ಇಂದಿನ ಇತಿಹಾಸ
ಮಾರ್ಚ್ 02
ಖ್ಯಾತ ಗಾಯಕ ಪಂಡಿತ್ ಜಸ್‌ರಾಜ್ ಅವರನ್ನು 2009ನೇ ಸಾಲಿನ ಎಸ್.ವಿ.ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರಿನ ಶ್ರೀರಾಮಸೇವಾ ಮಂಡಳಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್.ರಾಮಪ್ರಸಾದ್ ತಿಳಿಸಿದರು.
2009: ಜಗತ್ತಿನ ಪರಿಸರ ಸ್ನೇಹಿ ಕುಬೇರರ 100 ಮಂದಿಯ ಪಟ್ಟಿಯಲ್ಲಿ ಭಾರತೀಯ ಶತಕೋಟ್ಯಾಧೀಶ ಮುಖೇಶ್ ಅಂಬಾನಿ ಸೇರಿದಂತೆ ನಾಲ್ವರ ಹೆಸರು ಸೇರ್ಪಡೆಯಾಯಿತು. ಜಗತ್ತಿನ ಈ ಶ್ರೀಮಂತರು ಹಿಂದೆಂದೂ ಇದ್ದಿರದಿದ್ದ ಪ್ರಮಾಣದಲ್ಲಿ ವಿದ್ಯುತ್ ಕಾರ್, ಸೌರಶಕ್ತಿ ಸೇರಿದಂತೆ ವೈವಿಧ್ಯಮಯ ಹಸಿರು ತಂತ್ರಜ್ಞಾನದ ಉದ್ದಿಮೆಗಳಲ್ಲಿ ಹಣ ಹೂಡಿದ್ದಾರೆ. ಆ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ ಎಂದು 'ಹಸಿರು ಶ್ರೀಮಂತ'ರ ಪಟ್ಟಿಯನ್ನು ಇದೇ ಮೊತ್ತ ಮೊದಲ ಬಾರಿಗೆ ಸಂಗ್ರಹಿಸಿ ಪ್ರಕಟಸಿದ 'ಸಂಡೇ ಟೈಮ್ಸ್' ಪತ್ರಿಕೆ ಹೇಳಿತು. ಮುಖೇಶ್ ಅಂಬಾನಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು. ಗಾಳಿ ವಿದ್ಯುತ್ ಸಂಸ್ಥೆ 'ಸುಝಾನ್ಲ್ ಎನರ್ಜಿ'ಯ ತುಳಸಿ ತಂತಿ (49ನೇ ಸ್ಥಾನ), ಜಾಯ್‌ಪಿ ಗ್ರೂಪ್ ಸಂಸ್ಥಾಪಕ ಜೈಪ್ರಕಾಶ್ ಗೌರ್ (50), ಎಂಜಿನಿಯರಿಂಗ್ ಸಂಸ್ಥೆ 'ಥರ್ಮಾಕ್ಸ್'ನ ಅನು ಆಘಾ (78) ಹಾಗೂ ಭಾರತ ಮೂಲದ ಬಂಡವಾಳದಾರ ವಿನೋದ್ ಖೊಸ್ಲಾ (52ನೇ ಸ್ಥಾನ) ಈ ಪಟ್ಟಿಯಲ್ಲಿ ಸ್ಥಾನ ಪಡೆದರು. ಈ ಹಸಿರು ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದವರು ಗಾಳಿ ವಿದ್ಯುತ್ ಕ್ಷೇತ್ರದಲ್ಲಿ 27 ಶತಕೋಟಿ ಪೌಂಡ್ ಹಣ ತೊಡಗಿಸಿದ ವಾರೆನ್ ಬಫೆಟ್. ನಂತರದ ಸ್ಥಾನ ಸಾಫ್ಟ್‌ವೇರ್ ದಿಗ್ಗಜ ಬಿಲ್ ಗೇಟ್ಸ್‌ನದು.
2009: ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಪೆಟ್ರೋಲಿಯಂ ಲಿ.ನ ನಿರ್ದೇಶಕ ಮಂಡಳಿಯು ಎರಡೂ ಘಟಕಗಳ ವಿಲೀನಕ್ಕೆ ಅನುಮತಿ ನೀಡಿತು. ಇದರೊಂದಿಗೆ ರಿಲಯನ್ಸ್ ವಿಶ್ವದ ಅತಿ ದೊಡ್ಡ ಪೆಟ್ರೊಕೆಮಿಕಲ್ ಘಟಕಗಳಲ್ಲಿ ಒಂದಾಗಿ ಹೊರಹೊಮ್ಮಿತು. ಬೃಹತ್ ಜಾಗತಿಕ ಕಂಪೆನಿಯಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ನಡೆಯಾಗಿದೆ ಎಂದು ಆರ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯಪಟ್ಟರು.
