Monday, March 22, 2010

ಇಂದಿನ ಇತಿಹಾಸ History Today ಮಾರ್ಚ್ 22

ಇಂದಿನ ಇತಿಹಾಸ

ಮಾರ್ಚ್ 22

ಕ್ಯಾನ್ಸರಿನಿಂದಾಗಿ ಮರಣ ಶಯ್ಯೆಯಲ್ಲಿದ್ದ ಬ್ರಿಟನ್ನಿನ ರಿಯಾಲಿಟಿ ಶೋ ಟಿವಿ ತಾರೆ ಜೇಡ್ ಗೂಡಿ (27) ಈದಿನ ಮುಂಜಾನೆ ಕೊನೆಯುಸಿರೆಳೆದರು. 2002ರಲ್ಲಿ 'ಬಿಗ್ ಬ್ರದರ್' ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಗೂಡಿ, ತಾಯಿ ಜಾಕಿ ಮತ್ತು ಗೆಳೆಯ ಜಾಕ್ ಟ್ವೀಡ್ ಅವರೊಂದಿಗೆ 2007ರಲ್ಲಿ ನಡೆದ 'ಬಿಗ್ ಬ್ರದರ್' ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು.

2009: ಹದಿನಾರು ತಿಂಗಳ ಹಿಂದೆ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ವಜಾಗೊಂಡಿದ್ದ ಪಾಕಿಸ್ಥಾನ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಈದಿನ ಮತ್ತೆ ಅದೇ ಹುದ್ದೆ ಅಲಂಕರಿಸಿದರು. ನಂತರ ನೂರಾರು ವಕೀಲರು, ರಾಜಕೀಯ ನಾಯಕರು, ನಾಗರಿಕರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರ ಸಮ್ಮುಖದಲ್ಲಿ ಚೌಧರಿಯವರ ಅಧಿಕೃತ ನಿವಾಸದಲ್ಲಿ ಧ್ವಜಾರೋಹಣ ನಡೆಯಿತು. ಈ ಸರಳ ಹಾಗೂ ಪರಿಣಾಮಕಾರಿ ಸಮಾರಂಭಕ್ಕೆ ನೂರಾರು ಹಿರಿಯ ಅಧಿಕಾರಿಗಳು ಕೂಡ ಸಾಕ್ಷಿಯಾದರು. ದೇಶದ ಹಲವೆಡೆಗಳಿಂದ ಆಗಮಿಸಿದ್ದ ಉತ್ಸಾಹಭರಿತ ಚೌಧರಿ ಬೆಂಬಲಿಗರು ಸಮಾರಂಭದ ಸಮಯದಲ್ಲಿ ಮನೆಯ ಹೊರಗಡೆ ಜಮಾಯಿಸಿ, ಅವರಿಗೆ ಶುಭ ಹಾರೈಸಿದರು.

