Saturday, March 27, 2010

ಇಂದಿನ ಇತಿಹಾಸ History Today ಫೆಬ್ರುವರಿ 21

ಇಂದಿನ ಇತಿಹಾಸ

ಫೆಬ್ರುವರಿ 21

ಅತ್ಯಂತ ಕಿರಿಯ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿ ಲಿಮ್ಕಾ ದಾಖಲೆಗೆ ಪಾತ್ರಳಾದ 7 ವರ್ಷದ ಸುಷ್ಮಾವರ್ಮಾ ಲಖನೌನ ತನ್ನ ಸೈಂಟ್ ಮೀರಾ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಲಿಮ್ಕಾ ಪ್ರಮಾಣ ಪತ್ರ ಪಡೆದರು.

2009: ಅತ್ಯಂತ ಕಿರಿಯ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿ ಲಿಮ್ಕಾ ದಾಖಲೆಗೆ ಪಾತ್ರಳಾದ 7 ವರ್ಷದ ಸುಷ್ಮಾವರ್ಮಾ ಲಖನೌನ ತನ್ನ ಸೈಂಟ್ ಮೀರಾ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಲಿಮ್ಕಾ ಪ್ರಮಾಣ ಪತ್ರ ಪಡೆದರು.

2009: ಚೆನ್ನೈಯ ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ನಡೆದ ವಕೀಲರು- ಪೊಲೀಸರ ನಡುವಣ ಮಾರಾಮಾರಿ ಘಟನೆ ತಮಿಳುನಾಡು ರಾಜ್ಯವನ್ನು ಪ್ರಕ್ಷುಬ್ಧ ಸ್ಥಿತಿಗೆ ತಳ್ಳಿತು. ಸೇಲಂನಲ್ಲಿ ಸರ್ಕಾರಿ ವಕೀಲರೊಬ್ಬರನ್ನು ನಿಗೂಢವಾಗಿ ಕೊಲ್ಲಲಾಯಿತು. ರಾಜ್ಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಯಿತು. ಹೈಕೋರ್ರ್ಟಿಗೂ ಈ ಬಿಸಿ ತಟ್ಟಿ, ರಜೆ ಘೋಷಿಸಲಾಯಿತು.

2009: ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ ಕಾಫಿ ಬೆಳೆಗಾರರಿಗೆ ಮಳೆ ವಿಮಾ ಯೋಜನೆ ಜಾರಿಗೆ ಸಂಬಂಧಿಸಿ ಅಂಚೆ ಇಲಾಖೆ ಹಾಗೂ ಅಗ್ರಿಕಲ್ಚರಲ್ ಇನ್ಸುರೆನ್ಸ್ ಕಂಪೆನಿ ಆಫ್ ಇಂಡಿಯ ಲಿ. (ಎಐಸಿಐಎಲ್) ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು. ಬೆಂಗಳೂರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಜಿ.ವಿ.ಕೃಷ್ಣರಾವು ಸಮ್ಮುಖ ಎಐಸಿಐಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಪರ್ಶದ್, ಅಂಚೆ ಇಲಾಖೆ ವ್ಯವಹಾರ ಅಭಿವೃದ್ಧಿ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಕರುಣಾ ಪಿಳ್ಳೈ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. 3 ಜಿಲ್ಲೆಗಳಲ್ಲಿ ಅರೇಬಿಕಾ, ರೊಬೊಸ್ಟ ಕಾಫಿ ಬೆಳೆಗಾರರು ಈ ವಿಮೆ ಪಡೆಯಲು ಅರ್ಹರು. ಜಿಲ್ಲೆಯ ಅಂಚೆ ಕಚೇರಿಗಳಲ್ಲಿ ವಿಮಾ ಪ್ರೀಮಿಯಂ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಮಳೆ ಬೀಳುವ ಹಾಗೂ ಕಾಫಿ ಮೊಗ್ಗು ಬಿಡುವ ಕಾಲಾವಧಿಗೆ ಸಂಬಂಧಿಸಿದಂತೆ ವಿವಿಧ ವಿಮಾ ಸ್ಕೀಮ್‌ಗಳಿವೆ ಎಂದು ತಿಳಿಸಲಾಯಿತು.