2009: ಖ್ಯಾತ ಗಾಯಕ ಪಂಡಿತ್ ಜಸ್‌ರಾಜ್ ಅವರನ್ನು 2009ನೇ ಸಾಲಿನ ಎಸ್.ವಿ.ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರಿನ ಶ್ರೀರಾಮಸೇವಾ ಮಂಡಳಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್.ರಾಮಪ್ರಸಾದ್ ತಿಳಿಸಿದರು.
2008: `ಮೆನ್ ಇನ್ ಬ್ಲೂ' ಪಡೆಗೆ ಈದಿನ ಸ್ಮರಣೀಯ ದಿನ. ಎಂ.ಎಸ್.ದೋನಿ ಬಳಗ ಸಿಡ್ನಿಯಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲಿನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯಿತು. ಇತ್ತ ಕ್ವಾಲಾಲಂಪುರದಲ್ಲಿ ಭಾರತದ ಜೂನಿಯರ್ ಆಟಗಾರರು ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆದರು. ಸಿಡ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಅಮೋಘ ಹಾಗೂ ಅವಿಸ್ಮರಣೀಯ ಶತಕದ ನೆರವಿನಿಂದ ಭಾರತ ತಂಡದವರು ಆಸ್ಟ್ರೇಲಿಯಾ ಎದುರಿನ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲಿನಲ್ಲಿ ಆರು ವಿಕೆಟ್ಗಳ ಗೆಲುವು ಸಾಧಿಸಿದರು. ಇದರಿಂದ `ಟೀಮ್ ಇಂಡಿಯಾ' ಮೂರು ಪಂದ್ಯಗಳ ಫೈನಲಿನಲ್ಲಿ 1-0 ಮುನ್ನಡೆ ಸಾಧಿಸಿತು. ಕ್ವಾಲಾಲಾಂಪುರದಲ್ಲಿ ನಡೆದ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕಿರಿಯರ ತಂಡವು (19 ವರ್ಷ ವಯಸ್ಸಿನೊಳಗಿನ ತಂಡ) ಎರಡನೇ ಬಾರಿಗೆ ವಿಶ್ವ ಕ್ರಿಕೆಟ್ ಚಾಂಪಿಯನ್ ಪಟ್ಟ ಧರಿಸಿತು. ಕ್ಷಣ ಕ್ಷಣಕ್ಕೂ ಕುತೂಹಲಕ್ಕೆ ಕಾರಣವಾದ ಫೈನಲಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ತಂಡವು 12 ರನ್ನುಗಳಿಂದ ಮಣಿಸಿತು. 2000ದಲ್ಲಿ ಶ್ರೀಲಂಕಾದಲ್ಲಿನಡೆದ ವಿಶ್ವಕಪ್ನಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.
2008: ವಾಯವ್ಯ ಪಾಕಿಸ್ಥಾನದಲ್ಲಿ ತಾಲಿಬಾನ್ ಪರ ಉಗ್ರರ ವಿರುದ್ಧ ಸೈನ್ಯ ಸೆಣಸುತ್ತಿದ್ದ ಪ್ರದೇಶದ ದಾರಾ ಅಡಮ್ ಖೇಲ ಎಂಬ ಸ್ಥಳದಲ್ಲಿ ಆತ್ಮಹತ್ಯೆ ಬಾಂಬ್ ದಾಳಿಯಿಂದಾಗಿ ಕನಿಷ್ಠ 43 ಜನ ಮೃತರಾಗಿ, 35 ಜನ ಗಾಯಗೊಂಡರು. ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ನೂರಾರು ಹಿರಿಯರು ಹಾಗೂ ಸ್ಥಳೀಯ ಅಧಿಕಾರಿಗಳು ಸಭೆ ಸೇರಿದ್ದ ಸಾಂಪ್ರದಾಯಿಕ ಮಂಡಳಿ `ಜೀರ್ಗಾ'ಕ್ಕೆ 18 ವರ್ಷ ವಯಸ್ಸಿನ ಆತ್ಮಹತ್ಯಾ ದಳದ ಸದಸ್ಯ ಪ್ರವೇಶಿಸಿ, ಜನರು ಸಭೆಯ ನಂತರ ಹೊರಹೊಹೋಗುವ ಸಂದರ್ಬದಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡ.