2009: ಕ್ಯಾನ್ಸರಿನಿಂದಾಗಿ ಮರಣ ಶಯ್ಯೆಯಲ್ಲಿದ್ದ ಬ್ರಿಟನ್ನಿನ ರಿಯಾಲಿಟಿ ಶೋ ಟಿವಿ ತಾರೆ ಜೇಡ್ ಗೂಡಿ (27) ಈದಿನ ಮುಂಜಾನೆ ಕೊನೆಯುಸಿರೆಳೆದರು. ಗರ್ಭಕೊರಳಿನ ಕ್ಯಾನ್ಸರಿನಿಂದ ಬಳಲುತ್ತಿದ್ದ ಗೂಡಿ, ಇಬ್ಬರು ಪುತ್ರರು ಹಾಗೂ ಪತಿ ಜಾಕ್ ಟ್ವೀಡ್ ಅವರನ್ನು ಅಗಲಿದರು. ಎಸ್ಸೆಕ್ಸ್‌ನ ಅಪ್‌ಶೈರ್ ನಿವಾಸದಲ್ಲಿ ಅವರು ಅಸುನೀಗಿದರು. 2002ರಲ್ಲಿ 'ಬಿಗ್ ಬ್ರದರ್' ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಗೂಡಿ, ತಾಯಿ ಜಾಕಿ ಮತ್ತು ಗೆಳೆಯ ಜಾಕ್ ಟ್ವೀಡ್ ಅವರೊಂದಿಗೆ 2007ರಲ್ಲಿ ನಡೆದ 'ಬಿಗ್ ಬ್ರದರ್' ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಜನಾಂಗೀಯ ನಿಂದನೆ ಮಾಡಿದ ಕಾರಣ ಗೂಡಿ ಶೋದಿಂದ ಹೊರ ಹೋಗಬೇಕಾಯಿತು. ನಂತರ ಇದರಲ್ಲಿ ಶಿಲ್ಪಾ ಶೆಟ್ಟಿ ಜಯಗಳಿಸಿದ್ದರು. ಈ ಜನಾಂಗೀಯ ನಿಂದನೆ ಜಗತ್ತಿನಾದ್ಯಂತ ಭಾರಿ ವಿವಾದಕ್ಕೆ ಎಡೆ ಮಾಡಿತ್ತು. ಕೊನೆಗೆ ಚಾನೆಲ್‌ನ ಮುಖ್ಯಸ್ಥರು ಜನಾಂಗೀಯ ನಿಂದನೆಯನ್ನು ನಿರಾಕರಿಸಿದ್ದರು. ಈ ಎಲ್ಲ ಘಟನೆಯ ನಂತರ ಮಾಧ್ಯಮಗಳಲ್ಲಿ ಜೇಡ್ ಗೂಡಿ ಮಾತ್ರ ರಾರಾಜಿಸತೊಡಗಿದ್ದರು. ಜನಾಂಗೀಯ ನಿಂದನೆ ವಿರೋಧಿಸಿ ಬ್ರಿಟಿಷ್ ಪ್ರಸಾರ ನಿಯಂತ್ರಣ 'ಆಫ್‌ಕಾಂ'ಗೆ 44,500 ದೂರುಗಳು ಬಂದಿದ್ದವು. ಆದರೆ ಗೂಡಿ ಮಾತ್ರ ಬ್ರಿಟನ್‌ನಲ್ಲಿ ಖ್ಯಾತಿಗಳಿಸುತ್ತಲೇ ಹೋದರು. ಶಿಲ್ಪಾ ವಿರುದ್ಧ ತಾನು ಮಾಡಿದ ಆರೋಪಗಳನ್ನು ಗೂಡಿ ಸಹ ನಿರಾಕರಿಸಿದ್ದರು. ಈ ಸಮಯದಲ್ಲಿ ಗೂಡಿ ಹೆಸರಿನ ಸುಗಂಧ ದ್ರವ್ಯವನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಯಿತು. ಆತ್ಮಚರಿತ್ರೆಯ ಪ್ರಕಟಣೆ ತಡೆಹಿಡಿಯಲಾಗಿತ್ತು. ಇಷ್ಟೆಲ್ಲ ಆದರೂ ಅವರು ಎದೆಗುಂದದೆ ರಿಯಾಲಿಟಿ ಶೋದ ಭಾರತದ ಅವತರಣಿಕೆ 'ಬಿಗ್ ಬಾಸ್'ನಲ್ಲಿ ಭಾಗವಹಿಸಿದರು. ಇದರ ನಿರೂಪಕಿಯಾಗಿ ಶಿಲ್ಪಾಶೆಟ್ಟಿಯೇ ಕಾರ್ಯನಿರ್ವಹಿಸಿದ್ದರು. ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗುವವರೆಗೆ ಭಾರತದಲ್ಲೇ ಇದ್ದರು. 1981ರಲ್ಲಿ ಲಂಡನ್ನಿನ ಬಡ ಕುಟುಂಬದಲ್ಲಿ ಹುಟ್ಟಿದ ಗೂಡಿ ತಮ್ಮದೇ ವರ್ಚಸ್ಸಿನಿಂದ ಕ್ಯಾಮೆರಾಗಳ ಬೆಳಕಿನಲ್ಲಿ ಹೆಸರು ಮಾಡುತ್ತಲೇ ಹೋದರು.

