Wednesday, March 10, 2010

ಇಂದಿನ ಇತಿಹಾಸ History Today ಮಾರ್ಚ್ 10

ಇಂದಿನ ಇತಿಹಾಸ

ಮಾರ್ಚ್ 10

'ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘ ನೀಡುವ 'ಸವಿತಾ ಕಲಾ ರತ್ನ' ಪ್ರಶಸ್ತಿಯನ್ನು ಸಂಗೀತ ವಿದ್ವಾಂಸ ಡಾ. ಎಂ.ಬಾಲಮುರಳಿ ಕೃಷ್ಣ ಅವರಿಗೆ ಬೆಂಗಳೂರಿನ ಪುರಭವನದಲ್ಲಿ ಪ್ರದಾನ ಮಾಡಲಾಯಿತು. ಡಾ. ಬಾಲಮುರಳಿಕೃಷ್ಣ ಅವರೊಂದಿಗೆ ಶಾಸ್ತ್ರೀಯ ವಯೋಲಿನ್ ವಾದಕ ಎಂ.ಚಂದ್ರಶೇಖರನ್, ಡೋಲು ವಾದಕ ಡಾ. ಎ.ಆರ್.ಮುನಿರತ್ನಂ ಅವರಿಗೂ 'ಸವಿತಾ ಕಲಾ ರತ್ನ' ಪುರಸ್ಕಾರ ನೀಡಿ ಸಂಘವು ಗೌರವ ಸಲ್ಲಿಸಿತು

2009: ಶಂಕಿತ ಎಲ್‌ಟಿ ಟಿಇ ಆತ್ಮಾಹುತಿ ಬಾಂಬರ್ ದಕ್ಷಿಣ ಶ್ರೀಲಂಕಾದ ಮಟಾರ ನಗರದ ಮಸೀದಿಯೊಂದರ ಮೇಲೆ ನಡೆಸಿದ ದಾಳಿಯಲ್ಲಿ 15 ಜನ ಮೃತರಾಗಿ ಸಚಿವರೊಬ್ಬರು ಸೇರಿ ಐವತ್ತು ಮಂದಿ ಗಾಯಗೊಂಡ ಘಟನೆ ಘಟಿಸಿತು. ಈದ್ ಮಿಲಾದ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಜನರು ಸೇರಿದ್ದಾಗ ಆತ್ಮಾಹುತಿ ಬಾಂಬರ್ ದಾಳಿ ನಡೆಯಿತು ಎಂದು ಪೊಲೀಸರು ಹೇಳಿದರು. ಎಲ್‌ಟಿಟಿಇಗೆ ಸೇರಿದ್ದ ಬಾಂಬರ್ ಮಸೀದಿಯತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದ ಆರು ಸಚಿವರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿದ ಎಂದು ಸೇನಾ ಮೂಲಗಳು ಹೇಳಿದವು.