2009: 'ಭ್ರಷ್ಟಾಚಾರ ನಿಯಂತ್ರಣ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಪದೇಪದೇ ಅಡ್ಡಿಪಡಿಸ್ದಿದರಿಂದ ಬೇಸತ್ತು ಅಧಿಕಾರಕ್ಕೆ ಬಂದ ಏಳು ತಿಂಗಳ ಬಳಿಕ ರಾಜ್ಯಪಾಲರ ಬಳಿಗೆ ತೆರಳಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದರು. ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ನಗರದ ಸಚಿವಾಲಯ ಕ್ಲಬ್ಬಿನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ತಮ್ಮ ಆಶಯಕ್ಕೆ ತಕ್ಕಂತೆ ಏನೂ ನಡೆಯುತ್ತಿಲ್ಲ ಎಂಬ ಬೇಸರವೇ ಈ ತೀರ್ಮಾನಕ್ಕೆ ಕಾರಣವಾಗಿತ್ತು' ಎಂದು ಹೇಳಿದರು.

2009: ಜ್ಞಾನಪೀಠ ವಿಜೇತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರು ರೂಪಿಸಿದ ಹೊಸ ರೀತಿಯ ನೃತ್ಯ- ನಾಟಕ ಪ್ರಕಾರವಾದ 'ಯಕ್ಷ ರಂಗ'ದ ಉಚಿತ ಪ್ರದರ್ಶನಗಳನ್ನು ಯಾವುದೇ ಹವ್ಯಾಸಿ ತಂಡ ಅಥವಾ ಸಂಸ್ಥೆ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 'ಯಕ್ಷ ರಂಗ'ದ ಉಚಿತ ಪ್ರದರ್ಶನ ನೀಡುವುದು ಕೃತಿಸ್ವಾಮ್ಯ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಎಸ್.ಬಿ.ಸಿನ್ಹಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿತು. ಈ ತೀರ್ಪಿನಿಂದಾಗಿ ಈ ಮುನ್ನ 'ಯಕ್ಷ ರಂಗ'ದ ಹಕ್ಕುಸ್ವಾಮ್ಯ ಮಾಲಿನಿ ಮಲ್ಯ ಅವರಿಗೆ ಸೇರಿದ್ದಾಗಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ತೀರ್ಪು ವಜಾ ಆಯಿತು. 'ಯಕ್ಷ ರಂಗ'ದ ಒಡೆತನದ ಸಂಬಂಧ ಬಿ.ಮಾಲಿನಿ ಮಲ್ಯ ಮತ್ತು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಧ್ಯೆ ವ್ಯಾಜ್ಯ ಇತ್ತು. ಈ ನೃತ್ಯ ಪ್ರಕಾರವನ್ನು ಕಾರಂತರು ತನ್ನ ಹೆಸರಿಗೆ ಉಯಿಲು ಬರೆದಿದ್ದಾರೆ ಎಂದು ಮಾಲಿನಿ ವಾದಿಸಿದ್ದರು. ಅಕಾಡೆಮಿಯು 2001ರ ಸೆ.18 ರಂದು ದೆಹಲಿಯಲ್ಲಿ ನೀಡಿದ ಯಕ್ಷ ರಂಗ ಪ್ರದರ್ಶನವೊಂದರ ವಿರುದ್ಧ ಮಾಲಿನಿ ಅವರು ರಾಜ್ಯದ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯವು ಈ ನೃತ್ಯ ಪ್ರಕಾರದ ಹಕ್ಕುಸ್ವಾಮ್ಯ ಮಾಲಿನಿ ಮಲ್ಯ ಅವರಿಗೇ ಸೇರಿರುತ್ತದೆ ಎಂದು ತೀರ್ಪು ನೀಡಿತ್ತು. ಆನಂತರ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿ, ಅಲ್ಲಿಯೂ ಮಾಲಿನಿ ಅವರ ಪರವಾಗಿಯೇ ತೀರ್ಪು ಪ್ರಕಟವಾಗಿತ್ತು. ಆದರೆ ಸುಪ್ರೀಂಕೋರ್ಟ್ ಈ ವಾವನ್ನು ಒಪ್ಪಲಿಲ್ಲ. ಸಂಶೋಧನೆ ಅಥವಾ ವಿಮರ್ಶೆ ಒಳಗೊಂಡಂತೆ ಯಾವುದೇ ಖಾಸಗಿ ಉದ್ದೇಶಕ್ಕೆ ಸಾಹಿತ್ಯ ಅಥವಾ ನಾಟಕ ಕೃತಿಯನ್ನು ಬಳಸಿಕೊಂಡು ಅದಕ್ಕೆ ಬೇರೆ ಯಾವುದೇ ಸ್ವರೂಪ ನೀಡಿದರೆ ಅಂತಹ ಸಂದರ್ಭದಲ್ಲಿ ಕೃತಿಸ್ವಾಮ್ಯ ಹಕ್ಕು ಸಾಧಿಸಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