2009: ಕೊನೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಭಾರತದ ಕೈ ಜಾರಿ ಹೋಯಿತು. ಕೇಂದ್ರ ಸರ್ಕಾರ ಭದ್ರತೆ ನೀಡಲು ಹಿಂದೇಟು ಹಾಕಿದ್ದರಿಂದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ವಿದೇಶದಲ್ಲಿ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನ ಕೈಗೊಂಡಿತು. ಈದಿನ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿಯ ತುರ್ತು ಸಭೆ ಈ ನಿರ್ಧಾರ ಕೈಗೊಂಡಿತು. ಸಭೆಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕೂಡ ಪಾಲ್ಗೊಂಡಿದ್ದರು.

2009: ನಾಪೋಕ್ಲು ಸಮೀಪದ ಮೂರ್ನಾಡಿನಲ್ಲಿ ಈದಿನ ಮಧ್ಯಾಹ್ನ ಗುಡುಗು ಸಹಿತ ಆಲಿಕಲ್ಲು ಮಳೆ ರಭಸದಿಂದ ಸುರಿಯಿತು. ಈ ಸಂದರ್ಭದಲ್ಲಿ ಗುತ್ತಿಗೆದಾರ ಸುರೇಶ್ ಮುತ್ತಪ್ಪನವರ ಮನೆಯೆದುರು 3 ಕೆ.ಜಿ. ತೂಕದ ಆಲಿಕಲ್ಲು ಬಿತ್ತು. ಸುಮಾರು ಅರ್ಧಗಂಟೆ ಕಾಲ ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ರಭಸದಿಂದ ಸುರಿಯಿತು.

2009: ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ವರುಣ್ ಗಾಂಧಿಗೆ ಟಿಕೆಟ್ ನೀಡದಿರುವಂತೆ ಚುನಾವಣಾ ಆಯೋಗ ಬಿಜೆಪಿಗೆ ಸೂಚಿಸಿತು. ಕೋಮುಗಳ ನಡುವೆ ದ್ವೇಷ ಕೆರಳಿಸುವ ಭಾಷಣ ಮಾಡಿದ ವರುಣ್ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದೂ ಆಯೋಗ ಹೇಳಿತು. 'ಈ ಚುನಾವಣೆಯಲ್ಲಿ ಬಿಜೆಪಿಯಾಗಲಿ ಅಥವಾ ಇನ್ನಾವುದೇ ಪಕ್ಷವಾಗಲಿ ವರುಣ್‌ಗೆ ಟಿಕೆಟ್ ನೀಡಿದಲ್ಲಿ, ಆ ಪಕ್ಷ ವರುಣ್ ಅಭಿಪ್ರಾಯವನ್ನು ಅನುಮೋದಿಸಿದೆ ಎಂದು ಪರಿಗಣಿಸಬೇಕಾಗುತ್ತದೆ' ಎಂದು ಆಯೋಗ ತಿಳಿಸಿತು.

2009: ಮಾಜಿ ಪ್ರಧಾನಿ ನವಾಜ್ ಷರೀಫ್ ಮೇಲೆ ಮತ್ತೊಂದು ಗದಾಪ್ರಹಾರ ಮಾಡಿದ ಪಾಕಿಸ್ಥಾನ ಸುಪ್ರೀಂಕೋರ್ಟ್, ದ್ವೇಷದ ಮನೋಭಾವ, ನ್ಯಾಯಾಂಗ ಮತ್ತು ರಕ್ಷಣಾ ಇಲಾಖೆಯ ಅಖಂಡತೆಗೆ ತೊಂದರೆ ಉಂಟುಮಾಡುವ ಸ್ವಹಿತಾಸಕ್ತಿಯ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಸಿತು. ನವಾಜ್ ಮತ್ತು ಅವರ ಸೋದರ ಶಹಬಾಜ್ ಷರೀಫ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಪು ನೀಡಿದುದು, ನಂತರ ಸಂಭವಿಸಿದ ಭಾರಿ ಪ್ರತಿಭಟನೆ, ಆದೇಶ ವಾಪಸಾತಿ ಇತ್ಯಾದಿಗಳ ಬಳಿಕ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತು. ತೀರ್ಪನ್ನು ಮರುಪರಿಶೀಲಿಸುವಂತೆ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಈ ಹೇಳಿಕೆ ನೀಡಲಾಯಿತು.

2008: ಗುಲ್ಬರ್ಗದ ಆಳಂದದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಬಣ್ಣ ಎರಚುವ ನೆಪದಲ್ಲಿ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು.