2009: ಹಣವನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಚಾಂದ್ರಮಾನ ಹೊಸ ವರ್ಷ ಆಚರಣೆಗಾಗಿ ಮನೆಯಲ್ಲಿರುವ 70 ವರ್ಷ ವಯಸ್ಸಿನ ತಾಯಿಯ ಜತೆಗೂಡಲು 800 ಕಿ.ಮೀ. ದೂರವನ್ನು ಸತತ 34 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಕ್ರಮಿಸಿದ ಘಟನೆ ಚೀನಾದಲ್ಲಿ ನಡೆಯಿತು. ಲೀ ಹೈಟಾವೊ (30) ಕಾಲ್ನಡಿಗೆಯಲ್ಲಿ 800 ಕಿ.ಮೀ. ಕ್ರಮಿಸಿ ಮನೆ ಸೇರಿದ ವ್ಯಕ್ತಿ. ಮಧ್ಯ ಚೀನಾದ ಹೆನನ್ ಪ್ರಾಂತ್ಯದವನಾದ ಹೈಟಾವೋ ವೃತ್ತಿಯಲ್ಲಿ ವಲಸೆ ಕಾರ್ಮಿಕ. ಬೇಸಗೆಯ ಹಬ್ಬವನ್ನು ತನ್ನ ತಾಯಿ ಜೊತೆ ಸೇರಿ ಆಚರಿಸಲು ಬೀಜಿಂಗ್‌ನಿಂದ ಫೆ. 3ರಂದು ಕಾಲ್ನಡಿಗೆ ಆರಂಭಿಸಿ ಮಾರ್ಚ್ 9ರಂದು ಝೆಂಗ್‌ರೆವ್‌ನಲ್ಲಿರುವ ಮನೆಗೆ ತಲುಪಿದ್ದಾನೆ ಎಂದು ದಾಹೆ ದಿನಪತ್ರಿಕೆ ವರದಿ ಮಾಡಿತು. ಮಂಗೋಲಿಯಾದ ಸ್ವಾಯತ್ತ ವಲಯದಲ್ಲಿ ವೆಲ್ಡರ್ ಆಗಿ ಲೀ ಹೈಟಾವೋ ದುಡಿಯುತ್ತಿದ್ದ. ಜನವರಿ 21ರಂದು ಉತ್ತರ ಚೀನಾದ ಬಾಟೋವ್ ರೈಲ್ವೆ ನಿಲ್ದಾಣದಲ್ಲಿ ಊರಿಗೆ ತೆರಳಲು ಟಿಕೆಟ್ ಖರೀದಿಸುವ ಮೊದಲು ಆತನ ಬಳಿಯಲ್ಲಿದ್ದ 2,000 ಯುವಾನ್ (290 ಡಾಲರ್) ಮೊತ್ತದ ಹಣ ಕಳ್ಳತನವಾಗಿತ್ತು. ಆನಂತರ ಬೀಜಿಂಗ್‌ನಿಂದ ಮನೆಗೆ ಕಾಲ್ನಡಿಗೆಯಲ್ಲಿ ಹೋಗಲು ನಿರ್ಧರಿಸಿದ ಲೀ ಪ್ರಯಾಣದ ಉದ್ದಕ್ಕೂ ಖಾಲಿ ನೀರಿನ ಬಾಟಲಿಗಳನ್ನು ಹೆಕ್ಕಿ ಅವುಗಳ ಮಾರಾಟದಿಂದ ಬಂದ ಹಣದಿಂದ ಆಹಾರ ಸೇವಿಸುತ್ತಿದ್ದ. ರಾತ್ರಿ ವೇಳೆ ತುಂಬಾ ಚಳಿ ಇದ್ದುದರಿಂದ ಹಗಲು ವಿಶ್ರಾಂತಿ ಪಡೆಯುತ್ತಿದ್ದ ಎಂದು ಓರಿಯೆಂಟ್ ಪತ್ರಿಕೆ ವರದಿ ಹೇಳಿತು.

2009: ಬಡ್ತಿಗೆ ಪದವೀಧರರು ಹಾಗೂ ಡಿಪ್ಲೊಮಾ ಎಂಜಿನಿಯರುಗಳನ್ನು ಸರ್ಕಾರ ಸಮಾನವಾಗಿ ಪರಿಗಣಿಸಿದರೆ ಅದು ಅಸಾಂವಿಧಾನಿಕ ಎನಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಡಿಪ್ಲೊಮಾ ಎಂಜಿನಿಯರುಗಳನ್ನು ಪದವೀಧರರಿಗೆ ಸಮಾನರೆಂದು ಪರಿಗಣಿಸಿದರೆ ಸಂವಿಧಾನದ 14 ನೇ ಪರಿಚ್ಛೇದವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂಬ ಪದವೀಧರರ ವಾದವನ್ನು ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಹಾಗೂ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠ ತಳ್ಳಿಹಾಕಿತು. ಸಮಾನರನ್ನು ಅಸಮಾನರಂತೆ ಪರಿಗಣಿಸುವುದು ಮಾತ್ರವಲ್ಲ; ಅಸಮಾನರನ್ನು ಸಮಾನರೆಂಬಂತೆ ಪರಿಗಣಿಸುವುದು ಸಂವಿಧಾನ ಉಲ್ಲಂಘಿಸಿದಂತಾಗುತ್ತದೆ ಎಂದು ದಿಲೀಪ್ ಕುಮಾರ್ ಜಾರ್ಜ್ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಲಾಗಿತ್ತು.