2008: ಮಂಗಳ ಗ್ರಹದಲ್ಲಿ ನೀರಿದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಸಂಶೋಧಕರು ಹೇಳಿದ್ದು ಇದರಿಂದಾಗಿ ಗ್ರಹದ ಹೊಳೆಯುವ ಜಾಗದಲ್ಲಿ ನೀರಿರಬಹುದು ಎಂಬ ಈ ಮೊದಲಿನ ಅಂದಾಜು ಸುಳ್ಳಾಯಿತು. ಮಂಗಳ ಗ್ರಹದಲ್ಲಿ ನೀರಿದೆ ಎಂಬ ವಾದವನ್ನು ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಮುಖ್ಯಸ್ಥ ಜಾನ್ ಡಿ. ಪೆಲ್ಲೆಟಿಯರ್ ಅವರು ಅಲ್ಲಗಳೆದರು. ನಾಸಾದ ಅತ್ಯಾಧುನಿಕ ಕ್ಯಾಮರಾಗಳು ರವಾನಿಸಿದ ಮಂಗಳನ ಅಂಗಳದ ಚಿತ್ರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಸಂಶೋಧಕರ ತಂಡವು, ಅಲ್ಲಿ ನೀರಿಲ್ಲ ಎಂಬ ತೀರ್ಮಾನಕ್ಕೆ ಬಂದಿತು. ಹರಿಯುವ ನೀರು ಹೇಗೆ ಕಾಣುತ್ತದೆ ಹಾಗೂ ಮರಳಿನ ಅಂಗಳ ಹೇಗೆ ನೀರಿರುವ ಭ್ರಮೆಯನ್ನು ಉಂಟು ಮಾಡುತ್ತದೆ ಎಂಬುದನ್ನು ಭೌತಶಾಸ್ತ್ರದ ನಿಯಮಗಳ ಪ್ರಕಾರ ಅಧ್ಯಯನ ಮಾಡಲಾಯಿತು. ಮಂಗಳ ಗ್ರಹದಲ್ಲಿ ಮರಳಿನ ರಾಶಿ ಅಥವಾ ಕುದಿಯುವ ಲಾವಾರಸ ಉಕ್ಕಿ ಉಂಟಾದ ಮಣ್ಣಿನ ರಾಶಿ ಛಾಯಾಚಿತ್ರದಲ್ಲಿ ಹರಿಯುವ ನೀರಿನಂತೆ ಕಂಡಿರುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟರು.
2008: ರೋಗಿಯ ಮುರಿದ ಕೈ ಮೂಳೆ ಜೋಡಿಸುವಲ್ಲಿ ವೈದ್ಯರು ನಿರ್ಲಕ್ಷ್ಯ ತಳೆದ ಕಾರಣಕ್ಕೆ 8 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಗ್ರಾಹಕ ನ್ಯಾಯಾಲಯ ಆದೇಶಿಸಿತು. ದೂರು ನೀಡಿದ ಮುಖೇಶ್ ರಾಥೋಡ್ ಅವರ ಮಗನ ಕೈಯ ಮೂಳೆಯ ಜೋಡಣೆಯಲ್ಲಿ ಆಸ್ಪತ್ರೆ ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಮತ್ತು ಆತನು ಸಂಪೂರ್ಣ ಗುಣವಾಗದಿದ್ದರೂ ಸಹ ಆತನನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರು ಎಂದು ದಕ್ಷಿಣ ದೆಹಲಿಯ ಜಿಲ್ಲಾ ಗ್ರಾಹಕ ನ್ಯಾಯಾಲಯ ಅಧ್ಯಕ್ಷ ವಿ.ಕೆ.ಗುಪ್ತ ಹೇಳಿದರು.