2008: ಚೀನಾದ ವಾಯವ್ಯ ಭಾಗದಲ್ಲಿರುವ ವೈಗುರ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದಿನ ದಿನ ಸಂಭವಿಸಿದ ಭಾರಿ ಭೂಕಂಪನದಿಂದ ಸಹಸ್ರಾರು ಮನೆಗಳಿಗೆ ಹಾನಿ ಉಂಟಾಗಿ ಸುಮಾರು 44 ಸಾವಿರ ಜನರು ಆಶ್ರಯ ಕಳೆದುಕೊಂಡರು ಎಂದು ಅಧಿಕೃತ ಮೂಲಗಳು ತಿಳಿಸಿದವು. ಮೊದಲು ರಿಕ್ಟರ್ ಮಾಪಕದಲ್ಲಿ 7.3ರಷ್ಟು ಇದ್ದ ಕಂಪನವು ನಂತರ 3.8ಕ್ಕೇ ಇಳಿಯಿತಾದರೂ ಸುಮಾರು 12 ಬಾರಿ ಭೂಮಿಯನ್ನು ಅದುರಿಸಿತು. ದಕ್ಷಿಣ ಕ್ಸಿಯಾಂಗಿನ ಯುತೆನ್, ಕ್ವಿರಾ ಮತ್ತು ಲೋಪ್ನಲ್ಲಿ ಭೂಕಂಪನದಿಂದ ಸುಮಾರು 44 ಸಾವಿರ ಜನರಿಗೆ ತೊಂದರೆಯಾಯಿತು.

2008: ಟಿಬೆಟಿನ ಧಾರ್ಮಿಕ ಮುಖಂಡ ದಲೈಲಾಮ ಅವರ ಜೊತೆ ಮಾತುಕತೆ ನಡೆಸಬೇಕು ಎಂಬ ಸಲಹೆಯನ್ನು ಸಾರಾಸಗಾಟಾಗಿ ತಳ್ಳಿಹಾಕಿದ ಚೀನಾ, ಟಿಬೆಟ್ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಪಣ ತೊಟ್ಟಿತು.

2008: ಆತ್ಮಾಹತ್ಯಾ ದಾಳಿಯಲ್ಲಿ ಮೂವರು ಉಗ್ರರು ಜೀವ ತೆತ್ತು, ಶ್ರೀಲಂಕಾ ನೌಕಾ ಪಡೆಯ ಹಡಗೊಂದನ್ನು ಮುಳುಗಿಸಿದರು ಎಂದು ಎಲ್ ಟಿ ಟಿ ಇ ಪ್ರಕಟಿಸಿತು. ಆದರೆ ನೌಕಾ ದಳವು ಎಲ್ ಟಿ ಟಿ ಇ ಜೊತೆಗೆ ಅಂತಹ ಯಾವುದೇ ಘರ್ಷಣೆಯನ್ನೂ ನಡೆಸಿಲ್ಲ ಎಂದು ಸೇನಾಪಡೆ ತಿಳಿಸಿತು.

2008: ಕರ್ನಾಟಕ ರಾಜ್ಯದಲ್ಲಿ ಮಳೆಯ ಅಬ್ಬರ ನಿಲ್ಲಲಿಲ್ಲ. ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಟೊಮೆಟೋ, ಕಾಫಿ, ಸೂರ್ಯಕಾಂತಿ, ದಾಳಿಂಬೆ, ಕಲ್ಲಂಗಡಿ, ಹುಣಸೆ, ಕನಕಾಂಬರ ಹಾಗೂ ಮಾವಿನ ಮಿಡಿಗೆ ಹಾನಿಯಾಯಿತು. ಕೆಲವು ಜಿಲ್ಲೆಗಳಲ್ಲಿ ನೀರಾವರಿ ಭಾಗದ ಬೆಳೆಗೆ ಮಳೆಯಿಂದ ಅನುಕೂಲವೇ ಆಯಿತು.