2009: ಇಂಗ್ಲಿಷ್ ಸಾಹಿತ್ಯ ಲೋಕದ ಮೇರು ಪರ್ವತ ಹಾಗೂ ಶ್ರೇಷ್ಠ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರನ ನಾಟಕಗಳಿಗೆ ಮೀಸಲಾಗಿದ್ದ ಮೊದಲ ರಂಗಭೂಮಿ ಎಂದೇ ನಂಬಲಾದ ಸ್ಥಳವನ್ನು ಉತ್ಖನನದ ಮೂಲಕ ಪತ್ತೆ ಹಚ್ಚಿರುವುದಾಗಿ ಪುರಾತತ್ವ ಶಾಸ್ತ್ರಜ್ಞರ ತಂಡವೊಂದು ಪ್ರಕಟಿಸಿತು. ಈ ರಂಗಸ್ಥಳವನ್ನು 1576ರಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಯಿತು. ಇದು ಪೂರ್ವ ಲಂಡನ್ನಿನ ಶೋರ್‌ಡಿಚ್‌ನಲ್ಲಿರುವ ಜಗತ್ತಿನ ಮೊದಲ ರಂಗಸ್ಥಳ ಎಂದೇ ಈತನಕ ನಂಬಲಾಗಿದ್ದ ಕಟ್ಟಡದ ಗೋಡೆಗೆ ಅಂಟಿಕೊಂಡೇ ಇರುವುದು ಬೆಳಕಿಗೆ ಬಂತು.

2009: 'ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘ ನೀಡುವ 'ಸವಿತಾ ಕಲಾ ರತ್ನ' ಪ್ರಶಸ್ತಿಯನ್ನು ಸಂಗೀತ ವಿದ್ವಾಂಸ ಡಾ. ಎಂ.ಬಾಲಮುರಳಿ ಕೃಷ್ಣ ಅವರಿಗೆ ಬೆಂಗಳೂರಿನ ಪುರಭವನದಲ್ಲಿ ಪ್ರದಾನ ಮಾಡಲಾಯಿತು. ಡಾ. ಬಾಲಮುರಳಿಕೃಷ್ಣ ಅವರೊಂದಿಗೆ ಶಾಸ್ತ್ರೀಯ ವಯೋಲಿನ್ ವಾದಕ ಎಂ.ಚಂದ್ರಶೇಖರನ್, ಡೋಲು ವಾದಕ ಡಾ. ಎ.ಆರ್.ಮುನಿರತ್ನಂ ಅವರಿಗೂ 'ಸವಿತಾ ಕಲಾ ರತ್ನ' ಪುರಸ್ಕಾರ ನೀಡಿ ಸಂಘವು ಗೌರವ ಸಲ್ಲಿಸಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಭಾರತಕ್ಕೆ ಎಂಟು ಬಾರಿ ಚಿನ್ನದ ಪದಕಗಳನ್ನು ತಂದುಕೊಟ್ಟ ಹಾಕಿ ಆಟಗಾರರು 1928ರಲ್ಲಿ ರಂಗಪ್ರವೇಶ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಸ್ಯಾಂಟಿಯಾಗೋದಲ್ಲಿ ಒಲಿಂಪಿಕ್ಸ್ ಪ್ರವೇಶ ಯತ್ನದಲ್ಲಿ ವಿಫಲರಾದರು. ಸ್ಯಾಂಟಿಯಾಗೋದ ಪ್ರಿನ್ಸ್ ಆಫ್ ವೇಲ್ಸ್ ಕಂಟ್ರಿ ಕ್ಲಬ್ ಮೈದಾನದಲ್ಲಿ ನಡೆದ ವಿಶ್ವ ಹಾಕಿ ಅರ್ಹತಾ ಪಂದ್ಯದ ಅಂತಿಮ ಸುತ್ತಿನಲ್ಲಿ, ಪ್ರಭೋದ್ ಸಿಂಗ್- ದಿಲೀಪ್ ಟರ್ಕಿ ಬಳಗವನ್ನು 2-0 ಗೋಲುಗಳಿಂದ ಪರಾಭವಗೊಳಿಸುವ ಮೂಲಕ ಬ್ರಿಟನ್ ಭಾರತದ ಒಲಿಂಪಿಕ್ಸ್ ಪ್ರವೇಶ ಕನಸನ್ನು ನುಚ್ಚುನೂರು ಮಾಡಿತು. ಬ್ಯಾರಿ ಮಿಡ್ಲ್ ಟನ್ ಮತ್ತು ರಿಚರ್ಡ್ ಮ್ಯಾಂಟೆಲ್ ಅವರು ಬ್ರಿಟನನ್ನು ಗೆಲುವಿನತ್ತ ಮುನ್ನಡೆಸಿ, ತಂಡಕ್ಕೆ 2008ರ ಬೀಜಿಂಗ್ ಒಲಿಂಪಿಕ್ಸ್ ಪ್ರವೇಶಕ್ಕೆ ಅರ್ಹತೆ ತಂದುಕೊಟ್ಟರು. ಕಳೆದ 80 ವರ್ಷಗಳ ಅವದಿಯಲ್ಲಿ ಭಾರತ ಹಾಕಿ ತಂಡ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆಯದಿರುವುದು ಇದೇ ಮೊದಲು. 1928 ರಿಂದಲೂ ಭಾರತ ಹಾಕಿ ತಂಡ ಒಲಿಂಪಿಕ್ ಕೂಟದ ಅವಿಭಾಜ್ಯ ಅಂಗವಾಗಿ ಬದಲಾಗಿತ್ತು.