2008: ಕೇಂದ್ರ ಸರ್ಕಾರವು `ರಾಮ ಸೇತು' ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪರಿಸರ ಸಂಬಂಧಿ ತೊಡಕುಗಳಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸ್ಪಷ್ಟ ಪಡಿಸಿತು. ರಾಮಸೇತು ಯೋಜನೆಯು `ಧಾರ್ಮಿಕ' ಕಾರಣಗಳಿಂದಷ್ಟೇ ವಿವಾದಕ್ಕೆ ಸಿಲುಕಿರುವುದಲ್ಲ, ಪರಿಸರ ಸಂಬಂಧಿ ಕಾರಣಗಳು ಕೂಡಾ ಈ ಯೋಜನೆಗೆ ಅಡ್ಡಗಾಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಸುನಾಮಿಯಂತಹ ಅಪಾಯ ಸಂದರ್ಭಗಳಲ್ಲಿ ಹಾನಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯವನ್ನು ಪ್ರಮಾಣಪತ್ರದಲ್ಲಿ ಸೇರಿಸಲಾಯಿತು. ಈ ಬಗ್ಗೆ ವಿಶೇಷ ಅಧ್ಯಯನ ನಡೆಸಲು ಕೇಂದ್ರ ಸರ್ಕಾರವು 2007ರ ಅಕ್ಟೋಬರ್ 5ರಂದು ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಸುನಾಮಿಯಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ತಗ್ಗಿಸುವಲ್ಲಿ ಈ ಯೋಜನೆಯು ಪೂರಕವಾಗಿದೆ ಎಂದು ಈ ಸಮಿತಿಯು ತಿಳಿಸಿದೆ ಎಂದೂ ಪ್ರಮಾಣ ಪತ್ರದಲ್ಲಿ ತಿಳಿಸಲಾಯಿತು. ಇಂಡೋನೇಷ್ಯಾ, ಅಂಡಮಾನ್ ಮತ್ತು ನಿಕೋಬಾರ್ ವಲಯಗಳ ಕಡಲಾಳದಲ್ಲಿ ಹುಟ್ಟು ಪಡೆಯುವ ಸುನಾಮಿ ಅಲೆಗಳ ಶಕ್ತಿಯು `ರಾಮಸೇತು'ವಿನ ಬಳಿ ಬರುವಾಗ ಕುಂದುವಂತೆ ಮಾಡುವಲ್ಲಿ ಹೊಸ ಯೋಜನೆಯು ಸಹಕಾರಿಯಾಗಲಿದೆ ಎಂದೂ ತಜ್ಞರು ತಿಳಿಸಿದ್ದಾರೆಂದೂ ಪ್ರಮಾಣಪತ್ರದಲ್ಲಿ ತಿಳಿಸಲಾಯಿತು. ಕಳೆದ 25 ತಿಂಗಳ ಕಾಲ ರಾಮಸೇತು ಯೋಜನಾ ಪ್ರದೇಶದ ಆಸುಪಾಸಿನ ಹಲವು ಸ್ಥಳಗಳಲ್ಲಿ ನಿರಂತರವಾಗಿ ಹವಾಮಾನ ಮತ್ತು ಪರಿಸರಕ್ಕೆ ಸಂಬಂಧಿಸಿದ ಅಂಕಿಸಂಖ್ಯೆಗಳನ್ನು ಸಂಗ್ರಹಿಸಲಾಗಿದ್ದು, ಅದನ್ನೇ ಮೂಲವಾಗಿಟ್ಟುಕೊಂಡು ನಡೆಸಲಾದ ಅಧ್ಯಯನ ಕೂಡಾ ಉದ್ದೇಶಿತ ಯೋಜನೆಗೆ ಪೂರಕವಾಗಿದೆ ಎಂದೂ ಪ್ರಮಾಣಪತ್ರದಲ್ಲಿ ಹೇಳಲಾಯಿತು. ಒಟ್ಟು 60 ಪುಟಗಳ ಈ ಪ್ರಮಾಣ ಪತ್ರವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಅಧ್ಯಕ್ಷರಾಗಿರುವ ರಾಜಕೀಯ ವ್ಯವಹಾರಗಳ ಸಂಸದೀಯ ಸಮಿತಿಯು ಅಂತಿಮವಾಗಿ ಸಿದ್ಧಗೊಳಿಸಿತು.
2008: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಮೈಸೂರು ನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. 2007ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಮುಂಬೈನ ಶಿಮುಂಜೆ ಪರಾರಿ (ಸೀತಾರಾಮ ಮುದ್ದಣ್ಣ ಶೆಟ್ಟಿ) ತುಳು ಸಾಹಿತ್ಯ, ಬಿ.ಎನ್.ರಾವ್ ಬೋಳೂರು (ತುಳು ನಾಟಕ ಚಲನಚಿತ್ರ), ಸಣ್ಣಕ್ಕ ಬಂಗ್ಲೆಗುಡ್ಡೆ (ತುಳು ಜಾನಪದ) ಅವರಿಗೆ ತುಳು ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರೂ ಆದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಎ.ವಿವೇಕ್ ರೈ ಪ್ರದಾನ ಮಾಡಿದರು. 2006ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಕದ್ರಿ ನವನೀತ ಶೆಟ್ಟಿ (ಮೈಮೆ), ನವೀನ್ ಕುಮಾರ್ ಮರಿಕೆ (ಕತ್ತಲಿನಿಂದ) ಅವರಿಗೆ ನಾಡೋಜ ಡಾ.ದೇ.ಜವರೇಗೌಡ ವಿತರಿಸಿದರು.