2009: ಇದೊಂದು ಗೋ ವಿವಾಹ. ಹಿಂದಿನ ವಾರ ಒರಿಸ್ಸಾದ ಬೆಹ್ರಾಂಪುರದಲ್ಲಿ ಹಸು ಮತ್ತು ಎತ್ತು ನಡುವೆ ವೇದ ಮಂತ್ರಗಳ ನಡುವೆ ಮದುವೆಯೊಂದು ನಡೆಯಿತು. ಗೋಮಾತೆಗೆ ಹರಕೆ ಹೊತ್ತುಕೊಂಡಿದ್ದ ವೃದ್ಧೆ ಸರೋಜಿನಿ ತನ್ನ ದಶಕಗಳಷ್ಟು ಹಿಂದಿನ ಆಶಯವನ್ನು ಹಸು ಮತ್ತು ದನದ ಮದುವೆಯನ್ನು ವೇದ ಘೋಷಗಳ ಮಧ್ಯೆ ಸಾಂಗೋಪ ಸಾಂಗವಾಗಿ ನೆರವೇರಿಸುವ ಮೂಲಕ ಈಡೇರಿಸಿಕೊಂಡರು. ಇಲ್ಲಿಯ ಕೇದಾರೇಶ್ವರ ದೇವಸ್ಥಾನದಲ್ಲಿ ಪುರೋಹಿತರ ನೇತೃತ್ವದಲ್ಲಿ ಯಜ್ಞ, ಸಂಸ್ಕೃತ ಶ್ಲೋಕಗಳ ಪಠಣ, ವಿಧಿವತ್ತಾದ ವೇದ ಘೋಷಗಳ ಮಧ್ಯೆ ಮದುವೆ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಅತಿಥಿಗಳೂ ಈ ವಿವಾಹಕ್ಕೆ ಸಾಕ್ಷಿಯಾದರು.

2008: ಭೂಕಕ್ಷೆ ಪ್ರವೇಶಿಸಲು ಅಣಿಯಾಗುತ್ತಿದ್ದ ನಿರುಪಯುಕ್ತ ಬೇಹುಗಾರಿಕಾ ಉಪಗ್ರವೊಂದನ್ನು ಅಮೆರಿಕದ ಕ್ಷಿಪಣಿಯು ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಹೊಡೆದುರುಳಿಸಿತು. 133 ನಾವಿಕ ಮೈಲುಗಳ (ಭೂಮಿಯಿಂದ 247 ಕಿ.ಮೀ. ದೂರ) ಅಂತರದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪಗ್ರಹದ ಒಳಗಿನ ವಿಷಾನಿಲ ತುಂಬಿದ ಟ್ಯಾಂಕ್ ಭೂಮಿಯ ಅಥವಾ ಸಾಗರದ ಯಾವ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂಬುದು ತಿಳಿದಿಲ್ಲ ಎಂದು ಪೆಂಟಗಾನ್ ಹೇಳಿಕೆ ನೀಡಿತು. 2006ರಲ್ಲಿ ಅಮೆರಿಕ ತನ್ನ ಬೇಹುಗಾರಿಕಾ ಅವಶ್ಯಕತೆಗಾಗಿ ಇದನ್ನು ಪರೀಕ್ಷಾರ್ಥ ಉಡಾಯಿಸಿತ್ತು. ಉಡಾವಣೆಗೊಂಡ ಕೆಲವೇ ಗಂಟೆಗಳಲ್ಲಿ ಇದು ತನ್ನ ಸಂಪರ್ಕ ಕಡಿದುಕೊಂಡಿತ್ತು. ಇದು ವಿರೋಧಿ ಶಕ್ತಿಗಳ ಕೈವಶವಾಗಬಾರದೆಂಬ ಉದ್ದೇಶದಿಂದ ಹೊಡೆದು ಉರುಳಿಸಿರುವುದಾಗಿ ಅಮೆರಿಕ ಹೇಳಿತು. ಎಸ್ಎಂ-3 ಹೆಸರಿನ ಈ ಕ್ಷಿಪಣಿಯ ತೂಕ 2,270 ಕೆ.ಜಿ.