2008: ಮೇಘಾಲಯದಲ್ಲಿ ನೂತನ ಸರ್ಕಾರ ರಚಿಸುವುದಕ್ಕೆ ಬಹುಮತ ಹೊಂದಿರದ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ. ಡಿ. ಲಪಾಂಗ್ ಅವರು ಈದಿನ ಸಂಜೆ ಅಧಿಕಾರ ಸ್ವೀಕರಿಸಿದರು. ಮಾ.3ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ 60 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗಳಿಸಿತ್ತು. ಏಕೈಕ ದೊಡ್ಡ ಪಕ್ಷದ ನೆಲೆಯಲ್ಲಿ ರಾಜ್ಯಪಾಲ ಎಸ್. ಎಸ್. ಸಿಧು ಅವರು ಸರ್ಕಾರ ರಚನೆಗೆ ಲಪಾಂಗ್ ಅವರಿಗೆ ಆಹ್ವಾನ ನೀಡಿದರು.

2008: ಮುಂಬೈ ಸರಣಿ ಬಾಂಬ್ ಸ್ಫೋಟ ಘಟನೆಗೆ ಮುನ್ನ ನಟ ಸಂಜಯ್ ದತ್ ಗೆ ಎಕೆ-56 ರೈಫಲ್ ಒದಗಿಸಿದ ಆಪಾದನೆ ಹೊತ್ತ ಚಿತ್ರ ನಿರ್ಮಾಪಕ ಸಮೀರ್ ಹಿಂಗೋರಾ ಅವರ ವಿದೇಶಯಾನಕ್ಕೆ ಅವಕಾಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

2008: ಮಲೇಷ್ಯಾ ಪ್ರಧಾನಿಯಾಗಿ ಸತತ ಎರಡನೇ ಅವಧಿಗೆ ಅಬ್ದುಲ್ಲಾ ಅಹ್ಮದ್ ಬದಾವಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಸಂವಿಧಾನ ಮುಖ್ಯಸ್ಥರಾದ ದೊರೆ ಮಿಜಾನ್ ಜೈನಲ್ ಅಬಿದಿನ್ ಮತ್ತು ಡಜನ್ನಿನಷ್ಟು ಸರ್ಕಾರಿ ಅತಿಥಿ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಡಳಿತರೂಢ ರಾಜಕೀಯ ಗುಂಪಿನ ನಾಯಕತ್ವವನ್ನು ತ್ಯಜಿಸಬೇಕೆಂಬ ವಿರೋಧಿಗಳ ಒತ್ತಾಯದ ನಡುವೆ ಬದಾವಿ 2ನೇ ಅವಧಿಗೂ ಪ್ರಧಾನಿಯಾಗಿ ಮುಂದುವರೆದರು.