2008: `ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ವಾಹನ ಸವಾರರೇ ಅಪಘಾತಕ್ಕೀಡಾದರೆ ಅದಕ್ಕೆ ಅವರೇ ಸಂಪೂರ್ಣ ಹೊಣೆ' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಬೆಂಗಳೂರಿನ ರೇಣುಕಾದೇವಿ ಎಂಬವರು ನಿರ್ಲಕ್ಷ್ಯದಿಂದ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಸಮಯದಲ್ಲಿ ಅಪಘಾತಕ್ಕೀಡಾದ ಪ್ರಕರಣವನ್ನು ಆಲಿಸಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಎಚ್.ಎಸ್. ಬೇಡಿ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನುನೀಡಿತು. `ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಆತ/ಆಕೆ ಅಪಘಾತಕ್ಕೀಡಾದರೆ ಖುದ್ದು ವಾಹನ ಸವಾರರೇ ಅಪಘಾತಕ್ಕೆ ಜವಾಬ್ದಾರರು' ಎಂದು ಕೋರ್ಟ್ ಸ್ಪಷ್ಟ ಪಡಿಸಿತು. ಸೆಪ್ಟೆಂಬರ್ 11, 2000ರಂದು ರೇಣುಕಾದೇವಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಜಯನಗರದ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಬಿಎಂಟಿಸಿಯ ಪುಪ್ಪಕ್ ಬಸ್ಸೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಗಂಭೀರವಾಗಿ ಗಾಯಗೊಂಡು ಡಿಸೆಂಬರ್ 14, 2000ರವರೆಗೆ ರೇಣುಕಾದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಿಎಂಟಿಸಿ ವಿರುದ್ಧ `ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ' (ಎಂಎಸಿಟಿ) ಗೆ ದೂರು ಸಲ್ಲಿಸಿ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿದ್ದರು. ರೇಣುಕಾದೇವಿ ಅವರಿಗೆ ಅಪಘಾತದ ಪರಿಹಾರಾರ್ಥವಾಗಿ ಬಿಎಂಟಿಸಿ ರೂ. 12.32ಲಕ್ಷ ಗಳನ್ನು ನೀಡಬೇಕೆಂದು ಸೂಚಿಸಿತ್ತು. ಆದರೆ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕರ್ನಾಟಕ ಹೈಕೋರ್ಟ್ ಪರಿಹಾರ ಹಣದಲ್ಲಿ ಕಡಿತ ಮಾಡಿ, ಅಪಘಾತಕ್ಕೆ ರೇಣುಕಾ ದೇವಿ ಅವರ ನಿರ್ಲಕ್ಷ್ಯದ ಚಾಲನೆಯೂ ಕಾರಣ ಎಂದೂ ತೀರ್ಪು ನೀಡಿತ್ತು. ಅಪಘಾತಕ್ಕೀಡಾಗುವ ಸಂದರ್ಭದಲ್ಲಿ ರೇಣುಕಾದೇವಿ ಅವರ ಸ್ಕೂಟರಿಗೆ ಬಸ್ಸಿನ ಮುಂದಿನ ಚಕ್ರ ತಾಗಿರದೇ ಹಿಂದಿನ ಚಕ್ರ ತಾಗಿತ್ತು. ಆಗ ರೇಣುಕಾ ಅವರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದರು ಎಂದೂ ರಾಜ್ಯ ಹೈಕೋರ್ಟ್ ಸ್ಪಷ್ಟವಾಗಿ ವಿವರಿಸಿ, ಪರಿಹಾರ ಧನದಲ್ಲಿ ಶೇ 50ರಷ್ಟು ಹಣ ಕಡಿತಗೊಳಿಸಿ ಈ ಮಹತ್ವದ ತೀರ್ಪನ್ನು ನೀಡಿತ್ತು. ಸುಪ್ರೀಂಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿಯಿತು.
2007: ಮೇಲಧಿಕಾರಿಯನ್ನು ಹತ್ಯೆ ಮಾಡಿದ್ಧ ಯೋಧನಿಗೆ ಸೇನಾ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಭಾರತೀಯ ಸೇನೆಯಲ್ಲಿ ಯೋಧನೊಬ್ಬನಿಗೆ ಮರಣದಂಡನೆ ವಿಧಿಸಿದ್ದು ಇದೇ ಪ್ರಥಮ. ಜಮ್ಮು ಮತ್ತು ಕಾಶ್ಮೀರದ ನಿಶಾತ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಷ್ಟ್ರೀಯ ರೈಫಲ್ಸಿನ ಸೈನಿಕ ಕೆ.ಸಿ. ಬೆಹ್ರಾ ಮರಣದಂಡನೆಗೆ ಗುರಿಯಾಗಿರುವ ಯೋಧ. ಕಳೆದ ಅಕ್ಟೋಬರಿನಲ್ಲಿ ತನ್ನ ಮೇಲಧಿಕಾರಿ ಹಾಗೂ ಕಂಪೆನಿ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಸಾಕೇತ್ ಸಕ್ಸೇನಾ ಅವರನ್ನು ಈ ಯೋಧ ಗುಂಡಿಟ್ಟು ಹತ್ಯೆ ಮಾಡಿದ್ದ.
