Monday, December 30, 2019

ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ

ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ 
ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೇನ್ ಅವರು ಜಾರ್ಖಂಡ್ ರಾಜ್ಯದ ೧೧ನೇ ಮುಖ್ಯಮಂತ್ರಿಯಾಗಿ 2019 ಡಿಸೆಂಬರ್ 29ರ ಭಾನುವಾರ  ಇಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿರೋಧ ಪಕ್ಷಗಳ ಉನ್ನತ ನಾಯಕರು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ವಿಪಕ್ಷ ಏಕತೆಯನ್ನು ಪ್ರದರ್ಶಿಸಿದರು.

ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರು ಹೇಮಂತ್ ಸೊರೇನ್ ಅವರಿಗೆ ಕಚೇರಿ ಮತ್ತು ಗೌಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು. ಸೊರೇನ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನ ಸಮುದಾಯಜೈ ಜಾರ್ಖಂಡ್ಘೋಷಣೆಗಳನ್ನು ಮೊಳಗಿಸಿತು.
ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಸತ್ಯಾನಂದ ಭೋಗ್ಟಾ ಮತ್ತು ಕಾಂಗ್ರೆಸ್ ಪಕ್ಷದ ಜಾರ್ಖಂಡ್ ಘಟಕದ ಮುಖ್ಯಸ್ಥ ರಾಮೇಶ್ವರ ಓರಾನ್ ಅವರು ಕೂಡಾ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ೪೪ರ ಹರೆಯದ ಜೆಎಂಎಂ ನಾಯಕ ಎರಡನೇ ಅವಧಿಗೆ ತಮ್ಮ ರಾಜ್ಯಭಾರ ಆರಂಭಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಿಎಂಕೆಯ ಎಂಕೆ ಸ್ಟಾಲಿನ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸುಪ್ರೀಯಾ ಸುಳೆ, ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ (ಆಪ್) ಸಂಜಯ್ ಸಿಂಗ್ ಅವರು ರಾಂಚಿಯ ಮೊರಬಾದಿ ಪ್ರದೇಶದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದ ಗಣ್ಯರಲ್ಲಿ ಸೇರಿದ್ದರು.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಎನ್ಸಿಪಿಯ ಅಜಿತ್ ಪವಾರ್ ಅವರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅದೇ ರೀತಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೆಲ್, ಮಧ್ಯಪ್ರದೇಶದ ಮುಖ್ಯಮಂಂತ್ರಿ ಕಮಲ್ ನಾಥ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರೂ ಸಮಾರಂಭದಲ್ಲಿ ಹಾಜರಿದ್ದರು. ಸೌಜನ್ಯದ ದ್ಯೋತಕವಾಗಿ ಹೊರಹೋಗುತ್ತಿರುವ ಮುಖ್ಯಮಂತ್ರಿ ರಘುಬರದಾಸ್ ಅವರೂ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಮಾರಂಭಕ್ಕೆ ಬರುವಂತೆ ಹೇಮಂತ್ ಸೊರೇನ್ ಅವರು ಆಹ್ವಾನಿಸಿದ್ದರು. ಆದರೆ ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣ ತಮಗೆ ಬರಲಾಗುತ್ತಿಲ್ಲ ಎಂಬುದಾಗಿ ಪ್ರಧಾನಿ ತಿಳಿಸಿದರು. ಆದರೆ ಬಳಿಕ ಜಾರ್ಖಂಡ್  ಗೆ ಭೇಟಿ ನೀಡುವುದಾಗಿ ಪ್ರಧಾನಿ ಭರವಸೆ ಕೊಟ್ಟರು ಎಂದು ಜೆಎಂಎಂ ಪ್ರಧಾನ ಕಾರ್ರ್ಯದರ್ಶಿ ಸುಪ್ರೀಯೊ ಭಟ್ಟಾಚಾರ್ಯ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪ್ರಸ್ತಾಪಿತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ವಿರೋಧಿ ಪ್ರತಿಭಟನೆಗಳು ಮತ್ತು ಅವುಗಳ ಜಾರಿಗೆ ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮಗಳಿಗೆ ವಿರೋಧ ಪಕ್ಷಗಳು ತೋರುತ್ತಿರುವ ಪ್ರತಿರೋಧದ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಸೊರೇನ್ ಪ್ರಮಾಣವಚನ ಸಮಾರಂಭವು ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿತು.