2008: ಡಾ.ಪು.ತಿ.ನ. ಟ್ರಸ್ಟ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾಕರ ಕಡವೆ ಅವರಿಗೆ `ಡಾ.ಪುತಿನ ಕಾವ್ಯ ಪುರಸ್ಕಾರ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಶ್ರೀಕ್ಷೇತ್ರ ಶ್ರವಣಬೆಳಗೊಳ ಸ್ಥಾಪಿಸಿರುವ `ಚಾವುಂಡರಾಯ ಪ್ರಶಸ್ತಿ'ಯನ್ನು ಹಿರಿಯ ಸಾಹಿತಿ ಬಿ. ದೇವುಕುಮಾರ ಶಾಸ್ತ್ರಿ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್.ರಾವ್ ಅವರು ಅಮೆರಿಕದ ವಿಶ್ವ ಕಲೆ ಮತ್ತು ವಿಜ್ಞಾನ ಅಕಾಡೆಮಿಯ ಫೆಲೋ ಆಗಿ ಆಯ್ಕೆಯಾದರು. ರಾವ್ ಅವರ ಸಾಮಾಜಿಕ ಸೇವೆ, ವೃತ್ತಿಯಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಫೆಲೋ ಆಗಿ ಆಯ್ಕೆ ಮಾಡಲಾಗಿದೆ ಎಂದು ಇಸ್ರೊ ಪ್ರಕಟಣೆ ತಿಳಿಸಿತು.

2007: ಸಮ್ ಜೌತಾ ಎಕ್ಸ್ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜಂಟಿ ತನಿಖೆ ನಡೆಸಬೇಕು ಎಂಬ ಪಾಕ್ ಪ್ರಸ್ತಾವವನ್ನು ಭಾರತ ತಿರಸ್ಕರಿಸಿತು.

2007: ಅಣ್ವಸ್ತ್ರ ಅಪಘಾತ ಅಪಾಯಗಳನ್ನು ಕಡಿಮೆಗೊಳಿಸುವ ಒಪ್ಪಂದ ಒಂದಕ್ಕೆ ಭಾರತ ಮತ್ತು ಪಾಕಿಸ್ಥಾನನವದೆಹಲಿಯಲ್ಲಿ ಸಹಿ ಹಾಕಿದವು. ಭಾರತದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ಸಿ. ಸಿಂಗ್ ಮತ್ತು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ತಾರೀಕ್ ಉಸ್ಮಾನ್ ಹೈದರ್ ಒಪ್ಪಂದಕ್ಕೆ ಸಹಿ ಹಾಕಿದರು.

2007: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಮತ್ತು ವಿರೋಧಿ ಕಾಂಗ್ರೆಸ್ ನಡುವೆ ಉಂಟಾಗಿದ್ದ ಬಿಕ್ಕಟ್ಟು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರ ಮಧ್ಯಪ್ರವೇಶದಿಂದ ಕೊನೆಗೊಂಡಿತು. ಮುಂದಿನ ಅಧಿವೇಶನಕ್ಕೆ ಮುಂಚಿತವಾಗಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ರಾಜ್ಯಪಾಲರು ಪರಿಷತ್ ಸದಸ್ಯರಿಗೆ ಸೂಚಿಸಿದರು.

2007: ಕನ್ನಡಪ್ರಭದ ಮುಖ್ಯವರದಿಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಚ್. ಜಿ. ಪಟ್ಟಾಭಿರಾಮ್ (65) ನಿಧನರಾದರು. ಅಪರಾಧ ವರದಿಗಾರಿಕೆಗೆ ಅವರು ಖ್ಯಾತರಾಗಿದ್ದರು.

2007: ಭಾರತ ತಂಡದ ಮಾಜಿ ಆಟಗಾರ ಸುಜಿತ್ ಅವರು ಸೋಮವಾರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಸುಜಿತ್ ಸೋಮಸುಂದರ್ 1990-91ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಪರ ರಣಜಿ ಪಂದ್ಯದಲ್ಲಿ ಆಡಿದ್ದರು.