2007: ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಶಿರೋಮಣಿ ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ ಮತ್ತು ಮಣಿಪುರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಇಬೋಬಿ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ಅತಿ ದೀರ್ಘಕಾಲ ಆಳ್ವಿಕೆ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾದಲ್ ಮುಖ್ಯಮಂತ್ರಿ ಗದ್ದುಗೆ ಏರಿದ್ದು ಇದು ನಾಲ್ಕನೇ ಬಾರಿ.
2007: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎ.ಬಿ. ವೋಹ್ರಾ, ಜಲಪೈಗುರಿ ಜಿಲ್ಲಾಧಿಕಾರಿ ಆರ್. ರಂಜಿತ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ತ್ರಿಪುರಾರಿ ಹಾಗೂ ಕೇಂದ್ರದ ಮಾಜಿ ಸಚಿವ ದೇವಿಪ್ರಸಾದ್ ರಾಯ್ ಸೇರಿದಂತೆ 18 ಜನರಿಗೆ ಕೋಲ್ಕತ್ತ ಹೈಕೋರ್ಟ್ ಆರು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿತು. ಹಂಗಾಮೀ ಮುಖ್ಯನ್ಯಾಯಮೂರ್ತಿ ಭಾಸ್ಕರ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಕೆ.ಕೆ. ಪ್ರಸಾದ್ ಅವರ ಪೀಠ ನೀಡಿದ ಈ ತೀರ್ಪು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ತೀರ್ಪಿನ ಸಾಲಿಗೆ ಸೇರ್ಪಡೆಯಾಯಿತು. ಜಲಪೈಗುರಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ನಡೆದ ಚಳವಳಿ ತಡೆಯಲು ವಿಫಲರಾಗಿದ್ದು, ಚಳವಳಿಯಿಂದಾಗಿ ಒಂದು ತಿಂಗಳು ಅಲ್ಲಿನ ಎಲ್ಲ ನ್ಯಾಯಾಲಯಗಳು ಬಂದಾಗಿದ್ದವು. ಪರಿಸ್ಥಿತಿಯ ಮೇಲೆ ನಿಗಾ ಇರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಡಿಜಿಪಿ ಹಗುರವಾಗಿ ಪರಿಗಣಿಸಿದ್ದರು. ಇತಿಹಾಸದಲ್ಲಿಯೇ ಯಾವುದೇ ಜಿಲ್ಲೆಯಲ್ಲಿ ಒಂದು ತಿಂಗಳು ನ್ಯಾಯಾಲಯಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇದ್ದುದು ಇದೇ ಮೊದಲು ಎಂದು ನ್ಯಾಯಾಲಯ ಹೇಳಿತು.
2007: ಸಿಪಿಐ ಎಂಎಲ್ ಕಾರ್ಯಕರ್ತನ ಮೇಲೆ ಹಲ್ಲೆ ಮತ್ತು ಅನುಚಿತ ವರ್ತನೆಗಾಗಿ ಸಿವಾನಿನ ಆರ್ ಜೆ ಡಿ ವಿವಾದಾಸ್ಪದ ಸಂಸದ ಮಹಮ್ಮದ್ ಶಹಾಬ್ದುದೀನ್ಗೆ ಬಿಹಾರಿನ ಸಿವಾನ್ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಸೆರೆವಾಸ ವಿಧಿಸಿತು.
2007: ಬೊಫೋರ್ಸ್ ಹಗರಣದ ಪ್ರಮುಖ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅರ್ಜೆಂಟೀನಾ ಸರ್ಕಾರಕ್ಕೆ ಔಪಚಾರಿಕ ಮನವಿ ಪತ್ರ ಸಲ್ಲಿಸಿತು. ಕ್ವಟ್ರೋಚಿಯನ್ನು ಫೆ.6ರಂದು ಬಂಧಿಸಿ ಫೆಬ್ರುವರಿ 23 ರಂದು ಜಾಮೀನಿನಡಿ ಬಿಡುಗಡೆ ಮಾಡಲಾಗಿತ್ತು. ಆತನ ಹಸ್ತಾಂತರಕ್ಕಾಗಿ 350 ಪುಟಗಳ ದಾಖಲೆ ಪತ್ರಗಳನ್ನೂ ಸರ್ಕಾರ ಸಲ್ಲಿಸಿತು.
