Thursday, October 23, 2014

ಸಿಯಾಚಿನ್ ಯೋಧರ ಜೊತೆಗೆ ಪ್ರಧಾನಿ ದೀಪಾವಳಿ

ಸಿಯಾಚಿನ್ ಯೋಧರ ಜೊತೆಗೆ ಪ್ರಧಾನಿ ದೀಪಾವಳಿ

ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ನಿಗದಿಯಾಗಿದ್ದ ತಮ್ಮ ಜಮ್ಮು ಮತ್ತು ಕಾಶ್ಮೀರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಸಿಯಾಚಿನ್ ನೀರ್ಗಲ್ಲು- ಸಾಲ್ಟೋರೊ ರಿಜ್ ಪ್ರದೇಶದಲ್ಲಿನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ಸಮರಭೂಮಿ ಕಾಯುವ ಯೋಧರ ಜೊತೆಗೆ ದೀಪಾವಳಿ ಆಚರಿಸಿದರು.

'ಈ ವಿಶೇಷ ದಿನದಂದು ನಮ್ಮ ಸಾಹಸೀ ಯೋಧರ ಜೊತೆಗೆ ಕಾಲ ಕಳೆಯುವ ಅವಕಾಶ ನನಗೆ ಲಭಿಸಿರುವುದು ನನ್ನ ಸುಯೋಗ' ಎಂದು ಮೋದಿ ಬೆಳಗ್ಗೆಯೇ ಟ್ವೀಟ್ ಮಾಡಿದರು.

 'ಎಷ್ಟೇ ಎತ್ತರ ಇರಲಿ, ಎಷ್ಟೇ ಚಳಿ ಇರಲಿ ಅದು ನಮ್ಮ ಯೋಧರನ್ನು ಕಂಗೆಡಿಸುವುದಿಲ್ಲ. ಅವರು ಅಲ್ಲಿ ನಿಂತುಕೊಂಡು ರಾಷ್ಟ್ರದ ಸೇವೆ ಮಾಡುತ್ತಿದ್ದಾರೆ. ನಾವು ನಿಜವಾಗಿಯೂ ಹೆಮ್ಮೆ ಪಡುವಂತೆ ಅವರು ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ನಿಮ್ಮ ಜೊತೆಗಿದ್ದಾರೆ' ಎಂದು ಮೋದಿ ಬರೆದರು.

ಅಂದಾಜು 16,000ದಿಂದ 22,000 ಅಡಿಗಳಷ್ಟು ಎತ್ತರದಲ್ಲಿ ಇರುವ ಸಿಯಾಚಿನ್ ನೀರ್ಗಲ್ಲು-ಸಾಲ್ಟೋರೊ ರಿಜ್ ಪ್ರದೇಶವನ್ನು ಭಾರತೀಯ ಸೈನಿಕರು ಪ್ರತಿನಿತ್ಯವೂ ರಕ್ಷಣೆ ಮಾಡುತ್ತಿದ್ದಾರೆ. ವಿರೋಧಿಗಳ ಗುಂಡಿನ ದಾಳಿಗಿಂತಲೂ ಹೆಚ್ಚಾಗಿ ಇಲ್ಲಿನ ಪ್ರತಿಕೂಲ ಹವಾಮಾನ, ನೀರ್ಗಲ್ಲ ಪ್ರವಾಹಕ್ಕೆ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ.

1984ರಿಂದ ಇಲ್ಲಿಯವರೆಗೆ ಅಂದಾಜು 900 ಮಂದಿ ಭಾರತೀಯ ಯೋಧರು ಇಲ್ಲಿ ಅಸು ನೀಗಿದ್ದಾರೆ. ಭಾರತ ಉತ್ತಮ ಮೂಲಸವಲತ್ತು ವ್ಯವಸ್ಥೆ ಮಾಡುತ್ತಿರುವುದರಿಂದ ಈಚಿನ ದಿನಗಳಲ್ಲಿ ಯೋಧರ
ಸಾವಿನ ಸಂಖ್ಯೆ ಕ್ಷೀಣಿಸಿದೆ. ವಿಶ್ವದಲ್ಲೇ ಅತ್ಯಂತ ಎತ್ತರದ ಸಮರಭೂಮಿ ಎಂದೇ ಖ್ಯಾತಿ ಪಡೆದಿರುವ ಸಿಯಾಚಿನ್, ಅತ್ಯಂತ ಶೀತ ಹಾಗೂ ದುಬಾರಿ ಸಮರಭೂಮಿ ಕೂಡಾ.