2007: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಮತ್ತು ಇತರರ ವಿರುದ್ಧ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿತು. ಕೋರ್ಟ್ ವೆಚ್ಚಕ್ಕಾಗಿ ಅಧಿಕಾರಿಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವಂತೆಯೂ ನ್ಯಾಯಾಲಯ ಸಿದ್ಧಾರ್ಥ ಅವರಿಗೆ ನ್ಯಾಯಾಲಯ ಸೂಚಿಸಿತು. ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗ್ದಿದಾಗ ಕಾಡುಗಳ್ಳ ವೀರಪ್ಪನ್ ಅವರು ಡಾ. ರಾಜಕುಮಾರ್ ಅವರನ್ನು ಅಪಹರಿಸಿ, ಬಿಡುಗಡೆ ಮಾಡಿದ ಪ್ರಕರಣ ಬಗ್ಗೆ ದಿನಕರ್ ಅವರು ಬರೆದ `ವೀರಪ್ಪನ್ಸ್ ಪ್ರೈಸ್ ಕ್ಯಾಚ್: ರಾಜಕುಮಾರ' ಪುಸ್ತಕದಲ್ಲಿ ತಮ್ಮ ಘನತೆಗೆ ಕುಂದು ತರುವಂತಹ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿ ಸಿದ್ಧಾರ್ಥ ಮೊಕದ್ದಮೆ ಹೂಡಿದ್ದರು.

2007: ಹಠಾತ್ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗವು ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗೆ ಏಳು ಹಂತಗಳ ಚುನಾವಣೆಯನ್ನು ಘೋಷಿಸಿತು. ಇದರಿಂದಾಗಿ ವಜಾಭೀತಿಯಲ್ಲಿದ್ದ ಮುಲಯಂ ಸಿಂಗ್ ಸರ್ಕಾರವು ಈ ತೂಗುಕತ್ತಿಯಿಂದ ಸದ್ಯಕ್ಕೆ ಪಾರಾಯಿತು.

2006: ಉದರದ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆ ನಡೆದ ಎರಡು ತಿಂಗಳುಗಳಿಗೂ ಹೆಚ್ಚು ಕಾಲದ ವಿಶ್ರಾಂತಿಯ ಬಳಿಕ ಅಮಿತಾಭ್ ಬಚ್ಚನ್ ಅವರು ಬಾಬುಲ್ ಹಾಡು ಮುದ್ರಣ ಮಾಡಿಸಿಕೊಂಡರು.

2006: ರಾಷ್ಟ್ರದ್ಯಂತ ಕುತೂಹಲ ಕೆರಳಿಸಿದ್ದ, ನೂರಾರು ಜನರ ಸಮ್ಮುಖದಲ್ಲಿ ನಡೆದಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನುಶರ್ಮಾ ಸೇರಿದಂತೆ ಎಲ್ಲ ಒಂಬತ್ತು ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಖುಲಾಸೆ ಮಾಡಿತು. 1999ರ ಏಪ್ರಿಲ್ 29ರ ಮಧ್ಯರಾತ್ರಿ ಜೆಸ್ಸಿಕಾಲಾಲ್ ಕೊಲೆ ನಡೆದಿತ್ತು. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭಾಯನಾ ಅವರು ಸಾಕ್ಷ್ಯಗಳ ಅಭಾವದ ಕಾರಣಕ್ಕಾಗಿ ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾ ಅವರ ಪುತ್ರ ಸಿದ್ಧಾರ್ಥ ವಸಿಷ್ಠ ಯಾನೆ ಮನು ಶರ್ಮಾ ಮತ್ತು ಇತರರನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದರು. ಈ ತೀರ್ಪಿನ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ಭುಗಿಲೆದ್ದು, ಜನ ನೇರವಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪ್ರಕರಣದ ಮರುವಿಚಾರಣೆ ನಡೆಸುವಂತೆ ಆಗ್ರಹಿಸಿ ಪತ್ರಗಳನ್ನು ಬರೆದರು.

1974: ಕಲಾವಿದ ಋತ್ವಿಕ್ ಸಿಂಹ ಜನನ.

1964: ಸುಗಮ ಸಂಗೀತ, ಜಾನಪದ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಸಂಘಟನೆಗಳ ರೂವಾರಿ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಬಿ.ಎಸ್. ನಾರಾಯಣ ಭಟ್- ರುಕ್ಮಿಣಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು.

1961: ಕಲಾವಿದ ಮಂಜುಮಯ್ಯ ಜೆ. ಜನನ.