2006: ಭಾರತ ಮತ್ತು ಅಮೆರಿಕ ನಡುವಣ ತೀವ್ರ ವಿವಾದಿತ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಕೊನೆಗೂ ಅಂಗೀಕಾರ ದೊರಕಿತು. ನಾಗರಿಕ ಮತ್ತು ಸೇನಾ ಉದ್ದೇಶದ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸುವ ಮೂಲಕ ಉಭಯರಾಷ್ಟ್ರಗಳು ವಿವಾದದ ಕಗ್ಗಂಟು ಬಗೆಹರಿಸಿಕೊಂಡವು. ಭಾರತದ 22 ಪರಮಾಣು ಸ್ಥಾವರಗಳ ಪೈಕಿ ನಾಗರಿಕ ಬಳಕೆಯ 14 ಸ್ಥಾವರಗಳನ್ನು ಅಂತಾರಾಷ್ಟ್ರೀಯ ಸುರಕ್ಷತಾ ನಿಯಮಗಳಿಗೆ ಒಳಪಡಿಸಲು ಭಾರತ ಸಮ್ಮತಿಸಿತು. ಆದರೆ ಫಾಸ್ಟ್ ಬ್ರೀಡರ್ ರಿಯಾಕ್ಟರುಗಳು ಯಾವುದೇ ಜಾಗತಿಕ ನಿಯಮಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟ ಪಡಿಸಿತು. ಹೈದರಾಬಾದ್ ಹೌಸಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲು ಬುಷ್ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು.
2006: ಭಾರತದ ಮೊದಲ ಆನ್ ಲೈನ್ ಚಲನಚಿತ್ರ ಬಾಡಿಗೆ ಸೇವೆ `70 ಎಂ.ಎಂ.'ನ್ನು ನಟಿ ಹಾಗೂ ಗಾಯಕಿ ವಸುಂಧರಾ ದಾಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
2006: ತನ್ನ ಗಂಡನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕಾಡುಗಳ್ಳ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿತು. 2004ರ ಅಕ್ಟೋಬರಿನಲ್ಲಿ ಜಂಟಿ ವಿಶೇಷ ಕಾರ್ಯಪಡೆ (ಎಸ್ ಟಿ ಎಫ್) ಗುಂಡಿಗೆ ವೀರಪ್ಪನ್ ಬಲಿಯಾಗಿದ್ದ. ಆತನನ್ನು ಮೂರುದಿನ ಮೊದಲೇ ವಶಕ್ಕೆ ತೆಗೆದುಕೊಂಡು ಹಿಂಸೆ ಕೊಟ್ಟು ಕೊಲ್ಲಲಾಗಿದೆ ಎಂಬುದು ಮುತ್ತುಲಕ್ಷ್ಮಿಯ ವಾದವಾಗಿತ್ತು.
1920: ಖ್ಯಾತ ಸಾಹಿತಿ, ಕರ್ನಾಟಕ ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ `ಸತ್ಯಕಾಮ' ಎಂದೇ ಪ್ರಸಿದ್ಧರಾದ ಅನಂತ ಕೃಷ್ಣ ಶಹಾಪೂರ (2-3-1920ರಿಂದ 20-10-1998) ಹುಟ್ಟಿದ ದಿನ. ಸ್ವಾತಂತ್ರ್ಯ್ಯ ಸಂಗ್ರಾಮದಲ್ಲಿ ಸಕ್ರಿಯಪಾತ್ರ ವಹಿಸಿದ್ದ ಅವರು ನಾಟಕ, ಕಥೆ, ಕಾದಂಬರಿಗಳ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡ ಅನುಭವಿ. ಜಮಖಂಡಿ ಸಮೀಪದ ಕಲ್ಲಹಳ್ಳಿಯ ಗುಡ್ಡಗಾಡನ್ನು ನಂದನವನವಾಗಿ ಪರಿವರ್ತಿಸಿದ್ದರು. 1998ರ ಅಕ್ಟೋಬರ್ 20ರಂದು ಅವರು ನಿಧನರಾದರು.