2008: ತಮಿಳುನಾಡಿನಲ್ಲಿ ವಾರದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಎರಡು ದಿನಗಳಲ್ಲಿ 12 ಜನ ಮೃತರಾದರು. ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆ ನಾಶವಾಯಿತು. 20 ಸಾವಿರ ಎಕರೆಯಷ್ಟು ಭತ್ತದ ಬೆಳೆ ಜಲಾವೃತಗೊಂಡಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯು (ಪಿಪಿಪಿ) ಪಕ್ಷದ ಉಪಾಧ್ಯಕ್ಷ ಹಾಗೂ ನ್ಯಾಷನಲ್ ಅಸೆಂಬ್ಲಿಯ (ಸಂಸತ್ತು) ಮಾಜಿ ಸ್ಪೀಕರ್ ಸೈಯದ್ ಯೂಸಫ್ ರಾಜಾ ಗಿಲಾನಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು.

2008: ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಗಳ ಹಾರಾಟ ಶನಿವಾರ ಹಿಂದಿನ ದಿನ ನಡುರಾತ್ರಿಯಿಂದ ಆರಂಭಗೊಂಡಿತು. ಇದೇ ಸಮಯಕ್ಕೆ ಬೇಗಮ್ ಪೇಟೆಯಲ್ಲಿನ ಮೊದಲಿನ ವಿಮಾನನಿಲ್ದಾಣವನ್ನು ಮುಚ್ಚಲಾಯಿತು. ಶಂಷಾಬಾದಿನಲ್ಲಿನ ಹೊಸ ವಿಮಾನನಿಲ್ದಾಣದಲ್ಲಿ ಲುಫ್ತಾನ್ಸಾ ವಿಮಾನ ಬಂದಿಳಿಯುತ್ತಿದ್ದಂತೆ ಭವ್ಯ ಸ್ವಾಗತ ನೀಡಲಾಯಿತು.

2007: `ಯುಜಿ' ಎಂದೇ ಖ್ಯಾತರಾಗಿದ್ದ ತತ್ವಜ್ಞಾನಿ ಉಪ್ಪಲೇರಿ ಗೋಪಾಲಕೃಷ್ಣ ಕೃಷ್ಣಮೂರ್ತಿ (89) ಇಟಲಿಯ ವಾಲೆಕ್ರಾಸಿಯಾದಲ್ಲಿ ನಿಧನರಾದರು.

2007: ಭಾರತೀಯ ಸಂಜಾತ ಅಮೆರಿಕನ್ ಗಣಿತಜ್ಞ ಶ್ರೀನಿವಾಸ ಎಸ್. ಆರ್. ವರದನ್ (67) ಅವರು, ಗಣಿತ ಕ್ಷೇತ್ರಕ್ಕೆ ನೀಡಲಾಗುವ 8.50 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರತಿಷ್ಠಿತ 'ಅಬೆಲ್ ಪ್ರಶಸ್ತಿ'ಯನ್ನು ಗೆದ್ದುಕೊಂಡರು. `ಸಂಭವನೀಯ ಸಿದ್ಧಾಂತಕ್ಕೆ ನೀಡಿರುವ ಮೂಲಭೂತ ಕೊಡುಗೆಗಳಿಗಾಗಿ' ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕೌರಾಂಟ್ ಗಣಿತ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಶ್ರೀನಿವಾಸ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಸಮಿತಿಯ ಪ್ರಕಟಣೆ ತಿಳಿಸಿತು. ನೊಬೆಲ್ ಪ್ರಶಸ್ತಿಗೆ ಸರಿಸಮವಾದ ಈ 60 ಲಕ್ಷ ಕ್ರೋನರ್ ಪ್ರಶಸ್ತಿಯನ್ನು ನಾರ್ವೆಯ ಖ್ಯಾತ ಗಣಿತಜ್ಞ ನೀಲ್ಸ್ ಹೆನ್ರಿಕ್ ಅಬೆಲ್ ಅವರ 200ನೇ ಜನ್ಮಶತಮಾನೋತ್ಸವದ ಅಂಗವಾಗಿ ನಾರ್ವೆ ಸರ್ಕಾರವು 2002ರಲ್ಲಿ ಸ್ಥಾಪಿಸಿದೆ. ನಾರ್ವೆಯ ದೊರೆ ಐದನೇ ಹೆರಾಲ್ಡ್ ಅವರಿಂದ ಈ ಪ್ರಶಸ್ತಿಯನ್ನು ಶ್ರೀನಿವಾಸ ಅವರು ಮೇ 22ರಂದು ಓಸ್ಲೋದಲ್ಲಿ ಸ್ವೀಕರಿಸುವರು.