1947: ಎಡ್ವಿನ್ ಎಚ್ ಲ್ಯಾಂಡ್ ಸಾರ್ವಜನಿಕವಾಗಿ ತನ್ನ ಪೋಲರೈಡ್ ಲ್ಯಾಂಡ್ ಕ್ಯಾಮರಾವನ್ನು ಪ್ರದರ್ಶಿಸಿದ. ಈ ಕ್ಯಾಮರಾ 60 ಸೆಕೆಂಡುಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರ ತೆಗೆದುಕೊಡುವ ಸಾಮರ್ಥ್ಯ ಹೊಂದಿತ್ತು.

1924: ರಾಬರ್ಟ್ ಮುಗಾಬೆ ಹುಟ್ಟಿದ ದಿನ. ಇವರು ಜಿಂಬಾಬ್ವೆಯ ಪ್ರಥಮ ಪ್ರಧಾನಿಯಾಗಿ 1980ರಿಂದ 1987ರ ಅವಧಿಯಲ್ಲಿ ಆಡಳಿತ ನಡೆಸಿದರು.

1916: ಮೊದಲ ಜಾಗತಿಕ ಸಮರ ಕಾಲದ `ವೆರ್ಡನ್ ಹೋರಾಟ' ಆರಂಭವಾಯಿತು. ಫ್ರೆಂಚ್ ಕಡೆಯಲ್ಲಿ ಅಪಾರ ಸಾವು ನೋವು ಆಗುವಂತೆ ಮಾಡುವಲ್ಲಿ ಸಫಲರಾದರೂ ವೆರ್ಡನನ್ನು ವಶಪಡಿಸಿಕೊಳ್ಳುವಲ್ಲಿ ಜರ್ಮನ್ನರು ವಿಫಲರಾದರು.

1894: ಭಾರತೀಯ ವಿಜ್ಞಾನಿ ಶಾಂತಿ ಸ್ವರೂಪ್ ಭಟ್ನಾಗರ್ (1894-1955) ಹುಟ್ಟಿದ ದಿನ. ವಿಜ್ಞಾನ ಕ್ಷೇತ್ರದಲ್ಲಿ ಮಾಡುವ ಸಾಧನೆಗೆ ನೀಡುವ ಸರ್ವೋನ್ನತ ಪ್ರಶಸ್ತಿಗೆ ಇವರ ಹೆಸರನ್ನೇ (ಭಟ್ನಾಗರ್ ಪ್ರಶಸ್ತಿ) ಇಡಲಾಗಿದೆ.

1822: ರಿಚರ್ಡ್ ಸೌತ್ ವೆಲ್ ಬೌರ್ಕೆ (1822-1872) ಹುಟ್ಟಿದ ದಿನ. ಐರಿಷ್ ರಾಜಕಾರಣಿ ಹಾಗೂ ಮೇಯೋವಿನ ಅಧಿಕಾರಿಯಾಗಿದ್ದ ಈತ ಭಾರತದ ವೈಸ್ ರಾಯ್ ಆಗಿದ್ದ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿ ನಡೆಸಿದ. ಅಜ್ಮೀರದಲ್ಲಿ ಮೇಯೊ ಕಾಲೇಜ್ ಸ್ಥಾಪಿಸಿದ. ಕೃಷಿ ಮತ್ತು ವಾಣಿಜ್ಯಕ್ಕಾಗಿ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಿದ.

1804: ಬ್ರಿಟಿಷ್ ಎಂಜಿನಿಯರ್ ರಿಚರ್ಡ್ ಟ್ರಿವಿಥಿಕ್ ಮೊತ್ತ ಮೊದಲ ಬಾರಿಗೆ ಹಳಿಗಳ ಮೇಲೆ ಉಗಿಯಂತ್ರವನ್ನು ಓಡಿಸಿದ.

1741: ಇಂಗ್ಲಿಷ್ ಕೃಷಿ ತಜ್ಞ ಜೆತ್ರೊ ಟುಲ್ (1674-1741) ಮೃತನಾದ. ಬರಹಗಾರ, ಸಂಶೋಧಕ ಹಾಗೂ ಕೃಷಿತಜ್ಞನಾದ ಈತನ ಕಲ್ಪನೆಗಳು ಆಧುನಿಕ ಬ್ರಿಟಿಷ್ ಕೃಷಿಗೆ ಅಡಿಪಾಯ ಹಾಕಿದವು.

No comments:

Advertisement