Thursday, November 7, 2019

ಸ್ಥಗಿತಗೊಂಡ ವಸತಿ ಯೋಜನೆಗಳಿಗೆ ೨೫,೦೦೦ ಕೋಟಿ ರೂ. ಪರ್ಯಾಯ ನಿಧಿ

ಸ್ಥಗಿತಗೊಂಡ ವಸತಿ ಯೋಜನೆಗಳಿಗೆ ೨೫,೦೦೦ ಕೋಟಿ ರೂ. ಪರ್ಯಾಯ ನಿಧಿ
ಅರೆಬರೆ ಮನೆಗಳನ್ನು ಪೂರ್ಣಗೊಳಿಸಲು ನಿರ್ಮಲಾ ಬಲ
ನವದೆಹಲಿ: ಸ್ಥಗಿತಗೊಂಡಿರುವ ೧,೬೦೦ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ೨೫,೦೦೦ ಕೋಟಿ ರೂಪಾಯಿಗಳ ಪರ್ಯಾಯನಿಧಿ ಒದಗಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019 ನವೆಂಬರ್ 06ರ ಬುಧವಾರ ಪ್ರಕಟಿಸಿದರು.

ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ಒತ್ತು ನೀಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ನಿರ್ಧಾರವನ್ನು ಅನುಮೋದಿಸಿತು.

ಕೈಗೆಟಕುವ ಮತ್ತು ಮಧ್ಯಮ ಆದಾಯದ ವಸತಿ ರಂಗದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ಆಧಾರದಲ್ಲಿ ಸಾಲ ನೆರವು ಒದಗಿಸಲು ’ವಿಶೇಷ ಕಿಡಕಿ’ (ಸ್ಪೆಶ್ಯಲ್ ವಿಂಡೋ) ವ್ಯವಸ್ಥೆಯನ್ನು ಸರ್ಕಾರ ಮಾಡುವುದು ಎಂದು ಸಚಿವರು ನುಡಿದರು.

೧೬೦೦ ವಸತಿ ಯೋಜನೆಗಳ ೪.೫೮ ಲಕ್ಷ ಮನೆಗಳಿಗೆ ಸರ್ಕಾರದ ಪರ್ಯಾಯ ನಿಧಿ ನೆರವಿನಿಂದ ಅನುಕೂಲವಾಗಲಿದೆ.. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಅದರ ಗವರ್ನರ್ ಗೃಹ ಖರೀದಿದಾರರನ್ನು ತಲುಪುವ ಸುಸ್ಥಿರ ಮಾರ್ಗದ ಬಗ್ಗೆ ಚರ್ಚಿಸಿದ್ದಾರೆ ಎಂದು ಸಚಿವರು ಹೇಳಿದರು.

‘ಆಸ್ತಿ ಪರ್ಯಾಯ ನಿಧಿ (ಅಸೆಟ್ ಆಲ್ಟರ್‌ನೇಟಿವ್ ಫಂಡ್- ಎಐಎಫ್) ಒಂದನ್ನು ರಚಿಸಲಾಗುವುದು. ಸರ್ಕಾರವು ಅದಕ್ಕೆ ೧೦,೦೦೦ ಕೋಟಿ ರೂಪಾಯಿಗಳನ್ನು ಒದಗಿಸಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಭಾರತೀಯ ಜೀವ ವಿಮಾ ನಿಗಮದಂತಹ (ಎಲ್‌ಐಸಿ) ಸಂಸ್ಥೆಗಳು ಉಳಿದ ಹಣ ಒದಗಿಸುವುವು. ತನ್ಮೂಲಕ ಒಟ್ಟು ೨೫,೦೦೦ ಕೋಟಿ ರೂಪಾಯಿಗಳ ನಿಧಿಯನ್ನು ಸೃಜಿಸಲಾಗುವುದು ಎಂದು ನಿರ್ಮಲಾ ಅವರು ಕೇಂದ್ರ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಈ ಹೂಡಿಕೆಯನ್ನು ಮುಂಬೈಯಲ್ಲಿ ೨ ಕೋಟಿ ರೂಪಾಯಿ, ದೆಹಲಿ-ಎನ್‌ಸಿಆರ್, ಚೆನ್ನೈ ಮತ್ತು ಇತರ ಮೆಟ್ರೋ ನಗರಗಳಲ್ಲಿ  ೧.೫ ಕೋಟಿ ಹಾಗೂ ನಗರಗಳಲ್ಲಿ ೧ ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ವಸತಿ ಘಟಕಗಳನ್ನು ಪೂರ್ಣಗೊಳಿಸಲು ಬಳಸಲಾಗುವುದು ಎಂದು ಅವರು ಹೇಳಿದರು.

No comments:

Advertisement