆಸ್ಟ್' ಆರಂಭಿಸಿದರು.

1881: ಸ್ಕಾಟ್ಲೆಂಡಿನ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ ಲಂಡನ್ನಿನಲ್ಲಿ ತನ್ನ 85ನೇ ವಯಸ್ಸಿನಲ್ಲಿ ಮೃತನಾದ. `ಸೇಜ್ ಆಫ್ ಚೆಲ್ಸಿಯಾ' ಎಂದೇ ಈತ ಖ್ಯಾತನಾಗಿದ್ದ.

1765: ಬಂಗಾಳದ ಆಡಳಿತಗಾರ ಮೀರ್ ಜಾಫರ್ ಮೃತನಾದ. ತನ್ನ ಬೆಂಬಲಿಗ ವಂಚಕರನ್ನು ಸೇರಿಸಿಕೊಂಡು ಬ್ರಿಟಿಷರೊಂದಿಗೆ ಷಾಮೀಲಾದ ಈತ 1757ರ ಜೂನಿನಲ್ಲಿ ನಡೆದ ಪ್ಲಾಸಿ ಕದನದಲ್ಲಿ ನಿಷ್ಕ್ರಿಯ ನಿಲುವು ತಾಳಿದ. ಈ ಕದನದಲ್ಲಿ ಸೋತ ಸಿರಾಜುದ್ದೌಲ ಪದಚ್ಯುತನಾದ. ಬ್ರಿಟಿಷರು ಮೀರ್ ಜಾಫರನನ್ನೇ ಬಂಗಾಳದ ಆಡಳಿತಗಾರನನ್ನಾಗಿ ನೇಮಿಸಿದರು. ಸಾಯುವ ಕಾಲಕ್ಕೆ ಈತ ಅಫೀಮು (ಮಾದಕ ದ್ರವ್ಯ) ವ್ಯಸನಿಯೂ ಕುಷ್ಠರೋಗ ಪೀಡಿತನೂ ಆಗಿ ನರಳಿದ್ದ.

1762: ಅಹಮದ್ ಶಹಾ ಅಬ್ದಾಲಿ ಲೂಧಿಯಾನ ಸಮೀಪದ ಕುಪ್ನಲ್ಲಿ ನಡೆದ ಸಮರದಲ್ಲಿ ಸಿಖ್ಖರ ಮಾರಣಹೋಮ ನಡೆಸಿದ. ಸಿಖ್ಖರು ಆತನ ಸಾರ್ವಭೌಮತ್ವ ಅಂಗೀಕರಿಸಲು ನಿರಾಕರಿಸಿದ್ದಕ್ಕಾಗಿ ಸುಮಾರು 10,000ದಿಂದ 30,000ದಷ್ಟು ಸಿಖ್ಖರನ್ನು ಕೊಲೆಗೈಯಲಾಯಿತು. ಅದೇ ವರ್ಷ ಏಪ್ರಿಲಿನಲ್ಲಿ ಅಬ್ದಾಲಿ ಅಮೃತಸರದ ಮೇಲೆ ದಾಳಿ ನಡೆಸಿ ಹರ್ಮಂದಿರವನ್ನು ನೆಲಸಮಗೊಳಿಸಿದ.

No comments:

Advertisement