ಚಾರಿತ್ರಿಕ ಕ್ಷಣಕ್ಕೆ ಸಾಕ್ಷಿಯಾಗಲು ದೊಡ್ಡ ಸಂಖ್ಯೆಯಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವಂತೆಹೇಮಂತ್ ಸೊರೇನ್ ಅವರು ಇದಕ್ಕೂ ಮುನ್ನ ರಾಜ್ಯದ ಜನತೆಗೆ ಮನವಿ ಮಾಡಿದ್ದರು.

ನಮ್ಮ ಮೈತ್ರಿಕೂಟಕ್ಕೆ ನೀವು ಕೊಟ್ಟಿರುವ ಸ್ಪಷ್ಟ ಬಹುಮತಕ್ಕಾಗಿ ನಾನು ಅತ್ಯಂತ ಆಭಾರಿಯಾಗಿದ್ದೇನೆ. ನೂತನ ಸರ್ಕಾರದ ಬಗ್ಗೆ ನಿಮಗಿರುವ ನಿರೀಕ್ಷೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ನಿಮ್ಮೆಲ್ಲರನ್ನೂ ಪ್ರಮಾಣವಚನ ಸಮಾರಂಭಕ್ಕೆ ಸ್ವಾಗತಿಸುತ್ತೇನೆಎಂದು ಹೇಮಂತ್ ಸೊರೇನ್ ಅವರು ಬೆಳಗ್ಗೆಯೇ ವಿಡಿಯೋ ಸಹಿತವಾಗಿ ಟ್ವೀಟ್ ಮಾಡಿದ್ದರು.

ಮಧ್ಯೆ ಪ್ರಮಾಣ ವಚನ ಸಮಾರಂಭ ಆರಂಭವಾಗುವುದಕ್ಕೆ ತಾಸುಗಟ್ಟಲೆ ಮುಂಚಿತವಾಗಿಯೇ ಮಾವೋವಾದಿಗಳು ಖುಂಠಿ ಜಿಲ್ಲೆಯಲ್ಲಿನ ಸಮುದಾಯ ಭವನವನ್ನು ಸ್ಫೋಟಿಸಿದ್ದರು ಎಂದು ಆಪಾದಿಸಲಾದ ಘಟನೆ ಘಟಿಸಿತ್ತು.

ಜೆಎಂಎಂನ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ಅವರು ಅಂಗಪಕ್ಷಗಳಾದ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಜೊತೆಗೆ ಮೈತ್ರಿಕೂಟ ಸರ್ಕಾರವನ್ನು ಮುನ್ನಡೆಸಲಿದ್ದಾರೆ.

೮೧ ಸದಸ್ಯಬಲದ ಜಾರ್ಖಂಡ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜೆಎಂಎಂ ೩೦ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಮೂಡಿದ್ದರೆ, ಕಾಂಗ್ರೆಸ್ ೧೬ ಸ್ಥಾನಗಳನ್ನು ಮತ್ತು ಆರ್ಜೆಡಿ ಒಂದು ಸ್ಥಾನವನ್ನು ಗೆದ್ದಿದ್ದವು. ಒಟ್ಟು ೪೭ ಸದಸ್ಯಬಲದೊಂದಿಗೆ ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಪ್ರಾಪ್ತವಾಗಿತ್ತು.

ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ) ಮೂವರು ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ -ಲೆನಿನಿಸ್ಟ್) ಒಬ ಶಾಸಕ ಕೂಡಾ ತ್ರಿಪಕ್ಷ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದರು.

ಸೊರೇನ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಪಟ್ಟಿಯನ್ನು ಭಾನುವಾರ ಸಂಜೆಯವೇಳೆಗೆ ರಾಜಭವನಕ್ಕೆ ಕಳುಹಿಸಲಿದ್ದಾರೆ. ಜಾರ್ಖಂಡ್ ರಾಜ್ಯವು ಮುಖ್ಯಮಂತ್ರಿ ಸೇರಿದಂತೆ ೧೨ ಸಂಪುಟ ಸಚಿವರನ್ನು ಹೊಂದಲು ಅವಕಾಶವಿದೆ.

ಮೈತ್ರಿಕೂಟದ ಅಂಗಪಕ್ಷಗಳ ಮಧ್ಯೆ ಅಧಿಕಾರ ಹಂಚಿಕೆ ಪೂರ್ಣಗೊಂಡ ಬಳಿಕ ಮತ್ತು ಶಾಸಕರು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಂಪುಟದ ಉಳಿದ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ನೂತನ
ವಿಧಾನಸಭೆಯ ಅಧಿವೇಶನ ಜನವರಿ ೫ಕ್ಕೆ ಮುನ್ನ ಸಮಾವೇಶಗೊಳ್ಳುವ ಸಾಧ್ಯತೆ ಇದೆ.

No comments:

Advertisement