2007: ಮುಖೇಶ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ಮತ್ತು ಇಂಡಿಯನ್ ಪೆಟ್ರೊ ಕೆಮಿಕಲ್ಸ್ ಕಾರ್ಪೋರೇಷನ್ ಲಿಮಿಟೆಡ್ (ಐಪಿಸಿಎಲ್) ವಿಲೀನಕ್ಕೆ ಉಭಯ ಕಂಪೆನಿಗಳ ನಿರ್ದೇಶಕರ ಮಂಡಳಿ ಒಮ್ಮತದ ಒಪ್ಪಿಗೆ ನೀಡಿದವು. ಈ ವಿಲೀನದಿಂದಾಗಿ ಆರ್ ಐ ಎಲ್ ಒಂದು ಲಕ್ಷ ಕೋಟಿ ರೂಪಾಯಿ ಬಂಡವಾಳದ ಕಂಪೆನಿಯಾಗಿ ಹೊರಹೊಮ್ಮುವುದು.

2007: ಖ್ಯಾತ ರಂಗಭೂಮಿ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಂದೋಡಿ ಶಾಂತರಾಜ್ (75) ನಿಧನರಾದರು. ಶಾಂತರಾಜ್ ಅವರು ಚಿಂದೋಡಿ ಲೀಲಾ ಅವರ ಅಣ್ಣ. ಕನ್ನಡ ರಂಗಭೂಮಿ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶಾಂತರಾಜ್ ಟಿಪ್ಪು ಸುಲ್ತಾನ್ ನಾಟಕದಲ್ಲಿ ಮೀರ್ ಸಾದಕ್ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರು.

2007: ಮೇಘಾಲಯದ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿದ್ದ ಹಗ್ಗ ಜಗ್ಗಾಟ ಕೊನೆಗೊಂಡು ಕ್ಷಿಪ್ರ ಬೆಳವಣಿಗೆಯಲ್ಲಿ ಡಿ.ಡಿ. ಲಪಾಂಗ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2007: ಉತ್ತರ ಪ್ರದೇಶದ ಬಾಬನ್ ಪರ್ವ ಗ್ರಾಮದ ರಾಮ್ ಜಿ ದುಬೇ ಅವರ ಪತ್ನಿ 21ರ ಹರೆಯದ ಬಬಿತಾ ಎಂಬ ಮಹಿಳೆ ಐವರು ಮಕ್ಕಳಿಗೆ ಜನ್ಮನೀಡಿದಳು. ಮೂರು ಹೆಣ್ಣು, ಎರಡು ಗಂಡು ಮಗುವಾಗಿದ್ದು ಎಲ್ಲವೂ ಆರೋಗ್ಯಪೂರ್ಣವಾಗಿದ್ದು ಎಲ್ಲವೂ ತಲಾ ಒಂದು ಕಿ.ಗ್ರಾಂ. ತೂಗುತ್ತಿದ್ದವು.