2007: ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದಿನ ಸುತ್ತಲಿನ ಪ್ರದೇಶಗಳಲ್ಲಿ ಸತ್ತ ಕಾಗೆಗಳಲ್ಲಿ ಮಾರಣಾಂತಿಕ ಪಕ್ಷಿಜ್ವರ (ಕೋಳಿಜ್ವರ) ಹರಡುವ ವೈರಸ್ ಎಚ್ 5 ಎನ್ 1 ವೈರಸ್ ಇರುವುದು ಪತ್ತೆಯಾಗಿರುವುದಾಗಿ ಇಸ್ಲಾಮಾಬಾದಿನ ಕೃಷಿ ಪ್ರಾಧಿಕಾರ ಪ್ರಕಟಿಸಿತು. ಸುಮಾರು ಎಪ್ಪತ್ತಕ್ಕೂ ಹೆಚ್ಚು ಕಾಗೆಗಳಲ್ಲಿ ಈ ವೈರಸ್ ಇರುವುದು ಪತ್ತೆಯಾಯಿತು. ರಾಜಧಾನಿಯ ಉದ್ಯಾನವನಗಳಲ್ಲಿ ಸತ್ತುಬಿದ್ದಿದ್ದ ಎಂಟು ಕಾಗೆಗಳ ದೇಹವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಎರಡು ಕಾಗೆಗಳಲ್ಲಿ ವೈರಸ್ ಇರುವುದು ಖಚಿತವಾಗಿದೆ ಎಂದು ಆಹಾರ ಮತ್ತು ಕೃಷಿ ಸಚಿವಾಲಯದಲ್ಲಿ ಜಾನುವಾರು ಇಲಾಖೆ ಆಯುಕ್ತ ಮಹಮ್ಮದ್ ಅಫ್ಜಲ್ ಹೇಳಿದರು.

2007: ಪಾಕಿಸ್ಥಾನವು ಸುಮಾರು 700 ಕಿ.ಮೀ. ದೂರ ಅಣ್ವಸ್ತ್ರ ಸಾಗಿಸುವ ಸಾಮರ್ಥ್ಯದ `ಬಾಬರ್' (ಹಾಟ್ಫ್-7) ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. ಭಾರತದ ಹಲವಾರು ನಗರಗಳನ್ನು ಕ್ರಮಿಸಬಲ್ಲ ಸಾಮರ್ಥ್ಯವುಳ್ಳ್ಳ ಈ ಕ್ಷಿಪಣಿ ರೇಡಾರ್ ಶೋಧಕದ ಕಣ್ತಪ್ಪಿಸಿ, ಅಣ್ವಸ್ತ್ರ ಸೇರಿದಂತೆ ವಿವಿಧ ಯುದ್ಧ ಸಾಮಗ್ರಿಗಳನ್ನು ಬಹುದೂರ ಸಾಗಿಸಬಲ್ಲುದು. ಈ ಹಿಂದೆ 2005ರಲ್ಲಿ, 500 ಕಿ.ಮೀ. ದೂರ ಸಾಗುವ ಸಾಮರ್ಥ್ಯದ ಬಾಬರ್ ಕ್ಷಿಪಣಿಯನ್ನು ಮೊದಲ ಹಂತದ ಪರೀಕ್ಷೆಯಾಗಿ ಉಡಾಯಿಸಿ ಪಾಕಿಸ್ಥಾನವು ವಿಶ್ವದ ಗಮನ ಸೆಳೆದಿತ್ತು. ಚೀನಾ ತಯಾರಿಸಿದ ಕ್ಷಿಪಣಿಯ ಪ್ರತಿರೂಪ ಇದೆಂದು ಹೇಳಲಾಗಿತ್ತು.

2007: ವರ್ಷದಷ್ಟು ಹಿಂದೆ ಅಪಘಾತವೊಂದರಲ್ಲಿ ಮೃತರಾದ ಭಾರತೀಯ ವಿಜ್ಞಾನ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ. ಟಿ. ಚಂದ್ರಶೇಖರ್ ಅವರ ಕುಟುಂಬ ವರ್ಗಕ್ಕೆ 32.78 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶ ನೀಡಿತು. ಚಂದ್ರಶೇಖರನ್ ಅವರು 1980ರ ಆದಿಯಲ್ಲಿ ರಾಷ್ಟ್ರದ ಪ್ರಥಮ ಕಂಪ್ಯೂಟರೀಕೃತ `ಕರೆಂಟ್ ಅವೇರ್ ನೆಸ್ ಸರ್ವೀಸ್' ಕಂಡು ಹಿಡಿದ ಕೀರ್ತಿಗೆ ಭಾಜನರಾಗಿದ್ದರು.