ಪಾಕಿಸ್ತಾನದ ಜೊತೆಗೆ ಸಂಯುಕ್ತ ಮಾತುಕತೆ ಪ್ರಕ್ರಿಯೆಗೆ ಅಡ್ಡಿಯಾಗುವ ಎಂಟು ಅಂಶಗಳಲ್ಲಿ ಇದೂ ಒಂದು ಅಂಶವಾಗಿದೆ. ಈ ಎತ್ತರದ ಪ್ರದೇಶದಲ್ಲಿ ಪಾಕಿಸ್ತಾನೀಯರು ಅತಿಕ್ರಮಿಸಿ ಕುಳಿತಲ್ಲಿ ಅವರನ್ನು ಹೊರದಬ್ಬುವುದು ಅತ್ಯಂತ ತ್ರಾಸದ ಕೆಲಸ. ಲಡಾಖ್ ಕಡೆಗೆ ಕಾರಾಕೋರಂ ಕಣಿವೆ ಮೂಲಕ ಮುನ್ನುಗ್ಗಲು ಪಾಕಿಸ್ತಾನ ಪಶ್ಚಿಮದ ಕಡೆಯಿಂದ ಹಾಗೂ ಚೀನಾ ಪೂರ್ವ ಕಡೆಯಿಂದ ಮಾಡುವ ಯತ್ನಗಳನ್ನು ತಡೆಯಲು ಭಾರತದ ಈ ಪ್ರದೇಶದಲ್ಲಿ ತನ್ನ ಸೈನಿಕರನ್ನು ನಿರಂತರವಾಗಿ ನೆಲೆಗೊಳಿಸಿದೆ.

ಮತ್ತೆ ಪಾಕ್ ದಾಳಿ: ಈ ಮಧ್ಯೆ ಪ್ರಧಾನಿ ಅವರ ಸಿಯಾಚಿನ್ ಮತ್ತು ಶ್ರೀನಗರ ಭೇಟಿಗೆ ಮುನ್ನವೇ ಪಾಕಿಸ್ತಾನಿ ಪಡೆಗಳು ಅಂತಾರಾಷ್ಟ್ರೀಯ ಗಡಿಯಾಚೆಯಿಂದ ಮತ್ತೆ ಗುಂಡು ಹಾರಿಸಿದ ಘಟನೆ ಘಟಿಸಿತು.

 ಪಾಕಿಸ್ತಾನಿ ರೇಂಜರ್​ಗಳು ಸಣ್ಣ ಶಸ್ತ್ರಾಸ್ತ್ರಗಳಿಂದ ಸಾಂಬಾ ಜಿಲ್ಲೆಯ ರಾಮಗಢ ವಿಭಾಗದಲ್ಲಿನ ಬಿಎಸ್​ಎಫ್ ನೆಲೆಯತ್ತ ಗುಂಡು ಮುಂಜಾನೆ 4.10 ಸುಮಾರಿಗೆ ಗುಂಡು ಹಾರಿಸಿದರು ಎಂದು ವರದಿಗಳು ತಿಳಿಸಿದವು.
ಮೋದಿ ರಾಜಭವನ ಕಾರ್ಯಕ್ರಮಕ್ಕೆ ಒಮರ್ ಗೈರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಆಗಮಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನರೇಂದ್ರ ಮೋದಿ ಅವರ ರಾಜಭವನ ಕಾರ್ಯಕ್ರಮಗಳಿಂದ ದೂರ ಉಳಿದರು.

ಆದರೆ ಶ್ರೀನಗರ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಮೋದಿಯವರಿಗೆ ಅಧಿಕಾರಿಗಳು ನೀಡಿದ ವಿವರಣೆ ಸಂದರ್ಭದಲ್ಲಿ ಅಬ್ದುಲ್ಲಾ ಹಾಜರಿದ್ದರು.

ಮೋದಿ ಮತ್ತು ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ರಾಜಭವನಕ್ಕೆ ತೆರಳಿದಾಗ ಮುಖ್ಯಮಂತ್ರಿ ಒಮರ್ ಅವರು ಗುಪ್ಕರ್ ರಸ್ತೆಯ ತಮ್ಮ ಅತಿ ಭದ್ರತೆಯ ಅಧಿಕೃತ ನಿವಾಸಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿದವು. ಪ್ರಧಾನಿಯವರು ರಾಜಭವನದಲ್ಲಿ ಇತ್ತೀಚಿನ ಪ್ರವಾಹ ಸಂತ್ರಸ್ಥ ಕುಟುಂಬಗಳು ಮತ್ತು ಪ್ರಮುಖ ರಾಜಕೀಯ ಪಕ್ಷಗಳು, ಸಂಘಟನೆಗಳ ನಿಯೋಗಗಳನ್ನು ಭೇಟಿ ಮಾಡಿದರು.

--------------------------------------------------------------------------------
View ಇಂದಿನ ಇತಿಹಾಸ ಅಕ್ಟೋಬರ್ 23 History Today through ಒಳಹೊಕ್ಕು ನೋಡಿ in Right side panel.

No comments:

Advertisement