2007: ಪ್ರಚಾರ ಪಡೆಯುವ ಸಲುವಾಗಿ ಉಗ್ರಗಾಮಿಗಳ ಜೊತೆಗೆ `ನಕಲಿ ಘರ್ಷಣೆ' ದಾಖಲೆಗಳನ್ನು ಸೃಷ್ಟಿಸಿ `ನಕಲಿ ಘರ್ಷಣೆ ಬ್ರಿಗೇಡಿಯರ್' ಎಂದೇ ಖ್ಯಾತರಾದ ಸುರೇಶ ಎಸ್. ರಾವ್ ಅವರಿಗೆ ಈ ಅಪರಾಧಕ್ಕಾಗಿ ವಿಧಿಸಲಾಗಿದ್ದ ಸೇವೆಯಿಂದ ವಜಾ ಶಿಕ್ಷೆಯನ್ನು ಸೇನಾ ನ್ಯಾಯಾಲಯವು ಸ್ಪಲ್ಪ ಕಡಿಮೆಗೊಳಿಸಿ, ತೀಕ್ಷ್ಣ ವಾಗ್ದಂಡನೆ ಹಾಗೂ 7 ವರ್ಷಗಳ ಹಿರಿತನ ಕಡಿತದ ಶಿಕ್ಷೆಗೆ ಗುರಿಪಡಿಸಿತು. ಅವರನ್ನು ಕೇಂದ್ರ ಭಾರತದಲ್ಲಿನ ವಿಭಾಗದ ಡೆಪ್ಯುಟಿ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ನೇಮಿಸಲಾಯಿತು. ರಾವ್ ಮತ್ತು ಅವರ ಬೆಟಾಲಿಯನ್ ನ ಕಮಾಂಡರುಗಳಲ್ಲಿ ಒಬ್ಬರಾದ ಕರ್ನಲ್ ಎಚ್.ಎಸ್. ಕೊಹ್ಲಿ ಅವರನ್ನು ಉಗ್ರಗಾಮಿಗಳ ಜೊತೆಗೆ `ನಕಲಿ ಘರ್ಷಣೆ' ದಾಖಲೆ `ಸೃಷ್ಟಿ' ಅಪರಾಧಕ್ಕಾಗಿ ಸೇನಾ ನ್ಯಾಯಾಲಯವು ವಿಚಾರಣೆಗೆ ಗುರಿಪಡಿಸಿ, ತಪ್ಪಿಸಸ್ಥರೆಂದು ತೀರ್ಮಾನಿಸಿತ್ತು. ಸತ್ತ ಉಗ್ರಗಾಮಿಗಳ ಚಿತ್ರಗಳನ್ನು ಹೊಂದಿಸಿ ಉಗ್ರಗಾಮಿಗಳ ಜೊತೆ ಘರ್ಷಣೆ ನಡೆಸಿದಂತೆ ದಾಖಲೆ ಸೃಷ್ಟಿಸುವ ಮೂಲಕ ಇವರು ಪ್ರಚಾರ ಪಡೆದುಕೊಳ್ಳುತ್ತಿದ್ದರು. 2003ರಲ್ಲಿ ಅಸ್ಸಾಮಿನ ಕಾಚಾರ್ ಜಿಲ್ಲೆಯಲ್ಲಿ ವಿವಿಧ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ತೀವ್ರ ರೀತಿಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಇವರು ಈ ಕೃತ್ಯ ಎಸಗಿದ್ದರು. ಈಗ ಸೇನಾ ಹಿರಿತನ ಕಡಿತ ಶಿಕ್ಷೆಯಿಂದ ಅಪರಾಧಿ ಬ್ರಿಗೇಡಿಯರ್ ಗೆ ಅಂದಾಜು 7ರಿಂದ 8 ಲಕ್ಷ ರೂಪಾಯಿಗಳಷ್ಟು ನಿವೃತ್ತಿ ಕಾಲದ ಲಾಭಗಳು ಕೈತಪ್ಪುವುವು.

2006: ಫೋಬ್ಸ್ ನಿಯತಕಾಲಿಕ ಹೊಸದಾಗಿ ಬಿಡುಗಡೆ ಮಾಡಿದ ಈ ವರ್ಷದ ವಿಶ್ವದ ಕೋಟ್ಯಧಿಪತಿಗಳ ಪಟ್ಟಿಗೆ ಹೊಸದಾಗಿ 10 ಭಾರತೀಯರ ಹೆಸರು ಸೇರಿತು. ಉಕ್ಕು ಉದ್ಯಮದ ದೊರೆ ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಜಗತ್ತಿನ ಐದನೇ ಅತಿದೊಡ್ಡ ಶ್ರೀಮಂತ ಎಂಬ ಗೌರವಕ್ಕೆ ಪಾತ್ರರಾದರು. 5000 ಕೋಟಿ ಡಾಲರ್ (2.25 ಲಕ್ಷ ಕೋಟಿ ರೂಪಾಯಿ) ಒಡೆಯ ಮೈಕ್ರೋಸಾಫ್ಟ್ ಉದ್ಯಮಿ ಬಿಲ್ ಗೇಟ್ಸ್ ಪ್ರಥಮ ಸ್ಥಾನದ ಗೌರವ ಪಡೆದರು.