2006: ಲಾಭದಾಯಕ ಹುದ್ದೆಯ ತೂಗುಕತ್ತಿಯಿಂದ ಸಂಸತ್ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿ ಇರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಇತರರ ರಕ್ಷಣೆಗೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ತರಲು ತಂತ್ರ ಹೂಡಿದೆ ಎಂಬ ಪ್ರತಿಪಕ್ಷಗಳ ಆರೋಪದ ಮಧ್ಯೆಯೇ ಸಂಸತ್ತಿನ ಉಭಯ ಸದನಗಳನ್ನೂ ದಿಢೀರನೆ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು. ಬಜೆಟ್ ಅಧಿವೇಶನವು ಮಧ್ಯಂತರ ಬಿಡುವು ಇಲ್ಲದೆ ಈ ರೀತಿ ಅರ್ಧದಲ್ಲೇ ಮೊಟಕುಗೊಂಡದ್ದು ಸಂಸದೀಯ ಇತಿಹಾಸದಲ್ಲಿ ಇದೇ ಪ್ರಥಮ.

2006: ಕೇರಳದಲ್ಲಿ ಜಲ ಸಂರಕ್ಷಣೆ ಪ್ರಾಮುಖ್ಯ ಕುರಿತು ಜಾಗೃತಿ ಮೂಡಿಸಲು ನಡೆಸಿದ ಪ್ರಯತ್ನಗಳಿಗಾಗಿ `ಮಲಯಾಳಂ ಮನೋರಮಾ' ಪತ್ರಿಕೆಗೆ `ಪ್ರತಿಷ್ಠಿತ ಯುನೆಸ್ಕೊ' ಪ್ರಶಸ್ತಿ ಲಭಿಸಿತು. ಜಾಗತಿಕ ಜಲ ಸಂಪನ್ಮೂಲ ವಿಭಾಗದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಕೆನಡಾದ ನಾಗರಿಕರಾಗಿರುವ ಭಾರತೀಯ ಸಂಜಾತ ವಿಜ್ಞಾನಿ ಅಸಿತ್ ಬಿಸ್ವಾಸ್ (67) ಅವರಿಗೆ ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ವಾಟರ್ ಇನ್ ಸ್ಟಿಟ್ಯೂಟ್ ಪ್ರದಾನ ಮಾಡುವ `ಪ್ರತಿಷ್ಠಿತ ಸ್ಟಾಕ್ ಹೋಮ್ ಜಲ ಪ್ರಶಸ್ತಿ' ಲಭಿಸಿತು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಐದನೆಯ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಗುರಿಕಾರ ಸಮರೇಶ್ ಜಂಗ್ ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಗೆ ಪಾತ್ರರಾದರು. 10 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸಮರೇಶ್ ಜಂಗ್ ದಾಖಲೆಯ 685.4 ಅಂಕ ಗಳಿಸಿ ಚಿನ್ನದ ಪದಕ ಗಿಟ್ಟಿಸಿದರು. ಎಂಟು ವರ್ಷಗಳ ಹಿಂದೆ ಇಂಗ್ಲೆಂಡಿನ ಮೈಕೆಲ್ ಗಾಲ್ಫ್ ಸೃಷ್ಟಿಸಿದ್ದ 679.9 ಅಂಕಗಳ ದಾಖಲೆಯನ್ನು ಸಮರೇಶ್ ಜಂಗ್ ಅಳಿಸಿ ಹಾಕಿದರು.