1998: `ಟೈಟಾನಿಕ್' ಚಲನಚಿತ್ರವು ಒಂದು ಶತಕೋಟಿ ಡಾಲರ್ ಸಂಪಾದಿಸಿದ ಮೊತ್ತ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
1986: ಕ್ಯಾನ್ಬೆರಾದಲ್ಲಿ ರಾಣಿ ಎರಡನೇ ಎಲಿಜಬೆತ್ ಆಸ್ಟ್ರೇಲಿಯಾ ಮಸೂದೆಗೆ ಸಹಿ ಹಾಕಿದರು. ಈ ಮಸೂದೆ ಬ್ರಿಟನ್ ಜೊತೆಗಿನ ಆಸ್ಟ್ರೇಲಿಯಾದ ಕೊನೆಯ ಸಂವೈಧಾನಿಕ ಬಾಂಧವ್ಯವನ್ನು ಕಡಿದುಹಾಕಿತು.
1983: ಕರ್ನಾಟಕ ಕ್ರಾಂತಿರಂಗದ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೆಂಗಳೂರಿನಲ್ಲಿ ನಿರ್ಧರಿಸಿದ ಪಕ್ಷದ ಸರ್ವ ಸದಸ್ಯರ ಸಭೆ, ಮಾಜಿ ಸಚಿವ ಎಸ್. ಬಂಗಾರಪ್ಪ ಅವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು.
1982: ಫಿರಾಕ್ ಗೋರಖ್ ಪುರಿ ಎಂಬುದಾಗಿ ಖ್ಯಾತರಾದ ರಘುಪತಿ ಸಹಾಯ್ ನಿಧನರಾದರು.
1963: ಕಲಾವಿದೆ ವಿ. ನಳಿನಿ ಜನನ.
1950: ಕಲಾವಿದೆ ಆರ್.ಎ. ರಮಾಮಣಿ ಜನನ.
1949: ಸರೋಜಿನಿ ನಾಯ್ಡು ನಿಧನರಾದರು. ಅವರು `ಭಾರತದ ಕೋಗಿಲೆ' (ನೈಟಿಂಗೇಲ್) ಎಂಬುದಾಗಿ ಖ್ಯಾತರಾಗಿದ್ದರು.
1946: ಕಲಾವಿದ ತುಮಕೂರು ಲಕ್ಷ್ಮಣರಾವ್ ಜನನ.
1940: ವೃತ್ತಿ ರಂಗಭೂಮಿಯಿಂದ ಹಿಡಿದು ಆಧುನಿಕ ನಾಟಕಗಳವರೆಗೆ ಹತ್ತಾರು ವಿಭಿನ್ನ ಪಾತ್ರಗಳ ಮೂಲಕ ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿರುವ ಅ.ನ. ರಾಮಣ್ಣ ಅವರು ನರಸಯ್ಯ- ನರಸಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಹದಮಲೆ ಗ್ರಾಮದಲ್ಲಿ ಜನಿಸಿದರು.
1939: ಕಲಾವಿದ ಕೆ.ಜೆ. ವೆಂಕಟಾಚಾರ್ ಜನನ.
1916: ಕಲಾವಿದ ಮೇಲಗಿರಿ ನಿಂಗನಗೌಡ ಪಾಟೀಲ ಜನನ.
1887: ಕ್ಯಾಪ್ಟನ್ ಮತ್ತು ಶ್ರೀಮತಿ ಆರ್ಥರ್ ಎಚ್. ಕೆಲ್ಲರ್ ಅವರ ಅಂಧ, ಮೂಗ ಮತ್ತು ಕಿವುಡ ಪುತ್ರಿ 6 ವರ್ಷದ ಹೆಲೆನ್ ಳಿಗೆ ಶಿಕ್ಷಕಿಯಾಗಲು ಅನ್ನೆ ಮ್ಯಾನ್ಸ್ ಫೀಲ್ಡ್ ಸುಲ್ಲಿವನ್ ಅವರು ಅಲಬಾಮಾದ ಕೆಲ್ಲರ್ ಮನೆಗೆ ಬಂದರು. ಹೆಲೆನ್ಗೆ ಆಕೆ ನೀಡಿದ ಶಿಕ್ಷಣ, ಈ ಕೆಲಸದಲ್ಲಿ ಆಕೆಗೆ ಲಭಿಸಿದ ಯಶಸ್ಸು ಜಗತ್ತಿನ ಇತಿಹಾಸದ ಮಹಾನ್ ಸಾಧನೆಗಳಲ್ಲಿ ಒಂದು ಎಂಬುದಾಗಿ ದಾಖಲಾಯಿತು.
1506: ರಜಪೂತ ದೊರೆ ರಾಣಾ ರತನ್ ಸಿಂಗ್ ಪುತ್ರಿ ಸಂತ ಕವಯಿತ್ರಿಯರಲ್ಲಿ ಪ್ರಮುಖಳಾದ ಮೀರಾಬಾಯಿ ಈ ದಿನ ನಿಧನಳಾದಳು.
No comments:
Post a Comment