2006: ಕಾರ್ಮಿಕ ಕಾಯ್ದೆ ಉಲ್ಲಂಘನೆ ಮತ್ತು ತಮ್ಮ ನೌಕರರಿಗೆ ವಿಮಾ ಸವಲತ್ತು ಒದಗಿಸಲು ವಿಫಲರಾದುದಕ್ಕಾಗಿ ಖ್ಯಾತ ಪಾಪ್ ಹಾಡುಗಾರ ಮೈಕೆಲ್ ಜಾಕ್ಸನ್ ಗೆ ಕ್ಯಾಲಿಫೋರ್ನಿಯಾ ಅಧಿಕಾರಿಗಳು 1,69,000 ಡಾಲರುಗಳ ದಂಡ ವಿಧಿಸಿ, ಜಾಕ್ಸನ್ ಅವರ ನೆದರ್ ಲ್ಯಾಂಡ್ ವ್ಯಾಲಿ ರಾಂಚನ್ನು ಮುಚ್ಚಲು ಆಜ್ಞಾಪಿಸಿದರು.

1985: ಮೆಲ್ಬೋರ್ನಿನಲ್ಲಿ ಪಾಕಿಸ್ಥಾನವನ್ನು ಪರಾಭವಗೊಳಿಸುವ ಮೂಲಕ ಭಾರತವು `ಬೆನ್ಸನ್ ಅಂಡ್ ಹೆಜೆಸ್' ವಿಶ್ವ ಕ್ರಿಕೆಟ್ ಚಾಂಪಿಯನ್ ಶಿಪ್ ಗೆದ್ದುಕೊಂಡಿತು. ರವಿಶಾಸ್ತ್ರಿ ಅವರನ್ನು `ಚಾಂಪಿಯನ್ನರ ಚಾಂಪಿಯನ್' ಎಂದು ಘೋಷಿಸಲಾಯಿತು.

1985: ಕೇವಲ 13 ತಿಂಗಳುಗಳ ಕಾಲ ಸೋವಿಯತ್ ಧುರೀಣರಾಗಿದ್ದ ಕೊನ್ ಸ್ಟಾಂಟಿನ್ ಯು. ಚೆರ್ನೆಂಕೊ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸಾವಿನ ಸುದ್ದಿಯನ್ನು ಮಾರ್ಚ್ 11ರಂದು ಪ್ರಕಟಿಸಲಾಯಿತು. ಪಾಲಿಟ್ ಬ್ಯೂರೋ ಸದಸ್ಯ ಮಿಖಾಯಿಲ್ ಎಸ್. ಗೊರ್ಬಚೆವ್ ಅವರನ್ನು ಚೆರ್ನೆಂಕೊ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.

1982: ಸೂರ್ಯನ ಸುತ್ತ ಸುತ್ತುವ ಒಂಬತ್ತು ಗ್ರಹಗಳು ಸೂರ್ಯನ ಒಂದೇ ಬದಿಯಲ್ಲಿ ಸಾಲಾಗಿ ಕಂಡು ಬಂದವು.

1958: ಶರೋನ್ ಸ್ಟೋನ್ ಹುಟ್ಟಿದರು. ಅಮೆರಿಕಾದ ಚಿತ್ರನಟಿಯಾದ ಈಕೆ `ಬೇಸಿಕ್ ಇನ್ ಸ್ಟಿಂಕ್ಟ್' ಚಿತ್ರದ ಪಾತ್ರದಿಂದ ವಿಶ್ವ ವಿಖ್ಯಾತಿ ಗಳಿಸಿದರು.