2001: ಚೆನ್ನೈಯಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರು ಟೆಸ್ಟ್ ಕ್ರಿಕೆಟ್ ಮ್ಯಾಚ್ ಸರಣಿಯ ಕೊನೆಂಯಲ್ಲಿ ಹರ ಭಜನ್ ಸಿಂಗ್ 32ನೇ ವಿಕೆಟ್ ಪಡೆದರು. ಮೂರು ಟೆಸ್ಟ್ ಮ್ಯಾಚ್ ಸರಣಿಯಲ್ಲಿ ಭಾರತೀಯ ಬೌಲರ್ ಪಡೆದ ಅತೀ ಹೆಚ್ಚಿನ ವಿಕೆಟ್ ದಾಖಲೆ ಇದು. ಅನಿಲ್ ಕುಂಬ್ಳೆ ಪಡೆದಿದ್ದ 23 ವಿಕೆಟುಗಳ ದಾಖಲೆಯನ್ನು ಅವರು ಮುರಿದರು.

2001: ಅನಿಮೇಷನ್ ಪಾತ್ರಗಳಾದ `ಯೋಗಿ ಬೀಯರ್' `ಸ್ಕೂಬಿ ಡೂ' `ಫ್ಲಿನ್ ಸ್ಟೋನ್ಸ್' ಇತ್ಯಾದಿಗಳನ್ನು ಸೃಷ್ಟಿಸಿದ ವಿಲಿಯಂ ಹೆನ್ನಾ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಜೋಸೆಫ್ ಬಾರ್ಬೇರಾ ಅವರ ಜೊತೆ ಸೇರಿ ಈ ಅನಿಮೇಷನ್ ಪಾತ್ರಗಳನ್ನು ಅವರು ಸೃಷ್ಟಿಸಿದರು.

1971: ಖ್ಯಾತ ವಾಗ್ಗೇಯಕಾರ ಸಂಪತ್ ಜಯಾ (ಗುರುದಾಸ) ಅವರು ಜಯ ರಾಘವನ್- ಆಲಮೇಲು ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಭಜನೆ ಜನಪ್ರಿಯಗೊಳಿಸುವ ಸಲುವಾಗಿ ಅವರು ಗುರುದಾಸ ಭಜನಾ ಮಂಡಳಿ ಸ್ಥಾಪಿಸಿದರು. ಇವರ ಕೃತಿ ರಚನಾ ಪ್ರತಿಭೆ ಗುರುತಿಸಿ ಇವರಿಗೆ `ಗುರುದಾಸ' ಅಂಕಿತ ನೀಡಲಾಯಿತು.

1963: ಕಲಾವಿದೆ ಸುರೇಖಾ ಕುಲಕರ್ಣಿ ಜನನ.

1957: ಭಾರತವು ಶಕ ವರ್ಷಾಧಾರಿತ ರಾಷ್ಟ್ರೀಯ ಕ್ಯಾಲೆಂಡರನ್ನು ಅಂಗೀಕರಿಸಿತು.

1946: ಜೋರ್ಡಾನ್ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಗಳಿಸಿತು.

1945: ಮಧ್ಯಪ್ರಾಚ್ಯದ ಅರಬ್ ರಾಜ್ಯಗಳ ಒಕ್ಕೂಟ `ಅರಬ್ ಲೀಗ್' ಕೈರೋದಲ್ಲಿ ಸ್ಥಾಪನೆಗೊಂಡಿತು.

1942: ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವ ರಾಜಕೀಯ ಸೂತ್ರ ರೂಪಿಸುವ ಸಲುವಾಗಿ ಸರ್ ಸ್ಟಾಫರ್ಡ್ ಕ್ರಿಪ್ಸ್ ನೇತೃತ್ವದ ಕ್ರಿಪ್ಸ್ ಆಯೋಗ ಭಾರತಕ್ಕೆ ಆಗಮಿಸಿತು. ಈ ಯತ್ನ ವಿಫಲಗೊಂಡು ಕೆಲವು ತಿಂಗಳ ಬಳಿಕ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಯಿತು.

1941: ಕಲಾವಿದ ಲಕ್ಷ್ಮಣ ಭಟ್ ಜನನ.

1893: ಭಾರತದ ಕ್ರಾಂತಿಕಾರಿ ನಾಯಕರಲ್ಲಿ ಒಬ್ಬರಾದ ಸೂರ್ಯ ಸೇನ್ (1893-1934) ಜನ್ಮದಿನ. ಚಿತ್ತಗಾಂಗ್ ಶಸ್ತ್ರಾಗಾರ ಮೇಲಿನ ದಾಳಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.

No comments:

Advertisement