1957: ಒಸಾಮಾ ಬಿನ್ ಲಾಡೆನ್ (1957-2001ರಿಂದ ನಾಪತ್ತೆ) ಹುಟ್ಟಿದ ದಿನ. 2001ರ ಸೆಪ್ಟೆಂಬರಿನಲ್ಲಿ ಅಮೆರಿಕಾದ ನ್ಯೂಯಾರ್ಕಿನಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ಉಗ್ರಗಾಮಿ ದಾಳಿಯ ರೂವಾರಿಯಾದ ಈತನಿಗಾಗಿ ನಿತ್ಯ ಹುಡುಕಾಟ ನಡೆದಿದೆ.

1947: ಕಲಾವಿದ ಸಿ. ಚಂದ್ರಶೇಖರ್ ಜನನ.

1944: ಕಲಾವಿದ ಎಂ.ಆರ್. ರಾಜಶೇಖರ ಜನನ.

1928: ಜೇಮ್ಸ್ ಅರ್ಲ್ ರೇ (1928-98) ಹುಟ್ಟಿದ ದಿನ. ಈತ ಅಮೆರಿಕದ ನಾಗರಿಕ ಹಕ್ಕುಗಳ ಧುರೀಣ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಕೊಲೆಗೈದ. ಈ ಅಪರಾಧಕ್ಕಾಗಿ 1969ರಲ್ಲಿ ಈತನಿಗೆ 99 ವರ್ಷಗಳ ಸೆರೆವಾಸ ವಿಧಿಸಲಾಯಿತು.

1921: ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದೇ ಹೆಸರಾಗಿದ್ದ ಎಂ.ವಿ. ರಾಜಮ್ಮ (10-3-1921ರಿಂದ 6-7-2000) ಅವರು ನಂಜಪ್ಪ- ಸುಬ್ಬಮ್ಮ ದಂಪತಿಯ ಮಗಳಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ಅಭಿನಯದ ಗೀಳು ಹತ್ತಿಸಿಕೊಂಡು ವೃತ್ತಿ ರಂಗಭೂಮಿಯಲ್ಲಿ ಖ್ಯಾತಿ ಪಡೆದ ರಾಜಮ್ಮ 1936ರಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಕಾಲಿಟ್ಟರು. `ಸಂಸಾರ ನೌಕೆ' ಅವರು ನಟಿಸಿದ ಮೊದಲ ಚಿತ್ರ. ನಂತರ ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚಿದರು. 1943ರಲ್ಲಿ ರಾಧಾ ರಮಣ ಚಿತ್ರವನ್ನು ನಿರ್ಮಿಸುವ ಮೂಲಕ ಮೊತ್ತ ಮೊದಲ ಮಹಿಳಾ ಚಿತ್ರ ನಿರ್ಮಾತೃ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ರಾಷ್ಟ್ರಪತಿಗಳಪದಕ ಸಹಿತವಾಗಿ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿದವು.

1876: ಮಸಾಚ್ಯುಸೆಟ್ಸ್ ಬೋಸ್ಟನ್ನಿನ ಎಕ್ಸೆಟರ್ ಪ್ಯಾಲೇಸಿನಿಂದ ಕಳುಹಿಸಲಾದ ಮೊತ್ತ ಮೊದಲ ಟೆಲಿಫೋನ್ ಸಂದೇಶವು ಅಲೆಗ್ಸಾಂಡರ್ ಗ್ರಹಾಂಬೆಲ್ನ ಸಹಾಯಕ ಥಾಮಸ್ ವಾಟ್ಸನ್ಗೆ ತಲುಪುವುದರೊಂದಿಗೆ ದೂರವಾಣಿ ಸಂದೇಶವು ಮೊದಲ ಬಾರಿಗೆ ಯಶಸ್ವಿಯಾಗಿ ರವಾನೆಗೊಂಡಿತು. `ಕಮ್ ಹಿಯರ್ ವಾಟ್ಸನ್, ಐ ವಾಂಟ್ ಯೂ' -ಇವು ವಾಟ್ಸನ್ ಕಿವಿಗೆ ತಲುಪಿದ ಮೊತ್ತ ಮೊದಲ ದೂರವಾಣಿ ಮಾತುಗಳು.

No comments:

Advertisement